SportsKannada | ಸ್ಪೋರ್ಟ್ಸ್ ಕನ್ನಡ

ವಿಶ್ವ ದಾಖಲೆಯ ಕುವರಿ ತನುಶ್ರೀ ಪಿತ್ರೋಡಿಯವರ ಮುಡಿಗೆ ಸೇರಲಿದೆ ಇನ್ನೊಂದು ಹೆಮ್ಮೆಯ ಗರಿ

ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ (ರಿ) ಬೆಂಗಳೂರು ಇದರ ಶತಮಾನೋತ್ಸವದ ಸವಿನೆನಪಿನೊಂದಿಗೆ  ಈಗಾಗಲೇ ಏಳು ವಿಶ್ವದಾಖಲೆಗಳನ್ನು ತಮ್ಮದಾಗಿಸಿಕೊಂದಿರುವ ನಾಟ್ಯಮಯೂರಿ ಎಂಬ ಬಿರುದಾಂಕಿತ, “ಯೋಗಶ್ರೀ” ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಯೋಗರತ್ನ ತನುಶ್ರೀ ಪಿತ್ರೋಡಿ ತಮ್ಮ ಗುರುಗಳಾದ ಶ್ರೀ ರಾಮಕೃಷ್ಣ ಕೊಡಂಚ ಇವರ ಮಾರ್ಗದರ್ಶನದಲ್ಲಿ  ಎಂಟನೆಯ ವಿಶ್ವ ದಾಖಲೆಯ ಪ್ರಯತ್ನವಾಗಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ನಲ್ಲಿ ನಾಟ್ಯ ಶಾಸ್ತ್ರದ 108 ಕರಣಗಳನ್ನು  ಪ್ರದರ್ಶಿಸಲಿದ್ದಾರೆ.
ಏಪ್ರಿಲ್ 4ರಂದು ಶ್ರೀ ನಾರಾಯಣಗುರು ಆಡಿಟೋರಿಯಂ ಬನ್ನಂಜೆ ಉಡುಪಿಯಲ್ಲಿ ಸಂಜೆ 4 ಗಂಟೆಯಿಂದ  ಈ ಕಾರ್ಯಕ್ರಮ ನೆರವೇರಲಿದೆ.
         ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬ ಮಾತಿಗೆ ತಕ್ಕುದಾಗಿ ತನುಶ್ರೀಯವರು ತಮ್ಮ ಪ್ರತಿಭೆಯ ಮೂಲಕ ಎಲ್ಲೆಡೆ ಚಿರಪರಿಚಿತರು.ಉದಯ್ ಕುಮಾರ್ ಹಾಗೂ ಸಂದ್ಯಾ ದಂಪತಿಗಳ ಹೆಮ್ಮೆಯ ಪುತ್ರಿಯಾಗಿರುವ ತನುಶ್ರೀ ಉಡುಪಿಯ ಸೈಂಟ್ ಸಿಸಿಲಿ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ಒಂಭತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು ಇದುವರೆಗೂ ಒಟ್ಟು 505 ಕ್ಕೂ ಹೆಚ್ಚು ನೃತ್ಯ ಪ್ರದರ್ಶನವನ್ನಿತ್ತ ಕಲಾ ಕುಸುಮ ಇವರು.ತಮ್ಮ ಯೋಗಗುರುಗಳಾದ ಹರಿರಾಜ್ ಕಿನ್ನಿಗೋಳಿ ಹಾಗೂ ಸುದರ್ಶನ್ ಕಾರ್ಕಳ ಇವರ ಮಾರ್ಗದರ್ಶನದಲ್ಲಿ  1 ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಹಾಗೂ 6 ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಬರೆದಿದ್ದಾರೆ.ಡಾ.ವೀರೇಂದ್ರ ಹೆಗ್ಗಡೆಯವರಿಂದ  ‘ಯೋಗರತ್ನ ಪ್ರಶಸ್ತಿ’, ‘ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ‘, ‘ ವಿಶೇಷ ಬಾಲ ಪ್ರತಿಭೆ ಪ್ರಶಸ್ತಿ ‘, ‘ಯೋಗಶ್ರೀ ಪ್ರಶಸ್ತಿ’ ಹೀಗೆ ಹತ್ತು ಹಲವು ಪುರಸ್ಕಾರಗಳು ಇವರ ಸಾಧನೆಗೆ ಸಂದಿದೆ. ಇದುವರೆಗೂ ಹಲವಾರು ಸಂಘ ಸಂಸ್ಥೆಗಳು ಇವರ ಈ ವಿಶೇಷ ಸಾಧನೆಯನ್ನು ಗುರುತಿಸಿ ಗೌರವಿಸಿದೆ.
Exit mobile version