SportsKannada | ಸ್ಪೋರ್ಟ್ಸ್ ಕನ್ನಡ

ತನುಶ್ರೀ ಸಾಧನೆಯ ಹಿಂದಿರುವ ಶಕ್ತಿ ಆಕೆಯ ಮುಗ್ಧತೆ-ಉದ್ಯಾವರ ನಾಗೇಶ್ ಕುಮಾರ್

ಯಾವುದೇ ಮಕ್ಕಳು ಯಾವುದಾದರೂ ಕ್ಷೇತ್ರದಲ್ಲಿ ಸಾಧನೆಯನ್ನು ಮಾಡಿದಾಗ ಅವರಿಗೆ ಸಿಗುವ ಹೊಗಳಿಕೆ, ಪ್ರಚಾರ ಇವುಗಳನ್ನು ತಲೆಗೇರಿಸಿಕೊಂಡು ತಲೆ ಭುಜದ ಮೇಲಿರದೆ ಕಾಲು ನೆಲದ ಮೇಲಿರದೆ ಅಹಂನಿಂದ ಬೀಗುವುದನ್ನು ನೋಡಿದ್ದೇನೆ.
ಆದರೆ ಯೋಗದಲ್ಲಿ ಏಳು ವಿಶ್ವ ದಾಖಲೆಯನ್ನು ಬರೆದ ಕು| ತನುಶ್ರೀ ಪಿತ್ರೋಡಿ ಪ್ರಥಮ ದಾಖಲೆಯನ್ನು ಬರೆದ ಹೊತ್ತಿನ ಮುಗ್ಧತೆಯನ್ನೇ ಉಳಿಸಿಕೊಂಡ ಕಾರಣ ಇವತ್ತು ಆಕೆ ಒಂದು ಗಿನ್ನೀಸ್ ಬುಕ್ ಆಫ್ ರೆಕಾರ್ಡ್ ಮತ್ತು ಆರು ಗೋಲ್ಡನ್ ಬುಕ್ ಆಫ್ ರೆಕಾರ್ಡ್ನಲ್ಲಿ ತನ್ನ ಹೆಸರನ್ನು ಸೇರಿಸಲು ಸಾಧ್ಯವಾಯಿತು. ಹಾಗಾಗಿ  ಅವೆಲ್ಲಾ ಸಾಧನೆಗಳಿಗೆ ಆಕೆಯ ಮುಗ್ದತೆ, ಅಹಂಕಾರ ರಹಿತ ನಡೆ ಮುಖ್ಯ ಕಾರಣ. ತನುಶ್ರೀಯ ದೊಡ್ಡ ಶಕ್ತಿ ಆಕೆಯ ತಂದೆ ಉದಯ ಕುಮಾರ್ ಮತ್ತು ತಾಯಿ ಸಂಧ್ಯಾ ಉದಯ್. ಮಗಳ ಸಾಧನೆಯ ಹಿಂದೆ ಅವರ ಪ್ರೋತ್ಸಾಹ ಮಕ್ಕಳಿಗೆ ತಂದೆ ತಾಯಿ ಕೊಡುವ ಕೇವಲ ಪ್ರೋತ್ಸಾಹದ ಹಾಗೆ ಇರದೆ ಅದೊಂದು ವೃತದಂತೆ, ನೇಮದಂತೆ ಇದೆ. ಅವರ ಈ ಬದ್ದತೆಯೇ ತನುಶ್ರೀಯನ್ನು ಬೆಳೆಸಿದೆ. ಈ ಮಗು ಯೋಗ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆಯನ್ನು ಮಾಡಲಿ ಎಂದು ರಂಗ ನಿರ್ದೇಶಕ ಉದ್ಯಾವರ ನಾಗೇಶ್ ಕುಮಾರ್‌ರವರು ಒಂದು ಗಿನ್ನೀಸ್ ಬುಕ್ ಆಫ್ ರೆಕಾರ್ಡ್ ಸಹಿತ ಏಳು ಗೋಲ್ಡನ್ ಬುಕ್ ರೆಕಾರ್ಡ್ನಲ್ಲಿ ಯೋಗದಲ್ಲಿ ಹೆಸರು ದಾಖಲಿಸಿದ ಚಿನ್ನದ ಹುಡುಗಿ ಕು| ತನುಶ್ರೀ ಪಿತ್ರೋಡಿಯವರನ್ನು ಅವರ ಮನೆಯಲ್ಲಿ ಉದ್ಯಾವರ ಮುಸ್ಲಿಂ ಯುನಿಟಿ ಯು.ಎ.ಇ. ಪರವಾಗಿ ಸಂಮಾನಿಸಿ ನುಡಿದರು.
