14 C
London
Monday, September 9, 2024
Homeಕ್ರಿಕೆಟ್ಕನಸುಗಳ ಬೆನ್ನಟ್ಟಿ ಗೆದ್ದ ನಂತರವಷ್ಟೇ ನಿಂತ ಕ್ರೀಡಾಳು ಈತ...

ಕನಸುಗಳ ಬೆನ್ನಟ್ಟಿ ಗೆದ್ದ ನಂತರವಷ್ಟೇ ನಿಂತ ಕ್ರೀಡಾಳು ಈತ…

Date:

Related stories

spot_imgspot_imgspot_imgspot_img
spot_imgspot_img
spot_imgspot_img
spot_imgspot_img
spot_imgspot_imgspot_img
spot_imgspot_img

ಅವನೊಬ್ಬನಿದ್ದ ಕ್ರೊಯೇಷಿಯನ್ ಆಟಗಾರ.ಹೆಸರು ಗೊರಾನ್ ಇವಾನಿಸವಿಚ್.ಸರಿಸುಮಾರು ಆರುವರೆ ಅಡಿಯ ಸ್ಪುರದ್ರೂಪಿ ಕ್ರೀಡಾಳು.ತನ್ನ ಹದಿನೇಳನೆಯ ವಯಸ್ಸಿನಲ್ಲಿ ಟೆನ್ನಿಸ್ ಲೋಕಕ್ಕೆ ವೃತ್ತಿಪರನಾಗಿ ಕಾಲಿಟ್ಟಿದ್ದ.ಮೊದಮೊದಲ ವರ್ಷಗಳಲ್ಲಿ ಸೋಲುಗಳನ್ನು ಕಂಡವನು,ಅತಿ ವೇಗವಾಗಿ ಆಟದಲ್ಲಿ ಸುಧಾರಣೆಗಳನ್ನು ತಂದುಕೊಂಡ.ಹಾಗೆ ಸುಧಾರಿಸಿಕೊಂಡು ವೃತ್ತಿ ಜೀವನದ ನಾಲ್ಕನೇ ವರ್ಷದ ವೇಳೆಗೆ ತನ್ನ ಬದುಕಿನ ಮೊದಲ ವಿಂಬಲ್ಡನದ ಫೈನಲ್ಲಿಗೇರಿದ.

ನಿಮಗೆ ಗೊತ್ತಿರಲಿ.ಟೆನ್ನಿಸ್ ರಂಗದಲ್ಲಿ ವಿಂಬಲ್ಡನ್‌ಗೆ ತನ್ನದೇ ಆದ ಮೌಲ್ಯವಿದೆ.ಉಳಿದ ಅದೆಷ್ಟೇ ಗ್ರಾಂಡ್ಸ್ಲಾಮ್‌ಗಳನ್ನು ಗೆದ್ದರೂ ಟೆನ್ನಿಸ್ ಕಾಶಿಯೆನ್ನಿಸಿಕೊಂಡಿರುವ ವಿಂಬಲ್ಡನ್‌ನಲ್ಲಿ ಪ್ರಶಸ್ತಿ ಗೆಲ್ಲದಿದ್ದರೆ ಆಟಗಾರ ಶ್ರೇಷ್ಟನೆಂದು ಪರಿಗಣಿತನಾಗಲಾರ. ಸಾಲುಸಾಲು ಪ್ರಶಸ್ತಿಗಳನ್ನು ಗೆದ್ದನಂತರವೂ ವಿಂಬಲ್ಡನ್ ಗೆದ್ದ ನಂತರವಷ್ಟೇ ರಾಫೆಲ್ ನಡಾಲ್‌ನನ್ನು ವಿಶ್ವ ಟೆನ್ನಿಸ್ ದಿಗ್ಗಜನೆಂದು ಗುರುತಿಸಿತ್ತು ಎನ್ನುವುದು ಅದಕ್ಕೊಂದು ಉದಾಹರಣೆ .ಹಾಗಿರುವ ವಿಂಬಲ್ಡನ್ ಟೆನ್ನಿಸ್‌ನ ಫೈನಲ್ ಪ್ರವೇಶಿಸಿದ್ದ ಗೊರಾನ್‌ಗೆ ಮೊದಲ ಬಾರಿ ಅನುಭವ ಕೊರತೆಯಿತ್ತು. ಎದುರಾಳಿಯಾಗಿದ್ದ ಅಗಾಸ್ಸಿಗೂ ಅದು ಮೊದಲ ವಿಂಬಲ್ಡನ್ ಫೈನಲ್ ಅನುಭವವೇ.ಆದರೆ ಅದಕ್ಕೂ ಮುನ್ನ ಮೂರು ಬಾರಿ ಪ್ರತಿಷ್ಟಿತ ಗ್ರಾಂಡ್‌ಸ್ಲಾಮ್ ಫೈನಲ್ ತಲುಪಿದ ಅನುಭವ ಅಗಾಸ್ಸಿಗಿತ್ತು.ಅಷ್ಟಾಗಿಯೂ ಇಬ್ಬರ ನಡುವಣ ಫೈನಲ್ ಪೂರ್ತಿ ಐದು ಸೆಟ್‌ಗಳವರೆಗೆ ನಡೆದಿತ್ತು.ಕೊನೆಗೆ ರೋಚಕ ಫೈನಲ್ಲಿನಲ್ಲಿ ಅಗಾಸ್ಸಿ ಗೆಲುವಿನ ನಗೆ ಬೀರಿದ್ದ.

