SportsKannada | ಸ್ಪೋರ್ಟ್ಸ್ ಕನ್ನಡ

15/30/40/ಗೇಮ್ ಟೆನ್ನಿಸ್ ಅಂಕಿ-ಅಂಶಗಳ ಸ್ವಾರಸ್ಯ

ನೀವು ಟೆನ್ನಿಸ್ ಆಟದ ಅಭಿಮಾನಿಯಾಗಿದ್ದರೆ ಅಥವಾ ಕನಿಷ್ಟ ಒಂದೆರಡು ಬಾರಿ ಟೆನ್ನಿಸ್ ನೋಡಿದ್ದರೆ ನೀವಿದನ್ನು ಗಮನಿಸಿರುತ್ತೀರಿ.ಆಟಗಾರನೊಬ್ಬ ಅಂಕ ಪಡೆದಾಗ ಅದನ್ನು ಒಂದು ಪಾಯಿಂಟ್ ಎನ್ನದೇ 15 ಎನ್ನಲಾಗುತ್ತದೆ. ಅದೇ ಆಟಗಾರ ಪಡೆಯುವ ಎರಡನೇ ಅಂಕವನ್ನು 30 ಎಂದು ಮತ್ತು ಮೂರನೆ ಅಂಕವನ್ನು 40 ಎಂದು ಘೋಷಿಸಲಾಗುತ್ತದೆ.ನಂತರದ್ದು ಕೊನೆಯ ಅಂಕವಾಗಿದ್ದರೆ ಆಟಗಾರ ಒಂದು ಗೇಮ್ ಗೆದ್ದುಕೊಳ್ಳುತ್ತಾನೆ.

ವಿಚಿತ್ರವೆಂದರೆ ಹೀಗೆ ಗೇಮ್‌ಗಳನ್ನು ನಿರ್ಧರಿಸುವ ಅಂಕಗಳನ್ನೇಕೆ 15,30 40 ಎಂದು ಗುರುತಿಸಲಾಗುತ್ತದೆ,ಯಾಕೆ ನೇರವಾಗಿ ಒಂದು ಎರಡು ಮೂರು ಎಂಬ ಅಂಕಿಗಳಲ್ಲಿ ಗುರುತಿಸಲಾಗುವುದಿಲ್ಲ ಎನ್ನುವ ಪ್ರಶ್ನೆಗೆ ಸ್ಪಷ್ಟವಾದ ಉತ್ತರ ಟೆನ್ನಿಸ್ ಪಂಡಿತರ ಬಳಿಯೂ ಇಲ್ಲದಿರುವುದು ವಿಶೇಷ.ಈ ಕುರಿತು ತುಂಬ ಚಾಲ್ತಿಯಲ್ಲಿರುವ ಒಂದು ಪ್ರಸಿದ್ದ ಕತೆಯೆಂದರೆ ಹೀಗೆ ಅಂಕ ಕೊಡುವ ಪದ್ದತಿ ಮೊದಲು ಶುರುವಾಗಿದ್ದು ಮಧ್ಯಕಾಲೀನ ಫ್ರಾನ್ಸ್‌ನಲ್ಲಿ.ಟೆನ್ನಿಸ್ ಪಂದ್ಯಗಳ ವೇಳೆ ಅಂಕಗಳನ್ನು ದಾಖಲಿಸಲು ಕೃತಕ ಗಡಿಯಾರದಂತಹ ಮಾಪಕವೊಂದನ್ನು ಇರಿಸಿಕೊಳ್ಳಲಾಗುತ್ತಿತ್ತು.

ಮೊದಲ ಅಂಕ ಗಳಿಸಿದಾಗ ಗಡಿಯಾರದ ಮುಳ್ಳನ್ನು ಕಾಲುಗಂಟೆಗೆ ತಿರುಗಿಸಲಾಗುತ್ತಿತ್ತು.ಎರಡನೇ ಅಂಕ ಗಳಿಸಿದಾಗ ಅರ್ಧಗಂಟೆಗೂ ಮೂರನೇ ಅಂಕಗಳಿಸಿದಾಗ ಮುಕ್ಕಾಲುಗಂಟೆಗೂ ಮತ್ತು ನಾಲ್ಕನೆ ಮತ್ತು ಕೊನೆಯ ಅಂಕಕ್ಕೆ ಪೂರ್ತಿ ಒಂದು ಸುತ್ತು ಸುತ್ತಿ ಒಂದು’ ಗೇಮ್’ ಎಂದು ಗುರುತಿಸಲಾಗುತ್ತಿತ್ತು.ಇದು ಸರಿಯಾಗಿತ್ತಾದರೂ ಸಮಸ್ಯೆಯಾಗಿದ್ದು ಮೂರನೇ ಅಂದರೆ 45 ಎಂಬ ಅಂಕ ಗಳಿಕೆಯ ಸಮಯದಲ್ಲಿ.

