SportsKannada | ಸ್ಪೋರ್ಟ್ಸ್ ಕನ್ನಡ

ಕುಂದಾಪುರ-ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿಯವರಿಗೆ ಹುಟ್ಟೂರ ಸನ್ಮಾನ

2021-22 ರ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿಯವರಿಗೆ ವಕ್ವಾಡಿಯ ಸಮಸ್ತ ನಾಗರಿಕರು ಒಟ್ಟಾಗಿ ಸೇರಿ ಸಂಭ್ರಮಿಸುವ ನಿಟ್ಟಿನಲ್ಲಿ ಫೆಬ್ರವರಿ 27 ರವಿವಾರದಂದು ವಕ್ವಾಡಿಯಲ್ಲಿ ಹುಟ್ಟೂರ ಸನ್ಮಾನ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.
*ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿಯವರ ಸಾಧನೆ-ಸಾಮಾಜಿಕ ಸೇವೆಯ ಕಿರು ಪರಿಚಯ*
ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ ಅವರು ಫಾರ್ಚುನ್ ಗ್ರೂಪ್ ಆಫ್ ಹೋಟೆಲ್ಸ್ ಚೇರ್ಮನ್ ಆಗಿದ್ದಾರೆ. ಕಾವಡಿ ಮೇಲ್ಮನೆ ನಾರಾಯಣ ಶೆಟ್ಟಿ ಮತ್ತು ವಕ್ವಾಡಿ ಸಾರ್ಕಲ್ಲು ಮನೆ ಸರೋಜಿನಿ ಶೆಡ್ತಿಯವರ ಪುತ್ರನಾಗಿ
1967 ಜುಲೈ 6 ರಂದು ಜನಿಸಿದ ಇವರು, ಸರ್ಕಾರಿ ಜೂನಿಯರ್ ಕಾಲೇಜು ಕೋಟೇಶ್ವರ ಮತ್ತು ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಶಿಕ್ಷಣ ಪಡೆದು ತರುವಾಯ ಬದುಕು ಕಟ್ಟಿಕೊಳ್ಳುವ ಸಲುವಾಗಿ ದುಬೈಗೆ ತೆರಳಿದವರು. ಅಲ್ಲಿ ಹೋಟೆಲ್ ವೃತ್ತಿಯ ಬಗ್ಗೆ ಆಸಕ್ತಿ ಹೊಂದಿ ತನ್ನದೇ ಆದ ಸಂಸ್ಥೆ ಸ್ಥಾಪಿಸಿದರು. ಪ್ರವೀಣ್ ಕುಮಾರ್ ಶೆಟ್ಟಿಯವರು ಯುಎಇ ಎನ್.ಆರ್.ಐ ಫೋರಂನ ಸ್ಥಾಪಕ ಅಧ್ಯಕ್ಷರಾಗಿದ್ದಾರೆ.
ಫಾರ್ಚುನ್ ಗ್ರೂಪ್ ಆಫ್ ಹೋಟೆಲ್ಸ್ ಮೂಲಕ ದುಬೈನಲ್ಲಿ ಆರು, ಭಾರತದಲ್ಲಿ 2, ಜಾರ್ಜಿಯಾದಲ್ಲಿ ಒಂದು ಹೋಟೆಲನ್ನು ಮುನ್ನಡೆಸುತ್ತಿದ್ದಾರೆ.
ವಿದೇಶಗಳಲ್ಲಿ ಓರ್ವ ಕನ್ನಡಿಗನಾಗಿ ಅಪರೂಪದ ಸಾಧನೆ ತೋರಿದ್ದಾರೆ. ಎರಡು ಸಾವಿರಕ್ಕೂ ಅಧಿಕ ಜನರಿಗೆ ಉದ್ಯೋಗ ನೀಡಿದ್ದು, ಈ ಪೈಕಿ ಶೇಕಡ 60ಕ್ಕೂ ಅಧಿಕ ಮಂದಿ ಕನ್ನಡಿಗರು ಕೆಲಸ ಪಡೆದಿದ್ದಾರೆ ಅನ್ನುವುದು ಹೆಮ್ಮೆಯ ವಿಚಾರ.ತನ್ನ ಕಾರ್ಯಕ್ಷಮತೆಯಿಂದ ಫಾರ್ಚುನ್ ಗ್ರೂಪ್ ನ ಅಧ್ಯಕ್ಷರಾಗಿ 2001 ಕಾರ್ಯನಿರ್ವಹಿಸುತ್ತಿದ್ದಾರೆ.ಈ ಮೂಲಕ ಹಲವಾರು ಸಾಮಾಜಿಕ ಕಳಕಳಿಯ ಕಾರ್ಯಗಳಲ್ಲೂ ತೊಡಗಿಸಿಕೊಂಡಿದ್ದಾರೆ. ಇನ್ನು ಕೋವಿಡ್ ವೇಳೆ ಚಾರ್ಟರ್ಡ್ ವಿಮಾನ ವ್ಯವಸ್ಥೆ ಮೂಲಕ ಕನ್ನಡಿಗರನ್ನು ತಾಯ್ನಾಡಿಗೆ ಕಳಿಸುವ ಮೂಲಕ ಸುದ್ದಿಯಾಗಿದ್ದರು. ಈ ಬಾರಿ ಕೊರೋನಾ ಸಂದರ್ಭ ತನ್ನ ಹುಟ್ಟೂರಾದ ವಕ್ವಾಡಿ ಭಾಗದ ನೂರಾರು ಮನೆಗೆ ಆಹಾರ ಸಾಮಾಗ್ರಿ ಕಿಟ್ ನೀಡಿದ್ದರು.
ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿಯವರು ತನ್ನ ಹುಟ್ಟೂರಿಗೆ ನೀಡಿದ ಕೊಡುಗೆ ಅಪಾರವಾದುದು. ಮುಖ್ಯವಾಗಿ ಉಲ್ಲೇಖಿಸುವುದಾದರೆ ವಕ್ವಾಡಿಯ ಗ್ರಾಮದೇವತೆ ಮಹಾಲಿಂಗೇಶ್ವರ ದೇವಸ್ಥಾನ ಇವರ ನೇತೃತ್ವದಲ್ಲಿ ಸುಮಾರು ಒಂದು ಕೋಟಿ ವೆಚ್ಚದಲ್ಲಿ 2012ರಲ್ಲಿ ಜೀರ್ಣೋದ್ದಾರಗೊಂಡಿತ್ತು. ವೈಯಕ್ತಿಕವಾಗಿ ಅವರು 25 ಲಕ್ಷ ರೂ ದೇಣಿಗೆ ನೀಡಿದ್ದರು. ವಕ್ವಾಡಿಯ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಹೊಸ ಕಟ್ಟಡಕ್ಕಾಗಿ ರೂ.5 ಲಕ್ಷ ನೀಡಿದ್ದಾರೆ. ವಕ್ವಾಡಿಯಲ್ಲಿ ಬಸ್ ನಿಲ್ದಾಣ, ಅಂಚೆ ಕಛೇರಿಗೆ ಹೊಸ ಕಟ್ಟಡ ನಿರ್ಮಿಸಿಕೊಟ್ಟಿದ್ದಾರೆ. ಪ್ರೌಢಶಾಲೆ, ಪ್ರಾಥಮಿಕ ಶಾಲೆಗಳೆರಡಕ್ಕೂ ಅಗತ್ಯ ಮೂಲಭೂತ ಸೌಕರ್ಯಗಳಿಗಾಗಿ ದೇಣಿಗೆ ನೀಡಿದ್ದಾರೆ. ವಕ್ವಾಡಿ ಪ್ರಾಥಮಿಕ ಶಾಲೆಗೆ ಉಚಿತ ವಾಹನದ ವ್ಯವಸ್ಥೆ ಅಲ್ಲದೇ ವಕ್ವಾಡಿಯ ಯಾವುದೇ ವ್ಯಕ್ತಿ ಕಷ್ಟ ಎಂದಾಗ ಉದಾರವಾಗಿ ಆರ್ಥಿಕ ನೆರವು ನೀಡಿ ಮಾನವೀಯತೆ ಮೆರೆದಿದ್ದಾರೆ. ತನ್ನ ಉದ್ಯಮ ಕ್ಷೇತ್ರದ ಮೂಲಕವೂ ಹಲವಾರು ಮಂದಿ ಸ್ಥಳೀಯರಿಗೆ ಉದ್ಯೋಗಾವಕಾಶಗಳನ್ನು ನೀಡಿದ್ದಾರೆ.