ಅವರು ಮುಂದುವರಿಯುತ್ತಾ ಈ ಕಾಲಘಟ್ಟದಲ್ಲಿ ಈ ಸಂಮಾನ ತುಂಬಾ ಮಹತ್ವವನ್ನು ಪಡೆಯುತ್ತಿದೆ. ಒಂದು ಮುಸ್ಲಿಂ ಸಂಘಟನೆ ಈ ಸಂಮಾನವನ್ನು ಹಮ್ಮಿಕೊಂಡು ಧರ್ಮ ಸಾಮರಸ್ಯಕ್ಕೊಂದು ಹೊಸ ಭಾಷ್ಯವನ್ನು ಬರೆದಂತಾಗಿದೆ ಎಂದರು.
ಹತ್ತು ಸಾವಿರ ರೂಪಾಯಿ ನಗದಿನ ಸಹಿತ, ಶಾಲು, ಪುಷ್ಪಗುಚ್ಚ, ಹಣ್ಣು ಹಂಪಲು ಸಹಿತ ತನುಶ್ರೀಯನ್ನು ಸಂಮಾನಿಸಲಾಯಿತು.
ಉದ್ಯಾವರ ಮುಸ್ಲಿಂ ಯುನಿಟಿ ಯು.ಎ.ಇ. ಅಧ್ಯಕ್ಷ ಶ್ರೀ ಖಾಲಿಖ್ ಹೈದರ್‌ರವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಉದ್ಯಾವರ ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀ ರಿಯಾಝ್ ಪಳ್ಳಿಯವರು ಸ್ವಾಗತಿಸಿ ಕೊನೆಯಲ್ಲಿ ವಂದಿಸಿದರು. ವೇದಿಕೆಯಲ್ಲಿ ಉದ್ಯಾವರ ಜಾಮಿಯಾ ಮಸೀದಿ ಅಧ್ಯಕ್ಷರಾದ ಶ್ರೀ ಅಬ್ದುಲ್ ಸತ್ತಾರ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಉದ್ಯಾವರ ಮುಸ್ಲಿಂ ಯುನಿಟಿ ಯು.ಎ.ಇ. ಸಲಹೆಗಾರರಾದ ಶ್ರೀ ಫಿರೋಝ್ ಶರೀಫ್, ಸದಸ್ಯರಾದ ಶ್ರೀ ಸಲಾಂ ಮಜೀದ್, ಶ್ರೀ ಸತ್ತಾರ್ ಗೌಸ್ , ಶ್ರೀ ನಯಾಜ್ ಪಳ್ಳಿ, ಶ್ರೀ ನಾಸಿರ್ ಇಬ್ರಾಹಿಂ, ಜಾಮಿಯಾ ಮಸೀದಿ ಸದಸ್ಯರಾದ ಶ್ರೀ ಇಮ್ತಿಯಾಝ್ ಬಾಷಾ, ಶ್ರೀ ಇಸ್ತಿಯಾಕ್ ಲತೀಫ್, ಆಯ್ಮಾನ್ ಖಾಲಿಖ್, ಶ್ರೀ ಉಮೈಝ್ ಖಾಲಿಖ್, ಮಹಮ್ಮದ್ ಆಸಿಫ್, ಪಿತ್ರೋಡಿ ಶ್ರೀ ವೆಂಕಟರಮಣ ಭಜನಾ ಮಂಡಳಿ ಅಧ್ಯಕ್ಷರಾದ ಶ್ರೀ ಗಂಗಾಧರ, ತನುಶ್ರೀ ಹೆತ್ತವರಾದ ಶ್ರೀ ಉದಯ ಕುಮಾರ್, ಶ್ರೀಮತಿ ಸಂಧ್ಯಾ ಉದಯ್, ದೊಡ್ಡಪ್ಪ ವಿಜಯ ಪೂಜಾರಿ ಉಪಸ್ಥಿತರಿದ್ದರು.
Exit mobile version