SportsKannada | ಸ್ಪೋರ್ಟ್ಸ್ ಕನ್ನಡ

ಭಾರತೀಯ ಕ್ರಿಕೆಟ್ ನಲ್ಲಿ ಸುವರ್ಣ ಯುಗವನ್ನು ಸೃಷ್ಟಿಸಿದ ಧೋನಿ ಎಂಬ ನಾಯಕ

ಕ್ರಿಕೆಟ್ ಎಂಬ ಅದೃಷ್ಟದಾಟದಲ್ಲಿ ತನಗೆ ಯಾವುದೂ ಅಸಾಧ್ಯವಲ್ಲ ಎಂಬಂತೆ ಗೆದ್ದು ತೋರಿಸುತ್ತಿದ್ದ, ಭಾರತೀಯ ಕ್ರಿಕೆಟ್ ತಂಡವನ್ನು ಉತ್ತುಂಗಕ್ಕೇರಿಸಿದ  ಸಾರ್ವಕಾಲಿಕ ಶ್ರೇಷ್ಠ ನಾಯಕನಾಗಿ ಮೆರೆದ M.S ಧೋನಿ ಎಂಬ  ಕ್ರಿಕೆಟಿಗನ ನಿವೃತ್ತಿಯಿಂದ ಭಾರತೀಯ ಕ್ರಿಕೆಟ್ ನಲ್ಲಿ ಒಂದು ತಲೆಮಾರಿನ ಕ್ರಿಕೆಟ್  ಯುಗ ಅಂತ್ಯವಾದಂತಾಯಿತು.
ತನ್ನ ವಿಶಿಷ್ಠವಾದ ಕೇಶವಿನ್ಯಾಸದಿಂದಲೇ ಕ್ರಿಕೆಟ್ ಜಗತ್ತಿಗೆ ಪ್ರವೇಶಿಸಿ ಕ್ರಿಕೆಟ್ ಪ್ರೇಮಿಗಳ ಮನದಲ್ಲಿ ತನ್ನ ಗುರುತನ್ನು ಸೃಷ್ಠಿಸಿಕೊಂಡ ಭಾರತೀಯ ತಂಡದ ಒಬ್ಬ ವಿಕೆಟ್ ಕೀಪರ್ ಮುಂದೆ ಭಾರತೀಯ ಕ್ರಿಕೆಟ್ ತಂಡದ ಸಾರಥ್ಯ ವಹಿಸಿಕೊಂಡು ಯಶಸ್ಸಿನ ಪಥದಲ್ಲಿ ಮುಂಚೂಣಿಯಲ್ಲಿ ನಿಲ್ಲುತ್ತಾನೆ ಎಂದು ಯಾರೂ ಕೂಡ ಊಹಿಸಿರಲಿಲ್ಲ.
2007-2016 ಸೀಮಿತ ಓವರ್ ಗಳ ಕ್ರಿಕೆಟ್  ಹಾಗೂ 2008- 2014 ಟೆಸ್ಟ್ ಕ್ರಿಕೆಟ್ ನ ಅವಧಿ ಎಂಬುವುದು ಭಾರತೀಯ ಕ್ರಿಕೆಟ್ ಗೆ ಸುವರ್ಣ ಯುಗವಾಗಿತ್ತು. ಆ ಗಳಿಗೆಯಲ್ಲಿ ತಂಡದ ಸಾರಥ್ಯವನ್ನು ವಹಿಸಿದ ಧೋನಿ ಎಂಬ ನಾಯಕ 2007 ರ ಚೊಚ್ಚಲ 20-20 ವಿಶ್ವಕಪ್ ಎತ್ತಿಹಿಡಿಯುವುದರಿಂದ ಆರಂಭ ಕಂಡ ತನ್ನ ಯಶಸ್ಸಿನ ಪಯಣವನ್ನು ಮುಂದೆ 2010, 2016 ರ ಏಷ್ಯಾ ಕಪ್, 2011 ರ ಏಕದಿನ ವಿಶ್ವಕಪ್, 2013 ರ ಚಾಂಪಿಯನ್ಸ್ ಟ್ರೋಫಿ ಹೀಗೆ ಬಹುತೇಕವಾಗಿ ಎಲ್ಲಾ ಅತ್ಯುನ್ನತ ಪ್ರಶಸ್ತಿಯ ಗರಿಯನ್ನು ಮುತ್ತಿಕ್ಕುವಂತೆ ತಂಡವನ್ನು ಮುನ್ನಡೆಸುತ್ತಾನೆ.