SportsKannada | ಸ್ಪೋರ್ಟ್ಸ್ ಕನ್ನಡ

90 ರ ದಶಕ: ನಾಡು ಕಂಡ ಶ್ರೇಷ್ಠ ಸವ್ಯಸಾಚಿ ಆಟಗಾರ “ಸುನಿಲ್ ಜೋಷಿ”

ಎರಡು ದಶಕಗಳ ಕಾಲ ಕರ್ನಾಟಕ ಕ್ರಿಕೆಟ್ ತಂಡದ ಆಧಾರಸ್ತಂಭವಾಗಿಯೇ ಕಂಡು ಬಂದ ಆಟಗಾರ ಈ ನಾಡು ಕಂಡ ಶ್ರೇಷ್ಠ ಸವ್ಯಸಾಚಿ ಆಟಗಾರ “ಸುನಿಲ್ ಜೋಷಿ”.

90 ರ ದಶಕದ ದಿನಗಳು,ದೇಶಿಯ ಕ್ರಿಕೆಟ್ ನಲ್ಲಿ ಅದರಲ್ಲೂ ಗ್ರಾಮೀಣ ಭಾಗಗಳಲ್ಲಿ ಕ್ರಿಕೆಟ್ ನ ಮೂಲಭೂತ ಸೌಲಭ್ಯಗಳೇ ಇಲ್ಲದ ದಿನಗಳವು.ಆ ವೇಳೆಗೆ ತೀರಾ ಗ್ರಾಮೀಣ ಭಾಗದ ಒಬ್ಬ ಹುಡುಗ ತಾನು ಕ್ರಿಕೆಟಿಗ ಆಗಲೇಬೇಕೆಂದು ಛಲಹೊತ್ತು ಬೆಳಿಗ್ಗೆ 3.30ಕ್ಕೆ ಗದಗ ನಲ್ಲಿ ಗೋಲ್ ಗುಂಬಜ್ ಟ್ರೈನ್ ಹಿಡಿದು ಹುಬ್ಬಳ್ಳಿ ಬಂದು ಅಲ್ಲಿ ಪ್ರಾಕ್ಟೀಸ್ ಮುಗಿಸಿ ಪುನಃ ಗದಗ ಬಂದು ತನ್ನ ಕಾಲೇಜು ದಿನಗಳನ್ನು ಕಳೆಯುತ್ತಿದ್ದ.ಅವನ ಕಠಿಣ ಪರಿಶ್ರಮ ಫಲನೀಡಲು ಬಹಳಕಾಲ ಬೇಕಾಗಲಿಲ್ಲ. ಕೆ ಎಸ್ ಸಿ ಎ ಲೀಗ್ ,”ಶಫೀ ಧಾರ ಷಾ”ಟ್ರೋಫೀಯಂತಹ ಪಂದ್ಯಾವಳಿಯಲ್ಲಿ ತನ್ನ ಅಮೋಘ ಆಲ್ರೌಂಡ್ ಪ್ರದರ್ಶನ ನೀಡಿ ಕರ್ನಾಟಕ ರಣಜಿ ತಂಡಕ್ಕೆ ಪಾದಾರ್ಪಣೆ ಮಾಡ್ತಾನೆ.ಅಂದಿನಿಂದ ಎರಡು ದಶಕಗಳ ಕಾಲ ಕರ್ನಾಟಕ ಕ್ರಿಕೆಟ್ ತಂಡದ ಆಧಾರಸ್ತಂಭವಾಗಿಯೇ ಕಂಡು ಬಂದ ಆಟಗಾರ ಈ ನಾಡು ಕಂಡ ಶ್ರೇಷ್ಠ ಸವ್ಯಸಾಚಿ ಆಟಗಾರ “ಸುನಿಲ್ ಜೋಷಿ”.