ಗೆದ್ದ ಅಗಾಸಿಗೆ ಗೆಲುವಿನ ಸಂಭ್ರಮವಾದರೆ ಸೋತ ಗೊರಾನ್‌ಗೆ ನಿರಾಸೆ.ಆದರೆ ಗೋರಾನ್ ಸ್ಪೂರ್ತಿಯುತವಾಗಿಯೇ ಸೋಲನ್ನು ಸ್ವೀಕರಿಸಿದ್ದ.1992ರಲ್ಲಿ ಸೋತವನು ಪುನ: 1994ರಲ್ಲಿ ವಿಂಬಲ್ಡನ್ ಫೈನಲ್ ಪ್ರವೇಶಿಸಿದ್ದ ಗೋರಾನ್.ಈ ಬಾರಿ ಎದುರಿಗಿದ್ದವನು ದೈತ್ಯ ಪ್ರತಿಭೆ ಅಮೇರಿಕಾದ ಪೀಟ್ ಸಾಂಪ್ರಾಸ್.ಅದಾಗಲೇ ಪೀಟ್‌ಗೆ ಒಂದು ವಿಂಬಲ್ಡನ್ ಸೇರಿದಂತೆ ನಾಲ್ಕು ಗ್ರಾಂಡ್‌ಸ್ಲಾಮ್ ಗೆದ್ದ ಅನುಭವವಿತ್ತು.ಸಹಜವಾಗಿಯೇ ಪೀಟ್ ಆ ಬಾರಿಯ ಗೆಲುವಿಗೆ ನೆಚ್ಚಿನ ಆಟಗಾರನಾಗಿದ್ದ.ಸುಲಭವಾಗಿ ಸಾಂಪ್ರಾಸ್ ಗೆದ್ದು ಬಿಡುತ್ತಾನೆನ್ನುವುದು ಎಲ್ಲರ ಎಣಿಕೆಯಾಗಿತ್ತು.ನಿರೀಕ್ಷೆಯಂತೆ ಪೀಟ್ ಗೆದ್ದು ಬೀಗಿದ್ದ.ತೀವ್ರ ಹೋರಾಟ ನೀಡಿದ್ದ ಗೋರಾನ್‌ಗೆ ಮತ್ತೆ ಸೋಲಿನ ಆಘಾತ.ಮುಂದೆ ನಾಲ್ಕು ವರ್ಷಗಳ ಕಾಲ ಹೇಳಿಕೊಳ್ಳುವಂತಹ ಗೆಲುವು ಗೋರಾನ್‌ಗಿರಲಿಲ್ಲ.ಆದರೆ ಸತತ ಪ್ರಯತ್ನದಿಂದ 1998ರಲ್ಲಿ ಮತ್ತೊಮ್ಮೆ ಆತ ವಿಂಬಲ್ಡನ್ ಫೈನಲ್ ತಲುಪಿಕೊಂಡ.ಎದುರಿಗಿದ್ದವನು ಮತ್ತದೇ ಪೀಟ್ ಸಾಂಪ್ರಾಸ್. ಅಷ್ಟೊತ್ತಿಗಾಗಲೇ ಸಾಂಪ್ರಾಸ್ ,ಟೆನ್ನಿಸ್ ಲೋಕದ ದಂತಕತೆಯಾಗಿದ್ದವನು,ನಾಲ್ಕು ವಿಂಬಲ್ಡನ್ ಸೇರಿದಂತೆ ಒಟ್ಟು ಹತ್ತು ಗ್ರಾಂಡ್‌ಸ್ಲಾಮ್ ಗೆದ್ದು ಅಗ್ರಸ್ಥಾನಿಯಾಗಿದ್ದವನು.ಈ ಬಾರಿ ಇವಾನೆಸವಿಚ್ ಅವನಿಗೊಬ್ಬ ಶಕ್ತ ಎದುರಾಳಿಯೂ ಅಲ್ಲ ಎನ್ನುವುದು ಎಲ್ಲರ ಎಣಿಕೆಯಾಗಿತ್ತು.ಎಲ್ಲರ ಎಣಿಕೆ ಸುಳ್ಳಾಗುವಂತೆ ಆಡಿದವನು ಗೋರಾನ್.ಐದು ಸೆಟ್ಟುಗಳಲ್ಲಿ ಸಾಂಪ್ರಾಸ್ಸ‌ನಿಗೆ ಅಕ್ಷರಶ: ಬೆವರಿಳಿಸಿಬಿಟ್ಟಿದ್ದ ಗೋರಾನ್.ಇನ್ನೇನು ಗೆಲ್ಲುತ್ತಾನೇನೋ ಎನ್ನುವ ಹಂತದಲ್ಲಿ ಅನಗತ್ಯ ತಪ್ಪುಗಳನ್ನೆಸಗಿ ಸೋತು ಹೋಗಿದ್ದ.

