Site icon SportsKannada ಸ್ಪೋರ್ಟ್ಸ್ ಕನ್ನಡ

ದುಬೈ:ರಾಹುಲ್ ದ್ರಾವಿಡ್ ಕಪ್ ಸೆಮಿಫೈನಲ್ ಹಂತಕ್ಕೆ

ದುಬೈ:ರಾಹುಲ್ ದ್ರಾವಿಡ್ ಕಪ್ ಸೆಮಿಫೈನಲ್ ಹಂತಕ್ಕೆ

ಅರಬ್ ಸಂಯುಕ್ತ ರಾಷ್ಟ್ರದ ದುಬೈನಲ್ಲಿ ರಾಹುಲ್ ದ್ರಾವಿಡರ ಮಹಾನ್ ಅಭಿಮಾನಿ ಉಡುಪಿ ಸೂರಾಲು ಮೂಲದ ವಿಠಲ ರಿಶಾನ ನಾಯಕರು ಆಯೋಜಿಸುತ್ತಿರುವ ಮಿಸ್ಟರ್ ರಾಹುಲ್ ದ್ರಾವಿಡ್ ಕ್ರಿಕೆಟ್ ಪಂದ್ಯಾಕೂಟದ ಕ್ವಾರ್ಟರ್ ಫೈನಲ್ ಪಂದ್ಯಗಳು ತೀವ್ರ ಹಣಾಹಣಿಯೊಂದಿಗೆ ಸಾಗಿ ಇದೀಗ ಸೆಮಿಫೈನಲ್ ಹಂತಕ್ಕೆ ಸಾಗುತ್ತಿದೆ.

ಮೊದಲ ಕ್ವಾರ್ಟರ್ ಫೈನಲ್ ಪಂದ್ಯವು ಟೀಮ್ ಲಿವಿಂಗ್ ಸ್ಟೋನ್ ಹಾಗೂ ಕರಾವಳಿ ಫ್ರೆಂಡ್ಸ್ ಕ್ರಿಕೆಟರ್ಸ್ ನಡುವೆ ಜರಗಿತು.ಮೊದಲು ಬ್ಯಾಟ್ ಮಾಡಿದ ಟೀಮ್ ಲಿವಿಂಗಸ್ಟೋನ್ ತಂಡವು 15 ಓವರಗಳಲ್ಲಿ 197 ರನ್ನುಗಳ ಬೃಹತ್ ಮೊತ್ತವನ್ನು ಪೇರಿಸಿತು.ಲಿವಿಂಗಸ್ಟೋನ್ ತಂಡದ ರಮೇಶ ರಸೀನ್ 48 ಚೆಂಡುಗಳಲ್ಲಿ ಏಳು ಮೇಘಸ್ಪರ್ಶಿ ಸಿಕ್ಸರ್ ಹಾಗೂ 11 ಬೌಂಡರಿಗಳೊಂದಿಗೆ ಮನಮೋಹಕ ಶತಕ ಸಿಡಿಸಿದರು.ಈ ಮೊತ್ತವನ್ನು ಬೆಂಬತ್ತಿದ ಕರಾವಳಿ ಫ್ರೆಂಡ್ಸ್ ಕ್ರಿಕೆಟರ್ಸ್ 15 ಓವರಗಳಲ್ಲಿ ಲಿವಿಂಗಸ್ಟೋನ್ ತಂಡದ ಕರಾರುವಾಕ್ ಎಸೆತಕ್ಕೆ ಮಣಿದು 120ರನ್ನುಗಳಿಗೆ ಇನ್ನಿಂಗ್ಸ ಕೊನೆಗೊಳಿಸಿತು. ಲಿವಿಂಗಸ್ಟೋನ್ ತಂಡವು 77ರನ್ನುಗಳ ಅಂತರದಲ್ಲಿ ವಿಜಯಲಕ್ಷ್ಮಿಯನ್ನು ವರಿಸಿತು.

ಆಕರ್ಷಕ ಶತಕದೊಂದಿಗೆ 109ರನ್ ಸಿಡಿಸಿ ತಂಡದ ವಿಜಯಕ್ಕೆ ಮುನ್ನುಡಿ ಬರೆದ ಲಿವಿಂಗಸ್ಟೋನ್ ತಂಡದ ರಮೇಶ ರಸೀನ್ ಪಂದ್ಯಪುರುಷೋತ್ತಮ ಪ್ರಶಸ್ತಿ ಸ್ವೀಕರಿಸಿದರು.

