
ಕ್ರಿಕೆಟ್ ಕ್ಷೇತ್ರದ ಶ್ರೇಷ್ಠ ಸಾಧಕ ಡಾ. ಪಿ.ವಿ. ಶೆಟ್ಟಿ ಅವರಿಗೆ ರಾಜ್ಯೋತ್ಸವ ಗೌರವ
ಪಯ್ಯಡೆ ಕ್ರಿಕೆಟ್ ಅಕಾಡೆಮಿಯ ಮೂಲಕ ಭಾರತೀಯ ಕ್ರಿಕೆಟ್‌ಗೆ ಅನೇಕ ಪ್ರತಿಭಾವಂತರನ್ನು ಪರಿಚಯಿಸಿದ ಕ್ರಿಕೆಟ್ ಸಂಘಟಕ ಹಾಗೂ ಕ್ರೀಡಾ ಸೇವಕ ಡಾ. ಪಿ.ವಿ. ಶೆಟ್ಟಿ ಅವರಿಗೆ ಈ ವರ್ಷದ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಗೊಂಡಿದೆ. ಕ್ರಿಕೆಟ್ ಅಭಿವೃದ್ಧಿಗೆ ನೀಡಿದ ಅವರ ಅಮೋಘ ಕೊಡುಗೆಯನ್ನು ರಾಜ್ಯ ಸರ್ಕಾರ ಗುರುತಿಸಿ, “ಹೊರನಾಡು ಸಾಧಕರ” ವಿಭಾಗದಲ್ಲಿ ಗೌರವಿಸಿದೆ.
ಡಾ. ಶೆಟ್ಟಿ ಅವರು ಮುಂಬೈನ ಉಪನಗರ ಪ್ರದೇಶಗಳಲ್ಲಿ ಕ್ರಿಕೆಟ್‌ಗೆ ಹೊಸ ಜೀವ ತುಂಬಿದವರಾಗಿ ಗುರುತಿಸಿಕೊಂಡಿದ್ದಾರೆ. ಅವರ ನೇತೃತ್ವದ ಪಯ್ಯಡೆ ಸ್ಪೋರ್ಟ್ಸ್ ಕ್ಲಬ್ ಅನೇಕ ಯುವ ಪ್ರತಿಭೆಗಳಿಗೆ ವೇದಿಕೆ ಒದಗಿಸಿದೆ. ಈ ಅಕಾಡೆಮಿಯಿಂದಲೇ ಭಾರತದ ಸ್ಟಾರ್ ಆಟಗಾರರಾದ ರೋಹಿತ್ ಶರ್ಮಾ, ಅಜಿಂಕ್ಯ ರಹಾನೆ ಮುಂತಾದವರು ತಮ್ಮ ಕ್ರಿಕೆಟ್ ಪಯಣವನ್ನು ಪ್ರಾರಂಭಿಸಿದ್ದರು.
ಅವರು ಮುಂಬೈ ಕ್ರಿಕೆಟ್ ಅಸೋಸಿಯೇಶನ್‌ನ ಸಂಯುಕ್ತ ಕಾರ್ಯದರ್ಶಿ ಆಗಿ ಕಾರ್ಯನಿರ್ವಹಿಸುವ ಅವಧಿಯಲ್ಲಿ ಕ್ರಿಕೆಟ್ ಮೂಲಸೌಕರ್ಯ, ತರಬೇತಿ ಸೌಲಭ್ಯ ಹಾಗೂ ಹೊಸ ಮೈದಾನಗಳ ಅಭಿವೃದ್ಧಿಗೆ ಮಹತ್ವದ ಪ್ರೋತ್ಸಾಹ ನೀಡಿದರು. ಕ್ರಿಕೆಟ್‌ನ್ನು ಕೇವಲ ನಗರ ಮಟ್ಟದಲ್ಲಲ್ಲದೆ, ಸಾಮಾನ್ಯ ಮಕ್ಕಳಿಗೂ ತಲುಪಿಸುವ ದೃಷ್ಟಿಯಿಂದ ಕಾರ್ಯನಿರ್ವಹಿಸಿದರು.
