SportsKannada | ಸ್ಪೋರ್ಟ್ಸ್ ಕನ್ನಡ

10pl ಟೆನ್ನಿಸ್ ಕ್ರಿಕೆಟ್ ವಿಶ್ವ ಕಪ್- ಪಾಕ್ ನ್ನು ಚೆಂಡಾಡಿದ ಭಾರತೀಯರು‌

ಕೊಲ್ಲಿ ರಾಷ್ಟ್ರದ ತೈಲ ಮತ್ತು ಅನಿಲ ಉತ್ಪಾದನಾ ಘಟಕ ಮತ್ತು ಶಾರ್ಜಾ ಕ್ರಿಕೆಟ್ ಕೌನ್ಸಿಲ್ ಸಹಭಾಗಿತ್ವದಲ್ಲಿ

ಶಾರ್ಜಾದ ಹುಲ್ಲುಹಾಸಿನ ಅಂತರಾಷ್ಟ್ರೀಯ ಅಂಗಣದಲ್ಲಿ ನಡೆದ ಟೆನ್ನಿಸ್ ಕ್ರಿಕೆಟ್
ವಿಶ್ವಕಪ್ ಖ್ಯಾತಿಯ 10pl ಸೀಸನ್-3 ಪಂದ್ಯಾಕೂಟದ ಪ್ರದರ್ಶನ ಪಂದ್ಯವೊಂದರಲ್ಲಿ ಭಾರತೀಯ ಟೆನ್ನಿಸ್ ಕ್ರಿಕೆಟ್ ತಂಡ ಬಲಿಷ್ಠ ಪಾಕ್ ತಂಡವನ್ನು ಹೀನಾಯವಾಗಿ ಮಣಿಸಿ ಗೆಲುವಿನ ಕೇಕೆ ಹಾಕಿದರು.

ಮೊದಲು ಬ್ಯಾಟಿಂಗ್ ನಡೆಸಿದ ಭಾರತ ತಂಡದ ಪರವಾಗಿ‌ ಥಾಮಸ್ ಡಯಾಸ್ 25,ಸುಮೀತ್ ಧೇಖಲೆ 18, ಉಸ್ಮಾನ್ ಪಟೇಲ್ 18 ಹಾಗೂ ಕೃಷ್ಣ ಸಾತ್ಪುತೆ 12 ರನ್ ಗಳ ವೈಯಕ್ತಿಕ ಕೊಡುಗೆಯಿಂದ ಎದುರಾಳಿ ಬಲಿಷ್ಠ ಪಾಕ್ ತಂಡಕ್ಕೆ 10 ಓವರ್ ಗಳಲ್ಲಿ 86 ರನ್ ಗಳ ಸವಾಲಿನ ಗುರಿಯನ್ನು ನೀಡಿತ್ತು.

ಚೇಸಿಂಗ್ ವೇಳೆ ಎಡವಿದ ಪಾಕ್
ಭಾರತ ತಂಡದ ವೇಗಿಗಳಾದ ವಿಶ್ವಜೀತ್ ಠಾಕೂರ್,ಅಂಕುರ್ ಸಿಂಗ್,ವಿಜಯ್ ಪಾವ್ಲೆ ಹಾಗೂ ಸರೋಜ್ ಉರಿ ಚೆಂಡಿನ ದಾಳಿಗೆ ತತ್ತರಿಸಿ 8.5 ಓವರ್ ಗಳಲ್ಲಿ ಕೇವಲ 41 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಗಳನ್ನು ಕಳೆದುಕೊಂಡು ಹೀನಾಯ ಸೋಲುಂಡಿತು.

2 ಓವರ್ ನಲ್ಲಿ 3 ರನ್ ನೀಡಿ ಬಲಿಷ್ಠ ಪಾಕ್ ನ 3 ವಿಕೆಟ್ ಉರುಳಿಸಿದ ರಾಯ್ ಗಡ್ ನ ಮೋಟ್ಯಾ ಯಾನೆ ವಿಶ್ವಜೀತ್ ಠಾಕೂರ್ ಅರ್ಹವಾಗಿ ಪಂದ್ಯಶ್ರೇಷ್ಟ ಪ್ರಶಸ್ತಿ ಪಡೆದುಕೊಂಡರು.

ಈ ಪಂದ್ಯದಲ್ಲಿ 10 pl ಸೀಸನ್ 3 ಚಾಂಪಿಯನ್ ತಂಡ ಮೂಲ್ಕಿ ಮೂಲದ ಅಮಿತ್ ಫುರ್ಟಾಡೋ ಮಾಲೀಕತ್ವದ ಫ್ರೆಂಡ್ಸ್ ಕುವೈಟ್ ತಂಡದ ಹೆಚ್ಚಿನ ಆಟಗಾರರು ಭಾರತ ತಂಡವನ್ನು ಪ್ರತಿನಿಧಿಸಿದ್ದರು. ಟೆನ್ನಿಸ್ ಕ್ರಿಕೆಟ್ ನಲ್ಲಿ ಇದೇ ಮೊದಲ ಬಾರಿಗೆ ಭಾರತ-ಪಾಕ್ ಮುಖಾಮುಖಿ ಯಾಗಿದ್ದು,ಪ್ರಥಮ ಪಂದ್ಯದಲ್ಲೇ ಗೆಲುವನ್ನು ಸಾಧಿಸಿ ಕ್ರೀಡಾಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಯಿತು.

Exit mobile version