ಕ್ರೀಡೆಯ ಜೊತೆ ಸಾಮಾಜಿಕ,ಧಾರ್ಮಿಕ ಹಾಗೂ ಶೈಕ್ಷಣಿಕ ಸೇವೆಗಳಲ್ಲಿ ಸತತವಾಗಿ ತೊಡಗಿಸಿಕೊಂಡ ಉದ್ಯಾವರ ಪಿತ್ರೋಡಿಯ ” ವೆಂಕಟರಮಣ ಸ್ಪೋರ್ಟ್ಸ್ &ಕಲ್ಚರಲ್ ಕ್ಲಬ್” ತಂಡಕ್ಕೆ ಅರ್ಹವಾಗಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.ಇದೇ ಸಂದರ್ಭ ಸಂಸ್ಥೆಯ ಸಕ್ರಿಯ ಸದಸ್ಯರಾದ ಉದಯ್ ಕುಮಾರ್ ಸಂಧ್ಯಾ ದಂಪತಿಗಳ ಪುತ್ರಿ,5 ವಿಶ್ವದಾಖಲೆಗಳ ಸರದಾರಿಣಿ,ಯೋಗರತ್ನ ಕುಮಾರಿ ತನುಶ್ರೀ ಪಿತ್ರೋಡಿ ಕೂಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾಗಿದ್ದು ಸಂಸ್ಥೆಯ ಕೀರ್ತಿಯನ್ನು ಇನ್ನಷ್ಟು ಹೆಚ್ಚಿಸಿದೆ.
ರಾಜ್ಯ ಟೆನಿಸ್ ಬಾಲ್ ಕ್ರಿಕೆಟ್ ಇತಿಹಾಸದಲ್ಲಿ ಸರ್ವ ಶ್ರೇಷ್ಠ ತಂಡಗಳ ಸಾಲಿನಲ್ಲಿ ಗುರುತಿಸಿಕೊಂಡ ಉಡುಪಿ ಜಿಲ್ಲೆ ಉದ್ಯಾವರದ ತಂಡ ವೆಂಕಟರಮಣ ಸ್ಪೋರ್ಟ್ಸ್ & ಕಲ್ಚರಲ್ ಕ್ಲಬ್ ಪಿತ್ರೋಡಿ. ಸರಿಸುಮಾರು ಮೂರೂವರೆ ದಶಕಗಳ ಹಿಂದೆ ಪಿತ್ರೋಡಿ ಪರಿಸರದ ಶಾಲಾ ಮೈದಾನದಲ್ಲಿ ಸಂಜೆಯ ಸಮಯದಲ್ಲಿ ಕ್ರಿಕೆಟ್ ಎಂಬ ಅಚ್ಚುಮೆಚ್ಚಿನ ಆಟವನ್ನು ಬಹಳಷ್ಟು ಪ್ರೀತಿಯಿಂದ ಆಡುತ್ತಿದ್ದ ಹುಡುಗರ ತಂಡವೊಂದು ಕ್ರಿಕೆಟ್
ಎಂಬ ಸಂಭಾವಿತ ಆಟದ ಬಹುಮುಖ್ಯವಾದ ಕಲೆಯನ್ನು ಕರಗತ ಮಾಡಿಕೊಂಡ ಹುಡುಗರು ಒಂದು ಸದೃಡ ತಂಡವಾಗಿ ರೂಪುಗೊಂಡು ಮುಂದೆ ಸ್ಥಳಿಯವಾಗಿ, ಜಿಲ್ಲೆ, ರಾಜ್ಯ ಮಟ್ಟದ ಪಂದ್ಯಾಟದ ಪ್ರಶಸ್ತಿಗೆ ಮುತ್ತಿಕ್ಕುವವರೆಗೆ ಬೆಳೆದು ನಿಂತ ತಂಡದ ಪರಿಶ್ರಮದ ಹಾದಿಯನ್ನು ಬಹುಮುಖ್ಯವಾಗಿ ಮೆಚ್ಚಲೇಬೇಕು.
ಪಿತ್ರೋಡಿಯ ಶ್ರೀ ವೆಂಕಟರಮಣ ಭಜನಾ ಮಂದಿರದ ಪ್ರೇರಣೆಯ ಯಾದಿಯಲ್ಲಿ ವೆಂಕಟರಮಣ ಕ್ರಿಕೆಟರ್ಸ್ ಆಗಿ ನಾಮಾಂಕಿತಗೊಂಡ ತಂಡ ಕೇವಲ ತಮ್ಮ ಆಟವನ್ನು ಗೆಲುವಿಗಾಗಿ ಮೀಸಲಿಡದೇ ಆಟದಲ್ಲಿ ಬಹುಮುಖ್ಯವಾದ ಶಿಸ್ತನ್ನು ಅಳವಡಿಸಿಕೊಂಡು ಅದರ ಮೂಲಕವೇ ರಾಜ್ಯಾದ್ಯಂತ ಹೆಸರನ್ನು ಗಳಿಸಿದ್ದಲ್ಲದೇ ಗೆಲುವಿನ ನಗೆಯನ್ನು ಬಿರಿದ್ದಕ್ಕೆ ಹಲವು ಚಿನ್ನದ ಬಣ್ಣದ ಪಾರಿತೋಷಕಗಳು ಸಾಕ್ಷಿಯಾಗಿವೆ.