ಸ್ಪೈಕರ್ಸ್ ಇಲೆವೆನ್ ಹಾಗೂ ಫಾಲ್ಕನ್ಸ್ ಅಜ್ಮಾನ್ ನಡುವೆ ಜರಗಿದ ಎರಡನೇಯ ಕ್ವಾರ್ಟರಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸ್ಪೈಕರ್ಸ್ 15ಓವರಗಳಲ್ಲಿ ಎಲ್ಲಾ ವಿಕೆಟಗಳನ್ನು ಕಳೆದುಕೊಂಡು 256 ರನ್ನುಗಳ ಭರ್ಜರಿ ಮೊತ್ತವನ್ನು ಕಲೆಹಾಕಿತು.ಈ ಬೃಹತ್ ಮೊತ್ತವನ್ನು ಬೆಂಬತ್ತಿದ ಫಾಲ್ಕನ್ಸಅಜ್ಮಾನ ತಂಡವು ದಿಟ್ಟ ಪ್ರತಿಹೋರಾಟವನ್ನು ನೀಡುವ ಯತ್ನದಲ್ಲಿ ಶಕ್ತಿಮೀರಿ ಹೋರಾಟ ನಡೆಸಿತು. ಅಂತಿಮವಾಗಿ ಎದುರಾಳಿ ತಂಡದ ಉತ್ತಮ ದಾಳಿಗೆ ಶರಣಾಗಿ 14.3 ಓವರಗಳಲ್ಲಿ 213 ರನ್ನಿಗೆ ತನ್ನ ಇನ್ನಿಂಗ್ಸ್ ಕೊನೆಗೊಳಿಸಿತು.ಸ್ಪೈಕರ್ಸ್ ತಂಡದ ಸಾಕಿಬ್ ಮನಶದ್ ಕೇವಲ 12 ಚೆಂಡುಗಳಲ್ಲಿ 7 ಆಕಾಶಕಾಯ ಸಿಕ್ಸರ್ ಮತ್ತು 1 ಬೌಂಡರಿಯೊಂದಿಗೆ ಮಿಂಚಿನವೇಗದಲ್ಲಿ 51ರನ್ ಸಿಡಿಸುವ ಮೂಲಕ ದುಬೈನ ಟೆನಿಸಬಾಲ್ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ವೇಗದ ಶತಕಾರ್ಧದ ನೂತನ ದಾಖಲೆ ನಿರ್ಮಿಸಿದರು.ಜೊತೆಗೆ ಮೂರು ಅಮೂಲ್ಯ ವಿಕೆಟುಗಳನ್ನು ಪಡೆಯುವ ಮೂಲಕ ಸಹಜವಾಗಿಯೇ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಸಾಕಿಬ್ ಮನಸದ್ ಪಡೆದರು.

ಮೂರನೇ ಪಂದ್ಯವು ಬ್ಲೂಸ್ಕೈ ಇಲೆವೆನ್ ಹಾಗೂ ಸಿಯಾಲಕೋಟ್ ತಂಡದ ನಡುವೆ ನಡೆಯಿತು.ಮೊದಲು ಬ್ಯಾಟ್ ಮಾಡಿದ ಸಿಯಾಲಕೋಟ್ ತಂಡವು 15 ಓವರಗಳಲ್ಲಿ 156 ರನ್ನುಗಳಿಗೆ ತನ್ನೆಲ್ಲಾ ವಿಕೆಟನ್ನು ಕಳೆದುಕೊಂಡಿತು.ಈ ಗುರಿಯನ್ನು ಹಿಂಬಾಲಿಸಿದ ಬ್ಲೂಸ್ಕೈಇಲೆವೆನ್ ತಂಡವು ಬಹಳ ಎಚ್ಚರಿಕೆಯ ಆಟವಾಡುತ್ತಾ ಸಾಗಿ ಅಂತಿಮವಾಗಿ 6 ವಿಕೆಟನ್ನು ಕಳೆದುಕೊಂಡು 14.3 ಓವರ್ ಗಳಲ್ಲಿ 156 ರನ್ನುಗಳ ಗಳಿಸಿ ವಿಜಯಪತಾಕೆ ಹಾರಿಸಿತು. ಕುತೂಹಲಭರಿತವಾಗಿ ಸಾಗಿದ ಈ ಪಂದ್ಯವು ಅಂತಿಮಕ್ಷಣದವರೆಗೂ ಪ್ರೇಕ್ಷಕರನ್ನು ತುದಿಗಾಲಿನಲ್ಲಿರಿಸಿತ್ತು.ಬ್ಲೂ ಸ್ಕೈ ತಂಡದ ರಾಹುಲ್ ಎದುರಾಳಿ ತಂಡದ ಪ್ರಮುಖ 3ವಿಕೆಟುಗಳನ್ನು ಕೀಳುವ ಮೂಲಕ ಪಂದ್ಯದವ್ಯಕ್ತಿಯಾಗಿ ಆಯ್ಕೆಯಾದರು.

