
ವಾಸವಿ ಸಿರಿ-2025 ಪ್ರಶಸ್ತಿಗೆ ಕ್ರಿಕೆಟಿಗ ಭಾಸ್ಕರ್ ಶೆಟ್ಟಿ ಆಯ್ಕೆ
ಬೆಂಗಳೂರು ಆರ್ಯವೈಶ್ಯ ಮಂಡಳಿಗಳ ಒಕ್ಕೂಟ(ರಿ)ಇವರು ವಿವಿಧ ಕ್ಷೇತ್ರಗಳ ಸಾಧಕರಿಗೆ ಕೊಡಮಾಡುವ ವಾಸವಿ ಸಿರಿ ಪ್ರಶಸ್ತಿ-2025 ಗೆ ಕ್ರೀಡಾಕ್ಷೇತ್ರದ ಸಾಧನೆಗಾಗಿ ಕ್ರಿಕೆಟಿಗ ಭಾಸ್ಕರ್ ಶೆಟ್ಟಿ ಆಯ್ಕೆಯಾಗಿದ್ದಾರೆ.
ಭಾಸ್ಕರ್ ಶೆಟ್ಟಿ ಸಾಧನೆ
ಭಾಸ್ಕರ್ ಶೆಟ್ಟಿ ಇವರು ಶ್ರೀ.ಅಶ್ವತ್ಥ್ ನಾರಾಯಣ್ ಗುಪ್ತಾ ಮತ್ತು ಶ್ರೀಮತಿ ಗೋಕುಲ ವಿಜಯಲಕ್ಷ್ಮಿ ದಂಪತಿಗಳ ಸುಪುತ್ರನಾಗಿ 5 ಜನವರಿ 1979 ರಂದು ಜನಿಸಿದರು.ತನ್ನ ಶಾಲಾ ಕಾಲೇಜು ದಿನಗಳಲ್ಲಿ ಕ್ರಿಕೆಟ್ ಬಗ್ಗೆ ಬಹಳಷ್ಟು ಆಸಕ್ತಿ ತಳೆದ
ಭಾಸ್ಕರ್ ಶೆಟ್ಟಿ ಮೂಲತಃ ಬೆಂಗಳೂರಿನ ಮೌಂಟ್ಸ್ ತಂಡದ ಮೂಲಕ ಟೆನಿಸ್ಬಾಲ್ ಕ್ರಿಕೆಟ್ ಪ್ರವೇಶ ಕಂಡವರು.ತದನಂತರದ ದಿನಗಳಲ್ಲಿ ಮುಂಬಯಿಯ ಪ್ರಸಿದ್ಧ ಕ್ರೀಡಾಪೋಷಕರಾದ ಪಿ.ವಿ.ಶೆಟ್ಟಿ ಹಾಗೂ ಉದ್ಯಮಿ ವಿಜಯ್ ಹೆಗ್ಡೆಯವರ ಸಂಯೋಜನೆಯ ಸಾಯಿ ಸವ್ಯಸಾಚಿ ತಂಡದಲ್ಲಿ ದಶಕಗಳ ಕಾಲ ಸೇವೆ ಸಲ್ಲಿಸಿದ್ದರು.
