SportsKannada | ಸ್ಪೋರ್ಟ್ಸ್ ಕನ್ನಡ

10 ವರ್ಷ ರಕ್ತ ಸುರಿಸಿ ಆಡಿದ್ದ ತಂಡವನ್ನೇ ಸೋಲಿಸಲು ನಿಂತಿದ್ದಾನೆ ಕರುಣ್ ನಾಯರ್..!

2013ರಿಂದ 2015ರವರೆಗೆ ಕರ್ನಾಟಕ ಕ್ರಿಕೆಟ್ ತಂಡದ ಚಾರಿತ್ರಿಕ ಗೆಲುವುಗಳ ಹಿಂದಿದ್ದ ಆಟಗಾರ.. ರಣಜಿ ಟ್ರೋಫಿಯಲ್ಲಿ ಹ್ಯಾಟ್ರಿಕ್ ಶತಕಗಳನ್ನು ಬಾರಿಸಿ ಮಿಂಚಿದ್ದ ಸ್ಟಾರ್.. 2017-18ನೇ ಸಾಲಿನಲ್ಲಿ ಕರ್ನಾಟಕ ತಂಡದ ನಾಯಕತ್ವ ವಹಿಸಿ ತಂಡಕ್ಕೆ ವಿಜಯ್ ಹಜಾರೆ ಟ್ರೋಫಿ ಗೆಲ್ಲಿಸಿಕೊಟ್ಟಿದ್ದ ಕ್ರಿಕೆಟಿಗ..
ಯಾವ ತಂಡಕ್ಕಾಗಿ 10 ವರ್ಷಗಳ ಕಾಲ ಕರುಣ್ ನಾಯರ್ ಬೆವರು, ರಕ್ತ ಸುರಿಸಿ ಆಡಿದ್ದನೋ, ಅದೇ ಕರ್ನಾಟಕ ತಂಡವನ್ನು ಈಗ ಸೋಲಿಸಲು ನಿಂತಿದ್ದಾನೆ.
ನಾಳೆಯಿಂದ ಮಹಾರಾಷ್ಟ್ರದ ನಾಗ್ಪುರದಲ್ಲಿ ಕರ್ನಾಟಕ ಮತ್ತು ವಿದರ್ಭ ಮಧ್ಯೆ ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್ ಪಂದ್ಯ.
2017.. ಕೋಲ್ಕತಾದ ಈಡನ್ ಗಾರ್ಡನ್ಸ್ ಮೈದಾನ. ರಣಜಿ ಟ್ರೋಫಿ ಸೆಮಿಫೈನಲ್.. ಆ ಪಂದ್ಯವನ್ನು ನೆನಪಿಸಿಕೊಂಡರೆ ಈಗಲೂ ಹೃದಯ ಭಾರವಾಗುತ್ತದೆ. ಸೋಲಲು ಸಾಧ್ಯವೇ ಇಲ್ಲ ಎಂಬಂತಿದ್ದ ಪಂದ್ಯವನ್ನು ಕರ್ನಾಟಕ ಸೋತಿತ್ತು. ಕರ್ನಾಟಕ ಸೋತಿತ್ತು ಎನ್ನುವುದಕ್ಕಿಂತಲೂ ಗೆಲುವನ್ನು ತನ್ನ ಕೈಯಾರೆ ಹಾಳು ಮಾಡಿಕೊಂಡಿತ್ತು ಎನ್ನುವುದೇ ಸೂಕ್ತ.
ಫಸ್ಟ್ ಇನ್ನಿಂಗ್ಸ್’ನಲ್ಲಿ 116 ರನ್’ಗಳ ದೊಡ್ಡ ಮುನ್ನಡೆ.. ಗೆಲ್ಲುವುದಕ್ಕೆ ಬೇಕಿತ್ತು ಜಸ್ಟ್ 198 ರನ್. ಆದರೆ ಕೈಯಲ್ಲಿದ್ದ ಗೆಲುವನ್ನು ಕರ್ನಾಟಕದ ಆಟಗಾರರು ಕೈಚೆಲ್ಲಿದ್ದರು. 5 ರನ್’ಗಳಿಂದ ವಿದರ್ಭ ಪಂದ್ಯ ಗೆದ್ದು ಫೈನಲ್ ತಲುಪಿತ್ತು. ಅಭಿಮ್ಯನ್ಯು ಮಿಥುನ್ ಅವರ ಆಲ್ರೌಂಡ್ ಆಟ, ಕರುಣ್ ನಾಯರ್ ಬ್ಯಾಟಿಂಗ್ ಸಾಹಸ ಅವತ್ತು ನೀರಲ್ಲಿ ಮಾಡಿದ ಹೋಮದಂತಾಗಿತ್ತು.