ಟೆನ್ನಿಸ್ ಆಟದ ನಿಯಮಗಳ ಪ್ರಕಾರ ಎದುರಾಳಿಯೊಬ್ಬ ಒಂದು ಗೇಮ್ ಅಥವಾ ಒಂದು ಸೆಟ್ ಎನ್ನುವುದನ್ನು ಕೇವಲ ಒಂದೇ ಒಂದು ಅಂಕಗಳ ವ್ಯತ್ಯಾಸದಲ್ಲಿ ಗೆಲ್ಲುವುದು ಸಾಧ್ಯವಿಲ್ಲ.ಕನಿಷ್ಟ ಎರಡು ಅಂಕಗಳ ವ್ಯತ್ಯಾಸವಿರದೇ ಜಯ ಅಸಾಧ್ಯ.ಆ ಕಾರಣಕ್ಕೆ ಪರಸ್ಪರ ಎದುರಾಳಿಗಳು 45 – 45 ಅಂಕಗಳನ್ನು ಗಳಿಸಿದಾಗ ಗಡಿಯಾರವನ್ನು ಮುಂದೆ ಎರಡು ಬಾರಿ ತಿರುಗಿಸಲೇಬೇಕು.ಅಲ್ಲಿ ಶುರುವಾಗಿತ್ತು ಅಸಲಿ ಸಮಸ್ಯೆ.45 ರ ನಂತರ ಉಳಿದ 15 ನಿಮಿಷವನ್ನು ಎರಡು ಸಮಭಾಗಗಳನ್ನಾಗಿ ಸುಲಭಕ್ಕೆ ವಿಭಾಗಿಸುವುದು ಕಷ್ಟವೆನ್ನಿಸಿತ್ತು.

ಹಾಗಾಗಿ ಕೊಂಚ ಯೋಚಿಸಿ ತಲೆಯೋಡಿಸಿದ ಅಂದಿನ ಪಂಡಿತರು ಅಂಕ ಪದ್ದತಿಯಲ್ಲಿ ಸಣ್ಣದ್ದೊಂದು ಮಾರ್ಪಾಡು ತಂದರು.ಮೂರನೇಯ ಅಂಕದ ವೇಳೆಗೆ ಗಡಿಯಾರದ ಮುಳ್ಳನ್ನು 40ಕ್ಕೆ ತಂದು ನಿಲ್ಲಿಸುವ ಹೊಸ ಕ್ರಮ ಜಾರಿಗೆ ತಂದುಬಿಟ್ಟರು.ಮುಂದಿನ ಅಂಕದ ವೇಳೆಗೆ ಮುಳ್ಳನ್ನು 50ಕ್ಕೆ ತಂದು ನಿಲ್ಲಿಸಿ ಅಂತಿಮವಾಗಿ ಕೊನೆಯ ಅಂಕಕ್ಕೆ 60ಕ್ಕೆ ಮುಳ್ಳನ್ನು ತರುವ ಪದ್ದತಿ ಹಾಗೆ ಮುಂದುವರೆಯಿತು.

ಬಹುಶ: ಈ ಪದ್ದತಿಯೇ ಇಂದಿಗೂ ಮುಂದುವರೆದಿರಲಿಕ್ಕೆ ಸಾಕು.ಹಾಗಾಗಿಯೇ ಪಂದ್ಯವೊಂದರಲ್ಲಿ ಅಂಕಗಳು 40 – 40ರ ಸಮಬಲದಲ್ಲಿದ್ದಾಗ ಮುಂದಿನ ಅಂಕಕ್ಕೆ advantage ಎಂದು ಕರೆದು ನಂತರದ ಅಂಕವನ್ನು ಆ ಗೇಮ್‌ನ ಕೊನೆಯ ಅಂಕವಾಗಿ ಪರಿಗಣಿಸಲಾಗುತ್ತದೆ.

Exit mobile version