SportsKannada | ಸ್ಪೋರ್ಟ್ಸ್ ಕನ್ನಡ

ಅಂಗವೈಕಲ್ಯತೆಯನ್ನು ಮೆಟ್ಟಿ ನಿಂತು ಐಕಾನ್ ಆಗಿರುವ ಗಣೇಶ್ ಕುಲಾಲ್ ಪಂಜಿಮಾರ್

  “ಈಸಬೇಕು ಇದ್ದು ಜೈಸಬೇಕು” ಎಂಬ ದಾಸರವಾಣಿ ನಮ್ಮ ನಿತ್ಯ ಜೀವನಕ್ಕೊಂದು ಸ್ಫೂರ್ತಿ ತುಂಬುವ ಕೈಗನ್ನಡಿ.ಬದುಕಿನಲ್ಲಿ ಎದುರಾಗುವ ಯಾವುದೇ ಅಡೆತಡೆಗಳಿಗೆ ಕುಗ್ಗದೆ,ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡು ಮುನ್ನಡೆದರೆ ಯಾವುದೇ ಋಣಾತ್ಮಕ ವಿಚಾರಗಳಿಗೆ ನಮ್ಮನ್ನು ಕುಗ್ಗಿಸಲು ಅಸಾಧ್ಯ.
        ಕಿರುಬೆರಳಿಗಿಂತ ಚಿಕ್ಕದಾದ ಅಪಯಶಸ್ಸಿನಿಂದ  ನೊಂದು ಬದುಕಿಗೆ ವಿದಾಯ  ಹೇಳುವ ಜನ ನಮ್ಮ ನಡುವೆಯೇ ನೂರಾರು.”ಸವಾಲುಗಳಿಗೆ ನಾನೆಂದಿಗೂ ಹೆದರುವವನಲ್ಲ.ನನ್ನಂತವರು ಸಾಧನೆ ಮಾಡಲೆಂದೇ ಹುಟ್ಟಿರುವ ಧೀರರು” ಎನ್ನುತ್ತಲೇ ಮಂದಹಾಸದ ನಗು ಬೀರುವ ಗಣೇಶ್ ಕುಲಾಲ್ ಪಂಜಿಮಾರ್ ವಿಕಲಾಂಗತೆಯನ್ನು ಮೆಟ್ಟಿ ನಿಂತು ಸೋಲೆಂಬುವುದನ್ನು ಹೆಜ್ಜೆ ಹೆಜ್ಜೆಗೂ ಸೋಲಿಸುತ್ತಿರುವ ಛಲಗಾರ.ಈ ಛಲಗಾರನ ಯಶೋಗಾಥೆ  ಪ್ರತಿಯೊಬ್ಬರ ಬದುಕಿಗೂ ಹೊಸದೊಂದು ಚೈತನ್ಯವನ್ನು ತುಂಬುತ್ತದೆ.
       ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಶಿರ್ವ ರಾಮ ಮೂಲ್ಯ ಹಾಗೂ ನಾಗಮಣಿ  ದಂಪತಿಗಳ ಪುತ್ರನಾಗಿರುವ ಗಣೇಶ್ ಕುಲಾಲ್ ಹುಟ್ಟಿನಿಂದಲೇ ವಿಕಲಾಂಗರು.ಮೂರಡಿ ಎತ್ತರ,ಇಪ್ಪತ್ಮೂರು ಕಿಲೋ ಗ್ರಾಂ ತೂಕ ಹೊಂದಿರುವ ಗಣೇಶ್ ಪ್ರೌಢವಸ್ಥೆಯನ್ನು ದಾಟಿ ನಿಂತವರು.ಹುಟ್ಟಿನಿಂದಲೇ ಜೊತೆಯಾದ ಅಂಗವೈಕಲ್ಯ ಬದುಕಿಗೆ ಬಿರುಗಾಳಿಯಂತೆಯೇ ಬಂದೊಡ್ಡಿದರೂ ಇವರು ಜೀವನೋತ್ಸಾಹವನ್ನು ಎಂದಿಗೂ ಕಳೆದುಕೊಳ್ಳಲಿಲ್ಲ.ಉತ್ತಮ ವಿದ್ಯಾಭ್ಯಾಸ ಪಡೆದು ಸ್ವಸಾಮಾರ್ಥ್ಯದಿಂದಲೇ ನೌಕರಿ ಗಿಟ್ಟಿಸಿಕೊಳ್ಳಬೇಕೆಂಬ ಹಂಬಲದಿಂದ  ಪ್ರಾಥಮಿಕ ಶಿಕ್ಷಣವನ್ನು ಶ್ರೀ ದುರ್ಗಾಂಬಿಕಾ ಹಿರಿಯ ಪ್ರಾಥಮಿಕ ಶಾಲೆ ಪಂಜಿಮಾರು,ಶ್ರೀ ನಾರಾಯಣ ಗುರು ಪ್ರೌಢಶಾಲೆ ಪಡುಬೆಳ್ಳೆ ಹಾಗೂ ಪಿಯುಸಿ ಶಿಕ್ಷಣವನ್ನು ಜೂನಿಯರ್ ಕಾಲೇಜು ಶಿರ್ವದಲ್ಲಿ ಪಡೆದರು.