ಕೇವಲ ಕ್ರಿಕೆಟ್ ಎನ್ನುವ ಆಟಕ್ಕೆ ಸೀಮಿತ ಗೊಳಿಸದೇ ತಮ್ಮ ಕ್ರಿಕೆಟ್ ಆಟದ ಮೂಲಕ, ತಮ್ಮ ತಂಡದ ಮೂಲಕ ತನ್ನೂರ ಅಭಿವೃದ್ದಿಯ ಕನಸನ್ನು ನನಸಾಗಿಸಿದ ಹೆಮ್ಮೆ ಈ ತಂಡಕ್ಕೆ ಸಲ್ಲಲೇಬೇಕು. ತಮ್ಮೂರಿನ
ಪ್ರತಿಭಾನ್ವಿತರಿಗೆ ಪ್ರೋತ್ಸಾಹಿಸಿ , ಜನಪರವಾದ ಕಾಳಜಿಯಲ್ಲಿ ಅನವರತವಾಗಿ ಶ್ರಮಿಸಿ, ಅನಾರೋಗ್ಯದ ಸಮಸ್ಯೆಗಳಿಗೆ ಬೆಂಗಾವಲಾಗಿ ನಿಂತು ತನ್ನೂರಿನ ಅಭಿವೃದ್ದಿಯ ಕುರಿತಾಗಿ ಬೆಳಕು ಚೆಲ್ಲುವಲ್ಲಿ ಯಶಸ್ವಿ ಸಂಘಟನಾ ಶಕ್ತಿಯಾಗಿ ರೂಪುಗೊಂಡ ಬಗೆ ಹಲವು ಸಂಘ ಸಂಸ್ಥೆಗಳಿಗೆ ಮಾದರಿ ಎನಿಸಿಕೊಂಡಿವೆ.
ವೆಂಕಟರಮಣ ಸಂಸ್ಥೆ ಆಯೋಜಿಸುವ ಪ್ರತಿಯೊಂದು ಪಂದ್ಯಾವಳಿಯಲ್ಲಿ ಹೊಸತನದೊಂದಿಗೆ ಸಮಾಜಕ್ಕೊಂದು ಸಂದೇಶ ನೀಡುವ ಇವರು,ತಮ್ಮ ತಂಡದ ಸದಸ್ಯರುಗಳ ವಿಶೇಷ ಆಸಕ್ತಿಯಿಂದ ರಕ್ತದಾನ, ನೇತ್ರದಾನ,ಪರಿಸರ ಸಂರಕ್ಷಣೆ,ಮಧ್ಯಮುಕ್ತ ಸಮಾಜ,ಸಂಚಾರ ನಿಯಮ ಪಾಲನೆ,ಹೆಲ್ಮೆಟ್ ಬಳಕೆಯ ಕುರಿತು ಜನಜಾಗೃತಿ ಸಂದೇಶ,ಸಾಧಕರಿಗೆ ಸನ್ಮಾನ,ದೀಪಾವಳಿಯ ಸಂದರ್ಭ ವಿನಾಕಾರಣ ಸುಡುಮದ್ದಿಗೆ ಖರ್ಚು
ಮಾಡುವ ಬದಲು ಶ್ರೀ ಕೃಷ್ಣ ಬಾಲನಿಕೇತನದ ಮಕ್ಕಳಿಗೆ ಬಟ್ಟೆಗಳನ್ನು ನೀಡುವ ಮಾನವೀಯ ಕಾರ್ಯಗಳಲ್ಲಿ ಸದ್ದಿಲ್ಲದೇ ತೊಡಗಿಕೊಂಡು ಅದೆಷ್ಟೋ ಜೀವಗಳ ಬದುಕಿಗೆ ಭರವಸೆಯ ಆಶಾಕಿರಣವಾಗಿ ಹೊಳೆದು ಅಸಹಾಯಕರ ಬದುಕಿಗೆ ಬೆಳಕಾಗುವಂತೆ ಬೆಳೆದು ನಿಂತ ತಂಡಕ್ಕೆ ರಾಜ್ಯೋತ್ಸವ ಪ್ರಶಸ್ತಿಯ ಸಾಲಿನಲ್ಲಿ ಹೊಳೆಯುವ ಹೊನ್ನಿನ ಗರಿಯೊಂದನ್ನು ತನ್ನದಾಗಿಸಿಕೊಂಡ ಹೆಗ್ಗಳಿಕೆಗೆ ಪಾತ್ರವಾಗಿದೆ.
ತಮ್ಮೂರಿನ ಕಾಳಜಿಯಲ್ಲಿ, ಅಭಿವೃದ್ದಿಯ ಕಾರ್ಯಗಳಲ್ಲಿ ಒಂದು ತಂಡದ ಶಿಸ್ತು ಬದ್ದತೆ ಮತ್ತಷ್ಟು ಬಲಗೊಳ್ಳುವುದರೊಂದಿಗೆ ಹಲವು ಯುವಮನಗಳಿಗೆ ಸ್ಪೂರ್ತಿಯ ಸೆಲೆಯಾಗಲಿ ಎಂಬ ದೆಸೆಯಲ್ಲಿ ಪ್ರೀತಿಪೂರ್ವಕ ಅಭಿನಂದನೆಗಳು…