ಮೂರು ಮೂರು ಫೈನಲ್ ಸೋಲುಗಳ ನಂತರ ಅಧೀರನಾಗಿದ್ದ ಗೋರಾನ್.ಗೆಲುವು ತುಂಬ ಸಮೀಪ ಬಂದು ಮೋಸ ಮಾಡಿತ್ತು. ನಿರಾಶನಾಗಿದ್ದ ಗೋರಾನ್,ದೇಹ ಪ್ರಕೃತಿ ಹದಗೆಟ್ಟಿತ್ತು.ಪದೇ ಪದೇ ಗಾಯದ ಸಮಸ್ಯೆಯಿಂದ ಆತ ಬಳಲಾರಂಭಿಸಿದ್ದ.ಅನೇಕ ಟೂರ್ನಿಗಳಲ್ಲಿ ಗೈರು ಹಾಜರಾದ ಅವನ ರ‌್ಯಾಂಕಿಂಗ್ ಸಹಜವಾಗಿಯೇ  ಪಾತಾಳಕ್ಕಿಳಿದಿತ್ತು.ತೀರ 125ನೇ ರ‌್ಯಾಂಕಿಗಿಳಿದು ಹೋದ ಅವನೆಡೆಗೆ ಅಭಿಮಾನಿಗಳಿಗೊಂದು ವಿಷಾದವಿತ್ತು.ಆವತ್ತಿನ ಕ್ರೀಡಾಭಿಮಾನಿಗಳ ಪ್ರಕಾರ ಅವನ ಕ್ರೀಡಾ ಜೀವನ ಮುಗಿದು ಹೋಗಿತ್ತು.

