SportsKannada | ಸ್ಪೋರ್ಟ್ಸ್ ಕನ್ನಡ

ಕಾಮನ್‌ವೆಲ್ತ್ ಗೇಮ್ಸ್ ನಲ್ಲಿ ಕಂಚಿನ ಪದಕ ಗೆದ್ದ ಕನ್ನಡಿಗ ಗುರುರಾಜ್ ಪೂಜಾರಿ: ಕನ್ನಡಿಗನ ಸಾಧನೆಗೆ ಪ್ರಧಾನಿ ಶ್ಲಾಘನೆ

ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಕರ್ನಾಟಕದ ವೇಟ್‌ಲಿಫ್ಟರ್ ಗುರುರಾಜ್ ಪೂಜಾರಿ ಕಂಚಿನ ಪದಕವನ್ನು ಗೆದ್ದು ಸಾಧನೆಮಾಡಿದ್ದಾರೆ. ಈ ಮೂಲಕ ಈ ಬಾರಿಯ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತದ ಪರವಾಗಿ ಪದಕ ಗೆದ್ದ ಎರಡನೇ ಕ್ರೀಡಾಪಟು ಎನಿಸಿದ್ದಾರೆ ಗುರುರಾಜ್. ಕನ್ನಡಿಗನ ಈ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿ ಕೂಡ ಪ್ರಶಂಸೆ ವ್ಯಕ್ತಪಡಿಸಿದ್ದು ಟ್ವೀಟ್ ಮೂಲಕ ಗುರುರಾಜ್ ಪೂಜಾರಿ ಅವರ ಪರಿಶ್ರಮವನ್ನು ಕೊಂಡಾಡಿದ್ದಾರೆ.
ಗುರುರಾಜ್ ಪೂಜಾರಿ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ 2ನೇ ದಿನದಂದು ಒಟ್ಟು 269 ಕೆಜಿ ಭಾರ ಎತ್ತುವ ಮೂಲಕ ಪದಕಕ್ಕೆ ಕೊರಳೊಡ್ಡಿದ್ದಾರೆ.
ಸಂಕೇತ್ ಸರ್ಗರ್ 55 ಕೆಜಿ ವೇಟ್‌ಲಿಫ್ಟಿಂಗ್‌ನಲ್ಲಿ ಬೆಳ್ಳಿ ಪದಕ ಗೆದ್ದ ನಂತರ ಭಾರತ ಎರಡನೇ ಪದಕ ಇದಾಗಿದೆ. ಸರ್ಗಾರ್ ಒಟ್ಟು 248 ಕೆ.ಜಿ ಭಾರ ಎತ್ತುವ ಮೂಲಕ ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ.
ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಗುರುರಾಜ್ ಅವರ ಸತತ ಎರಡನೇ ಪದಕ ಎಂಬುದು ಗಮನಾರ್ಹ ಅಂಶ. 2018ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಗುರುರಾಜ್ 56 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿ ಬೆಳ್ಳಿ ಪದಕ ಗೆದ್ದುಕೊಂಡಿದ್ದರು. ಈ ಬಾರಿಯ 61 ಕೆಜಿ ವಿಭಾಗದಲ್ಲಿ ಗುರುರಾಜ್ ಸ್ಪರ್ಧಿಸಿದ್ದು ಕಂಚಿನ ಪದಕವನ್ನು ಮುಡಿಗೇರಿಸಿಕೊಂಡಿದ್ದಾರೆ.
ಗುರುರಾಜ್‌ಗೆ ಅಬಿನಂದನೆ ಸಲ್ಲಿಸಿದ ಪ್ರಧಾನಿ: ಇನ್ನು ಕನ್ನಡಿಗ ಗುರುರಾಜ್ ಪೂಜಾರಿ ಅವರ ಸಾಧನೆಗೆ ಅಭಿಮಾನಿಗಳು ಸಾಕಷ್ಟು ಪ್ರಮಾಣದಲ್ಲಿ ಅಭಿನಂದನೆ ಸಲ್ಲಿಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಗುರುರಾಜ್ ಸಾಧನೆಗೆ ಶ್ಲಾಘನೆ ವ್ಯಕ್ತಡಿಸಿದ್ದು ಪರಿಶ್ರಮದ ಬಗ್ಗೆ ವಿಶೇಷ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಟ್ವೀಟ್‌ನಲ್ಲಿ ಪ್ರಧಾನಿ ಮೋದಿ “ಪಿ ಗುರುರಾಜ್ ಅವರ ಸಾಧನೆಯಿಂದ ಅಪಾರ ಸಂತಸವಾಗಿದೆ. ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಕಂಚು ಗೆದ್ದ ಸಾಧನೆಗಾಗಿ ಅವರಿಗೆ ಅಭಿನಂದನೆಗಳು. ಅವರ ಕ್ರೀಡಾ ಪಯಣದಲ್ಲಿ ಇನ್ನಷ್ಟು ಮೈಲಿಗಲ್ಲುಗಳನ್ನು ಸಾಧಿಸುವಂತಾಗಲಿ ಎಂದು ಹಾರೈಸುತ್ತೇನೆ” ಎಂದು ಟ್ವೀಟ್ ಮಾಡಿದ್ದಾರೆ.
