SportsKannada | ಸ್ಪೋರ್ಟ್ಸ್ ಕನ್ನಡ

ವೆಂಕಟರಮಣ ಸ್ಪೋರ್ಟ್ಸ್ ಕ್ಲಬ್ ಪಿತ್ರೋಡಿ ವತಿಯಿಂದ ತಂಡದ ಸದಸ್ಯರಿಗೆ ಅಗತ್ಯ ವಸ್ತುಗಳ ಪೂರೈಕೆ

ದೇಶದಾದ್ಯಂತ ಕೊರೋನ ಹಾವಳಿ. ಅದೆಷ್ಟೋ ಮಂದಿ ಈ ದಾಳಿಯಿಂದ ತತ್ತರಿಸಿ ಹೋಗಿದ್ದಾರೆ. ಕೆಲಸ ಮಾಡುವ ಕೈಗಳು ಕೆಲಸ ಇಲ್ಲದೆ ಪರದಾಡುವ ಸ್ಥಿತಿ. ಇಂತಹ ಸಂದರ್ಭದಲ್ಲಿ ಅದೆಷ್ಟೋ ದಾನಿಗಳು ನೆರವಿನ ಹಸ್ತ ಚಾಚುತ್ತಾ ಇದ್ದಾರೆ. ಇಡೀ ದೇಶದಲ್ಲಿ ಲಾಕ್ ಡೌನ್, ಈ ಹಿನ್ನೆಲೆಯಲ್ಲಿ ಇಲ್ಲೊಂದು ಸಂಸ್ಥೆ ತಮ್ಮ ತಂಡದ ಜೊತೆಗೆ ಮತ್ತೊಮ್ಮೆ ಸಮಾಜ ಸೇವಾ ಕಾರ್ಯಕ್ಕೆ ಚಾಲನೆ ನೀಡಿದೆ.
ವೆಂಕಟರಮಣ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಸಂಸ್ಥೆ ಪಿತ್ರೋಡಿ ಇವರು ತಮ್ಮದೇ ತಂಡದಲ್ಲಿ ನಿರಂತರವಾಗಿ ದುಡಿಯುತ್ತಿರುವ ಸಂತ್ರಸ್ತ ಸದಸ್ಯರ ಕುಟುಂಬಗಳಿಗೆ ತಂಡದ ವತಿಯಿಂದ ತಲಾ ಒಂದು ಲಕ್ಷ ರೂಪಾಯಿ ಮೌಲ್ಯದ ಆಹಾರ ಮತ್ತು ದಿನ ನಿತ್ಯದ ಜೀವನದಲ್ಲಿ ಬಳಸುವ ಆಹಾರ ಸಾಮಗ್ರಿಗಳನ್ನು ನೀಡುವ ಮೂಲಕ ಮತ್ತೊಮ್ಮೆ ಹಿರಿಮೆಯನ್ನು ಸಾಧಿಸಿದ್ದಾರೆ.
33 ವರ್ಷಗಳ ಇತಿಹಾಸದಲ್ಲಿ ಕ್ರಿಕೆಟ್ ಕ್ಷೇತ್ರದಲ್ಲಿ ಅತ್ಯಂತ ಶಿಸ್ತಿನ ತಂಡ ಎನ್ನುವ ಹೆಸರು ಮಾಡಿರುವ ಒಂದು ಸಂಸ್ಥೆ ಅಂದರೆ ಅದು ವೆಂಕಟರಮಣ ಸ್ಪೋರ್ಟ್ಸ್ ಮತ್ತು ಕಲ್ಚರಲ್ ರಿ. ಪಿತ್ರೋಡಿ.
ಗ್ರಾಮೀಣ  ಮತ್ತು ಜಿಲ್ಲಾ ಮಟ್ಟದಲ್ಲಿ ಮಾತ್ರ ತನ್ನ ವ್ಯಾಪ್ತಿಯನ್ನು ಪಸರಿಸಿ ಪ್ರಶಸ್ತಿಯನ್ನು ಪಡೆಯುತ್ತಿದ್ದ ಈ  ಸಂಸ್ಥೆ ನಂತರದ ದಿನಗಳಲ್ಲಿ ರಾಜ್ಯಮಟ್ಟದಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆಯುವಲ್ಲಿ ಯಶಸ್ವಿಯಾಯಿತು.
16 ಬಾರಿ ಶಿಸ್ತಿನ ತಂಡ ಎಂಬುದಾಗಿ ಪ್ರಶಸ್ತಿ ಪುರಸ್ಕೃತರಾದ ಈ ಸಂಸ್ಥೆ ಕ್ರಿಕೆಟ್ ಆಟ ವ್ಯಾಪಾರೀಕರಣದ ರೂಪ ಪಡೆಯುತ್ತಲೇ ಕ್ರಿಕೆಟ್ ಕ್ಷೇತ್ರದಿಂದ ಒಂದು ಹೆಜ್ಜೆ ಹಿಂದೆ ಸರಿದು ತಂಡವನ್ನು ಸಾಮಾಜಿಕವಾಗಿ ತೊಡಗಿಸಿಕೊಂಡು ಮುಂದುವರೆಯಿತು. ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ, ಆರೋಗ್ಯ ನಿಧಿಯ ಮೂಲಕ ಬಡರೋಗಿಗಳಿಗೆ ಸಹಾಯ, ವಿದ್ಯಾರ್ಥಿಗಳಿಗೆ ಉಚಿತ ಮಾಹಿತಿ ಕಾರ್ಯಾಗಾರ, 160 ಯುವಕರನ್ನು ಸೇರಿಸಿ ರಕ್ತದಾನ.. ಇದುವರೆಗೆ 4000 ಕ್ಕೂ ಹೆಚ್ಚು ಯೂನಿಟ್ ರಕ್ತ ದಾನ ಮಾಡಿದ ಹಿರಿಮೆ ಈ ಸಂಸ್ಥೆಗೆ. ಮದ್ಯ ಮುಕ್ತ ಕ್ರಿಕೆಟ್ ತಂಡ ಆಗಬೇಕು ಅನ್ನುವ ಉದ್ದೇಶದಿಂದ ಪಂದ್ಯದಲ್ಲಿ ಮದ್ಯಪಾನ ಟೆಸ್ಟಿಂಗ್ ಯಂತ್ರಗಳನ್ನು ಬಳಸಿಕೊಂಡು ಕ್ರಿಕೆಟ್ ಆಯೋಜಿಸುವುದು ಇವರ ಶಿಸ್ತಿಗೆ ಇನ್ನೊಂದು ರೂಪ.
ಕಳೆದ ವರ್ಷದ ಪಂದ್ಯದಲ್ಲಿ ಮೊದಲ ಬಾರಿಗೆ ಸಣ್ಣ ಗಾತ್ರದ ಚಿನ್ನದ ಟ್ರೋಫಿಯನ್ನು ವಿಜೇತ ತಂಡಕ್ಕೆ ನೀಡಿದ್ದು ಸಂಸ್ಥೆಗೆ ಕ್ರಿಕೆಟ್ ಬಗ್ಗೆ ಇರುವ ಆಸಕ್ತಿಯನ್ನು ಎತ್ತಿ ತೋರಿಸುತ್ತದೆ.
ಈ ತಂಡದಿಂದ ಮುಂದೆಯೂ ಇನ್ನಷ್ಟು ಉತ್ತಮ ಸಮಾಜ ಸೇವಾ ಕಾರ್ಯ ನಡೆಯಲಿ ಅನ್ನುವ ಶುಭ ಹಾರೈಕೆ.
Exit mobile version