ಭಾರತ ಅಂತರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಿದ್ದ ವಿಜಯ್ ಭಾರದ್ವಾಜ್ ಹಾಗೂ ರಣಜಿ ಆಟಗಾರರಾದ ಸೀತಾರಾಮ್,ಶ್ರೀನಿವಾಸಮೂರ್ತಿ,ಚಂದ್ರ,ಡೆಲ್ಲಿ ಬಾಬು,ಕೆ.ಎನ್.ರಮೇಶ್ ಇವರೊಂದಿಗೆ ಆಡಿದ ಅನುಭವವನ್ನು ಹೊಂದಿದ್ದರು
2003 ರಲ್ಲಿ ಎಂ.ಎಸ್.ರಾಮಯ್ಯ ಕಪ್ ಗಾಗಿ ನಡೆದ ಪ್ರಥಮ ರಾಜ್ಯ ಮಟ್ಟದ ಪಂದ್ಯದಲ್ಲಿ ಶಾರ್ಪ್ ಇಲೆವೆನ್ ತಂಡದ ವಿರುದ್ಧ ಭಾಸ್ಕರ್ ಶೆಟ್ಟಿ ಕೇವಲ 41 ಚೆಂಡುಗಳಲ್ಲಿ 13 ಬರಸಿಡಿಲಿನ ಸಿಕ್ಸರ್ ಹಾಗೂ 3 ಆಕರ್ಷಕ ಬೌಂಡರಿಗಳ ಸಹಿತ ವೇಗದ ಶತಕ 103 ರನ್ ಗಳಿಸಿ ದಾಖಲೆ ಬರೆದಿದ್ದರು.ರೋಚಕ ಸಂಗತಿಯೆಂದರೆ ಈ ಪಂದ್ಯದ ಮರುದಿನವೇ ಮಧ್ಯ ಪ್ರದೇಶದಲ್ಲಿ ನಡೆಯಲಿದ್ದ ಇಂಡೋರ್ ಪಂದ್ಯಕ್ಕಾಗಿ ಕರ್ನಾಟಕ ತಂಡಕ್ಕೆ ಆಹ್ವಾನ ಪಡೆದಿದ್ದರು.
90 ರ ದಶಕದ ಪ್ರತಿಷ್ಟಿತ ರಾಜ್ಯಮಟ್ಟದ ಪಂದ್ಯಗಳಾಗಿದ್ದ ರಂಗ ಕಪ್,ಸಾಗರ ಮಾರಿಕಾಂಬಾ ಟ್ರೋಫಿ, ಹಾರೋಹಳ್ಳಿ ಟ್ರೋಫಿ, ಪಾರಂಪಳ್ಳಿ,ಚಕ್ರವರ್ತಿ,ಸೌತ್ ಸ್ಟಾರ್ ಅಂಬಲಪಾಡಿ,ಕೋಲಾರ ಅಟ್ಯಾಕರ್ಸ್ ಟ್ರೋಫಿ ಹೀಗೆ 100 ಕ್ಕೂ ಹೆಚ್ಚಿನ ಪ್ರಶಸ್ತಿಗಳನ್ನು ಸಾಯಿ ಸವ್ಯಸಾಚಿ ಜಯಿಸುವಲ್ಲಿ ಭಾಸ್ಕರ್ ಶೆಟ್ಟಿ ಪ್ರಮುಖ ಪಾತ್ರ ನಿರ್ವಹಿಸಿದ್ದರು.ಇದಲ್ಲದೇ ಕರಾವಳಿ ಪರಿಸರದಲ್ಲಿ ನಡೆಯುವ ರಾಜ್ಯ ಮಟ್ಟದ ಪಂದ್ಯಗಳಿಗಾಗಿ ಟೊರ್ಪೆಡೋಸ್ ಹಾಗೂ ಚಕ್ರವರ್ತಿ ಕುಂದಾಪುರ ತಂಡಗಳ ಪರವಾಗಿ ಹಲವಾರು ಪಂದ್ಯಗಳಲ್ಲಿ ಶ್ರೇಷ್ಠ ಪ್ರದರ್ಶನ ನೀಡಿದ್ದರು.
