SportsKannada | ಸ್ಪೋರ್ಟ್ಸ್ ಕನ್ನಡ

ಕ್ರೀಡಾ ಲೋಕದ ಕಣ್ಮಣಿ- ಟೊರ್ಪೆಡೋಸ್ ಗೌತಮ್ ಶೆಟ್ಟಿ

 

ಪ್ರಯತ್ನದಲ್ಲಿ ಸೋಲಾದರೆ ಪರವಾಗಿಲ್ಲ, ಆದರೆ ಪ್ರಯತ್ನ ಮಾಡದೆ ಇರುವುದು ಜೀವನದ ದೊಡ್ಡ ಸೋಲು.
ಕ್ರೀಡಾಲೋಕದಲ್ಲಿ ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಪ್ರಚಲಿತವಿರುವ ಸಂಸ್ಥೆ,ಪ್ರತಿಷ್ಟಿತ ಹಳೆಯಂಗಡಿಯ ಕ್ರೀಡಾ ತರಬೇತಿ ಸಂಸ್ಥೆ “ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್” ನ ರೂವಾರಿ ಗೌತಮ್ ಶೆಟ್ಟಿಯವರು,ಕ್ರೀಡಾ ಕ್ಷೇತ್ರದ ಸೇವೆಗಾಗಿ “ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ”, ಬಂಟರ ಪ್ರಮುಖ ವಾಹಿನಿ “ಬಂಟರ ಮಿತ್ರ” ಪತ್ರಿಕೆಯಲ್ಲಿ 10 ಸಂಚಿಕೆಗಳಲ್ಲಿ ಪ್ರಕಟವಾದ 500 ಮಿಕ್ಕಿ ಸಾಧಕರಲ್ಲಿ, ಓದುಗರ ಹಾಗೂ ಸಂಪಾದಕೀಯ ಮಂಡಳಿಯ ಆಯ್ಕೆಯಾಗಿ 2019 ರ ಸಾಲಿನ “ಬಂಟ ರತ್ನ” ಪ್ರಶಸ್ತಿ ಹಾಗೂ ಸಮಾಜರತ್ನ ಪ್ರಶಸ್ತಿ ಪುರಸ್ಕೃತರು.

ಮಾವಿನ ಮರದ ಎಲೆಗಳೆಲ್ಲ ಮಾವಿನ ಎಲೆಗಳೆ, ಆದರೆ ಲಕ್ಷ ಲಕ್ಷ ಎಲೆಗಳಲ್ಲಿ ಯಾವ ಎಲೆಯು ಕೂಡ ಒಂದರಂತಿಲ್ಲ. ಪ್ರತಿಯೊಬ್ಬ ವ್ಯಕ್ತಿಯೂ ಕೂಡಾ ಅವರದೆ ಆದ ಕ್ಷೇತ್ರದಲ್ಲಿ ಮೆರೆದು ಸಾಧನೆ ಮಾಡಿರುತ್ತಾರೆ. ಜೀವನ ಅನ್ನುವ ಮೂರು ದಿನದ ಬಾಳುವೆಯಲ್ಲಿ ಅದೆಷ್ಟೋ ಸಾಧನೆಯ ಹೆಗ್ಗುರುತನ್ನು ಮೂಡಿಸುತ್ತ ಮನ್ನಣೆಯನ್ನು ಪಡೆಯುತ್ತಾ ದಾರಿಯ ಬಗ್ಗೆ ಯೋಚಿಸದೆ ಸತತ ಪ್ರಯತ್ನ, ನಿರಂತರ ಕಾರ್ಯಶೀಲತೆಯಿಂದ ಬದುಕುತ್ತಾರೆ. ಅಂಥವರ ಸಾಲಿಗೆ ಸೇರುವ ಒಬ್ಬ ಸಾಧಕ ಗೌತಮ್ ಶೆಟ್ಟಿ.

ಬಾಲ್ಯದಿಂದಲೇ ಕ್ರೀಡೆಯಲ್ಲಿ ಬಹಳಷ್ಟು ಆಸಕ್ತಿ ಹೊಂದಿದ್ದ ಗೌತಮ್ ಶೆಟ್ಟಿ,ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಸಂದರ್ಭದಲ್ಲಿ ಕ್ರಿಕೆಟ್,ಬ್ಯಾಡ್ಮಿಂಟನ್, ಟೇಬಲ್ ಟೆನ್ನಿಸ್, ಬಾಲ್ ಬ್ಯಾಡ್ಮಿಂಟನ್ ,ವಾಲಿಬಾಲ್,ಕಬಡ್ಡಿ,ಲಾನ್ ಟೆನ್ನಿಸ್ ಮುಂತಾದ ಕ್ರೀಡೆಗಳಲ್ಲಿ ತೊಡಗಿಸಿಕೊಂಡು ಬಹಳಷ್ಟು ಪ್ರಶಸ್ತಿಗಳನ್ನು ಜಯಿಸಿದ್ದರು.