ಆ ಕಾಲಕ್ಕೆ ಕರ್ನಾಟಕ ತಂಡವೂ ಕೂಡ ಅತೀ ಬಲಿಷ್ಠವಾಗಿತ್ತು. ಕುಂಬ್ಳೆ, ಶ್ರೀನಾಥ್, ಪ್ರಸಾದ್,ದೊಡ್ಡ ಗಣೇಶ್, ದ್ರಾವಿಡ್,ವಿಜಯ ಭಾರದ್ವಾಜ್, ಸುಜೀತ್ ಸೋಮಸುಂದರ್ ಎಲ್ಲರೂ ಭಾರತಕ್ಕೆ ಆಡಿದವರು.ಇಂತವರೊಂದಿಗೆ ಇವರು ಕೂಡ ದೇಶಿಯ ಕ್ರಿಕೆಟ್ ನಲ್ಲಿ ತನ್ನ ಅದ್ಭುತ ಪ್ರದರ್ಶನ ನೀಡಿ ಇಂಗ್ಲೆಂಡ್ ಪ್ರವಾಸ ಹೊರಟ ಭಾರತದ ಟೆಸ್ಟ್ ತಂಡಕ್ಕೆ ಆಯ್ಕೆ ಆಗ್ತಾರೆ.ತನ್ನ ಜನುಮದಿನ(ಜೂನ್ ಆರು) ದಂದೇ ಪ್ರಥಮ ಟೆಸ್ಟ್ ಆಡುವ ಭಾಗ್ಯ ದೊರೆತದ್ದೂ ವಿಶೇಷ.ಆದರೆ ಅದೇ ಪಂದ್ಯದಲ್ಲಿ ಕೈ ಪೆಟ್ಟು ಮಾಡಿಕೊಂಡು ಇಡೀ ಪಂದ್ಯದಲ್ಲಿ ಒಂದು ಓವರ್ ಕೂಡ ಬೌಲಿಂಗ್ ಮಾಡಲಾಗದೇ ಇದ್ದದ್ದು ಇವರ ದುರಾದೃಷ್ಟ.
ಇವರ ಬೌಲಿಂಗ್ ನ ನೆನಪುಳಿಯುವ ಕ್ಷಣ ಎಂದರೆ ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಪಂದ್ಯ ಒಂದರಲ್ಲಿ
10-6-6-5 ಇಂತಹ ಆಕರ್ಷಕ ಪ್ರದರ್ಶನ.
ಹಾಗೆಯೇ ಬಾಂಗ್ಲಾದೇಶ ತಂಡದ ಪಾದಾರ್ಪಣೆ ಯ ಟೆಸ್ಟ್ ಪಂದ್ಯದಲ್ಲಿ ಎಂಟು ವಿಕೆಟ್ ಮತ್ತು ಆಕರ್ಷಕ 92 ರನ್ನು ಗಳ ಕೊಡುಗೆ.
ತನ್ನ ಕ್ರಿಕೆಟ್ ಜೀವನದುದ್ದಕ್ಕೂ ಕುಂಬ್ಳೆಗೆ ಸಹಾಯಕ ಬೌಲರ್ ಆಗಿಯೇ ಗುರ್ತಿಸಿಕೊಂಡ ಈ ಎಡಗೈ ಸ್ಫಿನ್ನರ್ ಕುಂಬ್ಳೆಗೆ ಸಿಕ್ಕ ಪ್ರಾಧಾನ್ಯತೆ ಸಿಗದಿದ್ದರೂ,ಕುಂಬ್ಳೆ ಗಳಿಸಿದ ಪ್ರಸಿದ್ಧಿ ಗಳಿಸದಿದ್ದರೂ ತನ್ನ ಸರಳತೆ,ಕಠಿಣ ದುಡಿಮೆ,ಸೋಲುವ ಹಂತದಲ್ಲೂ ಕೆಚ್ಚೆದೆಯ ಹೋರಾಟ ನೀಡುವ ತನ್ನ ಛಲ ಇವುಗಳಿಂದ ಇಂದಿಗೂ ಅನೇಕ ಕ್ರೀಡಾಭಿಮಾನಿಗಳ ಮನದಲ್ಲಿ ತಮ್ಮದೇ ಆದ ಸ್ಥಾನ ಉಳಿಸಿಕೊಂಡಿದ್ದಾರೆ.

ಇಂದು ಬಿಸಿಸಿಐ ಭಾರತ ಕ್ರಿಕೆಟ್ ತಂಡದ ಆಯ್ಕೆಗಾರರ ಮುಖ್ಯಸ್ಥರನ್ನಾಗಿ ಸುನೀಲ್ ಜೋಷಿ ಅವರನ್ನು ನೇಮಕ ಮಾಡಿದೆ.ಆ ಸ್ಥಾನಕ್ಕೆ ಒಂದು ಸೂಕ್ತ ಆಯ್ಕೆ ಎಂಬುದು ನನ್ನ ಅನಿಸಿಕೆ. ಪ್ರತಿಭೆ ಇದ್ದರೂ ರಾಷ್ಟ್ರೀಯ ತಂಡದಲ್ಲಿ ತನ್ನ ಸ್ಥಾನ ಭದ್ರಗೊಳಿಸಿಕೊಳ್ಳಲಾಗದ ತನ್ನದೇ ಉದಾಹರಣೆಯನ್ನು ಮಾನದಂಡವಾಗಿರಿಸಿಕೊಳ್ಳುತ್ತಾ ತಮ್ಮ ಅವಧಿಯಲ್ಲಿ ಗ್ರಾಮೀಣ ಭಾಗದ ಕ್ರಿಕೆಟಿಗರ ಧ್ವನಿ ಆಗಿ ಹತ್ತು ಹಲವು ಪ್ರತಿಭೆಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತ ತಂಡದ ಮುಖೇನ ಬೆಳಗುವಂತಾಗಲಿ ಎಂಬ ಆಶಯದೊಂದಿಗೆ ಕನ್ನಡಿಗ ಸುನೀಲ್ ಜೋಶಿ ಯವರಿಗೆ “ಸ್ಪೋರ್ಟ್ಸ್ ಕನ್ನಡ” ದ ವತಿಯಿಂದ
ಅಭಿನಂದನೆಗಳ ನ್ನು ಸಲ್ಲಿಸುತ್ತಿದ್ದೇವೆ.

ಡಾ.ಜಗದೀಶ್ ಶೆಟ್ಟಿ ಮಾರ್ಕೋಡು.

Exit mobile version