SportsKannada | ಸ್ಪೋರ್ಟ್ಸ್ ಕನ್ನಡ

ಕೋಲಾರದಲ್ಲಿ ಅದ್ಧೂರಿಯ “E ZONE PREMIER LEAGUE-2019”

ಕೋಲಾರ ತನ್ನ ಗರ್ಭದಲ್ಲಿ ಚಿನ್ನವಷ್ಟೇ ಅಲ್ಲದೆ ಚಿನ್ನದಂತ ಬೆಲೆ ಬಾಳುವ ಕ್ರೀಡಾ ಪ್ರತಿಭೆಗಳನ್ನು ಹೊತ್ತು ಅತ್ಯಂತ ಶ್ರೀಮಂತವೆನಿಸಿದ ನಾಡು. ಈ ಚಿನ್ನದ ಮಣ್ಣಿನಲ್ಲಿ ಕ್ರೀಡೆಯ ಕೃಷಿ ನಡೆಸಿ ಯಶಸ್ಸು ಕಂಡ ಅಪ್ರತಿಮ ಸಂಘಟಕ,ಕ್ರೀಡಾ ಪೋಷಕ,ಕೋಲಾರದ ಕಣ್ಮಣಿ ಮಂಜುನಾಥ್ ರೆಡ್ಡಿ ಬಿ.ಆರ್ ಕೋಲಾರ.

ಟೆನ್ನಿಸ್ ಕ್ರಿಕೆಟ್ ಇತಿಹಾಸದ 90 ರ ದಶಕದ ಅಧ್ಯಾಯದ ಪುಟಗಳಲ್ಲಿ ಕೋಲಾರ ಅ್ಯಟಾಕರ್ಸ್ ತಂಡದ ದಾಖಲೆಗಳು ಚಿರಸ್ಥಾಯಿ.ಹಲವಾರು ಜಿಲ್ಲಾ,ರಾಜ್ಯ ಮಟ್ಟದ ಪ್ರತಿಷ್ಟಿತ ಪ್ರಶಸ್ತಿಗಳನ್ನು ಜಯಿಸಿದ್ದಲ್ಲದೆ, ಕೋಲಾರದಲ್ಲಿ ರಾಜ್ಯ,ರಾಷ್ಟ್ರ ಮಟ್ಟದ ಪಂದ್ಯಾಕೂಟಗಳನ್ನು ಸಂಘಟಿಸಿರುತ್ತದೆ. ಅಂದಿನ ದಿನಗಳಲ್ಲಿ ಈ ತಂಡವನ್ನು ದಶಕಗಳ‌ ಕಾಲ ಯಶಸ್ವಿಯಾಗಿ ಮುನ್ನಡೆಸಿದ ಕೀರ್ತಿ ಮಂಜುನಾಥ್ ರೆಡ್ಡಿ ಬಿ‌.ಆರ್ (ವಡು)ಯವರಿಗೆ‌ ಸಲ್ಲುತ್ತದೆ.

ನಂತರದ ದಿನಗಳಲ್ಲಿ ಪ್ರಸ್ತುತ ರಾಜ್ಯದ ಪ್ರಸಿದ್ಧ “ಈ ಝೋನ್ ಸ್ಪೋರ್ಟ್ಸ್ ಕ್ಲಬ್” ಸಂಸ್ಥೆಯನ್ನು ಸ್ಥಾಪಿಸಿ ಲೆದರ್ ಬಾಲ್ ನತ್ತ ಗಮನ ಹರಿಸಿದ ರೆಡ್ಡಿಯವರು ಕಳೆದ 10 ವರ್ಷಗಳಿಂದ ಯುವ ಪ್ರತಿಭೆಗಳಿಗೆ ಉಚಿತ ಬೇಸಿಗೆ ಶಿಬಿರಗಳನ್ನು ಏರ್ಪಡಿಸಿ ತರಬೇತಿ ನೀಡುತ್ತಾ,ಜಿಲ್ಲಾ ಮಟ್ಟದಿಂದ ರಾಜ್ಯಮಟ್ಟಕ್ಕೆ ಆಯ್ಕೆಯಾಗುವ ವಿವಿಧ ಕ್ರೀಡಾ ಸಾಧಕರಿಗೆ,ಯುವ ಪ್ರತಿಭಾನ್ವಿತ ಕ್ರೀಡಾಳುಗಳಿಗೆ ಆಯಾಯ ಕ್ರೀಡಾ ಕಿಟ್ ಗಳನ್ನು ನೀಡಿ ಪ್ರೋತ್ಸಾಹಿಸುತ್ತಿದ್ದು, ಕಳೆದ ಬಾರಿ ದಾಖಲೆಯ “E.P.L-2019 ಸೀಜನ್ 1” ಪಂದ್ಯಾಕೂಟ ನಡೆಸಿ ಯಶಸ್ಸು ಕಂಡಿದ್ದರು.