ಭಾಸ್ಕರ್ ಶೆಟ್ಟಿ ಇದುವರೆಗೂ ರಾಜ್ಯ ಮಟ್ಟದ ಟೆನಿಸ್ಬಾಲ್ ಕ್ರಿಕೆಟ್ ಪಂದ್ಯಾಟದಲ್ಲಿ 2 ಶತಕ ಹಾಗೂ ಜಿಲ್ಲಾ ಮಟ್ಟದ ಪಂದ್ಯಾಟದಲ್ಲಿ 1 ಶತಕ ಬಾರಿಸಿದ ದಾಖಲೆ ಹೊಂದಿದ್ದಾರೆ ಇದಲ್ಲದೇ
2023 ರಲ್ಲಿ ಇಂಡೋರ್ ಇಂಟರ್ನ್ಯಾಷನಲ್ ಕ್ರಿಕೆಟ್ ನ್ಯೂಜಿಲೆಂಡ್-ಏಷ್ಯಾ ಕಪ್ ಪಂದ್ಯಾಟದಲ್ಲಿ ಭಾರತ ಮಾಸ್ಟರ್ಸ್ ತಂಡವನ್ನು ಪ್ರತಿನಿಧಿಸಿದ್ದರು.ಸುಮಾರು 10-11 ವರ್ಷಗಳಿಂದ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ನಡೆದ ವಾಸವಿ ಪ್ರೀಮಿಯರ್ ಲೀಗ್ ಪಂದ್ಯಾಟದಲ್ಲಿ ಭಾಸ್ಕರ್ ಶೆಟ್ಟಿ ಇವರ ನಾಯಕತ್ವದ ಮಾರುತಿ ಕ್ರಿಕೆಟರ್ಸ್ 7 ಬಾರಿ ಫೈನಲ್ ಪ್ರವೇಶಿಸಿದ್ದು,5 ಬಾರಿ ಚಾಂಪಿಯನ್ಸ್ ತಂಡವಾಗಿ ಹೊರಹೊಮ್ಮಿತ್ತು.
ಇತ್ತೀಚಿನ ದಿನಗಳಲ್ಲಿ 40+ಹಾಗೂ 45 ವಯೋಮಿತಿಯ ಪಂದ್ಯಗಳಲ್ಲಿ
ಶ್ರೀ ಬೆಂಗಳೂರು,ಗುರುಬ್ರಹ್ಮ,ನವೀನ್ ಫೈಟರ್ಸ್,ಸೃಷ್ಟಿ ಬೆಂಗಳೂರು ತಂಡಗಳ ಪರವಾಗಿ ಭಾಸ್ಕರ್ ಶೆಟ್ಟಿ ಆಡುತ್ತಿದ್ದಾರೆ.ಇತ್ತೀಚೆಗಷ್ಟೇ ಭಾಸ್ಕರ್ ಶೆಟ್ಟಿ ನಾಯಕತ್ವದ ಪಿ.ಎನ್.ಕೆ ಕ್ರಿಕೆಟರ್ಸ್ ತಂಡ ಬೆಂಗಳೂರು ಜೆ.ಪಿ.ಪಾರ್ಕ್ ಮೈದಾನದಲ್ಲಿ ನಡೆದ ರಾಜ್ಯ ಮಟ್ಟದ ಲೆಜೆಂಡ್ಸ್ ಕಪ್ ಪಂದ್ಯಾಟ ಪುನೀತ್ ರಾಜ್ ಕುಮಾರ್ ಕಪ್ ಚಾಂಪಿಯನ್ಸ್ ತಂಡವಾಗಿ ಹೊರಹೊಮ್ಮಿತ್ತು.
ಇಂದು ಶುಕ್ರವಾರ ಬೆಂಗಳೂರು ಆರ್ಯವೈಶ್ಯ ಮಂಡಳಿಗಳ ಒಕ್ಕೂಟ(ರಿ) ಇವರು ಜಯನಗರ 4ನೇ ಬ್ಲಾಕ್ ನ ಯುವಕ ಸಂಘ ಸಭಾಂಗಣದಲ್ಲಿ ಆಯೋಜಿಸಿದ 17ನೇ ವರ್ಷದ ವಾಸವಿ ಸಿರಿ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಭಾಸ್ಕರ್ ಶೆಟ್ಟಿ ಇವರಿಗೆ ಪ್ರಶಸ್ತಿ ಪ್ರಧಾನ ಮಾಡಲಾಗುತ್ತಿದೆ.
