SportsKannada | ಸ್ಪೋರ್ಟ್ಸ್ ಕನ್ನಡ

ಕನ್ನಡ ಸೇವಾರತ್ನ ಪ್ರಶಸ್ತಿಗೆ ಉಡುಪಿಯ ಖ್ಯಾತ ವೀಕ್ಷಕ ವಿವರಣೆಗಾರ ಪ್ರಶಾಂತ್ ಅಂಬಲಪಾಡಿ ಆಯ್ಕೆ

ಬೆಂಗಳೂರು-ಕನ್ನಡ ಸಾಂಸ್ಕೃತಿಕ ಕ್ರಿಯಾ ಸಮಿತಿ(ರಿ)ಶ್ರೀ ರಾಮಪುರ ಬೆಂಗಳೂರು ಹಾಗೂ ಕಸ್ತೂರಿ ಪ್ರಭ ಸಹಯೋಗದೊಂದಿಗೆ,ಪತ್ರಿಕೆಯ ೯ ನೇ ವಾರ್ಷಿಕೋತ್ಸವ,
ಕರ್ನಾಟಕ ನಾಮಕರಣ ಸುವರ್ಣ-೫೦ ರ ಮಹೋತ್ಸವ,ಸ್ಮರಣ ಸಂಚಿಕೆ ಬಿಡುಗಡೆ ಸಮಾರಂಭದಲ್ಲಿ ಕೊಡ ಮಾಡುವ “ಕನ್ನಡ ಸೇವಾರತ್ನ ಪ್ರಶಸ್ತಿ” ಗೆ ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದ ಖ್ಯಾತ ವೀಕ್ಷಕ ವಿವರಣೆಕಾರ,ರಂಗಭೂಮಿ ಕಲಾವಿದ ಪ್ರಶಾಂತ್ ಕೆ.ಎಸ್ ಅಂಬಲಪಾಡಿ ಆಯ್ಕೆಯಾಗಿದ್ದಾರೆ.
ಜನವರಿ 28 ಭಾನುವಾರ ಬೆಳಿಗ್ಗೆ ಬೆಂಗಳೂರು ಶೇಷಾದ್ರಿಪುರಂ ಕಾಲೇಜಿನ ದತ್ತಿ ಸಭಾಂಗಣದಲ್ಲಿ ನಡೆಯಲಿರುವ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳ ಸಾಧಕರೊಂದಿಗೆ ಪ್ರಶಾಂತ್ ಕೆ.ಎಸ್ ಅಂಬಲಪಾಡಿ ಯವರಿಗೆ “ಕನ್ನಡ ಸೇವಾ ರತ್ನ”ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ.ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಕರ್ನಾಟಕ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಶ್ರೀ ದಿನೇಶ್ ಗುಂಡೂರಾವ್ ಹಾಗೂ ಗಣ್ಯಾತಿಗಣ್ಯರು ಭಾಗವಹಿಸಲಿದ್ದಾರೆ.
ಪ್ರಶಾಂತ್ ಅಂಬಲಪಾಡಿಯವರ ಸಾಧನೆಯ ಕಿರು ನೋಟ
ಪೊಡವಿಗೊಡೆಯ ಶ್ರೀ ಕೃಷ್ಣ ನ ನಾಡಾದ ಉಡುಪಿ ಜಿಲ್ಲೆಯ ಅಂಬಲಪಾಡಿಯಲ್ಲಿ ಜನಿಸಿರುವ ಇವರು ಬ್ಯಾಂಕ್ ಆಫ್ ಇಂಡಿಯಾ ರಾಷ್ಟ್ರೀಕೃತ ಬ್ಯಾಂಕೊಂದರಲ್ಲಿ ಉದ್ಯೋಗಿಯಾಗಿದ್ದುಕೊಂಡು,
ರಾಷ್ಟ್ರ,ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾಟಗಳ ವೀಕ್ಷಕ ವಿವರಣೆ ಜೊತೆ ನಾಟಕ,ಯಕ್ಷಗಾನ ಹಾಗೂ ನೃತ್ಯ ರಂಗದಲ್ಲಿ ಹಾಗೂ ಸಮಾಜಮುಖಿ ಕಾರ್ಯಗಳಲ್ಲಿ ತನ್ನನ್ನು ತೊಡಗಿಸಿಕೊಂಡವರು.
2000 ನೇ ರಾಜ್ಯದ ಪ್ರತಿಷ್ಟಿತ ತಂಡ “ಪಡುಬಿದ್ರಿ ಫ್ರೆಂಡ್ಸ್” ಸಂಘಟಿಸಿದ್ದ ರಾಜ್ಯಮಟ್ಟದ ಪಂದ್ಯಾಟದಿಂದ ಪ್ರಾರಂಭವಾದ ಇವರ ಪಯಣ ಇಂದು ರಾಜ್ಯದ ಅತ್ಯಂತ ಹೆಚ್ಚು ಜಿಲ್ಲೆಗಳಲ್ಲಿ  ಕ್ರಿಕೆಟ್ ಪ್ರೇಮಿಗಳ ಮನೆ ಮನ ತಲುಪಿದೆ.
