ಕುಂದಾಪುರ : ಕೆನಡಾದಲ್ಲಿ ಇತ್ತೀಚೆಗೆ ನಡೆದ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾಗವಹಿಸಿ, ಭಾರ ಎತ್ತುವ ಸ್ಪರ್ಧೆಯಲ್ಲಿ ನೂತನ ದಾಖಲೆ ನಿರ್ಮಿಸಿ ಅಂತರರಾಷ್ಟ್ರೀಯ ಮಟ್ಟದ 2 ಚಿನ್ನ ಹಾಗೂ 2 ಬೆಳ್ಳಿ ಪದಕ ವಿಜೇತರಾಗಿ ಗುರುವಾರ ಹುಟ್ಟೂರಿಗೆ ಬಂದ ಪವರ್ ಲಿಫ್ಟರ್ ವಿಶ್ವನಾಥ ಗಾಣಿಗ ಅವರಿಗೆ ಅಭಿಮಾನಿಗಳು ಹಾಗೂ ಸಾರ್ವಜನಿಕರು ಅದ್ಧೂರಿ ಸ್ವಾಗತ ಕೋರಿದರು.
ಮಧ್ಯಾಹ್ನ 3 ಗಂಟೆಗೆ ಸಾಲಿಗ್ರಾಮಕ್ಕೆ ಬಂದ ಅವರು, ಇಲ್ಲಿನ ಶ್ರೀ ಆಂಜನೇಯ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಅವರನ್ನು ಅಲಂಕೃತ ತೆರೆದ ಜೀಪಿನಲ್ಲಿ ಮೆರವಣಿಗೆ ಮಾಡಲಾಯಿತು.
ತಂದೆ ಭಾಸ್ಕರ ಗಾಣಿಗ ಹಾಗೂ ತಾಯಿ ಪದ್ಮಾವತಿ ಗಾಣಿಗ ಪುತ್ರನಿಗೆ ಸಾಥ್ ನೀಡಿದರು. ಸಾಲಿಗ್ರಾಮದಿಂದ ಕುಂದಾಪುರದ ಕಡೆಗೆ ಬಂದ ಮೆರವಣಿಗೆಯನ್ನು ಕೋಟ, ತೆಕ್ಕಟ್ಟೆ ಹಾಗೂ ಬೀಜಾಡಿಯಲ್ಲಿ ಬರಮಾಡಿಕೊಂಡ ಸ್ಥಳೀಯ ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಗಾಣಿಗ ಸಮಾಜ ಬಂಧುಗಳು ಹಾಗೂ ಸಾರ್ವಜನಿಕರು ಮಾಲಾರ್ಪಣೆ ಮಾಡಿ ಅಭಿನಂದಿಸಿದರು.
ಕುಂದಾಪುರದ ಶಾಸ್ತ್ರಿ ಸರ್ಕಲ್ ಬಳಿಯಲ್ಲಿ ತಾಲ್ಲೂಕು ಗಾಣಿಗ ಸಮಾಜ ಹಾಗೂ ಇತರ ಸಂಘ ಸಂಸ್ಥೆಗಳ ನೇತೃತ್ವದಲ್ಲಿ ಅದ್ದೂರಿಯಾಗಿ ಸ್ವಾಗತಿಸಲಾಯಿತು. ಈ ಸಂದರ್ಭದಲ್ಲಿ ಗಾಣಿಗ ಸಮಾಜದ ಪರವಾಗಿ ಅವರಿಗೆ 50,000 ನಗದು ಹಾಗೂ ಅಭಿನಂದನಾ ಪತ್ರವನ್ನು ನೀಡಲಾಯಿತು.
ಚೆಂಡೆ, ಪಟಾಕಿ, ವಾದ್ಯ ಮೇಳಗಳೊಂದಿಗೆ ಕುಂದಾಪುರ ನಗರದಲ್ಲಿ ಸಾಗಿ ಬಂದ ಪದಕವೀರನ ಮೆರವಣಿಗೆಯನ್ನು ಬರಮಾಡಿಕೊಂಡ ವಿವಿಧ ಸಂಘಟನೆಯ ಪ್ರತಿನಿಧಿಗಳು ಅಲಲ್ಲಿ ಸ್ವಾಗತ ನೀಡಿ, ಸನ್ಮಾನಿಸಿ ಸಂತಸ ವ್ಯಕ್ತಪಡಿಸಿದರು. ಹೂವಿನ ಮಾರಾಟಗಾರರು, ಕುಂದಾಪುರ ಬ್ಲಾಕ್ ಕಾಂಗ್ರೆಸ್ ಸಮಿತಿ, ತಲ್ಲೂರು ಹಾಗೂ ಹೆಮ್ಮಾಡಿಯಲ್ಲಿಯೂ ಸಾರ್ವಜನಿಕರು ಹಾಗೂ ಸಂಘ ಸಂಸ್ಥೆ ಅದ್ದೂರಿಯ ಸ್ವಾಗತ ಕೋರಿದರು.