ಇಲ್ಲ, ಮುಗಿದಿಲ್ಲ ಎನ್ನುತ್ತ ಮತ್ತೆ ಎದ್ದು ನಿಂತಿದ್ದ ಗೋರಾನ್ 2001ರಲ್ಲಿ.ಆ ವರ್ಷ ವಿಂಬಲ್ಡನ್ ಮಂಡಳಿ ಆತನಿಗೆ ಆತನ ಹಿಂದಿನ ಪ್ರದರ್ಶನವನ್ನು ಪರಿಗಣಿಸಿ ವೈಲ್ಡ್ ಕಾರ್ಡ್ ಪ್ರವೇಶ ನೀಡಿತ್ತು. ತನಗಿದು ಕೊನೆಯ ಅವಕಾಶವೆಂದರಿತ ಗೋರಾನ್, ರಣಗಂಭೀರವಾಗಿ ಸೆಣದಾಡಿದ್ದ.ಎಲ್ಲರ ನಿರೀಕ್ಷೆ ಮೀರಿ ಆತ ಮಗದೊಮ್ಮೆ ಫೈನಲ್ ತಲುಪಿಕೊಂಡಿದ್ದ.ಈ ಬಾರಿ ಅವನ ಎದುರಾಳಿ ಆವತ್ತಿನ ಅಗ್ರಸ್ಥಾನಿ ಪ್ಯಾಟ್ರಿಕ್ ರಾಪ್ಟರ್.ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಮದಗಜಗಳಂತೆ ಸೆಣಸಿದ್ದರು ಇಬ್ಬರು.ಮೊದಲ ಮತ್ತು ಮೂರನೇ ಸೆಟ್ ಗೋರಾನ್ ಗೆದ್ದರೆ ಎರಡನೇ ಮತ್ತು ನಾಲ್ಕನೇ ಸೆಟ್ ರಾಪ್ಟರ್ ಗೆದ್ದಿದ್ದ.ನಿರ್ಣಾಯಕ ಸೆಟ್ ಅಕ್ಷರಶ: ಯುದ್ಧವೇ.ಇನ್ನೇನು ಕೊನೆಯ ಕ್ಷಣಗಳಲ್ಲಿ ಗೊರಾನ್ ಗೆಲ್ಲುತ್ತಾನೇನೋ ಎನ್ನಿಸುವಷ್ಟರಲ್ಲಿ ಮತ್ತೊಮ್ಮೆ ಅನಗತ್ಯ ತಪ್ಪುಗಳನ್ನು ಮಾಡಿಬಿಟ್ಟಿದ್ದ ಗೋರಾನ್.ಬಹುಶ: ಆ ಹೊತ್ತಿಗೆ ಗತಕಾಲದ ಸೋಲುಗಳ ನೆನಪು ಅವನ ಏಕಾಗ್ರತೆಯನ್ನು ತಾತ್ಕಾಲಿಕವಾಗಿ ಭಂಗಗೊಳಿಸಿತ್ತು.ಥತ್..!! ಮತ್ತೆ ಸೋತ ಎಂದುಕೊಂಡರು ಜನ.ಊಹುಂ.. ಬಾರಿ ಬಾಗಲಿಲ್ಲ ಅವನು.ಕೊನೆಯ ಹಂತಕ್ಕೆ ರ‌್ಯಾಪ್ಟರ್‌ನನ್ನು ಬಗ್ಗು ಬಡಿದು ಚೊಚ್ಚಲ ಗ್ರಾಂಡ್‌ಸ್ಲಾಮ್ ಮುಡಿಗೇರಿಸಿಕೊಂಡುಬಿಟ್ಟ ಏಸ್‌ಗಳ ರಾಜನೆಂದು ಬಿರುದಾಂಕಿತನಾಗಿದ್ದ ಗೋರಾನ್ ಇವಾನೆಸವಿಚ್.

ಸೋಲುಗಳ ಮೇಲೆ ಸೋಲು,ಗಾಯದ ಸಮಸ್ಯೆ ಎಲ್ಲವನ್ನೂ ಮೆಟ್ಟಿನಿಂತು ತನ್ನ ವೃತ್ತಿ ಬದುಕಿನ ಸಂಜೆಯಲ್ಲಿ ಗ್ರಾಂಡ್‌ಸ್ಲಾಮ್ ಗೆದ್ದ ಗೋರಾನ್‌ನ ಕತೆ ಇಂದಿಗೂ ಅನೇಕರಿಗೆ ದಾರಿದೀಪ. ತನ್ನ ಹದಿನೇಳನೆಯ ವಯಸ್ಸಲ್ಲಿ ಕರಿಯರ್ ಆರಂಭಿಸಿದ ಗೋರಾನ್, ಪ್ರತಿಷ್ಟಿತ ಪ್ರಶಸ್ತಿ ಗೆದ್ದಿದ್ದು ತನ್ನ ಮೂವತ್ತೊಂದನೇ ವಯಸ್ಸಿನಲ್ಲಿ. ಸರಿಸುಮಾರು ಒಂದೂವರೆ ದಶಕಗಳ ಕಾಲದ ನಂತರ ಕನಸನ್ನು ನನಸಾಗಿಸಿಕೊಂಡ ಗೋರಾನ್‌ನ ಕತೆ ಯಾವತ್ತಿಗೂ ಸ್ಪೂರ್ತಿದಾಯಕವೇ. ಕನಸುಗಳ ಬೆನ್ನಟ್ಟಿ ಹೋದರೆ ಗೆಲ್ಲುವವರೆಗೂ ನಿಲ್ಲಬಾರದು ಎನ್ನುವುದಕ್ಕೆ ಇವಾನೆಸವಿಚ್ ಒಂದು ಉದಾಹರಣೆ.ಕ್ರೀಡಾ ಜಗತ್ತೇ ಹಾಗೆ.ಇಲ್ಲಿ ಸೋಲು ಗೆಲವುಗಳು ಮಾತ್ರವಲ್ಲ,ಬದುಕಿನ ಗೆಲುವಿಗೂ ಅನೇಕ ಚಂದದ ಪಾಠಗಳಿವೆ.ನೋಡುವುದನ್ನು ನಾವು ಕಲಿಯಬೇಕಷ್ಟೇ.

ಗುರುರಾಜ್ ಕೋಡ್ಕಣಿ 

ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Latest stories

LEAVE A REPLY

Please enter your comment!
Please enter your name here

five − two =