ಕಾಲುಗಳೇ ಇಲ್ಲದೆ ಹುಟ್ಟಿದ ಜಿಯೋನ್ ಕ್ಲಾರ್ಕ್ ಮಾಡಿದ್ದು ಎಲ್ಲವೂ ಅದ್ಭುತವೇ!
—————————— —————————-
ಅಮೆರಿಕಾದ ಓಹಿಯೋದಲ್ಲಿ ಆತನ ಅಮ್ಮ ಅವನಿಗೆ 1997ರಲ್ಲಿ ಜನ್ಮಕೊಟ್ಟಾಗ ಎರಡೂ ಕಾಲುಗಳು ಇರಲಿಲ್ಲ! ಡ್ರಗ್ ಸೇವನೆ ಮಾಡುತ್ತಿದ್ದ ಅವನ ಅಮ್ಮ ಈ ವಿಕಲಚೇತನ ಮಗುವಿಗೆ ಜನ್ಮ ನೀಡಿದಾಗ ಆಕೆಗೆ ಮಗುವಿನ ಮೇಲೆಯೇ ಜಿಗುಪ್ಸೆ ಬಂದು ಒಂದು ಅನಾಥಾಶ್ರಮದಲ್ಲಿ ಮಗುವನ್ನು ಬಿಟ್ಟು ಹೋದದ್ದು ದುರಂತ!
ಈ ಕಾಯಿಲೆಗೆ ವೈದ್ಯರು ಚಿತ್ರ ವಿಚಿತ್ರವಾದ ಹೆಸರನ್ನು ಬೇರೆ ಇಟ್ಟರು. ಮೆದುಳುಬಳ್ಳಿಯ ಕೆಳಗಿನ ಭಾಗವು ಶಕ್ತಿಯನ್ನು ಕಳೆದುಕೊಳ್ಳುವ ವಿಚಿತ್ರವಾದ ಖಾಯಿಲೆ ಅದು! ಅದಕ್ಕೆ ಬಲಿಪಶು ಆದದ್ದು ಮಾತ್ರ ಜಿಯೊನ್ ಕ್ಲಾರ್ಕ್!
ಮುಂದೆ ಏಳರಿಂದ ಎಂಟರಷ್ಟು ಅನಾಥಾಶ್ರಮಗಳಿಗೆ ಈ ಮಗು ಅಲೆಯಬೇಕಾಯಿತು. ಕಿರುಕುಳ, ಪೆಟ್ಟು, ನೋವು ಹಾಗೂ ಉಪವಾಸಗಳಿಂದ ಆ ಮಗುವು ತೀರಾ ಜರ್ಜರಿತ ಆಯಿತು. ಅದರ ಗೋಳನ್ನು ಯಾರೂ ಆಲಿಸುವವರೇ ಇರಲಿಲ್ಲ. ನೆಲದ ಮೇಲೆ ತೆವಳುತ್ತಿದ್ದ ಆ ಬಾಲಕನ ಪಾಲಿಗೆ ದೇವರೇ ಕಳುಹಿಸಿಕೊಟ್ಟ ಹಾಗೆ ಓರ್ವರು ದತ್ತು ತಾಯಿಯು ದೊರಕಿದರು.
ಆ ಮಹಾ ತಾಯಿಯೇ ಕಿಂಬರ್ಲಿ ಹಾಕಿನ್!
ಆ ತಾಯಿಯ ಮಡಿಲಲ್ಲಿ ಆಗಲೇ ಹಲವು ದತ್ತುಮಕ್ಕಳು ಇದ್ದರು.ಅದರ ಜೊತೆಗೆ ಆಕೆ ಈ ಅನಾಥ ಮಗುವನ್ನು ಕೂಡ ಎತ್ತಿಕೊಂಡು ಬಂದು ಮನೆಯಲ್ಲಿ ಪ್ರೀತಿಯಿಂದ ಲಾಲನೆ ಪಾಲನೆ ಮಾಡಿದರು. ಸ್ವಂತ ಮಗುವಿಗಿಂತ ತುಸು ಹೆಚ್ಚೇ ಪ್ರೀತಿಯನ್ನು ಕೊಟ್ಟರು. ಇದು ಆ ತೆವಳುವ ಬಾಲಕನ ಜೀವನದಲ್ಲಿ ಪ್ರಮುಖ ಟರ್ನಿಂಗ್ ಪಾಯಿಂಟ್ ಆಯಿತು. ಮುಂದೆ ಗಿಲಬರ್ಟ್ ಡೋನಾಹ್ಯೂ ಎಂಬ ಕೋಚ್ ಆ ಬಾಲಕನನ್ನು ಉತ್ತಮ ಕ್ರೀಡಾಪಟು ಆಗಿ ರೂಪಿಸಿದರು.