ಈ ಸಂದರ್ಭದಲ್ಲಿ ಕುಟುಂಬ ತುಂಬಿದ ಧೈರ್ಯ,ಗೆಳೆಯರು ನೀಡಿದ ಸಾಥ್,ಶಿಕ್ಷಕರ ಪ್ರೀತಿ ,ಕಾಳಜಿಯನ್ನು ಸ್ಮರಿಸಿಕೊಳ್ಳುತ್ತಾರೆ.ನಂತರ ದಾನಿಯೊಬ್ಬರು ಕೊಡುಗೆಯಾಗಿ ನೀಡಿದ ವಿದ್ಯುತ್ ಚಾಲಿತ ತ್ರಿಚಕ್ರ ಸ್ಕೂಟರ್ನಲ್ಲಿ ನಿತ್ಯ ಹತ್ತು ಕಿ.ಮೀ ಕ್ರಮಿಸಿ ಪದವಿ ಗಿಟ್ಟಿಸಿಕೊಂಡ ಸ್ಫೂರ್ತಿ ಚಿಲುಮೆಯಿವರು. ವಿದ್ಯಾಭ್ಯಾಸದ ಜೊತೆಜೊತೆಗೆ  ಚಿತ್ರಕಲೆ, ಕಥೆ,ಕವನ  ಬರೆಯುವ ಆಸಕ್ತಿಯನ್ನೂ ಇರಿಸಿಕೊಂಡು ಸದಾ ಕ್ರೀಯಾಶೀಲರಾಗಿರುತ್ತಿದ್ದರು.
       ಚಿತ್ರಕಲೆಯಲ್ಲಿ ಮೊದಲ ಪ್ರಯತ್ನವಾಗಿ ತನ್ನ ಅಮ್ಮನ ಚಿತ್ರವನ್ನೇ ಚಿತ್ರಿಸಿ ತೋರಿಸಿದಾಗ ಅಮ್ಮನಿಂದ ವ್ಯಕ್ತವಾದ ಮೆಚ್ಚುಗೆ,ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಾಗ ಅಲ್ಲಿ ಪ್ರೇಕ್ಷಕ ವರ್ಗದಿಂದ ಸಿಕ್ಕ ಪ್ರತಿಕ್ರಿಯೆ ಮುಂದೆ ಕಲಾ ಕ್ಷೇತ್ರದಲ್ಲಿಯೇ ಮುಂದುವರಿಯುವಂತೆ ಪ್ರೇರೇಪಿಸಿತು ಎನ್ನುತ್ತಾರೆ ಗಣೇಶ್ ಪಂಜಿಮಾರ್.
         ಇವರ ಕೈಯಲ್ಲಿ ಮೂಡಿದ  ವಿವಿಧ ಕ್ಷೇತ್ರಗಳ ನಾಯಕರ,ಪ್ರಕೃತಿ,ಪ್ರಾಣಿ ಪಕ್ಷಿಗಳ ಚಿತ್ರಗಳು ನೋಡುಗರನ್ನು ಒಂದೊಮ್ಮೆ ಬೆರಗಾಗುವಂತೆ ಮಾಡುತ್ತದೆ.ಈಗಾಗಲೇ ಮುನ್ನೂರೈವತ್ತಕ್ಕಿಂತಲೂ ಹೆಚ್ಚು ಚಿತ್ರಗಳನ್ನು ಚಿತ್ರಿಸಿರುವ ಈ  ಸಾಧಕ ಎಲ್ಲರ ಬದುಕಿಗೆ ಸ್ಫೂರ್ತಿಯ ಮಾತಾಗಿ ನಿಂತಿದ್ದಾರೆ.ದೈಹಿಕ ಕಸರತ್ತಿಗೆ ಅಂಗಾಂಗ ಸ್ಪಂದಿಸದಿದ್ದಾಗ ತಮ್ಮ ಬೌದ್ಧಿಕ ಕಸರತ್ತಿನಿಂದ ಚಿತ್ರ ಕಲಾವಿದನಾಗಿ ರೂಪುಗೊಂಡು ಇಂದು ಜನಮಾನಸದಲ್ಲಿ ಕಿಂಗ್ ಗಣೇಶ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಈ ಭಿನ್ನ ಪ್ರತಿಭೆಯ ಹಾದಿ ನಿಜಕ್ಕೂ ರೋಚಕತೆಯ ಆಗರ.