ಕ್ವಾರ್ಟರ್ ಫೈನಲನ ಕೊನೆಯ ಪಂದ್ಯವು ಫ್ರೆಂಡ್ಸ್ ಕ್ಲಬ್ ದುಬೈ ಹಾಗೂ ಟೆಕ್ನೋ ಟೈಟಾನ್ಸ್ ತಂಡದ ನಡುವೆ ಜರಗಿತು. ಮೊದಲು ಬ್ಯಾಟ್ ಮಾಡಿದ ಫ್ರೆಂಡ್ಸ್ ಕ್ಲಬ್ ದುಬೈತಂಡವು ಟೆಕ್ನೋಟೈಟಾನ್ಸ್ ದಾಳಿಗೆ ತತ್ತರಿಸಿ 13.1ಓವರಗಳಲ್ಲಿ 137 ರನ್ನಿಗೆ ಇನ್ನಿಂಗ್ಸ್ ಕೊನೆಗೊಳಿಸಿತು.ದುಬೈನಲ್ಲಿ ಬಲಿಷ್ಟತಂಡವೆಂದು ಪ್ರಸಿದ್ಧಿ ಪಡೆದಿರುವ ಟೆಕ್ನೋಟೈಟಾನ್ಸ್ ತಂಡವು 137 ರನ್ನುಗಳ ಸುಲಭಗುರಿಯನ್ನು ಬೆನ್ನಟ್ಟುವಲ್ಲಿ ಇನ್ನಿಂಗ್ಸ್ ಆರಂಭಿಸಿ 9.3 ಓವರಗಳಲ್ಲಿ ಕೀಫಾಯತ್ ಅಫ್ರಿದಿಯವರ ಮಾರಕ ದಾಳಿಗೆ ತತ್ತರಿಸಿ ಅಚ್ಚರಿಯೆನ್ನುವಂತೆ ಕೇವಲ 60 ರನ್ನಿಗೆ ಇನ್ನಿಂಗ್ಸ್ ಕೊನೆಗೊಳಿಸಿತು.ಫ್ರೆಂಡ್ಸ್ ಕ್ಲಬ್ ದುಬೈತಂಡದ ಕಿಫಾಯತ್ ಅಫ್ರಿದಿ ಅರ್ಹವಾಗಿಯೇ ಪಂದ್ಯಶ್ರೇಷ್ಠ ಪ್ರಶಸ್ತಿ ಗಳಿಸಿದರು.ಟೆಕ್ನೋಟೈಟಾನ್ಸ್ ತಂಡದ ಸೋಲು ಮಿಸ್ಟರ್ ರಾಹುಲ್ ದ್ರಾವಿಡ್ ಕಪ್ ನ ಬಹುದೊಡ್ಡ ಅನಿರೀಕ್ಷಿತ ಫಲಿತಾಂಶ ಎಂದು ದುಬೈ ಕ್ರಿಕೆಟ್ ಪ್ರಿಯರ ಅಭಿಮತ.

ಉತ್ಕೃಷ್ಟ ಗುಣಮಟ್ಟದ ಕ್ರಿಕೆಟ್ ಪ್ರದರ್ಶನ ಹಾಗೂ ತೀವ್ರ ಸೆಣಸಾಟದೊಂದಿಗೆ ಸಾಗುತ್ತಿರುವ ವಿಠಲ್ ರಿಶಾನ್ ನಾಯಕ್ ಸಾರಥ್ಯದ ಮಿಸ್ಟರ್ ರಾಹುಲ್ ದ್ರಾವಿಡ್ ಕ್ರಿಕೆಟ್ ಪಂದ್ಯಾವಳಿಯು ಹೀಗಿಲ್ಲವೆನ್ನುವಂತೆ ಕ್ರಿಕೆಟ್ ಅಭಿಮಾನಿಗಳನ್ನು ಆಕರ್ಷಿಸುತ್ತಿದೆ.

ಸೆಮಿಫೈನಲ್ ಹಾಗೂ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದ್ದು ಈ ಪಂದ್ಯಾವಳಿಯ ಫಲಿತಾಂಶವು ಅರಬ್ ಸಂಯುಕ್ತರಾಷ್ಟ್ರ ಸೇರಿದಂತೆ ನಾಡಿನೆಲ್ಲೆಡೆ ತುಂಬಿರುವ ಕ್ರಿಕೆಟ್ ಪ್ರಿಯರ ಕುತೂಹಲಕ್ಕೆ ಕಾರಣವಾಗಿದೆ.

 

ಬರೆಹ:ಪಿ.ಲಾತವ್ಯ ಆಚಾರ್ಯ ಉಡುಪಿ.

Exit mobile version