ಡಾ. ಶೆಟ್ಟಿ ಅವರ ಸೇವೆಯಿಂದ ಮುಂಬೈ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೂರಾರು ಯುವ ಪ್ರತಿಭೆಗಳು ಬೆಳೆದು ಬಂದಿವೆ. ಕ್ರೀಡೆಯ ಜೊತೆಗೆ ಶಿಕ್ಷಣಕ್ಕೂ ಪ್ರಾಮುಖ್ಯತೆ ನೀಡುವ ಅವರ ಮನೋಭಾವ ಆಟಗಾರರ ಸಮಗ್ರ ಬೆಳವಣಿಗೆಗೆ ಮಾರ್ಗದರ್ಶಕವಾಗಿದೆ.
ರಾಜ್ಯೋತ್ಸವ ಗೌರವವು ಅವರ ಹಲವು ದಶಕಗಳ ಸೇವೆಗೆ ಸೂಕ್ತ ಮಾನ್ಯತೆ ನೀಡಿದೆ. ಕ್ರಿಕೆಟ್ ಲೋಕದ ಅನೇಕ ಹಿರಿಯರು, ಆಟಗಾರರು ಹಾಗೂ ಅಭಿಮಾನಿಗಳು ಈ ಗೌರವಕ್ಕೆ ಅಭಿನಂದನೆ ಸಲ್ಲಿಸುತ್ತಿದ್ದಾರೆ.
ವೊಳಲಂಕೆ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಅಸೋಸಿಯೇಷನ್ ಮೂಲ್ಕಿ ವತಿಯಿಂದ ಕೆಲ ವರ್ಷಗಳ ಹಿಂದೆ ನಡೆದ ವೊಳಲಂಕೆ ಪ್ರೀಮಿಯರ್ ಲೀಗ್ (VPL) ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಡಾ. ಪಿ.ವಿ. ಶೆಟ್ಟಿ ಅವರು, ಕ್ರಿಕೆಟ್ ಅಭಿವೃದ್ಧಿಗೆ ನೀಡಿದ ತಮ್ಮ ಶ್ರೇಷ್ಠ ಕೊಡುಗೆಯಿಂದ ಎಲ್ಲರ ಮನ ಗೆದ್ದಿದ್ದರು.
ಈಗ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕಾರಕ್ಕೆ ಪಾತ್ರರಾದ ಹಿನ್ನೆಲೆಯಲ್ಲಿ, ವೊಳಲಂಕೆ ಸ್ಪೋರ್ಟ್ಸ್ ಅಂಡ್ ಕಲ್ಚರಲ್ ಅಸೋಸಿಯೇಷನ್‌ನ ಅಧ್ಯಕ್ಷರು ಮತ್ತು ಕಾರ್ಯಕಾರಿ ಸದಸ್ಯರು ಡಾ. ಪಿ.ವಿ. ಶೆಟ್ಟಿ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಈ ಗೌರವವು ಕ್ರಿಕೆಟ್ ಕ್ಷೇತ್ರದಲ್ಲಿ ಅವರ ಸೇವೆ ಮತ್ತು ಸಮರ್ಪಣೆಗೆ ದೊರೆತ ನಿಜವಾದ ಮಾನ್ಯತೆ ಎಂದೂ ಅಸೋಸಿಯೇಷನ್ ನ ಪ್ರತಿನಿಧಿಗಳು ತಿಳಿಸಿದ್ದಾರೆ.
“ಯುವ ಕ್ರೀಡಾಪಟುಗಳಿಗೆ ಅವಕಾಶ ಕಲ್ಪಿಸುವುದು, ಅವರ ಪ್ರತಿಭೆಗೆ ಮಾರ್ಗ ನೀಡುವುದು – ಇದೇ ನನ್ನ ನಿಜವಾದ ಸಂತೋಷ,” ಎಂದು ಗೌರವದ ಕುರಿತು ಪ್ರತಿಕ್ರಿಯಿಸಿದ ಡಾ. ಶೆಟ್ಟಿ ಹೇಳಿದರು.
ಕ್ರಿಕೆಟ್‌ನ್ನು ಕೇವಲ ಆಟವಲ್ಲ, ಒಂದು ಸಂಸ್ಕೃತಿಯಂತೆ ಬೆಳೆಸಿದ ಡಾ. ಪಿ.ವಿ. ಶೆಟ್ಟಿ ಅವರ ಸೇವೆ ರಾಜ್ಯದ ಕ್ರೀಡಾ ಲೋಕಕ್ಕೆ ಪ್ರೇರಣೆಯಾಗಲಿ ಎಂದು ನಾವು ಟೀಮ್ ಸ್ಪೋರ್ಟ್ಸ್ ಕನ್ನಡ ಹಾರೈಸುತ್ತೇವೆ.
—