         ಇವರ ತಂಗಿ ಸುಮಾ ಕೂಡಾ ವಿಕಲಾಂಗರಾಗಿದ್ದರೂ ಕಾಗದಗಳ ಪಟ್ಟಿಯಿಂದ ಗೊಂಬೆ ತಯಾರಿಸುವಲ್ಲಿ ಪರಿಣಿತರು.ಅಣ್ಣ-ತಂಗಿ ಒಬ್ಬರಿಗೊಬ್ಬರು ಬೆನ್ನು ತಟ್ಟುತ್ತಾ ಅಛಲ ವಿಶ್ವಾಸದಿಂದ ಜೀವನವನ್ನು ಎದುರಿಸುತ್ತಿರುವ ರೀತಿ  ಸಾಮರ್ಥ್ಯವಿದ್ದರೂ ಅಸಮರ್ಥರೆಂದು ಕೈ ಚೆಲ್ಲುವ ನಿರಾಶಾವಾದಿಗಳಿಗೆ ಅದ್ಭುತ ಪಾಠವಾಗಿ  ತೋರುತ್ತದೆ.
            ಮಲ್ಲಿಗೆ ಹೂವು ಕಟ್ಟಿ ,ಅದನ್ನು  ಮಾರಿ ಕುಟುಂಬದ ಜವಾಬ್ದಾರಿಯನ್ನು ನಡೆಸುತ್ತಿರುವ ತಾಯಿಗೆ,ತನಗಿಂತಲೂ ತ್ರಾಸದಾಯಕ ಸ್ಥಿತಿಯಲ್ಲಿರುವ ತಂಗಿಗೆ ನೆರಳಾಗಿ  ನಿಲ್ಲಬೇಕೆಂಬ ದೃಢ ಆಶಯವನ್ನು ಹೊಂದಿರುವ ಗಣೇಶ್ ರವರು ಸರ್ಕಾರಿ ನೌಕರಿ ಗಿಟ್ಟಿಸಿಕೊಳ್ಳಬೇಕೆಂಬ ಆಕಾಂಕ್ಷೆಯಿಂದ  ಬ್ಯಾಂಕಿಂಗ್ ಪರೀಕ್ಷೆಗೆ ಸಿದ್ಧತೆಗಳನ್ನು ನಡೆಸಿಕೊಂಡು ಈಗಾಗಲೇ ಹಲವು ಬಾರಿ ಲಿಖಿತ ಪರೀಕ್ಷೆಗೆ ಹಾಜರಾಗಿದ್ದಾರೆ. ಗಣೇಶ್ ಪಂಜಿಮಾರ್ ಆರ್ಟ್ಸ್ ಎಂಬ ಯುಟ್ಯೂಬ್ ,ಇನ್ಸ್ಟ್ರಾಗ್ರಾಮ್ ಹಾಗೂ ಫೇಸ್ಬುಕ್ ಅಕೌಂಟನ್ನು ತಮ್ಮ ಕಲಾ ಪ್ರತಿಭೆಯ ಪ್ರದರ್ಶನಕ್ಕೆ  ವೇದಿಕೆಯನ್ನಾಗಿ ವಿನಿಯೋಗಿಸಿಕೊಂಡಿದ್ದಾರೆ.ಈಗಾಗಲೇ ಹಲವಾರು ಸಂಘ ಸಂಸ್ಥೆಗಳಿಂದ  ಪುರಸ್ಕಾರಗಳನ್ನು ಪಡೆದುಕೊಂಡಿದ್ದು ,ಇವರ ಸಾಧನೆಯ ಕುರಿತಾದ ಲೇಖನಗಳು ಹಲವಾರು ಪತ್ರಿಕೆಗಳಲ್ಲಿ ಪ್ರಕಟವಾಗಿದೆ.