ಅಲ್ಲದೇ ನಾಟಕ ಕಲಾವಿದರಾಗಿ,ಸುಮಾರು 100 ಕ್ಕೂ ಹೆಚ್ಚಿನ ನಾಟಕದಲ್ಲಿ ಭಾಗವಹಿಸಿದ್ದು ಜೊತೆಗೆ ಯಕ್ಷಗಾನ ರಂಗದಲ್ಲೂ ನೈಪುಣ್ಯತೆಯನ್ನು ಸಾಧಿಸಿದವರು.ಕಾಲಿಗೆ ಗೆಜ್ಜೆ ಕಟ್ಟಿ ಯಕ್ಷಗಾನದ ತಾಳ ಮೇಳಕ್ಕೆ ತನ್ನ ಪ್ರತಿಭೆಯನ್ನು ಓರೆ ಹಚ್ಚಿರುವ ಶ್ರೀ ಲಕ್ಷ್ಮೀ ಜನಾರ್ಧನ ಯಕ್ಷಗಾನ ಕಲಾಮಂಡಳಿಯಂತಹ ಹವ್ಯಾಸಿ ಸಂಘಗಳ ಜೊತೆಗೆ ಹಲವಾರು ಸಂಘ ಸಂಸ್ಥೆಗಳಲ್ಲಿ ಗೆಜ್ಜೆ ಕಟ್ಟಿದವರು.ಜೊತೆಗೆ ನಾಟ್ಯ ರಂಗದಲ್ಲೂ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ.
ಇವರ ಸಾಧನೆಯನ್ನು ಗುರುತಿಸಿ 2012_13 ನೇ ಸಾಲಿನಲ್ಲಿ ವಿಶ್ವ ಕ್ರೀಡಾಂಗಣ ಮತ್ತು ಸ್ಪೋರ್ಟ್ಸ್ ಫೌಂಡೇಶನ್ ಬೆಂಗಳೂರು ಇವರು ಜಂಟಿಯಾಗಿ ಕೊಡಮಾಡಿದ “ಕ್ರೀಡಾರತ್ನ” ಪ್ರಶಸ್ತಿಯನ್ನು ಬೆಂಗಳೂರಿನ ಟೌನ್ ಹಾಲ್ ನಲ್ಲಿ ಅನಿವಾಸಿ ಕನ್ನಡಿಗ ಅಬುಧಾಬಿಯವಉದ್ಯಮಿ ಡಾ.ಬಿ.ಆರ್.ಶೆಟ್ಟಿಯವರ ಮುಖಾಂತರ ಪಡೆದಿರುವುದು,ಕಳೆದೆ ಮೂರು ವರ್ಷಗಳ ಹಿಂದೆ ರಾಯಚೂರಿನಲ್ಲಿ ಕಲ್ಯಾಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾಗಿದ್ದು ಇವರ ಪ್ರತಿಭೆಗೆ ಹಿಡಿದ ಕನ್ನಡಿಯಂತಿದೆ.
ತಮ್ಮನ್ನು ಹಲವಾರು ಸಂಘ ಸಂಸ್ಥೆಗಳಲ್ಲಿ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿರುವ ಪ್ರಶಾಂತ್ ರವರು ಇತಿಹಾಸ ಸೃಷ್ಟಿಸಿದ್ದ ಧಾರಾವಾಹಿ “ಗುಡ್ಡದ ಭೂತ” ದಲ್ಲಿ ಪ್ರಕಾಶ್ ರೈ  ಅವರ ಜೊತೆಗೆ ಕಿರುಪಾತ್ರದಲ್ಲಿ ನಟಿಸಿರುವುದು ಹಾಗೂ ರಕ್ತದಾನದಂತಹ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿ ಕೊಂಡಿದ್ದಾರೆ.ಇತ್ತೀಚಿನ ದಿನಗಳಲ್ಲಿ ಪ್ರಶಾಂತ್ ರವರು ಕಲಾಚಾವಡಿ ತಂಡದ ಮೂಲಕ “ಮೋಕೆದ ಮದಿಮಾಲ್” ನಾಟಕದಲ್ಲಿ ಪ್ರಮುಖ ರೋಲ್ ನಿರ್ವಹಿಸುತ್ತಿದ್ದು,ಇತ್ತೀಚೆಗಷ್ಟೇ ಒಡಿಯೂರಿನಲ್ಲಿ ನಡೆದ ನಾಟಕೋತ್ಸವದಲ್ಲಿ ಪ್ರಥಮ ಪ್ರಶಸ್ತಿ ಪಡೆದು ಅತ್ಯುತ್ತಮ ನಾಟಕವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ….
Exit mobile version