ಪ್ರ‌ಥಮ‌ ಆವೃತ್ತಿಯ ಪಂದ್ಯಾಕೂಟದಲ್ಲಿ ವಿಜೇತ ತಂಡ ಗರಿಷ್ಠ ನಗದು ಬಹುಮಾನದ ಜೊತೆಗೆ,ವಿಜೇತ ತಂಡದ 11ಮಂದಿ‌ ಆಟಗಾರರು FZ ಬೈಕ್ ಉಡುಗೊರೆ ಯಾಗಿ ಪಡೆದಿದ್ದರೆ,ತಂಡದ ನಾಯಕ R 1 5 ಬೈಕ್ ನ್ನು ಪಡೆದಿದ್ದರು.

ಈ ರೀತಿ ದುಬಾರಿ ಉಡುಗೊರೆಗೆ ರಾಷ್ಟ್ರೀಯ ಮಟ್ಟದಲ್ಲೇ ನಾಂದಿ ಹಾಡಿದ ಪ್ರಪ್ರಥಮ ಸಂಸ್ಥೆ “ಈ ಝೋನ್ ಸ್ಪೋರ್ಟ್ಸ್ ಕ್ಲಬ್”. ಇದೇ ಬರುವ 28 ರಿಂದ ಸತತ 18 ದಿನಗಳ ಕಾಲ ದ್ವಿತೀಯ ಆವೃತ್ತಿಯ “E.P.L-2019 ಸೀಜನ್ 2” ರಾಷ್ಟ್ರೀಯ ಮಟ್ಟದ ಟಿ-20 ಪಂದ್ಯಾಕೂಟ ಕೋಲಾರದ ಪವನ್ ಕಾಲೇಜ್ ಅಂಗಣದಲ್ಲಿ ನಡೆಯಲಿದ್ದು, 15 ಫ್ರಾಂಚೈಸಿ ತಂಡದ ಪ್ರತಿಷ್ಟಿತ ಪ್ರಶಸ್ತಿಗಾಗಿ ಕಾದಾಡಲಿದೆ.

ಚಾಂಪಿಯನ್ ತಂಡ 3,33,333 ರೂ, ರನ್ನರ್ಸ್ ತಂಡ 2,22,222 ರೂ ನಗದು ಸಹಿತ ಆಕರ್ಷಕ ಟ್ರೋಫಿ ,ಜೊತೆಯಾಗಿ ಅಂತಿಮ ಕ್ಷಣದ ಅಚ್ಛರಿಯ ದುಬಾರಿ ಉಡುಗೊರೆಗಳು ಪಂದ್ಯಾಕೂಟದ ಮೆರುಗು ಹೆಚ್ಚಿಸಲಿದೆ.

ರಾಷ್ಟ್ರ ಮಟ್ಟದ ಅನೇಕ ಆಟಗಾರರು ಪಂದ್ಯಾಕೂಟದ ಮುಖ್ಯ ಆಕರ್ಷಣೆಯಾಗಲಿದ್ದು, ಈ ಝೋನ್ ಸ್ಪೋರ್ಟ್ಸ್ ಕ್ಲಬ್ ನ ತರಬೇತುದಾರ ಶಿವು ಹಾಗೂಕಾರ್ತಿಕ್ ರೆಡ್ಡಿ ಜಾಕಿ(ರಾಕರ್ಸ್) ಈ ವೈಭವೋಪೇತ ಪಂದ್ಯಾಕೂಟದ ಉಸ್ತುವಾರಿ ವಹಿಸಲಿದ್ದು, M.Sports ಪಂದ್ಯಾಕೂಟದ ನೇರ ಪ್ರಸಾರ ಬಿತ್ತರಿಸಿದರೆ,ಕೋಲಾರದ ಕ್ರಿಕೆಟ್ ಪ್ರೇಮಿಗಳ ಹೃದಯ ಗೆದ್ದ ಡ್ಯಾನ್ಸಿಂಗ್ ಅಂಪಾಯರ್ ಮದನ್ ಮಡಿಕೇರಿ ತೀರ್ಪುಗಾರರಾಗಿ, ರಾಜ್ಯದ ಶ್ರೇಷ್ಠ ವೀಕ್ಷಕ ವಿವರಣೆಕಾರರು ಪಂದ್ಯಾಕೂಟದ ರಂಗೇರಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆರ್.ಕೆ‌.ಆಚಾರ್ಯ ಕೋಟ

Exit mobile version