SportsKannada | ಸ್ಪೋರ್ಟ್ಸ್ ಕನ್ನಡ

ತಂದೆಗೆ ಇಷ್ಟವಿಲ್ಲದ ಕ್ರಿಕೆಟ್.. ಕ್ರಿಕೆಟ್’ಗಾಗಿ ಪಡಬಾರದ ಕಷ್ಟ ಪಟ್ಟ ಮಗ.. ತಂದೆ-ಅಣ್ಣನ ಸಾವು.. ಬೆಂಕಿಯ ಬಲೆಗೆ ಬಿದ್ದವನು, ಭಾರತ ಪರ ಟೆಸ್ಟ್ ಕ್ರಿಕೆಟ್ ಆಡಿದ ಕಥೆ..!

ಬಿಹಾರದ ಸಾಸರಾಮ್ ಎಂಬ ಹಳ್ಳಿಯ ಹುಡುಗನಿಗೆ ವಿಪರೀತ ಕ್ರಿಕೆಟ್ ಹುಚ್ಚು. ‘ಕ್ರಿಕೆಟ್’ ಶಬ್ದ ಕಿವಿಗೆ  ಬಿದ್ದರೆ ಸಾಕು, ಉರಿದು ಬೀಳುತ್ತಿದ್ದ ತಂದೆ..!
‘’ಕ್ರಿಕೆಟ್ ಆಡಿ ಯಾವ ಊರು ಉದ್ಧಾರ ಮಾಡಬೇಕು ನೀನು..? ನೆಟ್ಟಗೆ ಒಂದು ಕೆಲಸ ಹುಡುಕೊಂಡು ಜೀವನ ನೋಡಿಕೋ’’ ಎಂದು ಕಟ್ಟಪ್ಪಣೆ ಮಾಡಿದ ತಂದೆ, ಅವತ್ತು ಮಗನ ಮುಂದೆ ಇಟ್ಟಿದ್ದ ಆಯ್ಕೆ ಎರಡೇ. ಕ್ರಿಕೆಟ್, ಇಲ್ಲಾ ಜೀವನ.
ಸಾಸರಾಮ್ ಹಳ್ಳಿಯಿಂದ ಹೊರಟ ಆಕಾಶದೀಪ ಬಂಗಾಳದ ದುರ್ಗಾಪುರಕ್ಕೆ ಬಂದು ಕೆಲಸ ಹುಡುಕಿಕೊಂಡ. ಕೆಲಸದ ಮಧ್ಯೆ ಅಲ್ಲೇ ಲೋಕಲ್ ಕ್ರಿಕೆಟ್ ಅಕಾಡೆಮಿಯಲ್ಲಿ ಬೌಲಿಂಗ್ ಅಭ್ಯಾಸ. ಉದ್ಯೋಗ, ಕ್ರಿಕೆಟ್ ಮತ್ತು ಜೀವನ. ಎಲ್ಲವೂ ಸರಿದಾರಿಯಲ್ಲೇ ಸಾಗುತ್ತಿತ್ತು ಎನ್ನುವಾಗಲೇ ಆಕಾಶದೀಪನ ಜೀವನದಲ್ಲಿ ಬರಸಿಡಿಲೊಂದು ಅಪ್ಪಳಿಸಿ ಬಿಟ್ಟಿತು.
ಪಾರ್ಶ್ವವಾಯು ಸಮಸ್ಯೆಗೊಳಗಾದ ತಂದೆ ಸಾವಿಗೀಡಾಗ್ತಾರೆ. ಗಾಯದ ಮೇಲೆ ಬರೆ ಎಳೆದಂತೆ ತಂದೆ ಸತ್ತ ಎರಡೇ ತಿಂಗಳುಗಳ ಅಂತರದಲ್ಲಿ ಅಣ್ಣನ ಸಾವು.
ಆಕಾಶದೀಪನ ತಲೆಯ ಮೇಲೆ ಆಕಾಶವೇ ಕುಸಿದು ಬಿದ್ದಂತಾಗಿತ್ತು. ಮನೆಯಲ್ಲಿ ಒಂದು ರೂಪಾಯಿ ದುಡ್ಡಿಲ್ಲ.., ಒಬ್ಬಂಟಿ ತಾಯಿ. ಕ್ರಿಕೆಟ್ ಕನಸನ್ನು ಪಕ್ಕಕ್ಕಿಡಲೇಬೇಕಾದ ಪರಿಸ್ಥಿತಿ. ಒಂದಲ್ಲ, ಎರಡಲ್ಲ.., ಮೂರು ವರ್ಷ ಕ್ರಿಕೆಟ್’ನಿಂದ ದೂರ ಉಳಿಯಲೇಬೇಕಾದ ಅನಿವಾರ್ಯತೆ ಎದುರಾಯಿತು.
