SportsKannada | ಸ್ಪೋರ್ಟ್ಸ್ ಕನ್ನಡ

ಸಾವಿರಾರು ಜನರ ಅನ್ನದಾತ ಗೋವಿಂದ ಬಾಬು ಪೂಜಾರಿ ಬೈಂದೂರು-‘ಭಾರತ ಗೌರವ” ಪ್ರಶಸ್ತಿಗೆ ಆಯ್ಕೆ

ಉಡುಪಿ : ಕೆಲ ದಿನಗಳ ಹಿಂದೆ ತಮ್ಮ ಹುಟ್ಟುಹಬ್ಬದ ಸಂದರ್ಭದಲ್ಲಿ ಮನೆಯನ್ನೇ ಬಡವತಿಗೆ ದಾನ ಮಾಡಿ ಭಾರೀ ಸುದ್ದಿಯಾಗಿದ್ದ ಸಾಮಾಜಿಕ ಕಾರ್ಯಕರ್ತ, ಉದ್ಯಮಿ ಗೋವಿಂದಬಾಬು ಪೂಜಾರಿ ಅವರಿಗೆ ಇದೀಗ ‘ಭಾರತ ಗೌರವ ಪ್ರಶಸ್ತಿ’ ಸಿಕ್ಕಿದೆ.
ಆರು ಸಾವಿರಕ್ಕೂ ಹೆಚ್ಚು ಕುಟುಂಬಗಳಿಗೆ ಉದ್ಯೋಗ ನೀಡಿರುವ ಚೆಫ್ ಟಾಕ್ ಕಂಪನಿಯ ಮಾಲೀಕರಾದ ಗೋವಿಂದ ಬಾಬು ಪೂಜಾರಿ ಅವರು ಕೊರೋನಾ ಸಂಕಟ ಕಾಲದಲ್ಲಿ 8 ಸಾವಿರಕ್ಕೂ ಹೆಚ್ಚು ಬಡ ಕುಟುಂಬಗಳಿಗೆ ಆಹಾರ, ವೈದ್ಯಕೀಯ ಸಾಮಾಗ್ರಿಗಳನ್ನೊಳಗೊಂಡ ಕಿಟ್ ನೀಡಿದ್ದಾರೆ. ಕರಾವಳಿ, ಬೆಂಗಳೂರು, ಮಲೆನಾಡು ಸಹಿತ ವಿವಿಧ ಜಿಲ್ಲೆಗಳಲ್ಲಿ ಅವರು ಈ ಸೇವೆ ಮಾಡಿದ್ದಾರೆ.
ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕೈಗೊಂಡ ಈ ಮಾನವೀಯ ಸೇವೆಯನ್ನು ಗೌರವಿಸಿರುವ ಬೆಂಗಳೂರಿನ ಜನ್ಮಭೂಮಿ ಫೌಂಡೇಶನ್ ಸಂಸ್ಥೆಯು ಉದ್ಯಮಿ ಗೋವಿಂದ ಬಾಬು ಪೂಜಾರಿ ಅವರಿಗೆ ‘ಭಾರತ ಗೌರವ ಪ್ರಶಸ್ತಿ’ ಘೋಷಿಸಿದೆ.
ಈ ತಿಂಗಳ‌ 29ರಂದು, ಭಾನುವಾರ ಸಂಜೆ 5.00ಗಂಟೆಗೆ ಬೆಂಗಳೂರಿನ ಗಾಂಧೀನಗರದ ಸ್ಮಾಂಕ್ ಟಮ್ ಹೋಟೆಲ್‌ನಲ್ಲಿ ಈ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
ಕೊರೋನಾ ವಾರಿಯರ್ಸ್ ಹಾಗೂ ನಾಡಿನ ಸಾಧಕರಿಗಾಗಿ ಏರ್ಪಡಿಸಿರುವ ಅಭಿನಂದನಾ ಸಮಾರಂಭದಲ್ಲಿ ಗೋವಿಂದ ಬಾಬು ಪೂಜಾರಿ ಅವರಿಗೆ ‘ಭಾರತ ಗೌರವ ಪ್ರಶಸ್ತಿ’ ನೀಡಲಾಗುವುದೆಂದು ಜನ್ಮಭೂಮಿ ಫೌಂಡೇಷನ್ ಅಧ್ಯಕ್ಷ ರಘು  ಗಂಗೂರು ತಿಳಿಸಿದ್ದಾರೆ.
Exit mobile version