ಜಿಯೋನ್ ಹಠವಾದಿ ಯುವಕ! ತಾನು ಏನಾದರೂ ಸಾಧನೆ ಮಾಡಬೇಕು ಎಂಬ ದೊಡ್ಡ ಕನಸು! ತಾನು ದುರ್ಬಲ ಅಲ್ಲ ಎಂದು ಪ್ರೂವ್ ಮಾಡುವ ಕಿಚ್ಚು! ಅದಕ್ಕೆ ಪೂರಕ ಆಗಿ NO EXCUSE ಎಂಬ ಕ್ಯಾಪ್ಶನ್ ಆರಿಸಿಕೊಂಡನು.ಅದನ್ನು ತನ್ನ ಬೆನ್ನಿನ ಮೇಲೆ ಟ್ಯಾಟೂ ಹಾಕಿಕೊಂಡನು. ಅಲ್ಲಿಂದ ಮುಂದೆ ಸಾಧನೆಯ ತೀವ್ರವಾದ ಪ್ರಯತ್ನವು ಆರಂಭವಾಗಿಯೇ ಬಿಟ್ಟಿತು!
ಆತನಿಗೆ ಬಾಲ್ಯದಲ್ಲಿ ತನ್ನ ಬೆನ್ನನ್ನು ನೆಟ್ಟಗೆ ಮಾಡಿಕೊಂಡು ಕುಳಿತುಕೊಳ್ಳಲು ಶಕ್ತಿ ಇರಲಿಲ್ಲ. ಆಗ ಹಲವು ಸಂಕೀರ್ಣ ಶಸ್ತ್ರಚಿಕಿತ್ಸೆಗಳಿಗೆ ಅವನು ಒಳಗಾದನು. ಇಡೀ ದೇಹವನ್ನು ಎರಡು ಕೈಗಳ ಮೇಲೆ ಎತ್ತಿ ನಿಲ್ಲಿಸುವ ಕಾರಣ ಕೈಗಳ ಮಾಂಸಖಂಡಗಳು ಶಕ್ತಿಶಾಲಿ ಆಗಲು ಪಟ್ಟ ಕಷ್ಟಗಳು ಸುಲಭದ್ದು ಆಗಿರಲಿಲ್ಲ! ಕುಸ್ತಿಗೆ ಅನುಕೂಲ ಆಗಲು ಹಲವು ಪಟ್ಟುಗಳನ್ನು ಕಲಿಯುವಾಗ ಜಿಯೊನ್ ಭಾರೀ ದೊಡ್ಡದಾದ ಸವಾಲುಗಳನ್ನು ಎದುರಿಸಬೇಕಾಯಿತು! ಹಾಗೆಯೇ ವೀಲ್ ಚೇರ್ ರೇಸ್ ಅವನ ಇನ್ನೊಂದು ಇವೆಂಟ್ ಆದ ಕಾರಣ ಅವನು ಅದಕ್ಕೂ ಸಾಕಷ್ಟು ರಕ್ತ ಕರಗಿಸಿ ದುಡಿಯುತ್ತಿದ್ದಾನೆ!
ಕೇವಲ 96 ಸೆಂಟಿ ಮೀಟರ್ ಎತ್ತರ ಇರುವ, 56 ಕೆಜಿ ತೂಕ ಇರುವ, ತನ್ನ ಇಡೀ ದೇಹವನ್ನು ಬಲಿಷ್ಠವಾದ ಕೈಗಳ ಮೇಲೆ ತೆಗೆದುಕೊಂಡು ನಡೆಯುವ, ಜಿಮ್ ಅಭ್ಯಾಸಗಳ ಮೂಲಕ ತನ್ನ ದೇಹವನ್ನು ತನಗೆ ಬೇಕಾದ ಹಾಗೆ ಹುರಿಗೊಳಿಸಿರುವ ಜಿಯೊನ್ ಮುಂದೆ ಕ್ರೀಡೆಯಲ್ಲಿ ಮಾಡಿದ್ದೆಲ್ಲವೂ ಅದ್ಭುತ ಚಮತ್ಕಾರಗಳೇ ಆಗಿವೆ!
