SportsKannada | ಸ್ಪೋರ್ಟ್ಸ್ ಕನ್ನಡ

ಒಳಲಂಕೆ ಟ್ರೋಫಿಗೆ ಆಟಗಾರರ ಹರಾಜು

Volalanke Trophy Auction: ಒಳಲಂಕೆ  ಪ್ರೀಮಿಯರ್ ಲೀಗ್ ಟೂರ್ನಿಗೆ ಆಟಗಾರರ ಹರಾಜು ಪ್ರಕ್ರಿಯೆ ನಡೆಯಿತು.
ಒಳಲಂಕೆ ಸ್ಪೋರ್ಟ್ಸ್ ಅಂಡ್ ಕಲ್ಚರಲ್ ಅಸೋಸಿಯೇಷನ್ ಸಾದರಪಡಿಸುವ ”ಒಳಲಂಕೆ  ಟ್ರೋಫಿ-2023 ” ಜಿ ಎಸ್ ಬಿ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯು ಮುಂದಿನ ತಿಂಗಳು ನಡೆಯಲಿದ್ದು 250 ಕ್ಕೂ ಹೆಚ್ಚು ಆಟಗಾರರ ಹರಾಜು ಪ್ರಕ್ರಿಯೆ ಶನಿವಾರ ಮೂಲ್ಕಿಯ ಲಯನ್ಸ್ ಸೌಧ ಮಿನಿ ಹಾಲ್ ನಲ್ಲಿ ನಡೆದಿದೆ. ಬೆಳಗ್ಗೆ ನಡೆದ ಉದ್ಘಾಟನಾ ಸಮಾರಂಭದಲ್ಲಿ ಅಸೋಸಿಯೇಷನ್ ನ ಅಧ್ಯಕ್ಷರಾದ ವಿಶ್ವನಾಥ್ ಭಟ್,  ಕಾರ್ಯದರ್ಶಿ ಪ್ರಭೋದ್ ಕುಡ್ವಾ,  ಕೋಶಾಧಿಕಾರಿ ರಮಾನಾಥ ಪೈ,  ಜಿ ಎಸ್ ಬಿ ಸಭಾ (ರಿ). ಮುಲ್ಕಿಯ ಅಧ್ಯಕ್ಷ ಸತ್ಯೇಂದ್ರ ಶೆಣೈ, ದೇವಳದ ಅರ್ಚಕರಾದ ಪ್ರಥ್ವೀಶ ಭಟ್ ಮತ್ತು  ಆನಂದ ಭಟ್ ಇವರುಗಳು ಉಪಸ್ಥಿತರಿದ್ದರು.  ದೀಪ ಪ್ರಜ್ವಲನೆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ತದನಂತರ ಮಾತನಾಡಿದ ಅಸೋಸಿಯೇಷನ್ ನ ಅಧ್ಯಕ್ಷ ವಿಶ್ವನಾಥ್ ಭಟ್ ಅಸೋಸಿಯೇಷನ್ ನ  ಧ್ಯೇಯ ಹಾಗೂ ಉದ್ದೇಶದ ಬಗ್ಗೆ ಚುಟುಕಾಗಿ ವಿವರಿಸಿದರು ಮತ್ತು ಟೂರ್ನಿಯ ಯಶಸ್ಸಿಗಾಗಿ ಸರ್ವರ ಸಹಕಾರವನ್ನು ಕೋರಿದರು. ಸತೀಶ್ ವಿ ಕಾಮತ್ ಕಾರ್ಯಕ್ರಮವನ್ನು ನಿರೂಪಿಸಿ ಸ್ವಾಗತಿಸಿದರು.
