SportsKannada | ಸ್ಪೋರ್ಟ್ಸ್ ಕನ್ನಡ

ಐಸಿಸಿ ವಿಶ್ವಕಪ್ ಕ್ರಿಕೆಟ್ ಭಾರತಕ್ಕೆ ವಿರೋಚಿತ ಸೋಲು!

2 ನೇ ಭಾರಿಗೆ ಫೈನಲ್ ಗೆ ಏರಿದ ನ್ಯೂಜಿಲ್ಯಾಂಡ್. ಮ್ಯಾಂಚೆಸ್ಟರ್ ನಲ್ಲಿ ಭಾರತ ಮತ್ತು ನ್ಯೂಜಿಲ್ಯಾಂಡ್ ತಂಡದ ನಡುವೆ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಭಾರತ ವಿರೋಚಿತ ಸೋಲು ಕಂಡಿದೆ.

ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಕಿವೀಸ್,ರಾಸ್ ಟೇಲರ್ ಮತ್ತು ನಾಯಕ ಕೇನ್ ವಿಲಿಯಮ್ಸನ್ ಅವರ ಆಕರ್ಷಕ ಅರ್ಧ ಶತಕಗಳ ನೆರವಿನಿಂದ ನ್ಯೂಜಿಲ್ಯಾಂಡ್ 50 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 239 ರನ್ ಪೇರಿಸಿತು.

ಶಿಸ್ತುಬದ್ಧ ಬೌಲಿಂಗ್ ಸಂಘಟಿಸಿದ ಭಾರತೀಯ ಬೌಲರ್ ಗಳು ನ್ಯೂಜಿಲ್ಯಾಂಡ್ ತಂಡವನ್ನು 250 ರ ಗಡಿ ಧಾಟದಂತೆ ನೋಡಿಕೊಂಡರು.ಭಾರತದ ಪರ ಉತ್ತಮ ದಾಳಿ ಸಂಘಟಿಸಿದ ಭುವನೇಶ್ವರ್ ಕುಮಾರ್ 3 ವಿಕೆಟ್ ಕಬಳಿಸಿದರೆ ಬುಮ್ರಾ,ಚಹಲ್,ಹಾರ್ದಿಕ ಪಾಂಡ್ಯ ಹಾಗೂ ಜಡೇಜಾ ತಲಾ ಒಂದು ವಿಕೆಟ್ ಪಡೆದು ಭುವಿ ಗೆ ಉತ್ತಮ ಸಾಥ್ ಕೊಟ್ಟರು.

240 ರನ್ ಗಳ ಗುರಿ ಬೆನ್ನತಿದ ಭಾರತ ತಂಡ ಆರಂಭಿಕದಲ್ಲೇ ಆಘಾತ ಅನುಭವಿಸಿತು.ಆರಂಭಿಕರಾಗಿ ಕ್ರೀಸ್ ಗೆ ಧಾವಿಸಿದ ರೋಹಿತ್ ಮತ್ತು ರಾಹುಲ್ ಬಂದ ದಾರಿಯಲ್ಲೇ ವಾಪಸಾದರು. ಭರ್ಜರಿ ಫಾರ್ಮ್ ನಲ್ಲಿದ್ದ ರೋಹಿತ್ ಕೇವಲ ಒಂದು ರನ್ ಗಳಿಸಿ ನಿರಾಸೆ ಮೂಡಿಸಿದರು.

ರಾಹುಲ್ ಕೂಡ ಬಂದಷ್ಟೆ ವೇಗವಾಗಿ ಪೆವಿಲಿಯನ್ ಗೆ ಹೋದರು.ನಾಯಕ ವಿರಾಟ್ ಕೊಹ್ಲಿ ಕೂಡ ಕೇವಲ ಒಂದು ರನ್ ಗಳಿಸಿ ಬೌಲ್ಟ್ ಗೆ ವಿಕೆಟ್ ಒಪ್ಪಿಸಿ ನಿರ್ಗಮಿಸಿದರು.ಒಂದು ಹಂತದಲ್ಲಿ 24 ರನ್ ಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ಪಂತ್ ಮತ್ತು ಹಾರ್ದಿಕ್ ಪಾಂಡ್ಯ ಆಸರೆ ಆದರು.ಆದರೆ ಅವರ ಜೊತೆಯಾಟ ಕೂಡ ಬೇಗನೆ ಅಂತ್ಯಗೊಂಡು ಮತ್ತೊಮ್ಮೆ ತಂಡ ಸಂಕಷ್ಟದತ್ತವಾಲಿತು.

ಆದರೆ ನಂತರ ಬಂದ ರವೀಂದ್ರ ಜಡೇಜಾ ಮತ್ತು ಧೋನಿ ಅವರ ಉತ್ತಮ ಜೊತೆಯಾಟದ ನೆರವಿನಿಂದ ಭಾರತ ಗೆಲ್ಲುವ ಸಮೀಪ ಬಂದಿತ್ತು. ಇವರ ಇಬ್ಬರ ಜೊತೆಯಾಟದಲ್ಲಿ ತಂಡಕ್ಕೆ 116 ರನ್ ಹರಿದು ಬಂದಿತ್ತು.ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಜಡೇಜಾ 59 ಎಸೆತದಲ್ಲಿ 77 ರನ್ ಗಳಿಸಿದರು ಇದರಲ್ಲಿ 4 ಸಿಕ್ಸರ್ ಮತ್ತು 4 ಆಕರ್ಷಕ ಬೌಂಡರಿಕೂಡ ಗಳಿಸಿದ್ದರು ಬೌಲ್ಟ್ ಎಸೆತದಲ್ಲಿ ಸಿಕ್ಸರ್ ಬಾರಿಸಲು ಹೋಗಿ ವಿಲಿಯಮ್ಸನ್ ಗೆ ಕ್ಯಾಚಿತ್ತು ನಿರ್ಗಮಿಸಿದರು.ತಾಳ್ಮೆಯುತ ಆಟ ಪ್ರದರ್ಶಿಸಿದ ಧೋನಿ 72 ಎಸೆತಗಳಲ್ಲಿ 50 ರನ್ ಗಳಿಸಿ ರನ್ ಔಟ್ ಆಗಿ ಪೆವಿಲಿಯನ್ ಗೆ ವಾಪಸಾದರು.

ಕಿವೀಸ್ ಪರ ಹೆನ್ರಿ 3 ವಿಕೆಟ್ ಪಡೆದರೆ ಸ್ಯಾಂಟ್ನರ್,ಬೌಲ್ಟ್, 2 ವಿಕೆಟ್ ಕಬಳಿಸಿದರೆ ನೀಶಮ್ ಮತ್ತು ಫರ್ಗಿಸನ್ ತಲಾ ಒಂದು ವಿಕೆಟ್ ಪಡೆದು ಭಾರತೀಯ ಬ್ಯಾಟ್ಸಮನ್ ಗಳಿಗೆ ಕಡಿವಾಣ ಹಾಕಿದರು. ಅಂತಿಮವಾಗಿ ಭಾರತ 18 ರನ್ ಗಳಿಂದ ಪರಾಭವಗೊಂಡು ಈ ಭಾರಿಯ ವಿಶ್ವಕಪ್ ರೇಸ್ ನಿಂದ ಹೊರಬಿದ್ದಿತು.

Exit mobile version