       “ಸಾಧಿಸುವ ಛಲವೊಂದಿದ್ದರೆ ಬದುಕಿನಲ್ಲಿ ಎದುರಾಗುವ ಸಮಸ್ಯೆಗಳೂ ಮೆಟ್ಟಿಲುಗಳಾಗುತ್ತದೆ.ದೇಹದಲ್ಲಿ ಬಲವಿಲ್ಲದಿದ್ದರೇನಂತೆ?ಅಂತರಂಗದಲ್ಲಿ ಅಡಗಿರುವ ಆತ್ಮಸ್ಥೈರ್ಯ ನಾನು ಅಶಕ್ತನಲ್ಲ ಎಂದು ಸಾರಿ ಹೇಳುತ್ತದೆ.ಉಪಕಾರವಾಗದಿದ್ದರೂ ತೊಂದರೆಯಿಲ್ಲ ಅಪಹಾಸ್ಯದ ಮಾತುಗಳು ಬೇಡ.ನಮ್ಮದೇ ಹಕ್ಕಿನಿಂದ ಸಮಾಜದ ಮುಖ್ಯವಾಹಿನಿಗೆ  ಬರಲು ಅವಕಾಶವಿರಲಿ.ನಮ್ಮಲ್ಲಿ ಚಿಮ್ಮುವ ಉತ್ಸಾಹಕ್ಕೆ ತಣ್ಣೀರೆರೆಚುವುದೂ ಬೇಡ .ಇಂದು ಪುಟ್ಟ ಕಾರಣಗಳಿಗೆ ಮನನೊಂದು ಆತ್ಮಹತ್ಯೆಯ ಹಾದಿ ಹಿಡಿಯುವ ಯುವ ಜನತೆಯನ್ನು ನೋಡಿ ಮನನೊಂದಿದೆ.ದೇವರು ಕೊಟ್ಟ ಅವಕಾಶವನ್ನು ವಿನಿಯೋಗಿಸುವತ್ತ ನಮ್ಮ ಚಿತ್ತ ಇರಲಿ.ಕಷ್ಟ ಬಂದಾಗ ಕಂಗಲಾಗಬೇಡಿ.ನಿಮಗಿಂತಲೂ ಹೀನಾಯ ಸ್ಥಿತಿಯಲ್ಲಿರುವವರ ಜೀವನವನ್ನೊಮ್ಮೆ ನೆನಪಿಸಿಕೊಳ್ಳಿ.ಮತ್ತೆಂದಿಗೂ ನೀವು ಆತ್ಮಹತ್ಯೆಯ ಯೋಚನೆಯೂ ಮಾಡಲಾರಿರಿ.ನನ್ನ ದೈಹಿಕ ನ್ಯೂನತೆಯ ಬಗ್ಗೆ ನನಗಾವತ್ತೂ ಕೀಳರಿಮೆ ಕಾಡಿಲ್ಲ.ಕಾಡುವುದೂ ಇಲ್ಲ.ಸಾವು ನಮ್ಮನ್ನು ಹುಡುಕಿಕೊಂಡು ಬರುವವರೆಗೂ ಸಾವನ್ನು ನಾವು ಹುಡುಕಿಕೊಂಡು ಹೋಗುವಂತಾಗಬಾರದು.ನಿಮ್ಮೊಳಗಿನ ಉತ್ಸಾಹವನ್ನು ಎಂದಿಗೂ ಕಳೆದುಕೊಳ್ಳಬೇಡಿ.” ಎನ್ನುವುದು ಯುವಜನತೆಗೆ  ಗಣೇಶ್ ರವರ ಕಿವಿಮಾತು.
       ಕಣ್ಣೆದುರಿಗೊಂದು ಸ್ಪೂರ್ತಿಯ ಕಥೆ ಇದ್ದಾಗ  ಮನಸ್ಸೆಂಬುವುದು  ಕನಸೆಂಬ ಕುದುರಿಯನ್ನೇರಿಬಿಡುತ್ತದೆ.ಭಂಡ ಧೈರ್ಯವಿದ್ದರೆ ಭೂಮಂಡಲವನ್ನೇ ಗೆಲ್ಲಬಹುದು ಎನ್ನುವ ಮಾತಿಗೆ ಗಣೇಶ್ ಪಂಜಿಮಾರ್ ರವರ ಯಶೋಗಾಥೆ ಉದಾಹರಣೆಯಾಗಿ ತೋರುತ್ತದೆ.ಒಂದು ಹಣತೆ ನೂರು ಹಣತೆಗಳಿಗೆ  ಬೆಳಕಾಗಬಲ್ಲದು.ಅಂತೆಯೇ ಗಣೇಶ್ ಪಂಜಿಮಾರ್ ರವರ ಜೀವನಗಾಥೆ ಅಂಧಕಾರ ತುಂಬಿದ ಬದುಕಿಗೆ ಬೆಳಕಾಗುವುದರಲ್ಲಿ ಸಂಶಯವೇ ಇಲ್ಲ.ನೂರಾರು ಕನಸುಗಳನ್ನು ಹೊತ್ತಿರುವ ಗಣೇಶ್ ರವರ ಕನಸುಗಳೆಲ್ಲವೂ ಸಾಕಾರಗೊಳ್ಳಲಿ.ಸಕಲ ದೈವ ದೇವರುಗಳ ಆಶೀರ್ವಾದ ಇವರ ಮೇಲಿರಲೆಂದು ನಾವೆಲ್ಲರೂ ಆಶಿಸೋಣ.
ಅಖಿಲಾ ಶೆಟ್ಟಿ.
Exit mobile version