*ಪತ್ರಿಕಾಗೋಷ್ಠಿಯಲ್ಲಿ ಪ್ರಕಟವಾದ ಕಾರ್ಯಕ್ರಮದ ವಿವರ*
ಇತ್ತೀಚೆಗಷ್ಟೇ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಹುಟ್ಟೂರ ಸನ್ಮಾನ‌ ಸಮಿತಿಯ ಅಧ್ಯಕ್ಷರಾದ ಬಿ.ಅಪ್ಪಣ್ಣ ಹೆಗ್ಡೆ,ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿಯವರಿಗೆ ಅವರ ಹುಟ್ಟೂರಾದ ವಕ್ವಾಡಿಯ ಸಮಸ್ತ ನಾಗರಿಕರು ಒಟ್ಟಾಗಿ ಹುಟ್ಟೂರ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ ಹುಟ್ಟೂರ ಸನ್ಮಾನ ಸಮಿತಿ ಕಾರ್ಯದರ್ಶಿ ವೇಣುಗೋಪಾಲ ಹೆಗ್ಡೆ ಮಾತನಾಡಿ, ಆ ದಿನ ಬೆಳಿಗ್ಗೆ 9 ಗಂಟೆಯಿಂದ ಉಡುಪಿ ಪ್ರಸಾದ್ ನೇತ್ರಾಲಯದ ತಜ್ಞ ವೈದ್ಯರಿಂದ ಉಚಿತ ಕಣ್ಣಿನ ತಪಾಸಣಾ ಶಿಬಿರ ನಡೆಯಲಿದೆ. ಅಗತ್ಯವುಳ್ಳವರಿಗೆ ಉಚಿತ ಕನ್ನಡಕ, ಶಸ್ತ್ರಚಿಕಿತ್ಸೆ ಅಗತ್ಯವುಳ್ಳವರಿಗೆ ಉಚಿತ ಶಸ್ತ್ರಚಿಕಿತ್ಸೆ ನಡೆಸಲಾಗುವುದು. ಅದೇ ಸಂದರ್ಭದಲ್ಲಿ ಕುಂದಾಪುರ ರೂರಲ್ ಆಯುರ್ವೇದಿಕ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ತಜ್ಞ ವೈದ್ಯರಿಂದ ಆರೋಗ್ಯ ತಪಾಸಣಾ ಶಿಬಿರ ನಡೆಯಲಿದೆ. ಅಪರಾಹ್ನ 2 ಗಂಟೆಗೆ ಆಹ್ವಾನಿತ ಪ್ರಥಮ ದರ್ಜೆ ಕಾಲೇಜುಗಳ ವಿದ್ಯಾರ್ಥಿ ವಿದ್ಯಾರ್ಥಿನಿಯರಿಂದ ಸಾಂಸ್ಕøತಿಕ ಸ್ಪರ್ಧೆ ನಡೆಯಲಿದೆ. ವಿಜೇತ ತಂಡಕ್ಕೆ ಫಲಕ, ನಗದು ಬಹುಮಾನ ನೀಡಲಾಗುವುದು ಎಂದರು.
ನಂತರ 7 ವಿಶ್ವದಾಖಲೆಗಳ ಸರದಾರಿಣಿ ಯೋಗರತ್ನ ತನುಶ್ರೀ ಪಿತ್ರೋಡಿ ಇವರಿಂದ ಯೋಗ ನೃತ್ಯ ಕಾರ್ಯಕ್ರಮ ನಡೆಯಲಿದೆ.
ಸಂಜೆ 5 ಗಂಟೆಗೆ ಅಭಿನಂದನಾ ಸಮಾರಂಭ ನಡೆಯಲಿದ್ದು, ಶ್ರೀ ಸುಬ್ರಹ್ಮಣ್ಯ ಮಠಾಧೀಶರಾದ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರು ಆಶೀರ್ವಚನ ನೀಡಲಿದ್ದಾರೆ. ಕಾರ್ಯಕ್ರಮದಲ್ಲಿ ಧಾರ್ಮಿಕ, ರಾಜಕೀಯ, ಗಣ್ಯರು, ಚಲನಚಿತ್ರ ನಟರು ಭಾಗವಹಿಸಲಿದ್ದಾರೆ. ರಾತ್ರಿ 8.30ಕ್ಕೆ ಆಳ್ವಾಸ್ ಪ್ರತಿಷ್ಠಾನ ಮೂಡಬಿದ್ರೆ ಇಲ್ಲಿನ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ವೈಭವ ನಡೆಯಲಿದೆ. ರಾತ್ರಿ 8 ಗಂಟೆಯಿಂದ ಸಾಮೂಹಿಕ ಭೋಜನ ವ್ಯವಸ್ಥೆಯನ್ನೂ ಮಾಡಲಾಗಿದೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಉದ್ಯಮಿ ಪ್ರವೀಣ್ ಕುಮಾರ್ ಶೆಟ್ಟಿ ವಕ್ವಾಡಿ, ಡಾ.ಸುಧಾಕರ ನಂಬಿಯಾರ್, ಬಾಲಕೃಷ್ಣ ಶೆಟ್ಟಿ, ದಿನಕರ ಶೆಟ್ಟಿ ಉಪಸ್ಥಿತರಿದ್ದರು. ಸತೀಶ್ ಪೂಜಾರಿ ವಕ್ವಾಡಿ ವಂದಿಸಿದರು.
Exit mobile version