ಈ ಪರ್ವಕಾಲದಲ್ಲಿ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡ ಆಟಗಾರರೇ  ವಿಶಿಷ್ಠವೆನಿಸಿಕೊಂಡ ಅಸ್ತ್ರಗಳಾಗಿ  ಆತನ ಹಿರಿಮೆಯ ಭತ್ತಳಿಕೆಯನ್ನು ಸೇರಿಕೊಂಡಿದ್ದರು. ನಾಯಕನಾಗಿ ಸಹ ಆಟಗಾರರ ಪ್ರತಿಭೆಯನ್ನು, ಸಾಮರ್ಥ್ಯವನ್ನು ಸ್ಪಷ್ಟವಾಗಿ ಅರಿತುಕೊಂಡು  ಕೈಗೊಳ್ಳುತ್ತಿದ್ದ ಯೋಜನೆ ಪ್ರತಿ ಭಾರಿಯು ಫಲಿಸುತ್ತಿತ್ತು. ಅದೇ ರೀತಿ ತಂಡದಲ್ಲಿದ್ದ ಆಟಗಾರರು ಕೂಡ ಧೋನಿ ನಾಯಕತ್ವದಲ್ಲಿ ತೆಗೆದುಕೊಂಡ ನಿರ್ಧಾರಗಳು ಸೋಲದಂತೆ ಸಮರ್ಥವಾಗಿ ನಿಭಾಯಿಸುತ್ತಿದ್ದರು.  ದಾಂಡಿಗತನದಲ್ಲಿ ಧೋನಿ ಎಂಬ ಮದ್ಯಮ ಕ್ರಮಾಂಕದ ಆಧಾರ ಸ್ತಂಭ ಗಟ್ಟಿಯಾಗಿ ನೆಲೆನಿಂತರೇ ಸೋಲಿನ ದಾರಿಯೂ ಬದಲಾಗುತ್ತಿತ್ತು,  ಆ ಕ್ಷಣಕ್ಕೆ ಕೈಗೊಳ್ಳುವ ನಿರ್ಧಾರಗಳು ಎದುರಾಳಿ ತಂಡವನ್ನು ಸೋಲಿನ ದವಡೆಗೆ ಸಿಲುಕುವಂತೆ ಆತನ ಯೋಜನೆ, ಯೋಚನೆಗಳು ಕೆಲಸ ಮಾಡುತ್ತಿದ್ದವು.  ಧೋನಿ ಎಂಬ ಯಶಸ್ವಿ ನಾಯಕನ ತಾಳ್ಮೆ, ಜಾಣ್ಮೆ, ಕ್ರಿಯಾಶೀಲತೆಯ ನಿರ್ಧಾರದ ಜೊತೆಗೆ ಅದೃಷ್ಟವು ಒಂದು ಪಾಲು ಹೆಚ್ಚಾಗಿಯೇ ಕೆಲಸ ಮಾಡುತ್ತಿತ್ತು. ನಿಜಕ್ಕೂ ಆ ಹೊತ್ತಿಗೆ ಭಾರತೀಯ ಕ್ರಿಕೆಟ್ ತಂಡ ಒಂದು ಪರಿಪೂರ್ಣವಾದ, ಪರಿಪಕ್ವಗೊಂಡ ಸಾಟಿ ಇಲ್ಲದ ತಂಡವಾಗಿ ವಿಶ್ವಮಟ್ಟದಲ್ಲಿಯೇ ತನ್ನನ್ನು ಗುರುತಿಸಿಕೊಂಡಿತ್ತು.
ವರುಷಗಳು ಕಳೆದಂತೆ ಭಾರತೀಯ ಕ್ರಿಕೆಟ್ ನ ಸುವರ್ಣಯುಗದಲ್ಲಿ ಹೊನ್ನಿನ ಬಣ್ಣದಲ್ಲಿ ಪ್ರಕಾಶಿಸಿದ ಅಸ್ತ್ರಗಳು ಒಂದೊಂದಾಗಿ ನಿವೃತ್ತಿಯ ಹಾದಿಯಲ್ಲಿ  ಸಾಗಿದವು. ಈ ಎಲ್ಲಾ ಅಸ್ತ್ರಗಳು ಪ್ರಕಾಶಿಸುವಲ್ಲಿ ಮುಂಚೂಣಿಯಲ್ಲಿ ನಿಂತ ಧೋನಿ ಎಂಬ ಬ್ರಹ್ಮಾಸ್ತ್ರದ ನಿವೃತ್ತಿಯಿಂದ ಇತಿಹಾಸದ ಪುಟದಲ್ಲಿ ಮಿಂಚಿದ ಭಾರತೀಯ ಕ್ರಿಕೆಟ್ ಒಂದು ತಲೆಮಾರಿನ ಯುಗಾಂತ್ಯವಾಯಿತು…
✍🏼ಮಂಜುನಾಥ್ ಕಾರ್ತಟ್ಟು
Exit mobile version