
ಎರಡೇ ರಣಜಿ ಪಂದ್ಯಗಳಿಂದ 17 ವಿಕೆಟ್ ಪಡೆದ ಮೈಸೂರು ಹುಡುಗ!
ಕರ್ನಾಟಕ ಕ್ರಿಕೆಟ್ ತಂಡವನ್ನು ತೊರೆದು ನಾಗಾಲ್ಯಾಂಡ್ ಪರ ಆಡುತ್ತಿರುವ ಇಬ್ಬರು ಕನ್ನಡಿಗರು ರಣಜಿ ಟ್ರೋಫಿ ಟೂರ್ನಿಯಲ್ಲಿ ಅಕ್ಷರಶಃ ಧೂಳೆಬ್ಬಿಸುತ್ತಿದ್ದಾರೆ. ಅವರೇ ಬಲಗೈ ಓಪನರ್ ಡಿ.ನಿಶ್ಚಲ್ ಮತ್ತು ಎಡಗೈ ಸ್ಪಿನ್ನರ್ ಜಗದೀಶ ಸುಚಿತ್.
ಪ್ರತಿಭಾವಂತ ಆರಂಭಿಕ ಬ್ಯಾಟ್ಸ್’ಮನ್ ಡಿ.ನಿಶ್ಚಲ್, ಪ್ರಸಕ್ತ ಸಾಲಿನ ರಣಜಿ ಟ್ರೋಫಿ ಟೂರ್ನಿಯಲ್ಲಿ ನಾಗಾಲ್ಯಾಂಡ್ ಪರ ಸತತ 2ನೇ ಶತಕ ಬಾರಿಸಿದ್ದಾರೆ.
ಮೊದಲ ಪಂದ್ಯದಲ್ಲಿ ಅರುಣಾಚಲ ಪ್ರದೇಶ ವಿರುದ್ಧ ಅಮೋಘ 149 ರನ್ ಬಾರಿಸಿದ್ದ ನಿಶ್ಚಲ್, 2ನೇ ಪಂದ್ಯದಲ್ಲಿ ಮಣಿಪುರ ವಿರುದ್ಧ ಭರ್ಜರಿ 154 ರನ್ ಸಿಡಿಸಿದ್ದಾರೆ. ಪ್ರಥಮ ಇನ್ನಿಂಗ್ಸ್’ನಲ್ಲಿ 49 ರನ್ ಗಳಿಸಿದ್ದ ನಿಶ್ಚಲ್, ದ್ವಿತೀಯ ಇನ್ನಿಂಗ್ಸ್’ನಲ್ಲಿ 154 ರನ್ ಗಳಿಸಿದರು
ಇನ್ನು ನಿಶ್ಚಲ್ ಜೊತೆ ಈ ಬಾರಿ ನಾಗಾಲ್ಯಾಂಡ್ ತಂಡ ಸೇರಿಕೊಂಡಿರುವ ಮೈಸೂರು ಹುಡುಗ ಜಗದೀಶ ಸುಚಿತ್ ಆಡಿರುವ ಎರಡೇ ಪಂದ್ಯಗಳಿಂದ 17 ವಿಕೆಟ್ ಕಬಳಿಸಿದ್ದಾರೆ.ಅರುಣಾಚಲ ಪ್ರದೇಶ ವಿರುದ್ಧದ ಪ್ರಥಮ ಇನ್ನಿಂಗ್ಸ್’ನಲ್ಲಿ 34 ರನ್ನಿಗೆ 5 ವಿಕೆಟ್, ದ್ವಿತೀಯ ಇನಿಂಗ್ಸ್’ನಲ್ಲಿ 34 ರನ್ನಿಗೆ 4 ವಿಕೆಟ್ ಸೇರಿದಂತೆ ಪಂದ್ಯದಲ್ಲಿ ಒಟ್ಟು 9 ವಿಕೆಟ್ ಪಡೆದಿದ್ದ ಜೆ.ಸುಚಿತ್ ನಾಗಾಲ್ಯಾಂಡ್ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದರು.
ನಾಗಾಲ್ಯಾಂಡ್’ನ 2ನೇ ಪಂದ್ಯದಲ್ಲೂ ಮಿಂಚಿರುವ ಸುಚಿತ್ ಮಣಿಪುರ ವಿರುದ್ಧ ಪ್ರಥಮ ಇನ್ನಿಂಗ್ಸ್’ನಲ್ಲಿ 52 ರನ್ನಿಗೆ 5 ವಿಕೆಟ್ ಕಬಳಿಸಿದ್ದಾರೆ. ದ್ವಿತೀಯ ಇನ್ನಿಂಗ್ಸ್’ನಲ್ಲೂ ತಮ್ಮ ಸ್ಪಿನ್ ಮೋಡಿಯಿಂದ ಮಿಂಚಿದ ಸುಚಿತ್ 81 ರನ್ನಿಗೆ 3 ವಿಕೆಟ್ ಉರುಳಿಸಿದ್ದಾರೆ. ಹೀಗೆ ನಾಗಾಲ್ಯಾಂಡ್ ಪರ ಆಡಿರುವ ಮೊದಲ ಎರಡು ಪಂದ್ಯಗಳಿಂದ ಸುಚಿತ್ 17 ವಿಕೆಟ್ ಪಡೆದು ಮಿಂಚಿದ್ದಾರೆ
31 ವರ್ಷದ ಜೆ.ಸುಚಿತ್ 2014ರಲ್ಲಿ ಕರ್ನಾಟಕ ತಂಡಕ್ಕೆ ಪದಾರ್ಪಣೆ ಮಾಡಿದ್ದರು. ಆದರೆ ಕರ್ನಾಟಕ ತಂಡದಲ್ಲಿ ಸೂಕ್ತ ಅವಕಾಶಗಳು ಸಿಗದ ಹಿನ್ನೆಲೆಯಲ್ಲಿ ಈ ವರ್ಷ ರಾಜ್ಯ ತಂಡವನ್ನು ತೊರೆದು ನಾಗಾಲ್ಯಾಂಡ್ ತಂಡಕ್ಕೆ ವಲಸೆ ಹೋಗಿದ್ದರು.