ರೆಸ್ಲಿಂಗ್ ಕ್ಷೇತ್ರದಲ್ಲಿ ಅವನು ಈಗಾಗಲೇ ರಿಂಗ್ಸಲ್ಲಿ ಹಲವು ಪಂದ್ಯ ಗೆದ್ದಾಗಿದೆ! ಅದಕ್ಕೆ ಪೂರಕವಾಗಿ ತನ್ನ ದೇಹವನ್ನು ಹುರಿಗೊಳಿಸುವ ಪ್ರಯತ್ನದಲ್ಲಿ ಅವನು ಸಾಕಷ್ಟು ಬೆವರು ಹರಿಸುತ್ತಿದ್ದಾನೆ. ರೆಸ್ಲಿಂಗ್ ರಿಂಗ್ಸಲ್ಲಿ ಅವನಿಗೆ ದೊಡ್ಡದಾದ ಕನಸುಗಳು ಇವೆ ಎಂದು ಅವನು ಹೇಳಿದ್ದಾನೆ.
ಇತ್ತೀಚೆಗೆ ಜಿಯೊನ್ ಒಂದು ಗಿನ್ನೆಸ್ ದಾಖಲೆ ಕೂಡ ಪೂರ್ತಿ ಮಾಡಿದನು. ಎರಡೂ ಕೈಗಳ ಮೇಲೆ ದೇಹದ ಭಾರವನ್ನು ಎತ್ತಿ ಹಿಡಿದು ಇಪ್ಪತ್ತು ಮೀ. ದೂರವನ್ನು ಅವನು 4.78 ಸೆಕೆಂಡ್ಸಲ್ಲಿ ಓಡುವ ದಾಖಲೆ ಮಾಡಿದ್ದಾನೆ. ಈ ದೂರವನ್ನು ಇನ್ನೂ ಕಡಿಮೆಯ ಅವಧಿಯಲ್ಲಿ ಪೂರ್ತಿ ಮಾಡಿ ತನ್ನದೇ ದಾಖಲೆ ಮುರಿಯಬೇಕು ಎನ್ನುವ ತುಡಿತ ಕೂಡ ಅವನ ಹತ್ತಿರ ಇದೆ.
ಇದುವರೆಗೆ ಜಗತ್ತಿನಲ್ಲಿ ಯಾರೂ ಮಾಡದ ಒಂದು ಅನನ್ಯ ಸಾಧನೆ ಮಾಡಲು ಅವನು ಈಗ ಯುದ್ದದ ರೀತಿಯಲ್ಲಿ ಸನ್ನದ್ಧನಾಗುತ್ತಿದ್ದಾನೆ! ಅದೆಂದರೆ 2024ರ ಪ್ಯಾರಿಸ್ ಒಲಿಂಪಿಕ್ಸಲ್ಲಿ ಒಂದಾದರೂ ಪದಕ ಗೆಲ್ಲುವುದು. ಅದರ ಜೊತೆಗೆ ಒಲಿಂಪಿಕ್ಸ್ ಬೆನ್ನಿಗೆ ನಡೆಯುವ ವಿಶೇಷ ಚೇತನ ಕ್ರೀಡಾಪಟುಗಳ ಪಾರಾ ಒಲಿಂಪಿಕ್ಸನಲ್ಲಿ ಕೂಡ ಒಂದಲ್ಲ ಒಂದು ಪದಕವನ್ನು ಗೆಲ್ಲುವುದು! ಹಾಗೊಮ್ಮೆ ಅದು ಸಾಧ್ಯವಾಯಿತು ಅಂತಾದರೆ ಜಿಯೋನ್ ‘ವಿಶ್ವ ವಿಜಯೀ’ ಆಗುವುದು ಖಂಡಿತ!
ಇದಕ್ಕಾಗಿ ಅವನು ಪವರ್ ಲಿಫ್ಟಿಂಗ್, ವೀಲಚೇರ್ ಬಾಡಿ ಬಿಲ್ಡಿಂಗ್, ವೀಲ್ ಚೇರ್ ರೇಸ್, ಬಾಕ್ಸಿಂಗ್, ರೆಸ್ಲಿಂಗ್…. ಹೀಗೆ ಹಲವು ವಿಭಾಗಗಳಲ್ಲಿ ಪ್ರಯತ್ನ ಮಾಡುತ್ತಿದ್ದಾನೆ! ದಿನಕ್ಕೆ ಕನಿಷ್ಠ 10 ಘಂಟೆಗಳ ಕಾಲ ಮೈದಾನದಲ್ಲಿಯೇ ಕಳೆಯುತ್ತಿದ್ದಾನೆ!
