ಮಂಗಳೂರು: ಜಿ ಎಸ್ ಬಿ ಯ ನೂರಾರು ವೈದಿಕ ಕ್ರಿಕೆಟ್ ಪ್ರೇಮಿಗಳಿಗೆ ತೀವ್ರ ಕುತೂಹಲ ಕೆರಳಿಸಿದ್ದ ವೈದಿಕ್ ಪ್ರೀಮಿಯರ್ ಲೀಗ್ (ವಿಪಿಎಲ್) ಪಂದ್ಯಾವಳಿಯಲ್ಲಿ ಸುದೇಶ್ ಭಟ್ ಮೂಡುಬಿದಿರೆ ಹಾಗೂ ಐಕಾನ್ ಪ್ಲೇಯರ್ ಉದಯ್ ಭಟ್ ನೇತೃತ್ವದ ಭಟ್ಜೀಸ್ ಸೂಪರ್ ಕಿಂಗ್ಸ್ ಭರ್ಜರಿ ಗೆಲುವು ಸಾಧಿಸಿದೆ.
ಭಟ್ಜೀಸ್ ಸೂಪರ್ ಕಿಂಗ್ಸ್ ಹಾಗೂ ಮುಂಬೈನ ರಾಕಿಂಗ್ ವೈದಿಕ್ಸ್ ತಂಡಗಳ ನಡುವೆ ನಡೆದ ಫೈನಲ್ ಪಂದ್ಯ ತೀವ್ರ ಕುತೂಹಲ ಕೆರಳಿಸಿತ್ತು. ಸಮಯೋಚಿತ ಬ್ಯಾಟಿಂಗ್ ಹಾಗೂ ಬೌಲಿಂಗ್ ನೆರವಿನೊಂದಿಗೆ ಭಟ್ಜೀಸ್ ಸೂಪರ್ ಕಿಂಗ್ಸ್ ತಂಡ ಮುಂಬೈ ರಾಕಿಂಗ್ ವೈದಿಕ್ಸ್ ತಂಡವನ್ನು 9 ವಿಕೆಟ್ ಅಂತರದಿಂದ ಪರಾಭವಗೊಳಿಸಿ ವೈದಿಕ್ ಪ್ರೀಮಿಯರ್ ಲೀಗ್ ಚಾಂಪಿಯನ್ನಾಗಿ ಹೊರಹೊಮ್ಮಿತು.
ಬರಿಮಾರು ಮಹಾಮಾಯ ಮೈದಾನದಲ್ಲಿ ನಡೆದ ವೈದಿಕ್ ಪ್ರೀಮಿಯರ್ ಲೀಗ್ (ವಿಪಿಎಲ್) ಕ್ರಿಕೆಟ್ ಪಂದ್ಯಾವಳಿಯ ಫೈನಲ್ ಪಂದ್ಯದಲ್ಲಿ ಅಜಿತ್ ಭಟ್, ಅರ್ಜುನ್ ಭಟ್ , ಹರೀಶ್ ಭಟ್ ನೇತೃತ್ವದ ರಾಕಿಂಗ್ ವೈದಿಕ್ಸ್ ಮುಂಬೈ ತಂಡವನ್ನು ಮಣಿಸುವ ಮೂಲಕ ಭಟ್ಜೀಸ್ ಸೂಪರ್ ಕಿಂಗ್ಸ್ ತಂಡ ನಾಲ್ಕನೇ ಬಾರಿಗೆ ಪ್ರತಿಷ್ಠಿತ ವಿಪಿಎಲ್ ಪ್ರಶಸ್ತಿಯನ್ನು ಎತ್ತಿ ಹಿಡಿಯಿತು.