ಟ್ವೀಟ್ ಮೂಲಕ ಅಭಿನಂದಿಸಿದ ಉಪರಾಷ್ಟ್ರಪತಿ: ಇನ್ನೂ ಭಾರತದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಕೂಡ ಗುರುರಾಜ್ ಪೂಜಾರಿ ಸಾಧನೆಗೆ ವಿಶೇಷ ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ. “ಕಂಚಿನ ಪದಕವನ್ನು ಗೆದ್ದಿರುವುದಕ್ಕೆ ಗುರುರಾಜ್ ಪೂಜಾರಿ ಅವರಿಗೆ ಅಬಿನಂದನೆಗಳು. ನಿಮ್ಮ ಸಾಧನೆಯಿಂದ ಇಡೀ ದೇಶ ಹೆಮ್ಮೆ ಪಡುತ್ತಿದೆ. ಅವರ ಭವಿಷ್ಯಕ್ಕಾಗಿ ನನ್ನ ಹಾರೈಕೆಗಳು” ಎಂದು ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಟ್ವಿಟ್ ಮಾಡಿದ್ದಾರೆ.
ಕನ್ನಡಿಗ ಗುರುರಾಜ್ ಪೂಜಾರಿ ಅವರು ಗೆದ್ದ ಪದಕವನ್ನು ತಮ್ಮ ಪತ್ನಿಗೆ ಅರ್ಪಿಸಿದ್ದಾರೆ.
“ನಾನು ನನ್ನ ಪದಕವನ್ನು ನನ್ನ ಹೆಂಡತಿಗೆ ಅರ್ಪಿಸುತ್ತೇನೆ ಮತ್ತು ನನ್ನ ಎಲ್ಲಾ ಬೆಂಬಲಿಗರಿಗೆ ಧನ್ಯವಾದಗಳು. ಸಂಕೇತ್ ಬೆಳ್ಳಿ ಗೆದ್ದಿದ್ದು ನಾನು ಕಂಚು ಗೆಲ್ಲುವ ಮೂಲಕ ಭಾರತಕ್ಕೆ ಎರಡನೇ ಪದಕ ತಂದುಕೊಟ್ಟಿದ್ದಕ್ಕೆ ನನಗೆ ಖುಷಿಯಾಗಿದೆ. ನಾನು ಇತ್ತೀಚೆಗೆ ಅನಾರೋಗ್ಯಕ್ಕೆ ಒಳಗಾಗಿದ್ದೆ. ಈಗ ಚೇತರಿಸಿಕೊಂಡಿದ್ದೇನೆ ಮತ್ತು ನನ್ನ ಅತ್ಯುತ್ತಮ ಪ್ರಯತ್ನವನ್ನು ಮಾಡಿದ್ದೇನೆ ಎಂದು ಗುರುರಾಜ್ ಪೂಜಾರಿ ಎಎನ್ಐ ತಿಳಿಸಿದ್ದಾರೆ.
ಗೆಲುವಿನ ನಂತರ ತ್ರಿವರ್ಣ ಧ್ವಜವನ್ನು ಹಾರಿಸಿರುವುದನ್ನು ನೋಡಿ ಹೆಮ್ಮೆಪಟ್ಟಿದ್ದೇನೆ. ನಾನು ಅದನ್ನು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ. ಇದು ನನ್ನ ಕನಸು ಎಂದು ಗುರುರಾಜ್ ಹೇಳಿದ್ದಾರೆ.
ಗುರುರಾಜ್ ಅವರು ಪುರುಷರ 61 ಕೆಜಿ ವಿಭಾಗದ ವೇಟ್‌ಲಿಫ್ಟಿಂಗ್‌ನಲ್ಲಿ ಒಟ್ಟು 269 ಕೆಜಿ ಭಾರ ಎತ್ತುವ ಮೂಲಕ ಮೂಲಕ ಮತ್ತೊಮ್ಮೆ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಗುರುರಾಜ್ ಈ ಮೊದಲು 2018ರಲ್ಲಿ ನಡೆದ ಗೋಲ್ಡ್‌ಕೋಸ್ಟ್‌ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕಕ್ಕೆ ಮುತ್ತಿಟ್ಟಿದ್ದನ್ನು ಇಲ್ಲಿ ನೆನಪಿಸ ಬಹುದು.
Exit mobile version