ಕ್ರೀಡೆಯ ಜೊತೆಗೆ,ರಕ್ತದಾನ ಶಿಬಿರ, ಇತರ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡು ವೆಂಕಟರಮಣ ಸಂಸ್ಥೆ,ಸುತ್ತಮುತ್ತಲಿನ ಪರಿಸರದ ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ವಾತಾವರಣ ಕಲ್ಪಿಸಿ ರಾಜ್ಯದ ಮಾದರಿ ತಂಡವಾಗಿ ರೂಪುಗೊಂಡಿದೆ ಎಂದು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಉದ್ಯಾವರ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ವಿಜಯ್ ಕುಮಾರ್ ಉದ್ಯಾವರ ಗ್ರಾಮ ಪಂಚಾಯತ್ ಮೈದಾನದಲ್ಲಿ ವೆಂಕಟರಮಣ ಸ್ಪೋರ್ಟ್ಸ್ &ಕಲ್ಚರಲ್ ಕ್ಲಬ್(ರಿ) ವತಿಯಿಂದ ಆಯೋಜಿಸಲಾದ ಸ್ವರ್ಣ ಖಚಿತ ” ವೆಂಕಟರಮಣ ಟ್ರೋಫಿ-2020″ ನ್ನು ದೀಪ ಬೆಳಗಿಸಿ ಉದ್ಘಾಟಿಸಿ ಕಾರ್ಯಕ್ರಮವನ್ನುದ್ದೇಶಿ ಮಾತನಾಡಿದರು.
ಉದ್ಯಾವರ ಗ್ರಾಮ ಪಂಚಾಯತ್ ನ ಉಪಾಧ್ಯಕ್ಷ ರಿಯಾಜ್ ಪಳ್ಳಿಯವರು ಮಾತನಾಡಿ ವೆಂಕಟರಮಣ ಸಂಸ್ಥೆಯ ನಿರಂತರ ಹೋರಾಟ,ಸಾಮಾಜಿಕ ಸೇವೆಗಳಿಂದ ಉದ್ಯಾವರ ಗ್ರಾಮ ಪಂಚಾಯತ್ ಅಂಗಣದಲ್ಲಿ ಕ್ರಿಕೆಟ್ ಗೆ ಸೂಕ್ತ ಜಾಗವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ ಎಂದರು.ಈ ಸಂದರ್ಭ ಉದ್ಯಾವರ ಗ್ರಾಮ ಪಂಚಾಯತ್ ನ ಸದಸ್ಯರು ಜಿತೇಂದ್ರ ಶೆಟ್ಟಿ ಉದ್ಯಾವರ ಹಾಗೂ ಸ್ಪೋರ್ಟ್ಸ್ ಕನ್ನಡ ಸಂಚಾಲಕ ಕೋಟ ರಾಮಕೃಷ್ಣ ಆಚಾರ್ಯ ಸಂಸ್ಥೆಯ ಕಾರ್ಯ ವೈಖರಿಯನ್ನು ಪ್ರಶಂಸಿಸಿ ಪಂದ್ಯಾವಳಿಗೆ ಅಭಿನಂದನೆಗಳನ್ನು ಸಲ್ಲಿಸಿದರು.
ಉದ್ಘಾಟನಾ ಕಾರ್ಯಕ್ರಮದಲ್ಲಿ ವೆಂಕಟರಮಣ ಸಂಸ್ಥೆಯ ಅಧ್ಯಕ್ಷ ಶ್ರೀ ಮಲ್ಲೇಶ್ ಬಂಗೇರ ಪಿತ್ರೋಡಿ, ಮಾಜಿ ಅಧ್ಯಕ್ಷ ಸಂತೋಷ್ ಕುಂದರ್ ಹಾಗೂ ಸತೀಶ್ ಕುಂದರ್, ಉಪಾಧ್ಯಕ್ಷ ವಿಜಯ್ ಕೋಟ್ಯಾನ್ ಪಿತ್ರೋಡಿ, ಕೋಶಾಧಿಕಾರಿ ಪ್ರಕಾಶ್ ಶೆಟ್ಟಿ,
ತಂಡದ ನಾಯಕ, ಕಾರ್ಯದರ್ಶಿ ಪ್ರವೀಣ್ ಪಿತ್ರೋಡಿ ಹಾಗೂ ಇನ್ನಿತರ ಪದಾಧಿಕಾರಿಗಳು,ಸದಸ್ಯರು ಉಪಸ್ಥಿತರಿದ್ದರು.
