
ಕರಾವಳಿ ಹುಡುಗನಿಗೆ ತನ್ನ ಕ್ರಿಕೆಟ್ Idol ಜೊತೆ ಡ್ರೆಸ್ಸಿಂಗ್ ರೂಮ್ ಹಂಚಿಕೊಂಡ ಸಂಭ್ರಮ!
ಉಡುಪಿಯ ಕೋಟಾದ ಮೂಡು ಗಿಳಿಯಾರಿನ ಹುಡುಗ ಅಭಿಲಾಷ್ ಶೆಟ್ಟಿ ಪಾಲಿಗೆ ಕರಾವಳಿ ಕುವರ ಕೆ.ಎಲ್ ರಾಹುಲ್ ಕ್ರಿಕೆಟ್ idol. ಕ್ರಿಕೆಟ್ ಆಡಲು ಬೆಂಗಳೂರಿಗೆ ಬಂದಾಗ ಅಭಿಲಾಷ್ ಶೆಟ್ಟಿಗೆ ರಾಹುಲ್ ಕ್ರಿಕೆಟ್ ಶೂಸ್ ಕೊಟ್ಟಿದ್ದರಂತೆ. ರಾಹುಲ್ ಅವರಿಂದ ಸ್ಫೂರ್ತಿ ಪಡೆದು ಕರ್ನಾಟಕ ತಂಡಕ್ಕೆ ಪದಾರ್ಪಣೆ ಮಾಡಿದ್ದ ಅಭಿಲಾಷ್ ಶೆಟ್ಟಿ ತನ್ನ ಕ್ರಿಕೆಟ್ ಹೀರೋ ರಾಹುಲ್ ಜೊತೆ ಡ್ರೆಸ್ಸಿಂಗ್ ರೂಮ್ ಹಂಚಿಕೊಂಡ ಸಂಭ್ರಮದಲ್ಲಿದ್ದಾರೆ. ಅದೇ ಸಂಭ್ರಮದಲ್ಲಿ ರಾಹುಲ್ ಅವರೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.
ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ಅಂತ್ಯಗೊಂಡ ಹರ್ಯಾಣ ವಿರುದ್ಧದ ರಣಜಿ ಪಂದ್ಯದಲ್ಲಿ ಟೀಮ್ ಇಂಡಿಯಾ ಸ್ಟಾರ್ ಕೆ.ಎಲ್ ರಾಹುಲ್ ಆಡಿದ್ದರು. ಅದೇ ಪಂದ್ಯದಲ್ಲಿ ಅಭಿಲಾಷ್ ಶೆಟ್ಟಿ ಕರ್ನಾಟಕ ತಂಡದಲ್ಲಿದ್ದರೂ ವೇಗಿ ವಿದ್ವತ್ ಕಾವೇರಪ್ಪ ತಂಡಕ್ಕೆ ಮರಳಿದ್ದ ಕಾರಣ ಆಡುವ ಅಂತಿಮ ಹನ್ನೊಂದರ ಬಳಗದಲ್ಲಿ ಅಭಿಲಾಷ್ ಶೆಟ್ಟಿಗೆ ಸ್ಥಾನ ಸಿಕ್ಕಿರಲಿಲ್ಲ. ಉತ್ತಮ ಫಾರ್ಮ್’ನಲ್ಲಿದ್ದ ಅಭಿಲಾಷ್ ಶೆಟ್ಟಿಯವರನ್ನು ಪ್ಲೇಯಿಂಗ್ ಇಲೆವೆನ್’ನಿಂದ ಕೈ ಬಿಡಲಾಗಿತ್ತು. ಶೆಟ್ಟಿ ಬದಲು ಆಡಿದ್ದ ವಿದ್ವತ್ ಕಾವೇರಪ್ಪ 27 ಓವರ್ ಬೌಲಿಂಗ್ ಮಾಡಿದರೂ ವಿಕೆಟ್ ಪಡೆಯಲು ವಿಫಲರಾಗಿದ್ದರು.
ರಾಹುಲ್ ಜೊತೆ ಡ್ರೆಸ್ಸಿಂಗ್ ರೂಮ್ ಹಂಚಿಕೊಂಡರೂ ಮೈದಾನದಲ್ಲಿ ಆಡುವ ಅವಕಾಶ ಅಭಿಲಾಷ್ ಶೆಟ್ಟಿಗೆ ಸಿಕ್ಕಿರಲಿಲ್ಲ. ಆದರೆ ರಾಹುಲ್’ಗೆ ನೆಟ್ಸ್’ನಲ್ಲಿ ಬೌಲಿಂಗ್ ಮಾಡುವ ಅವಕಾಶ ಸಿಕ್ಕಿತ್ತು. ಹರ್ಯಾಣ ವಿರುದ್ಧದ ಪಂದ್ಯ ಮುಗಿದ ನಂತರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಹುಲ್ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೆ ವೈಟ್ ಬಾಲ್’ನಲ್ಲಿ ಕೆಲ ಹೊತ್ತು ಬ್ಯಾಟಿಂಗ್ ಅಭ್ಯಾಸ ನಡೆಸಿದರು. ಈ ವೇಳೆ ರಾಹುಲ್’ಗೆ ಅಭಿಲಾಷ್ ಶೆಟ್ಟಿ ಬೌಲಿಂಗ್ ಮಾಡಿದ್ದಾರೆ.
2024-25ನೇ ಸಾಲಿನಲ್ಲಿ ರಣಜಿ ಟ್ರೋಫಿ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ್ದ ಎಡಗೈ ವೇಗದ ಬೌಲರ್ ಅಭಿಲಾಷ್ ಶೆಟ್ಟಿ ಆಡಿದ 2 ಪಂದ್ಯಗಳಿಂದ 7 ವಿಕೆಟ್ ಪಡೆದಿದ್ದಾರೆ. ಇದೇ ವರ್ಷ ಕರ್ನಾಟಕ ಪರ ಏಕದಿನ ಕ್ರಿಕೆಟ್’ಗೂ ಕಾಲಿಟ್ಟಿದ್ದ ಅಭಿಲಾಷ್ ಶೆಟ್ಟಿ ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ಆಡಿದ ಏಳು ಪಂದ್ಯಗಳಿಂದ 17 ವಿಕೆಟ್ ಪಡೆಯುವ ಮೂಲಕ ಕರ್ನಾಟಕ ತಂಡ ಐದನೇ ಬಾರಿ ಚಾಂಪಿಯನ್ ಪಟ್ಟಕ್ಕೇರುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು.
