SportsKannada | ಸ್ಪೋರ್ಟ್ಸ್ ಕನ್ನಡ

ಉಡುಪಿ-ಸಮಾಜ ಸೇವೆಯೊಂದಿಗೆ ಮಾನವೀಯತೆಯನ್ನು ಬೆಳಗಿಸಿದ ನಾಗಾರ್ಜುನ.ಡಿ.ಪೂಜಾರಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ

ಕೊರೋನಾ ಸಂದರ್ಭದಲ್ಲಿ 400 ಕ್ಕೂ ಹೆಚ್ಚಿನ ಕೊರೋನಾ ಸೋಂಕಿತ  ಶವಗಳ ಸಂಸ್ಕಾರಕಾರ್ಯವನ್ನು ವಿಧಿ ವಿಧಾನ ಪ್ರಕಾರ ನಡೆಸಿದ ಉಡುಪಿಯ ಕ್ರೀಡಾಪಟು ನಾಗಾರ್ಜುನ.ಡಿ.ಪೂಜಾರಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಶ್ರೀ.ದಿನೇಶ್ ಪೂಜಾರಿ ಮತ್ತು ಶ್ರೀಮತಿ‌ ಜಯಾ.ಡಿ.ಪೂಜಾರಿಯವರ ಪುತ್ರನಾದ ನಾಗಾರ್ಜುನ್
ಉಡುಪಿ ನಗರಸಭೆಯಲ್ಲಿ ಐದೂವರೆ ವರ್ಷಗಳಿಂದ ಸ್ಯಾನಿಟರಿ ಸೂಪರ್ವೈಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.ಜಗತ್ತಿನ ಜನ ಜೀವನವನ್ನೆಲ್ಲಾ ತಲ್ಲಣಗೊಳಿಸಿದ ಕೊರೋನಾ ವೈರಸ್ ಸೋಂಕಿಗೆ ಉಡುಪಿಯಲ್ಲಿ ಬಲಿಯಾದ ಸುಮಾರು 400 ಕ್ಕೂ ಹೆಚ್ಚಿನ ಜನರ ಶವಸಂಸ್ಕಾರವನ್ನು ವಿಧಿ ವಿಧಾನ ಪ್ರಕಾರ ನಡೆಸಿ,ಆ ಕುಟುಂಬದವರಿಗೆ ಚಿತಾಭಸ್ಮವನ್ನು ಒಪ್ಪಿಸುವ ತನಕ ಅಸಾಧಾರಣ
ಕಾರ್ಯವೆಸಗಿದ್ದಾರೆ.”ಕಾಯಕವೇ ಕೈಲಾಸ”ಎಂಬ ನುಡಿಯನ್ನು ಧ್ಯೇಯವಾಗಿರಿಸಿಕೊಂಡು ಸಮಾಜಸೇವೆಯಿಂದ ಜೀವನಸಾರ್ಥಕ್ಯವನ್ನು ಹೊಂದಿದ ನಾಗಾರ್ಜುನ ಕ್ರೀಡಾಲೋಕದಲ್ಲಿಯೂ ಅತ್ಯುತ್ತಮ ಆಟಗಾರನಾಗಿ ಗುರುಶ್ರೀ ಗುಂಡಿಬೈಲು,ವಿಷ್ಣುಮೂರ್ತಿ ದೊಡ್ಡಣ್ಣಗುಡ್ಡೆ,ಸ್ಯಾಟರ್ಡೇ ಪ್ಯಾಂಥರ್ಸ್ ಇಂದ್ರಾಳಿ,ಲೋಕಲ್ ಬಾಯ್ಸ್ ಉಡುಪಿ,ಎ.ಕೆ.ಸ್ಪೋರ್ಟ್ಸ್ ಉಡುಪಿ,ಬಿ.ಬಿ.ಸಿ ಅಗ್ರಹಾರ,ಸೈಮಂಡ್ಸ್ ಕಡಿಯಾಳಿ,ರಿಯಲ್ ಫೈಟರ್ಸ್ ಮೊದಲಾದ ತಂಡಗಳ ಪರವಾಗಿ ಆಡಿ ಬಹಳಷ್ಟು ಪಂದ್ಯಗಳನ್ನು ಗೆಲ್ಲಿಸಿ ಕೊಟ್ಟ ಕೀರ್ತಿಗೆ ಭಾಜನರಾಗಿದ್ದಾರೆ. ಸುಮಾರು 350 ಕ್ಕೂ ಅಧಿಕ ಪಂದ್ಯಶ್ರೇಷ್ಟ,170 ಹೆಚ್ಚಿನ ಉತ್ತಮ‌ ದಾಂಡಿಗ ಮತ್ತು ಉತ್ತಮ ಬೌಲರ್ ಹಾಗೂ 45 ಸರಣಿ ಶ್ರೇಷ್ಠ ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡಿದ್ದಾರೆ.
ಉಡುಪಿ ಜಿ.ಶಂಕರ್ ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯರಿಗೆ ಉಚಿತವಾಗಿಯೇ ಕೋಚಿಂಗ್ ನೀಡುತ್ತಿದ್ದಾರೆ.ಇವರ ಸಮಾಜಸೇವೆಯನ್ನು ಮನಗಂಡ ಅನೇಕ‌ ಸಂಘಸಂಸ್ಥೆಗಳು ಗುರುತಿಸಿ ಗೌರವಿಸಿದೆ.
Exit mobile version