SportsKannada | ಸ್ಪೋರ್ಟ್ಸ್ ಕನ್ನಡ

ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಹಿರಿಯ ಕ್ರಿಕೆಟಿಗ ರೋಜರ್ ಬಿನ್ನಿ ಅವರು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿ

ಬೆಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಚುನಾವಣೆ ದಿನಾಂಕವು ಗುರುವಾರ ಘೋಷಣೆಯಾದ ಕೂಡಲೇ ಪದಾಧಿಕಾರಿಗಳ ಸ್ಥಾನದ ಆಕಾಂಕ್ಷಿಗಳ ವಲಯದಲ್ಲಿ ತುರುಸಿನ ಚಟುವಟಿಕೆ ಗರಿಗೆದರಿದೆ.

ಪ್ರಮುಖ ಸ್ಥಾನಗಳಿಗೆ ಕೆಲವು ಹೆಸರುಗಳು ಕೇಳಿ ಬರುತ್ತಿವೆ. ಹಿರಿಯ ಕ್ರಿಕೆಟಿಗ ರೋಜರ್ ಬಿನ್ನಿ ಅವರು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

‘‌1983ರಲ್ಲಿ ವಿಶ್ವಕಪ್ ಗೆದ್ದ ಭಾರತ ತಂಡದಲ್ಲಿ ಬಿನ್ನಿ ಇದ್ದರು. ಕರ್ನಾಟಕದ ಕ್ರಿಕೆಟ್‌ಗೂ ಅವರು ಉತ್ತಮ ಕಾಣಿಕೆ ನೀಡಿದ್ದಾರೆ. ಆದ್ದರಿಂದ ಅವರನ್ನೇ ಕಣಕ್ಕಿಳಿಸಲಾಗುವುದು’ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.

ಕಾರ್ಯದರ್ಶಿ ಸ್ಥಾನಕ್ಕೆ ಸುಂದರ್‌ ರಾಜ್ ಅವರು ಕಣಕ್ಕಿಳಿಯಲಿದ್ದಾರೆನ್ನಲಾಗಿದೆ. ಅವರು ಪ್ರಸ್ತುತ ಕರ್ನಾಟಕ ರಾಜ್ಯ ಲಾನ್‌ಟೆನಿಸ್ ಸಂಸ್ಥೆಯ ಕಾರ್ಯದರ್ಶಿಯಾಗಿದ್ದಾರೆ. ಬಿಸಿಸಿಐ ನಿಯಮಾವಳಿಯ ಪ್ರಕಾರ ಒಬ್ಬ ವ್ಯಕ್ತಿಯು ಎರಡು ಹುದ್ದೆಗಳನ್ನು ಹೊಂದುವಂತಿಲ್ಲ. ಆದ್ದರಿಂದ ಅವರು ಕೆಎಸ್‌ಎಲ್‌ಟಿಎ ಹುದ್ದೆಗೆ ರಾಜೀನಾಮೆ ಸಲ್ಲಿಸುವ ಸಾಧ್ಯತೆ ಇದೆ ಎನ್ನಲಾಗಿದೆ.ಹಿರಿಯ ಆಟಗಾರ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಸದ್ಯ ಆಯ್ಕೆ ಸಮಿತಿಯ ಸದಸ್ಯರಾಗಿರುವ ಜೆ.ಅಭಿರಾಮ್ ಮತ್ತು ಜಂಟಿ ಕಾರ್ಯದರ್ಶಿ ಸ್ಥಾನಕ್ಕೆ ಸಂತೋಷ್ ಮೆನನ್ ಅವರು ಸ್ಪರ್ಧಿಸುವ ಸಂಭವ ಇದೆ ಎಂದೂ ಮೂಲಗಳು ಹೇಳಿವೆ.

ಲೋಧಾ ಸಮಿತಿಯ ಶಿಫಾರಸುಗಳ ಪ್ರಕಾರ ಬಿಸಿಸಿಐಗೆ ಹೊಸ ನಿಯಮಾವಳಿ ರಚನೆಗೆ 2017ರಲ್ಲಿ ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು. ಅದರ ಪ್ರಕಾರ 70 ವರ್ಷ ವಯಸ್ಸು ದಾಟಿದವರು ಮತ್ತು ಒಂಬತ್ತು ವರ್ಷಗಳಿಗೂ ಹೆಚ್ಚು ಕಾಲ ಪದಾಧಿಕಾರಿಯಾದವರು ಮುಂದುವರಿಯುವಂತಿಲ್ಲ ಎಂದು ಆದೇಶ ನೀಡಲಾಗಿತ್ತು. ಆಗ ಅಧಿಕಾರದಲ್ಲಿದ್ದ ಆಡಳಿತ ಸಮಿತಿಯನ್ನು ರದ್ದು ಮಾಡಲಾಗಿತ್ತು. ಹಂಗಾಮಿ ಸಮಿತಿಯನ್ನು ನೇಮಕ ಮಾಡಲಾಗಿತ್ತು. ಆದ್ದರಿಂದ ಇಲ್ಲಿಯವರೆಗೆ ಸಂಜಯ್ ದೇಸಾಯಿ ಮತ್ತು ಸುಧಾಕರ್ ರಾವ್ ಅವರು ಕ್ರಮವಾಗಿ ಹಂಗಾಮಿ ಅಧ್ಯಕ್ಷ ಮತ್ತು ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದರು.ಹೋದ ತಿಂಗಳು ಚುನಾವಣೆ ದಿನಾಂಕವನ್ನು ಘೋಷಿಸಿದ್ದ ಕ್ರಿಕೆಟ್ ಆಡಳಿತ ಸಮಿತಿ (ಸಿಒಎ) ಸೆ. 28ರೊಳಗೆ ರಾಜ್ಯ ಸಂಸ್ಥೆಗಳ ಚುನಾವಣೆ ಮುಗಿಸಲು ಸೂಚಿಸಿತ್ತು.

Exit mobile version