SportsKannada | ಸ್ಪೋರ್ಟ್ಸ್ ಕನ್ನಡ

ಪ್ರೊ ಕಬಡ್ಡಿ ಲೀಗ್‌ ಪಂದ್ಯದಲ್ಲಿ 43–42 ರಲ್ಲಿ ರೋಚಕ ಜಯಪಡೆದ ಬೆಂಗಳೂರು ಬುಲ್ಸ್‌

ಪವನ್‌ ಕುಮಾರ್ ಶೆರಾವತ್‌ ಅವರ ಅಬ್ಬರದ ರೈಡಿಂಗ್ ಮೂಲಕ ಮತ್ತೊಮ್ಮೆ ಬೆಂಗಳೂರು ಬುಲ್ಸ್‌ ನೆರವಿಗೆ ಬಂದರು. ಅವರು ಒಂದೇ ಪಂದ್ಯದಲ್ಲಿ 29 ಪಾಯಿಂಟ್ಸ್‌ ಕಲೆಹಾಕಿದರು! ಶನಿವಾರ ನಡೆದ ಪ್ರೊ ಕಬಡ್ಡಿ ಲೀಗ್‌ ಪಂದ್ಯದಲ್ಲಿ ಬೆಂಗಾಲ್‌ ವಾರಿಯರ್ಸ್‌ ತಂಡದ ವಿರುದ್ಧ ಕೊನೆಯ ನಾಲ್ಕು ನಿಮಿಷಗಳವರೆಗೆ ಹಿನ್ನಡೆಯಲ್ಲಿದ್ದ ಬೆಂಗಳೂರು ಬುಲ್ಸ್‌ ತಂಡ ಅಂತಿಮವಾಗಿ 43–42 ರಲ್ಲಿ ರೋಚಕ ಜಯಪಡೆಯಿತು.

ಪಾಟಲೀಪುತ್ರ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ವಾರಿಯರ್ಸ್‌ ತಂಡ ಬಹುಪಾಲು ಅವಧಿಯಲ್ಲಿ ಮುನ್ನಡೆ ಪಡೆದಿತ್ತು. ಐದು ನಿಮಿಷಗಳಿದ್ದಾಗ ವಾರಿಯರ್ಸ್‌ ತಂಡ 40–34ರಲ್ಲಿ ಮುನ್ನಡೆಯಲ್ಲಿತ್ತು. ಆದರೆ ನಾಲ್ಕು ನಿಮಿಷಗಳಿದ್ದಾಗ ಎದುರಾಳಿ ತಂಡವನ್ನು ಆಲೌಟ್‌ ಮಾಡಿದ ಬುಲ್ಸ್‌ ತಂಡ ಹಿನ್ನಡೆಯನ್ನು 38–40ಕ್ಕೆ ಇಳಿಸಿತು. ನಂತರ ಏಕಾಂಗಿಯಾಗಿ ಯಶಸ್ವಿ ರೈಡ್‌ಗಳ ಮೂಲಕ ಪವನ್‌ ತಂಡವನ್ನು ಗೆಲುವಿನತ್ತ ಒಯ್ದರು.

ಪವನ್‌ ಮೂರು ಬೋನಸ್‌ ಸೇರಿ 29 ಪಾಯಿಂಟ್ಸ್‌ ಸಂಗ್ರಹಿಸಿದರು. ತಂಡ ಒಟ್ಟಾರೆ ರೈಡಿಂಗ್‌ನಲ್ಲಿ ಗಳಿಸಿದ್ದ 27 ರೈಡಿಂಗ್‌ ಪಾಯಿಂಟ್‌ಗಳಲ್ಲಿ 26 ಈ ಆಟಗಾರನಿಂದಲೇ ಬಂದಿದ್ದು ವಿಶೇಷ. ರಕ್ಷಣೆಯ ವಿಭಾಗದಲ್ಲಿ ಸೌರಬ್‌ ನಂದಲ್‌ ಆರು ಪಾಯಿಂಟ್ಸ್‌ ಗಳಿಸಿದರು.

ಇದು ಬುಲ್ಸ್ ತಂಡಕ್ಕೆ ನಾಲ್ಕು ಪಂದ್ಯಗಳಲ್ಲಿ ಮೂರನೇ ಗೆಲುವು. ಬುಲ್ಸ್ ಐದನೇ ಸ್ಥಾನದಲ್ಲಿದ್ದರೆ, ವಾರಿಯರ್ಸ್‌ ತಂಡ ಆರನೇ ಸ್ಥಾನದಲ್ಲಿದೆ.

ಶನಿವಾರ ಆರಂಭವಾದ ಪಟ್ನಾ ಲೆಗ್‌ನ ಮೊದಲ ಪಂದ್ಯದಲ್ಲಿ ಪಿಂಕ್‌ ಪ್ಯಾಂಥರ್ಸ್‌ ತಂಡ 34–21 ರಿಂದ (ವಿರಾಮ: 15–9) ಆತಿಥೇಯ ಪಟ್ನಾ ಪೈರೇಟ್ಸ್‌ ತಂಡವನ್ನು ಮಣಿಸಿತು. ದೀಪಕ್‌ ನರ್ವಾಲ್‌ 9 ಪಾಯಿಂಟ್ಸ್‌ ಗಳಿಸಿದರೆ, ಉತ್ತಮ ಫಾರ್ಮ್‌ನಲ್ಲಿರುವ ಸಂದೀಪ್‌ ಧುಲ್‌ ಟ್ಯಾಕ್ಲಿಂಗ್‌ನಲ್ಲಿ ಮಿಂಚಿ ಎಂಟು ಪಾಯಿಂಟ್ಸ್ ಗಳಿಸಿದರು.

ಪಿಂಕ್‌ ಪ್ಯಾಂಥರ್ಸ್‌ ತಂಡ ಆಡಿದ ನಾಲ್ಕೂ ಪಂದ್ಯಗಳನ್ನು ಗೆದ್ದು 20 ಪಾಯಿಂಟ್‌ಗಳೊಡನೆ ಪಾಯಿಂಟ್ಸ್‌ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು.

Exit mobile version