ವೈದಿಕ್ ಪ್ರೀಮಿಯರ್ ಲೀಗ್ ಪಂದ್ಯಾಕೂಟ ವೀಕ್ಷಿಸಲು ಬರಿಮಾರುವಿನ ಮಹಾಮಾಯ ಕ್ಷೇತ್ರದ ಮೈದಾನದಲ್ಲಿ ವೈದಿಕ ಸಮೂಹ ಕಿಕ್ಕಿರಿದು ತುಂಬಿತ್ತು. ವೈದಿಕ ಕ್ರೀಡೋತ್ಸವ ವತಿಯಿಂದ ಎರಡು ದಿನಗಳ ಕಾಲ ನಡೆದ ವೈದಿಕ್ ಪ್ರೀಮಿಯರ್ ಲೀಗ್‌ನ ಒಟ್ಟು ಆರು ತಂಡಗಳ ನಡುವೆ ನಡೆದ ವಿಪಿಎಲ್ ರೋಚಕ ಹಣಾಹಣಿಗೆ ತೆರೆ ಕಂಡಿದ್ದು ಈ ಕ್ರಿಕೆಟ್ ತಂಡದ ಸದಸ್ಯರಿಗೆ ಪಂಡಿತ್ ಕಾಶಿನಾಥ್ ಆಚಾರ್ಯ, ರಾಕೇಶ್ ಪ್ರಭು ಬರಿಮಾರು, ರವೀಶ್ ಪ್ರಭು ಬರಿಮಾರು, ಸೇರಿದಂತೆ ಹಲವಾರು ಹಿರಿಯ ವೈದಿಕರು, ಯುವ ನಾಯಕರು ಪ್ರೋತ್ಸಾಹಿಸಿದರು.
ಪ್ರಶಸ್ತಿ ವಿತರಣಾ ಸಂದರ್ಭದಲ್ಲಿ ಪಂದ್ಯದಲ್ಲಿ ಗೆಲುವು ಸಾಧಿಸಿದ ತಂಡಕ್ಕೆ ಆಯೋಜಕರು ಪ್ರಶಸ್ತಿ ವಿತರಿಸಿದರು. ಕ್ರೀಡೆಗಳಿಂದ ವೈದಿಕಸಮೂಹ ಒಗ್ಗೂಡುವುದರೊಂದಿಗೆ ಸ್ನೇಹ, ಸೌಹಾರ್ದತೆ ಹೆಚ್ಚಾಗುವಂತಾಗಬೇಕು ಎಂದು ಪಂಡಿತ್ ಕಾಶಿನಾಥ್ ಆಚಾರ್ಯ ಅಭಿಪ್ರಾಯಪಟ್ಟರು. ‘ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ವೈದಿಕ ಯುವಕರ ಪ್ರತಿಭೆಯನ್ನು ಹೊರತರಲು ವಿಪಿಎಲ್ ವೇದಿಕೆ ಸೃಷ್ಟಿಯಾಗಿದೆ. ಕ್ರೀಡೆಗಳಿಂದ ಎಲ್ಲರ ಮನಸ್ಸು ಒಂದಾಗಬೇಕು’ ಎಂದರು.