ಇತ್ತೀಚೆಗಷ್ಟೇ ಕೃಷ್ಣೈಕ್ಯರಾದ ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ, ಹಾಗೂ ಕಳೆದ ವರ್ಷ ವಿಧಿವಶರಾದ ಸಂಸ್ಥೆಯ ನಿರಂತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ಬಾಲಕೃಷ್ಣ ಸಾಲ್ಯಾನ್,ನಿತಿನ್ ಹಾಗೂ ನಿಶಾಂತ್ ಸ್ಮರಣಾರ್ಥ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.
ಅಂಗಣದಲ್ಲಿ ವಿಜಯ್ ಕುಮಾರ್ ಉದ್ಯಾವರ ಹಾಗೂ ರಿಯಾಜ್ ಪಳ್ಳಿಯವರು ಬ್ಯಾಟಿಂಗ್ ನಡೆಸಿ ಪಂದ್ಯಾಕೂಟಕ್ಕೆ ಹಸಿರು ನಿಶಾನೆ ಸೂಚಿಸಿದರು. ಶಿಸ್ತುಬದ್ಧ ಸಂಸ್ಥೆಯಾದ ವೆಂಕಟರಮಣ ಪಿತ್ರೋಡಿ, ಡೋಪಿಂಗ್ ಟೆಸ್ಟ್ ಅಳವಡಿಸಿದ್ದು,ಮಾದಕ ದ್ರವ್ಯ ಹಾಗೂ ಮಧ್ಯ ಮುಕ್ತ ಪಂದ್ಯಾವಳಿ ಹೆಗ್ಗಳಿಕೆಗೆ ಪಾತ್ರವಾಗಲಿದೆ.
ಇಂದು ಗ್ರಾಮೀಣ ಮಟ್ಟದ ತಂಡಗಳಿಗೆ ಅವಕಾಶ ನೀಡಲಾಗಿದ್ದು, ಪ್ರಥಮ ದಿನದ ಅಂತ್ಯದಲ್ಲಿ ಪ್ರಬಲ ಪೈಪೋಟಿಯ ನಡುವೆ ಪ್ರಕೃತಿ ವಿಘ್ನೇಶ್ವರ ಫೈಟರ್ಸ್ ಮುಂದಿನ ಹಂತಕ್ಕೆ ತೇರ್ಗಡೆ ಹೊಂದಿತ್ತು. ಶನಿವಾರದಂದು ಜಿಲ್ಲಾ ಮಟ್ಟ ಹಾಗೂ ರವಿವಾರದಂದು ರಾಜ್ಯ ಮಟ್ಟದ ಪ್ರತಿಷ್ಟಿತ ತಂಡಗಳು ಸೆಣಸಾಟ ನಡೆಸಲಿದೆ.
ವೀಕ್ಷಕ ವಿವರಣೆ ವಿಭಾಗದಲ್ಲಿ ಹಿರಿಯ ವೀಕ್ಷಕ ವಿವರಣೆಕಾರ ವಿನಯ್ ಉದ್ಯಾವರ ಜೊತೆಗೆ ಯುವ ವೀಕ್ಷಕ ವಿವರಣೆಕಾರರಾದ ರಾಜಶೇಖರ್.ಪಿ.ಶಮರಾವೋ ಹಾಗೂ ಪ್ರತುಲ್ ಸಹಕರಿಸಿದರೆ,ಶನಿವಾರ ಹಾಗೂ ರವಿವಾರ ಆಂಗ್ಲ ಭಾಷೆಯ ಹೆಸರಾಂತ ವೀಕ್ಷಕ ವಿವರಣೆಕಾರ ಅರವಿಂದ್ ಮಣಿಪಾಲ್ ಪಂದ್ಯಾವಳಿಯ ಮೆರುಗನ್ನು ಹೆಚ್ಚಿಸಲಿದ್ದಾರೆ,ಹಾಗೂ ದ.ಕ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಕ್ರೀಡಾ ಕಾರ್ಯದರ್ಶಿ ಪ್ರವೀಣ್ ಕೊರೆಯ ಸಾರಥ್ಯದಲ್ಲಿ,ವೆಂಕಟರಮಣದ ಸಂಸ್ಥೆಯ ಸದಸ್ಯರ ಸಹಕಾರದೊಂದಿಗೆ ಪ್ರಾಯೋಗಿಕವಾಗಿ ನೇರ ಪ್ರಸಾರವನ್ನು ಬಿತ್ತರಿಸುತ್ತಿದ್ದಾರೆ.
ಆರ್.ಕೆ.ಆಚಾರ್ಯ ಕೋಟ