ಬಾಹ್ಯ ಬದಲಾವಣೆಗಿಂತ ಅಂತರಂಗದ ಬದಲಾವಣೆ ಜೀವನದಲ್ಲಿ ಮುಖ್ಯ ಅನ್ನುವ ಧ್ಯೇಯಕ್ಕೆ ಬದ್ಧರಾಗಿ
80 ರ ದಶಕದಲ್ಲಿ ಹಿರಿಯರಾದ ದಿನೇಶ್ ಮುನ್ನಾ ನೇತೃತ್ವದಲ್ಲಿ ಸ್ಥಾಪನೆಯಾದ” ಟೊರ್ಪೆಡೋಸ್ ಕ್ರಿಕೆಟ್ ಕ್ಲಬ್”ನಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದರು.ತಾವು ಭಾಗವಹಿಸಿದ ಪ್ರಥಮ ಪಂದ್ಯಾಕೂಟದಲ್ಲೇ ಪ್ರಶಸ್ತಿ ಬಾಚಿದ ಟೊರ್ಪೆಡೋಸ್ ಸಂಸ್ಥೆ ಹಿರಿಯ ಕ್ರಿಕೆಟಿಗರ ನೇತ್ರತ್ವದಲ್ಲಿ ರಾಜ್ಯದ ಶ್ರೇಷ್ಠ ತಂಡವಾಗಿ ರಾಜ್ಯಾದ್ಯಂತ ಗುರುತಿಸಿಕೊಂಡಿತ್ತು.ಹಿರಿಯರು ತೆರೆಮರೆಗೆ ಸರಿದಂತೆ ತಂಡವನ್ನು ಮುನ್ನಡೆಸುವ ನಾಯಕನ ಜವಾಬ್ದಾರಿ ಗೌತಮ್ ಶೆಟ್ಟಿಯವರ ಪಾಲಿಗೆ ಬಂದಂದಿನಿಂದ ಹಿಂತಿರುಗಿ ನೋಡಿಯೇ ಇಲ್ಲ.

ನಾಯಕನಾಗಿ ಜವಾಬ್ದಾರಿಯುತ ಆಟವಾಡಿ, ಕರ್ನಾಟಕ ರಾಜ್ಯದ ಗಮನ ಸೆಳೆದು 100 ಕ್ಕೂ ಮಿಕ್ಕಿ ರಾಜ್ಯ, ರಾಷ್ಟ್ರಮಟ್ಟದ ಪ್ರಶಸ್ತಿಗಳನ್ನು ಜಯಿಸಿ ತನ್ನ ತಂಡವನ್ನು ರಾಜ್ಯದ ಅಗ್ರಗಣ್ಯ ಸಾಲಿಗೆ ಕೊಂಡೊಯ್ದಿದ್ದರು.90 ರ ದಶಕದಲ್ಲಿ ಹೆಚ್ಚಾಗಿ ನಡೆಯುತ್ತಿದ್ದ ಡಬಲ್ ವಿಕೆಟ್ ಪಂದ್ಯಾಟದಲ್ಲೂ ಟೆನ್ನಿಸ್ ಬಾಲ್ ನ ತೆಂಡುಲ್ಕರ್ ಹರಿಪ್ರಸನ್ನ(ಪುಟ್ಟ)ಜೊತೆಯಾಗಿ ಭಾಗವಹಿಸಿದ ಎಲ್ಲಾ ಟೂರ್ನಿಗಳಲ್ಲೂ ಪ್ರಶಸ್ತಿ ಜಯಿಸಿ,ಶ್ರೇಷ್ಠ ಆರಂಭಿಕ ಜೋಡಿ ಗೌರವಕ್ಕೂ ಪಾತ್ರರಾಗಿದ್ದರು.

ಆತ್ಮ ವಿಶ್ವಾಸ, ಜೀವನ ಆದರ್ಶ, ನಿರ್ದಿಷ್ಟ ಗುರಿ ಇವೆಲ್ಲವನ್ನೂ ಜೀವನದಲ್ಲಿ ಅಳವಡಿಸಿಕೊಂಡು ಇಂದು ಹುಟ್ಟು ಹಬ್ಬದ ಸಂಭ್ರಮ ದಲ್ಲಿರುವ ಗೌತಮ್ ಶೆಟ್ಟಿ ಇವರಿಗೆ,

ಗೌ ರವದ ಬದುಕಿದು ನಿಮದಾಗಲೆಂದು
ತ ರತಮವ ಮರೆತಿರುವ ಜೀವಿತವು ನಿಮದೆಂದು
ಮ ಕ್ಕಳಂದದಿ ಕಲೆತು ಬೆಳಗಿದಿರಿ ನೀವಿಂದು
ಪ್ರ ತಿಭಾಳ ನಂದನವನದಲ್ಲಿ ನಿಂದು
ಪ್ರ ಶಸ್ತಿ ಯು ಪುತ್ರಿಯ ಹಾಗೆ ಬಂದು
ಪ್ರ ಥಮ ಕಿರಣದ ಹಾಗೆ ಬಾಳು ಪ್ರ ವಹಿಸಲಿ ಎಂದೆಂದೂ….

ಅಭಿವಾದನಗಳೊಂದಿಗೆ
ಕೋಟ ರಾಮಕೃಷ್ಣ ಆಚಾರ್ಯ
ಸಂಪಾದಕರು: www.sportskannada.com

Exit mobile version