ಇವೆಲ್ಲವುಗಳ ಜೊತೆಗೆ ಅವನ ಇತರ ಹವ್ಯಾಸಗಳ ಬಗ್ಗೆ ತಿಳಿದರೆ ನೀವು ಖಂಡಿತ ಬೆರಗಾಗುತ್ತೀರಿ! ಗೆಳೆಯರನ್ನು ಸಂಪಾದನೆ ಮಾಡುವುದು ಅವನ ಬಹಳ ದೊಡ್ಡ ಪ್ಯಾಶನ್. ಅವನಿಗೆ ಈಗಲೆ ಇನ್ಸಟಗ್ರಾಂನಲ್ಲಿ ಐದು ಲಕ್ಷಕ್ಕಿಂತ ಅಧಿಕ ಸಂಖ್ಯೆಯ ಗೆಳೆಯರಿದ್ದಾರೆ! ಅವನೊಬ್ಬ ಬಿಸಿನೆಸ್ ಮ್ಯಾನ್, ಆಕ್ಟರ್, ಮೋಟಿವೇಶನ್ ಸ್ಪೀಕರ್, ಲೇಖಕ, ಕ್ರೀಡಾಪಟು ಎಲ್ಲವೂ ಆಗಿದ್ದಾನೆ!
ತನ್ನ ಇಷ್ಟೊಂದು ಸಾಧನೆಗಳಿಗೆ ತನ್ನ ದತ್ತು ತಾಯಿಯ ಮಮತೆ ಮತ್ತು ವಾತ್ಸಲ್ಯವೆ ಮುಖ್ಯ ಕಾರಣ ಎಂದು ಆತ ನಂಬಿದ್ದಾನೆ. ಹೆತ್ತ ತಾಯಿ ಅನಾಥ ಮಕ್ಕಳ ನಡುವೆ ಕರುಣೆ ಇಲ್ಲದೆ ಬಿಟ್ಟು ಹೋದಾಗ ತನ್ನ ಸ್ವಂತ ಮಗುವಿಗಿಂತ ಹೆಚ್ಚು ಪ್ರೀತಿ ತೋರಿದ, ತನಗಾಗಿ ಸರ್ವಸ್ವವನ್ನೂ ತ್ಯಾಗ ಮಾಡಿದ ಆ ಮಹಾ ತಾಯಿಯ ಬಗ್ಗೆ ಮಾತಾಡುವಾಗ ಅವನು ತುಂಬ ಭಾವುಕನಾಗಿ ಬಿಡುತ್ತಾನೆ.
ಇಬ್ಬರು ಕೋಚ್ ಅವರ ಸರಿಯಾದ ಮಾರ್ಗದರ್ಶನ ಮತ್ತು ಗೆಳೆಯರ ಪ್ರೋತ್ಸಾಹಗಳು ಕೂಡ ನನ್ನ ಸಾಧನೆಗೆ ಕಾರಣ ಎಂದು ಹೇಳುವ ಜಿಯೋನ್ ಒಂದೆರಡು ವರ್ಷಗಳಲ್ಲಿ ವಿಶ್ವವನ್ನು ಗೆಲ್ಲಲು ಹೊರಟಿದ್ದಾನೆ. ತನಗೆ ಕಾಲಿಲ್ಲ ಎಂದು ದೇವರಿಗೆ ತಾನು ಯಾವತ್ತೂ ಶಾಪವನ್ನು ಕೊಡುವುದಿಲ್ಲ. ಅನಾಥವಾಗಿ ತನ್ನನ್ನು ನಡುನೀರಿನಲ್ಲಿ ಬಿಟ್ಟು ಹೋದ ತನ್ನ ಹೆತ್ತ ಅಮ್ಮನನ್ನು ಕೂಡ ಕ್ಷಮಿಸಿ ಬಿಟ್ಟಿದ್ದೇನೆ ಎನ್ನುವ ಆ ಮಹಾಸಾಧಕನಿಗೆ ನಿಮ್ಮದೊಂದು ಹಾರೈಕೆ ಇರಲಿ.
ರಾಜೇಂದ್ರ ಭಟ್ ಕೆ.