
ಬೈಂದೂರಿನಲ್ಲಿ ಆರಂಭವಾದ “ವಿಕ್ರಂ ಟ್ರೋಫಿ-2026” ಕ್ರಿಕೆಟ್ ಸಂಭ್ರಮ; ಇಂದು ಸೆಮಿಫೈನಲ್ ಹಾಗೂ ಫೈನಲ್ ಪಂದ್ಯಗಳು
ಬೈಂದೂರು : ವಿಕ್ರಂ ಕ್ರಿಕೆಟ್ ಕ್ಲಬ್ ಆಶ್ರಯದಲ್ಲಿ ಹಾಗೂ ಉಡುಪಿ ಜಿಲ್ಲಾ ಕ್ರಿಕೆಟ್ ಅಸೋಸಿಯೇಶನ್ ಸಹಯೋಗದೊಂದಿಗೆ ಆಯೋಜಿಸಲಾದ ಉಡುಪಿ ಜಿಲ್ಲಾ ಇಂಟರ್ ಕ್ಯಾಂಪಸ್ ಅಕಾಡೆಮಿ ಆಟಗಾರರ ಅಂಡರ್-23 ಲೆದರ್ ಬಾಲ್ ಟಿ-20 ನಾಕೌಟ್ ಮಾದರಿಯ “ವಿಕ್ರಂ ಟ್ರೋಫಿ-2026” ಕ್ರಿಕೆಟ್ ಪಂದ್ಯಾಟಕ್ಕೆ ಶನಿವಾರ ಬೈಂದೂರಿನ ಗಾಂಧಿ ಮೈದಾನದಲ್ಲಿ ಭರ್ಜರಿ ಚಾಲನೆ ದೊರೆಯಿತು.
ಪಂದ್ಯಾಟವನ್ನು ಕುಂದಾಪುರ ಟೋರ್ಪೋಡೋಸ್ ಸ್ಪೋರ್ಟ್ಸ್ ಕ್ಲಬ್ ಚೇರ್‌ಮನ್ ಗೌತಮ್ ಶೆಟ್ಟಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಕ್ರೀಡೆ ವಿದ್ಯಾರ್ಥಿಗಳಲ್ಲಿ ಶಿಸ್ತು, ಆತ್ಮವಿಶ್ವಾಸ ಹಾಗೂ ನಾಯಕತ್ವ ಗುಣಗಳನ್ನು ಬೆಳೆಸುವ ಜೊತೆಗೆ ಜೀವನದಲ್ಲಿ ಎದುರಾಗುವ ಸವಾಲುಗಳನ್ನು ಎದುರಿಸುವ ಶಕ್ತಿಯನ್ನು ನೀಡುತ್ತದೆ ಎಂದರು.
ಮೊದಲ ದಿನ ನಡೆದ ಲೀಗ್ ಹಾಗೂ ನಾಕೌಟ್ ಹಂತದ ಪಂದ್ಯಗಳು ರೋಚಕತೆಯಿಂದ ಸಾಗಿದ್ದು, ಜಿಲ್ಲೆಯ ವಿವಿಧ ಕ್ಯಾಂಪಸ್‌ಗಳ ಪ್ರತಿಭಾವಂತ ಯುವ ಆಟಗಾರರು ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿದರು. ಕ್ರಿಕೆಟ್ ಅಭಿಮಾನಿಗಳಿಂದ ಪಂದ್ಯಾಟಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
ಇಂದು ಸೆಮಿಫೈನಲ್ ಹಾಗೂ ಫೈನಲ್ ಪಂದ್ಯಗಳು ನಡೆಯಲಿದ್ದು, ಅಂತಿಮ ಕಾದಾಟದತ್ತ ತಂಡಗಳು ಕಣ್ಣಿಟ್ಟಿವೆ. ಪಂದ್ಯಾಟದ ನೇರ ಪ್ರಸಾರವನ್ನು ಸ್ಪೋರ್ಟ್ಸ್ ಕನ್ನಡ ಲೈವ್ ಮೀಡಿಯಾ ನಡೆಸುತ್ತಿದೆ.
ಕಾರ್ಯಕ್ರಮದಲ್ಲಿ ರೋಟರಿ ಜಿಲ್ಲೆ 3182 ಸಹಾಯಕ ಗವರ್ನರ್ ರೊ. ಐ. ನಾರಾಯಣ, ಉಡುಪಿ ಜಿಲ್ಲಾ ಕ್ರಿಕೆಟ್ ಅಸೋಸಿಯೇಶನ್ ಕಾರ್ಯದರ್ಶಿ ರೆನ್ ಟ್ರೆವರ್ ಡಯಾಸ್, ಮಾಜಿ ಕ್ರಿಕೆಟಿಗ ಪ್ರದೀಪ್ ವಾಜ್, ವಿಕ್ರಂ ಕ್ರಿಕೆಟ್ ಕ್ಲಬ್ ಗೌರವಾಧ್ಯಕ್ಷ ನಾಗರಾಜ ಶೆಟ್ಟಿ, ನಿವೃತ್ತ ದೈಹಿಕ ಶಿಕ್ಷಕ ನಾರಾಯಣ ಶೆಟ್ಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