ಸೂತ್ರವಿಲ್ಲದ ಗಾಳಿಪಟದಂತಾಗಿದ್ದ ಬದುಕನ್ನು ಮರಳಿ ಕಟ್ಟಲು ನಿಂತ ಆಕಾಶದೀಪ. ಆದರೆ ಜೀವನದ ಗುರಿ ಬೇರೆಯೇ ಇತ್ತು. ಕ್ರಿಕೆಟ್ ಆಡಬೇಕು, ಭಾರತ ಪರ ಟೆಸ್ಟ್ ಕ್ಯಾಪ್ ಧರಿಸಬೇಕೆೆಂಬ ಕನಸು ಕಂಡವ.
ಜೀವನ ಒಂದು ಹಂತಕ್ಕೆ ಸುಧಾರಿಸಿತು ಎನ್ನುವಷ್ಟರಲ್ಲಿ ಮತ್ತೆ ದುರ್ಗಾಪುರಕ್ಕೆ ಬಂದವನೇ ಅಲ್ಲಿಂದ ನೇರವಾಗಿ ಬಂದಿಳಿದಿದ್ದು ಕೋಲ್ಕತಾಗೆ.
ಉತ್ತರ ಪ್ರದೇಶದ ಅಮ್ರೋಹಾದಿಂದ ಕ್ರಿಕೆಟ್ ಅಡಲೆಂದೇ ಕೋಲ್ಕತಾಗೆ ಬಂದಿದ್ದ ಮೊಹಮ್ಮದ್ ಶಮಿ. ಆಕಾಶದೀಪನದ್ದೂ ಅದೇ ಕಥೆ.
ಆದರೆ ಕೋಲ್ಕತಾದ ಬದುಕು ಮತ್ತಷ್ಟು ದುಸ್ತರವಾಯಿತು. ಗುರುತು ಪರಿಚಯವಿಲ್ಲದ ಊರು. ಕೈಯಲ್ಲಿ ದುಡ್ಡಿಲ್ಲ. ತುಂಬಾ ಕಷ್ಟ ಪಟ್ಟ. ‘’ಅದೇನಾದರೂ ಸರಿ, ವಾಪಸ್ ಹೋಗೋ ಮಾತೇ ಇಲ್ಲ., ಇಲ್ಲೇ ಕ್ರಿಕೆಟ್ ಬದುಕು ಕಟ್ಟಿಕೊಳ್ಳುವೆ’’ ಎಂದು ದೃಢ ನಿರ್ಧಾರ ಮಾಡಿ ಬಿಟ್ಟಿದ್ದ.
ಕೋಲ್ಕತಾದಲ್ಲಿ ಸಣ್ಣ ರೂಮ್ ಒಂದನ್ನು ಬಾಡಿಗೆಗೆ ಪಡೆದು, ಅಲ್ಲೇ ಕೆಲಸ ಮಾಡುತ್ತಾ, ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಿಗಳಲ್ಲಿ ಆಡುತ್ತಾ, ಅಲ್ಲಿ ಸಂಪಾದಿಸಿದ ದುಡ್ಡಿನಲ್ಲಿ ಜೀವನ ನಡೆಸುತ್ತಾ, ಕ್ರಿಕೆಟ್ ಕನಸನ್ನು ನನಸಾಗಿಸಿಕೊಳ್ಳಲು ನಿಂತು ಬಿಟ್ಟ ಆಕಾಶದೀಪ.
ಹಗಲೂ ರಾತ್ರಿ ಪಟ್ಟ ಶ್ರಮ ಕೈ ಹಿಡಿಯಿತು. ಆಕಾಶದೀಪನಿಗೆ ಬಂಗಾಳ Under-23 ತಂಡದ ಬಾಗಿಲು ತೆರೆಯಿತು. ಅಲ್ಲಿಂದ ಬಂಗಾಳ ರಣಜಿ ತಂಡ. ಒಂದೆರಡು ಒಳ್ಳೆಯ ಡೊಮೆಸ್ಟಿಕ್ ಸೀಸನ್’ಗಳ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಐಪಿಎಲ್ ಕಾಂಟ್ರ್ಯಾಕ್ಟ್.
ಇವತ್ತು ತನ್ನ ತಾಯಿಯ ಮುಂದೆ ಟೆಸ್ಟ್ debut. ಒಂದೇ ಒಂದು ಅವಕಾಶಕ್ಕಾಗಿ ಕಾದು ಕುಳಿತವನಿಗೆ ಆ ಅವಕಾಶ ಸಿಗುತ್ತಿದ್ದಂತೆ ಹಸಿದ ಹೆಬ್ಬುಲಿಯಾಗಿಬಿಟ್ಟ. ರಾಂಚಿ ಮೈದಾನದಲ್ಲಿ ಇಂಗ್ಲೆಂಡ್’ನ ಟಾಪ್-3 ದಾಂಡಿಗರೇ ಆಕಾಶದೀಪನ ಕಿಚ್ಚಿನ ಮುಂದೆ ಮಕಾಡೆ ಮಲಗಿ ಬಿಟ್ಟರು.
What a journey #Akashdeep 
#INDvsENGTest
Exit mobile version