ವೈಷ್ಣವಿ ಆಚಾರ್ಯ ಕಡಿಯಾಳಿ ಎನ್ನುವ ಉಡುಪಿ ಮೂಲದ ಹುಡುಗಿ ಬೆಂಗಳೂರಿನ ಜಸ್ಟ್ ಕ್ರಿಕೆಟ್ ಅಕಾಡೆಮಿಯಲ್ಲಿ ಕ್ರಿಕೆಟ್ ತರಬೇತಿಯನ್ನು ಪಡೆಯುತ್ತಿದ್ದು ಬೌಲಿಂಗ್ ನಲ್ಲಿ ಮಿಂಚುತ್ತಿದ್ದಾರೆ.
ಬೆಂಗಳೂರು ಓಕೆಶನಲ್ಸ್ ತಂಡದ ಪರವಾಗಿ ಆಡುವ ಇವರು ಬೌಲಿಂಗ್ ನಲ್ಲಿ ತಮ್ಮ ತಂಡಕ್ಕೆ ಪ್ರಧಾನ ಆಧಾರಸ್ತಂಭವಾಗಿದ್ದಾರೆ. ಇತ್ತೀಚೆಗೆ ಕೆ ಎಸ್ ಸಿ ಎ ಆಯೋಜಿಸಿದ ಜೆಎಸ್ಎಸ್ ಮೈದಾನದಲ್ಲಿ ನಡೆದ ಪಂದ್ಯಾಕೂಟದಲ್ಲಿ ಅತ್ಯುತ್ತಮವಾದ ಬೌಲಿಂಗ್ ದಾಳಿಯನ್ನು ನಡೆಸಿ ಎಲ್ಲರ ಗಮನ ಸೆಳೆದಿದ್ದಾರೆ.
ಮಿನರ್ವ ತಂಡದ ವಿರುದ್ಧ ಮೊದಲ ಲೀಗ್ ಪಂದ್ಯದಲ್ಲಿ ತಾನು ಎಸೆದಂತ 6 ಓವರುಗಳಲ್ಲಿ 33ಕ್ಕೆ ಐದು ವಿಕೆಟ್ ಪಡೆದುಕೊಂಡು ಅತ್ಯುತ್ತಮ ಬೌಲರ್ ಹೆಗ್ಗಳಿಕೆಗೆ ಪಾತ್ರವಾಗಿದ್ದರು. ತಾನು ಆಡಿದ ಎರಡನೇ ಪಂದ್ಯದಲ್ಲಿ 3 ಓವರುಗಳಲ್ಲಿ ಒಂದು ವಿಕೆಟ್ ಪಡಕೊಂಡು ವಿಜಯದ ರೂವಾರಿಯೂ ಈಕೆ ಆಗಿದ್ದಾರೆ. ಮೂರನೇ ಪಂದ್ಯದಲ್ಲಿ ನಿಯಂತ್ರಣಕಾರಿ ಬೌಲಿಂಗ್ ನಡೆಸಿದ್ದರು. ಬೆಂಗಳೂರು ಓಕೆಶನಲ್ಸ್ ನ್ನು ಪ್ರತಿನಿಧಿಸುವ ವೈಷ್ಣವಿ ಕಡಿಯಾಳಿಯವರ ತಂಡ ಇದೀಗ ನಾಕೌಟ್ ಸುತ್ತಿಗೆ ಅರ್ಹತೆ ಪಡೆದಿದೆ. ತಮ್ಮ ತಂಡವನ್ನುಈ ಹಂತದ ವರೆಗೆ ಕರೆದೊಯ್ದ ಕೀರ್ತಿ ವೈಷ್ಣವಿ ಗೆ ಸಲ್ಲುತ್ತದೆ.
ಇಷ್ಟೇ ಅಲ್ಲದೆ ಪ್ರಸ್ತುತ ಸನ್ನಿವೇಶದಲ್ಲಿ, ಸೆಪ್ಟೆಂಬರ್ ಮೊದಲ ವಾರದಲ್ಲಿ ನಡೆಯುವ ಸೆಲೆಕ್ಷನ್ ಟ್ರಯಲ್ಸ್ ಫಾರ್ ಅಂಡರ್ 19 ಗೆ ಸಿದ್ದತೆಯನ್ನು ನಡೆಸುತ್ತಿದ್ದಾರೆ.
ಈ ಮೊದಲು ಕಟಪಾಡಿಯ ಕೆ ಆರ್ ಎಸ್ ಅಕಾಡೆಮಿ ಮತ್ತು ಉಡುಪಿ ಕ್ರಿಕೆಟ್ ಅಸೋಸಿಯೇಷನ್ ನಲ್ಲಿ ತರಬೇತಿಯನ್ನು ಪಡೆಯುತ್ತಿದ್ದ ವೈಷ್ಣವಿ ಕಡಿಯಾಳಿ ಅವರ ಪ್ರತಿಭೆಯನ್ನು ಶಾಲಾ ಮತ್ತು ಸ್ಥಳೀಯ ಕ್ರೀಡಾಕೂಟಗಳಲ್ಲಿ ಗಮನಿಸಲಾಯಿತು. ಕ್ರಿಕೆಟ್ ನತ್ತ ಪ್ರೇರಣೆ ಪಡೆದು ಕ್ರೀಡಾ ವೃತ್ತಿಯನ್ನು ತೆಗೆದುಕೊಳ್ಳುವ ಮೂಲಕ ತನ್ನ ಕೌಶಲ್ಯವನ್ನು ಸಾಬೀತು ಪಡಿಸಲು ಬೆಂಗಳೂರಿನ ಜಸ್ಟ್ ಕ್ರಿಕೆಟ್ ಅಕಾಡೆಮಿ ಸೇರಿ ವೃತ್ತಿಪರ ತರಬೇತಿಯನ್ನು ಬೌಲಿಂಗ್ ಕೋಚ್ ಆದ ಮೊಹಮ್ಮದ್ ಆಲಿ ಮತ್ತು ನೂರುದ್ದೀನ್ ಇವರುಗಳ ಮಾರ್ಗದರ್ಶನದಡಿಯಲ್ಲಿ ತರಬೇತಿಯನ್ನು ಪಡೆಯುತ್ತಿದ್ದಾರೆ. ತನ್ನ ಕನಸನ್ನು ಸಾಧಿಸಲು ತನ್ನ ತನ್ಮನಗಳನ್ನು ಸಮರ್ಪಿಸಿ ನಿಯಮಿತ ಅಭ್ಯಾಸವನ್ನು ನಡೆಸಿ ತನ್ನ ಕನಸನ್ನು ಮುಂದುವರೆಸುತ್ತಿದ್ದಾರೆ.
ವೈಷ್ಣವಿ ಕಡಿಯಾಳಿ ಎನ್ನುವ ಪ್ರತಿಭೆ ಇದೇ ರೀತಿ ಮುಂದುವರೆದು ಶ್ಲಾಘನೀಯ ಪ್ರದರ್ಶನ ನೀಡಿ ಉಡುಪಿಯನ್ನು ಹೆಮ್ಮೆಪಡುವಂತೆ ಮಾಡಲಿ.