
ತ್ರಿಪಲ್ ಜಂಪ್‌ನಲ್ಲಿ ಚಿನ್ನದ ಗೆಲುವು ಸಾಧಿಸಿದ ತಾಷಾ ಸಿಕ್ವೇರಾ
ಬೆಂಗಳೂರು: ಸಿಐಎಸ್‌ಸಿಇ (CISCE) ರಾಷ್ಟ್ರೀಯ ಅಥ್ಲೆಟಿಕ್ಸ್ ಕ್ರೀಡಾಸ್ಪರ್ಧೆಯಲ್ಲಿ ಬೆಂಗಳೂರಿನ ತಾಷಾ ಸಿಕ್ವೇರಾ ಅತ್ಯುತ್ತಮ ಪ್ರದರ್ಶನ ನೀಡಿ ಚಿನ್ನದ ಪದಕ ಗೆದ್ದಿದ್ದಾರೆ. ಬಾಲಕಿಯರ 17 ವರ್ಷಕ್ಕಿಂತ ಕಡಿಮೆ ವಯಸ್ಸಿನ ವಿಭಾಗದ ತ್ರಿಪಲ್ ಜಂಪ್ ಸ್ಪರ್ಧೆಯಲ್ಲಿ ಕರ್ನಾಟಕ ಪ್ರತಿನಿಧಿಸುವ ತಾಷಾ 10.11 ಮೀಟರ್ ದೂರ ಜಿಗಿದು ಪ್ರಥಮ ಸ್ಥಾನ ಪಡೆದು ಕೀರ್ತಿ ಸಾಧಿಸಿದ್ದಾರೆ.
ಈ ಸ್ಪರ್ಧೆ ಶ್ರೀ ಜಯಪ್ರಕಾಶ್ ನಾರಾಯಣ ರಾಷ್ಟ್ರೀಯ ಯುವ ಕ್ರೀಡಾ ತರಬೇತಿ ಕೇಂದ್ರ, ವಿದ್ಯಾನಗರ, ಬೆಂಗಳೂರಿನಲ್ಲಿ ನಡೆದಿತ್ತು. ತಾಷಾ ಅವರ ಈ ಸಾಧನೆಯೊಂದಿಗೆ ಅವರು ಎಸ್‌ಜಿಎಫ್‌ಐ (School Games Federation of India) ಮಟ್ಟದ ಸ್ಪರ್ಧೆಗೆ ಅರ್ಹತೆ ಪಡೆದಿದ್ದಾರೆ.
ತಾಷಾ ಸಿಕ್ವೇರಾ ಅವರು ಹೆಬ್ಬಾಳದ ವಿದ್ಯಾನಿಕೇತನ ಶಾಲೆಯ ವಿದ್ಯಾರ್ಥಿನಿಯಾಗಿದ್ದು, ತಾಷಾ ಅವರ ತಂದೆ ಜಾನ್ ರೋಹನ್ ಸಿಕ್ವೇರಾ ಮತ್ತು ತಾಯಿ ಅರ್ಚನಾ ಕಬೀಲನ್. ತಾಷಾ ಅವರಿಗೆ ಕೃಷ್ಣಮೂರ್ತಿ (ಬೆಂಗಳೂರು ಸ್ಪೋರ್ಟ್ಸ್ ಕ್ಲಬ್) ಅವರು ತರಬೇತಿ ನೀಡುತ್ತಿದ್ದಾರೆ.
ತಾಷಾ ಸಿಕ್ವೇರಾ ಕರ್ನಾಟಕ ತಂಡದ ಪರ ರಾಜ್ಯ ಕ್ರೀಡಾಕೂಟದಲ್ಲಿ ‘ಕಾಗೋ’ ತಂಡದಲ್ಲಿ ಭಾಗವಹಿಸಿ ಅಲ್ಲಿ ಸಹ ಚಿನ್ನದ ಪದಕ ಗೆದ್ದಿದ್ದರು. ರಾಜ್ಯ ಮಟ್ಟದಲ್ಲಿ ತೋರಿದ ಅದ್ಭುತ ಪ್ರದರ್ಶನದಿಂದಲೇ ಅವರು ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾದರು ಮತ್ತು ಇದೀಗ ರಾಷ್ಟ್ರ ಮಟ್ಟದಲ್ಲಿ ತನ್ನ ಪ್ರಭಾವ ಬೀರಿದ್ದಾರೆ.
ಈ ಸಾಧನೆ ತಾಷಾ ಅವರ ಪರಿಶ್ರಮ ಮತ್ತು ಶಿಸ್ತುಬದ್ಧ ತರಬೇತಿಗೆ ಸಾಕ್ಷಿಯಾಗಿದ್ದು, ಕ್ರೀಡಾಭಿಮಾನಿಗಳಿಂದ ಪ್ರಶಂಸೆಗೆ ಪಾತ್ರವಾಗಿದೆ. ಅವರ ಈ ಸಾಧನೆ ಕರ್ನಾಟಕ ತಂಡಕ್ಕೆ ಹೆಮ್ಮೆ ತಂದಿದ್ದು, ಕ್ರೀಡಾಭಿಮಾನಿಗಳಿಂದ ಅಭಿನಂದನೆಗಳು ಹರಿದು ಬರುತ್ತಿವೆ.