ಈ ಡೇ ಅಂಡ್ ನೈಟ್  ಟೂರ್ನಿಯು ಡಿಸೆಂಬರ್ 9 ಮತ್ತು 10  ರಂದು ಮುಲ್ಕಿಯ ವಿಜಯ ಕಾಲೇಜು ಮೈದಾನದಲ್ಲಿ ನಡೆಯಲಿದೆ.  ಟೂರ್ನಿಯಲ್ಲಿ ಪಾಲ್ಗೊಳ್ಳುವ ತಂಡಗಳಾದ ಪೇಟೆ ಶ್ರೀ ವೆಂಕಟರಮಣ ಕ್ರಿಕೆಟರ್ಸ್ ಕುಂದಾಪುರ, ಕೊಂಕಣ್ ಎಕ್ಸ್ಪ್ರೆಸ್ ಕೋಟೇಶ್ವರ, ಕೊಡಿಯಾಲ್ ಸೂಪರ್ ಕಿಂಗ್ಸ್,  ಡೆಡ್ಲಿ ಪ್ಯಾಂಥರ್ಸ್ (ರಿ) ಕೊಡಿಯಾಲ್, ಉಡುಪಿ ಬ್ಲಾಸ್ಟರ್ಸ್, ಮಲ್ಪೆ ಯುನೈಟೆಡ್, ರೈಸಿಂಗ್ ಸ್ಟಾರ್ಸ್ರ್ ಮಂಗಳೂರು,  ಮಾಲ್ಸಿ ಸ್ಮಾಷರ್ಸ್, ಕೆದಿಂಜೆ ರಾಯಲ್ ಟೈಗರ್ಸ್, ಆಲ್ಫಾ ಟ್ರೂಪರ್ಸ್ ಮುಂಬೈ,, ಇರ್ವತ್ತೂರು ಸ್ಪೋರ್ಟ್ಸ್ ಕ್ಲಬ್ ಮಣಿಪಾಲ್ ಮತ್ತು  ವೀರಾಂಜನೇಯ ಕ್ರಿಕೆಟರ್ಸ್ ಕಾಪು ಸೇರಿದಂತೆ 12 ಫ್ರಾಂಚೈಸಿಗಳು ಒಳಲಂಕೆ   ಟ್ರೋಫಿ ಗೆಲ್ಲಲು ನೆಚ್ಚಿನ ಆಟಗಾರರನ್ನು ಖರೀದಿಸಿವೆ.
ಹರಾಜಿನಲ್ಲಿ ಶರತ್ ಪ್ರಭು ಮುಲ್ಕಿ ಮತ್ತು ವಿಘ್ನೇಶ್ ಭಟ್ ಕೋಟೇಶ್ವರ ಅತ್ಯಂತ ದುಬಾರಿ ಆಟಗಾರರಾಗಿದ್ದಾರೆ. ಅನುಭವಿ ಆಟಗಾರ ಶರತ್ ಪ್ರಭು ಅವರನ್ನು ಪೇಟೆ ಶ್ರೀ ವೆಂಕಟರಮಣ ಕ್ರಿಕೆಟರ್ಸ್ ಕುಂದಾಪುರ ತಂಡ ಖರೀದಿಸಿದರೆ, ಎಡಗೈ ಬ್ಯಾಟರ್ ವಿಘ್ನೇಶ್ ಭಟ್ ಅವರನ್ನು ಕೊಂಕಣ್ ಎಕ್ಸ್ ಪ್ರೆಸ್ ಕೋಟೇಶ್ವರ ತನ್ನ ತೆಕ್ಕೆಗೆ ಪಡೆದುಕೊಂಡಿದೆ. ಎಲ್ಲಾ 12 ಫ್ರಾಂಚೈಸಿಗಳು ಅಗ್ರ ಕ್ರಮಾಂಕದ ಬ್ಯಾಟರ್ ಗಳಿಗಾಗಿ ಹೆಚ್ಚು ಒತ್ತು ನೀಡಿದವು.
ಸುರೇಶ್ ಭಟ್ ಮೂಲ್ಕಿ ಮತ್ತು ಪ್ರೀತಮ್ ಹೆಗ್ಡೆ ಲಾಟ್‌ಗಳನ್ನು ಘೋಷಿಸುವ ಮೂಲಕ ಮತ್ತು ಬಿಡ್ಡಿಂಗ್ ಮೂಲಕ ಹರಾಜು ಪ್ರಕ್ರಿಯೆಯನ್ನು ನಿರ್ವಹಿಸಿದರು.
M9 ಸ್ಪೋರ್ಟ್ಸ್  ತನ್ನ ಯುಟ್ಯೂಬ್ ಚಾನೆಲ್ ನಲ್ಲಿ ಹರಾಜು ಪ್ರಕ್ರಿಯೆಯ  ನೇರ ಪ್ರಸಾರವನ್ನು ಬಿತ್ತರಿಸಿತು.  ಪ್ಲೇಯರ್ಸ್ ಆಕ್ಷನ್  ಯಶಸ್ವಿಯಾಗಿ ಜರುಗಲು ಸಹಕರಿಸಿದ ಎಲ್ಲಾ ಸ್ವಯಂಸೇವಕರುಗಳಿಗೆ  ಪ್ರೀತಮ್ ಹೆಗ್ಡೆ ಧನ್ಯವಾದ ಸಮರ್ಪಿಸಿದರು.
 ಸುರೇಶ್ ಭಟ್, ಮೂಲ್ಕಿ
ಸ್ಪೋರ್ಟ್ಸ್ ಕನ್ನಡ ಪ್ರತಿನಿಧಿ.
Exit mobile version