7 ವರ್ಷಗಳ ಹಿಂದೆ ವಿದರ್ಭ ವಿರುದ್ಧ ನಡೆದ ರಣಜಿ ಟ್ರೋಫಿ ಸೆಮಿಫೈನಲ್ ಪಂದ್ಯದಲ್ಲಿ ಕರ್ನಾಟಕ ಪರ ಕರುಣ್ ನಾಯರ್ 183 ರನ್ (153+30) ಬಾರಿಸಿದ್ದ. ವಿಪರ್ಯಾಸ ನೋಡಿ.. ಅವತ್ತು ಕರ್ನಾಟಕ ಪರ ಮಿಂಚಿದ್ದ ಕರುಣ್ ನಾಯರ್ ಈಗ ವಿದರ್ಭ ತಂಡದ ಪರ ಆಡುತ್ತಿದ್ದಾನೆ. ಶುಕ್ರವಾರ ಆರಂಭವಾಗಲಿರುವ ರಣಜಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕರ್ನಾಟಕ ವಿರುದ್ಧವೇ ಕಣಕ್ಕಿಳಿಯುತ್ತಿದ್ದಾನೆ.
ಕರುಣ್ ನಾಯರ್ ಕರ್ನಾಟಕ ತಂಡದಲ್ಲಿ ಸ್ಥಾನ ಕಳೆದುಕೊಂಡು ವಿದರ್ಭ ತಂಡಕ್ಕೆ ವಲಸೆ ಹೋದವನು. ಈ ವರ್ಷದ ಡೊಮೆಸ್ಟಿಕ್ ಕ್ರಿಕೆಟ್’ನಲ್ಲಿ ವಿದರ್ಭ ತಂಡವನ್ನು ಸೇರಿಕೊಂಡಿರುವ ಕರುಣ್, 7 ಪಂದ್ಯಗಳಲ್ಲಿ 2 ಸೆಂಚುರಿಗಳನ್ನು ಬಾರಿಸಿದ್ದಾನೆ.
ಕರ್ನಾಟಕ ವಿರುದ್ಧ ಆಡಲು ಮೈದಾನಕ್ಕಿಳಿಯುವ ಹೊತ್ತಿಗೆ ಕರುಣ್ ನಾಯರ್ ಎದೆಯಲ್ಲಿ ಖಂಡಿತ ಒಂದು ಕಿಚ್ಚು ಹೊತ್ತಿಕೊಂಡಿರುತ್ತದೆ. ತನ್ನನ್ನು ಕರ್ನಾಟಕ ತಂಡದಿಂದ ಹೊರಗಟ್ಟಿದವರಿಗೆ ತಾನೇನು ಎಂಬುದನ್ನು ತೋರಿಸಲೇಬೇಕು ಎಂಬ ಕೆಚ್ಚು ಕರುಣ್ ನಾಯರ್’ಗೆ ಇದ್ದೇ ಇದೆ. ಆ ಅವಕಾಶ ರಣಜಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲೇ ಒದಗಿ ಬಂದಿದೆ.
ಕರ್ನಾಟಕ ರಣಜಿ ತಂಡದ, ಅಪ್ಪಟ ಅಭಿಮಾನಿಯಾಗಿ, ಕರ್ನಾಟಕದ ಆಟಗಾರರ ಹಿತೈಷಿಯಾಗಿ ನನ್ನ ಆಸೆ ಒಂದೇ. ವಿದರ್ಭ ಪರ ಆಡುತ್ತಿರುವ ಕರುಣ್ ನಾಯರ್, ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕರ್ನಾಟಕ ವಿರುದ್ಧ ಶತಕ ಗಳಿಸಲಿ.., ಆದರೆ ಕರ್ನಾಟಕವೇ ಗೆಲ್ಲಲಿ..!
#KarunNair #RanjiTrophy #KarnatakaCricket
Exit mobile version