ಮಹಾಮಾಯ ಕ್ಷೇತ್ರದ ಅನುವಂಶಿಯ ಮೊಕ್ತೇಸರರಾದ ರಾಕೇಶ್ ಪ್ರಭು ಬರಿಮಾರು ಮಾತನಾಡಿ, ಪಂಡಿತ್ ಕಾಶಿನಾಥ್ ಆಚಾರ್ಯ ಅವರ ಭಗೀರಥ ಪ್ರಯತ್ನವನ್ನು ಮೆಚ್ಚಿ ಎರಡು ದಿನಗಳ ಕಾಲ ನಡೆದ ಕ್ರಿಕೆಟ್ ಪಂದ್ಯಾವಳಿಯನ್ನು ವ್ಯವಸ್ಥಿತವಾಗಿ, ಅಚ್ಚುಕಟ್ಟಾಗಿ ಆಯೋಜಿಸಿರುವುದಕ್ಕೆ ಶ್ಲಾಘಿಸಿದರು. ನಂತರ ಮಾತನಾಡಿದ, ರವೀಶ್ ಪ್ರಭು ಬರಿಮಾರು ಕ್ರೀಡೆಗೆ ಮೊದಲಿನಿಂದಲು ನಮ್ಮ ಸಹೋದರ ಹಾಗೂ ನಮ್ಮ ಕುಟುಂಬ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ. ಮುಂದೆಯೂ ಸಹ ಅದೇ ರೀತಿ ನಮ್ಮ ಸಹಾಯ ಸಹಕಾರ ಇರುತ್ತದೆ. ಟೂರ್ನಿಯಲ್ಲಿ ಎಲ್ಲರೂ ಕ್ರೀಡಾ ಮನೋಭಾವದಿಂದ ಆಟವಾಡಿದ್ದೀರಿ ಹಾಗೂ ಎಲ್ಲ ತಂಡದ ಆಟಗಾರರಿಗೆ ಒಳ್ಳೆಯದಾಗಲಿ ಎಂದು ಶುಭಕೋರಿದರು.
ಪ್ರೇಕ್ಷಕರಿಗಾಗಿ ಲಕ್ಕಿ ಡ್ರಾ ಹಾಗೂ ವಿವಿಧ ಸ್ಪರ್ಧೆಗಳನ್ನು ಮಾಡಲಾಯಿತು ಅದರಲ್ಲಿ ವಿಜೇತರಿಗೂ ವಿಶೇಷ ಬಹುಮಾನಗಳನ್ನು ವಿಪಿಎಲ್ ಆಯೋಜಕರು ನೀಡಿದರು. ಈ ಸಂದರ್ಭ ಶ್ರೀಮತಿ ಕವಿತಾ ಆಚಾರ್ಯ ಮತ್ತು ಶ್ರೀಮತಿ ರಂಜನಾ ಪ್ರಭು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಎರಡು ದಿನಗಳ ಕಾಲ ನಡೆದ ವಿ ಪಿ ಎಲ್ ಟೂರ್ನಿಯಲ್ಲಿ ನಿರ್ಣಾಯಕರುಗಳಾಗಿ ಗಿರೀಶ್ ಪೈ ಮಂಗಳೂರು, ವಿಘ್ನೇಶ್ ಹೆಗ್ಡೆ, ಪ್ರತಾಪ್ ಮೂಡುಬಿದಿರೆ ಮತ್ತು ಲಕ್ಷ್ಮೀಶ್ ಬಾಳಿಗ ಸಹಕರಿಸಿದರೆ ಲಕ್ಷ್ಮೀಶ ಮಲ್ಯ ಸ್ಕೋರರ್ ಆಗಿ ಸಹಕರಿಸಿದರು. ಮಧುಸೂದನ್ ಭಟ್ ಇವರು ಸಂಸ್ಕೃತದಲ್ಲಿ ವೀಕ್ಷಕ ವಿವರಣೆಯನ್ನುನೀಡಿದರೆ ಉಳಿದಂತೆ ಸುರೇಶ್ ಭಟ್ ಮುಲ್ಕಿ, ಅರವಿಂದ್ ಭಟ್ ಚೆಂಪಿ, ರಮೇಶ್ ಇನ್ನಿತರರು ವಿವಿಧ ಭಾಷೆಗಳಲ್ಲಿ ವೀಕ್ಷಕ ವಿವರಣೆಯನ್ನು ನೀಡಿದರು.
ಸುರೇಶ್ ಭಟ್ ಮುಲ್ಕಿ ಕಾರ್ಯಕ್ರಮ ನಿರೂಪಿಸಿ, ಧನ್ಯವಾದ ಸಮರ್ಪಿಸಿದರು. ರಮೇಶ್ ಭಟ್ ಉಡುಪಿ ಸಹಕರಿಸಿದರು.