
ಮಂಗಳೂರಿನಲ್ಲಿ ಜುಲೈ 1ರಿಂದ ಕರ್ನಾಟಕ ರಾಜ್ಯ ರ‍್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿ
**ಮಂಗಳೂರು, ಜೂನ್ 29:** ದಕ್ಷಿಣ ಕನ್ನಡ ಜಿಲ್ಲಾ ಟೇಬಲ್ ಟೆನಿಸ್ ಅಸೋಸಿಯೇಷನ್ ವತಿಯಿಂದ ಕರ್ನಾಟಕ ರಾಜ್ಯ ರ‍್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿ-2026 ಅನ್ನು ಜುಲೈ 1ರಿಂದ 4ರವರೆಗೆ ಮಂಗಳೂರಿನ ಬಂಗ್ರಕೂಳೂರಿನ ಮಂಗಳೂರು ಟೇಬಲ್ ಟೆನಿಸ್ ಅಕಾಡೆಮಿಯಲ್ಲಿ ಆಯೋಜಿಸಲಾಗಿದೆ.
ಕರ್ನಾಟಕ ಟೇಬಲ್ ಟೆನಿಸ್ ಅಸೋಸಿಯೇಷನ್ (KTTA) ಆಶ್ರಯದಲ್ಲಿ ನಡೆಯಲಿರುವ ಈ ಪ್ರತಿಷ್ಠಿತ ರಾಜ್ಯಮಟ್ಟದ ಟೂರ್ನಿಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ನೂರಾರು ಪ್ರತಿಭಾವಂತ ಟೇಬಲ್ ಟೆನಿಸ್ ಆಟಗಾರರು ಭಾಗವಹಿಸುವ ನಿರೀಕ್ಷೆಯಿದೆ. ಈ ಸ್ಪರ್ಧೆಯು ರಾಜ್ಯ ರ‍್ಯಾಂಕಿಂಗ್ ಅಂಕಗಳನ್ನು ಪಡೆಯಲು ಮಹತ್ವದ್ದಾಗಿರುವುದರಿಂದ ಯುವ ಆಟಗಾರರ ಗಮನ ಸೆಳೆದಿದೆ.
ಟೂರ್ನಿಗೆ 729 ಸಂಸ್ಥೆ ಕ್ರೀಡಾ ಉಪಕರಣಗಳ ಪ್ರಾಯೋಜಕತ್ವ ವಹಿಸಿದ್ದು, BHF ಸಂಸ್ಥೆ ಉಡುಪು ಪ್ರಾಯೋಜಕರಾಗಿ ಸಹಕರಿಸಿದೆ. ಮಂಗಳೂರು ಟೇಬಲ್ ಟೆನಿಸ್ ಅಕಾಡೆಮಿ, ಟಾರ್ಪಡೋಸ್ ಸ್ಪೋರ್ಟ್ಸ್ ಕ್ಲಬ್ ಹಾಗೂ PTTCE ಸಂಸ್ಥೆಗಳು ಸಹ-ಪ್ರಾಯೋಜಕರಾಗಿ ಕೈಜೋಡಿಸಿವೆ.
ದಕ್ಷಿಣ ಕನ್ನಡದಲ್ಲಿ ಟೇಬಲ್ ಟೆನಿಸ್ ಕ್ರೀಡೆಯ ಬೆಳವಣಿಗೆಗೆ ಉತ್ತೇಜನ ನೀಡುವ ಉದ್ದೇಶದಿಂದ ಆಯೋಜಿಸಲಾಗಿರುವ ಈ ರಾಜ್ಯ ರ‍್ಯಾಂಕಿಂಗ್ ಟೂರ್ನಿಯು ಜಿಲ್ಲೆಯ ಕ್ರೀಡಾ ಇತಿಹಾಸದಲ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲಾಗಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.
