ಅಂಡರ್ 19 ವಿಶ್ವಕಪ್ ರೋಚಕ ಘಟ್ಟವನ್ನು ತಲುಪಿದೆ. ಭಾರತ ಸೆಮಿಫೈನಲ್‌ಗೆ ಪ್ರವೇಶಿಸಿದ್ದು ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ಕಿರಿಯರ ತಂಡ ಸವಾಲೊಡ್ಡಲಿದೆ. ಈ ಪಂದ್ಯ ಬುಧವಾರ ನಡೆಯಲಿದ್ದು ಗೆದ್ದ ತಂಡ ಫೈನಲ್‌ಗೆ ಪ್ರವೇಶ ಪಡೆಯಲಿದೆ. ಭಾರತ ತಂಡ ಮತ್ತೊಂದು ಬಾರಿ ಫೈನಲ್ ಪ್ರವೇಶಕ್ಕೆ ಎದುರು ನೋಡುತ್ತಿದ್ದು ಸೆಮಿಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧದ ಸವಾಲನ್ನು ಹೇಗೆ ಎದುರಿಸಲಿದೆ ಎನ್ನುವುದು ಕುತೂಹಲ ಮೂಡಿಸಿದೆ.
ಅಂಡರ್ 19 ವಿಶ್ವಕಪ್‌ನಲ್ಲಿ ನಾಲ್ಕು ಬಾರಿಯ ಚಾಂಪಿಯನ್ ತಂಡವಾಗಿರುವ ಭಾರತ ಐದನೇ ಬಾರಿ ಟ್ರೋಫಿಯನ್ನು ಮುಡಿಗೇರಿಸಿಕೊಳ್ಳುವ ಉತ್ಸಾಹದಲ್ಲಿದೆ. ಕಳೆದ ಅಂಡರ್ 19 ವಿಶ್ವಕಪ್‌ನಲ್ಲಿ ಫೈನಲ್‌ನಲ್ಲಿ ಎಡವಿದ್ದರಿಂದ ಟ್ರೋಫಿ ಯಿಂದ ವಂಚಿತವಾಗಿತ್ತು. ಆದರೆ ಈ ಬಾರಿ ಈ ಅವಕಾಶವನ್ನು ಕಳೆದುಕೊಳ್ಳಬಾರದು ಎಂದು ಅದ್ಭುತ ಪ್ರದರ್ಶನ ನೀಡುತ್ತಾ ಬಂದಿದೆ. ಇನ್ನೂ ಸೆಮಿಫೈನಲ್ ಹಂತಕ್ಕೇರಲು ಭಾರತ ಹಾಗೂ ಆಸ್ಟ್ರೇಲಿಯಾ ಕಿರಿಯರ ತಂಡಗಳು ಪ್ರತಿ ಪಂದ್ಯದಲ್ಲೂ ಅದ್ಭುತ ಆಟವನ್ನು ಪ್ರದರ್ಶಿಸುತ್ತಾ ಬಂದಿದೆ. ಎರಡು ತಂಡಗಳು ಕೂಡ ಎಲ್ಲಾ ವಿಭಾಗಗಳಲ್ಲಿಯೂ ಅತ್ಯುತ್ತಮ ಆಟವನ್ನು ಪ್ರದರ್ಶಿಸುವಲ್ಲಿ ಯಶಸ್ವಿಯಾಗಿದೆ.
ಹಾಗೆ ನೋಡಿದರೆ ಭಾರತದ ಈ ವಿಶ್ವಕಪ್ ಹಾದಿ ಸುಗಮವಾಗಿರಲಿಲ್ಲ. ಗಾಯದ ಸಮಸ್ಯೆ ಹಾಗೂ ಕೊರೊನಾವೈರಸ್ ತಂಡಕ್ಕೆ ಭಾರೀ ಆಘಾತವನ್ನು ನೀಡಿದ್ದು. ಕೆಲ ಪಂದ್ಯಗಳಲ್ಲಿ ಮೀಸಲು ಆಟಗಾರರನ್ನು ಕೂಡ ಬಳಸಿಕೊಳ್ಳಬೇಕಾದ ಅನಿವಾರ್ಯತೆಗೆ ಭಾರತ ಸಿಲುಕಿತ್ತು. ಆದರೆ ಈ ಎಲ್ಲಾ ಸವಾಲುಗಳನ್ನು ಭಾರತದ ಕಿರಿಯರ ತಂಡ ದಿಟ್ಟವಾಗಿ ಎದುರಿಸಿದ್ದು ಈಗ ಸೆಮಿಫೈನಲ್ ಹಂತಕ್ಕೆ ತಲುಪುವಲ್ಲಿ ಯಶಸ್ವಿಯಾಗಿದೆ. ಆದರೆ ಸೆಮಿಫೈನಲ್ ಹಂತದ ವೇಳೆಗೆ ಭಾರತದ ಕಿರಿಯರ ತಂಡದ ಎಲ್ಲಾ ಆಟಗಾರರು ಕೂಡ ಆಡಲು ಸಮರ್ಥರಾಗಿದ್ದಾರೆ.
ಕೊವಿಡ್ 19ಗೆ ತುತ್ತಾಗಿದ್ದ ನಿಶಾಂತ್ ಸಿಂಧು ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು ಸೆಮಿಫೈನಲ್ ಪಂದ್ಯದ ಆಯ್ಕೆಗೆ ಲಭ್ಯವಾಗಲಿದ್ದಾರೆ ಎಂದು ಮ್ಯಾನೇಜ್‌ಮೆಂಟ್ ಮಾಹಿತಿ ನೀಡಿದೆ. ಉಳಿದ ಆಟಗಾರರು ಈಗಾಗಲೇ ತಂಡವನ್ನು ಕೂಡಿಕೊಂಡಿದ್ದರು. ಇನ್ನೂ ತಂಡದ ನಾಯಕ ಯಶ್ ಧುಲ್ ಸಹಿತ ಐವರು ಆಟಗಾರರು ಲೀಗ್ ಹಂತದ ಪಂದ್ಯಗಳ ಸಂದರ್ಭದಲ್ಲಿ ಕೊರೊನಾವೈರಸ್‌ಗೆ ತುತ್ತಾಗಿದ್ದಾಗ ನಿಶಾಂತ್ ಸಿಂಧು ಎರಡು ಪಂದ್ಯಗಳಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದರು. ಆದರೆ ಉಗಾಂಡ ವಿರುದ್ಧ ಅಂತಿಮ ಲೀಗ್ ಪಂದ್ಯವನ್ನು ಆಡಿದ ಬಳಿಕ ನಿಶಾಂತ್ ಕೂಡ ಕೋವಿಡ್‌ಗೆ ತುತ್ತಾದರು. ಈಗ ಆಸ್ಟ್ರೇಲಿಯಾ ವಿರುದ್ಧಧ ನಿರ್ಣಾಯಕ ಸೆಮಿ ಫೈನಲ್ ಪಂದ್ಯಕ್ಕೆ ಮುನ್ನ ನಡೆಸಿದ ಕೋವಿಡ್ ಪರೀಕ್ಷೆಯಲ್ಲಿ ನಿಶಾಂತ್ ಕೋವಿಡ್ ವರದಿ ನೆಗೆಟಿವ್ ಬಂದಿದೆ.
*ಪಂದ್ಯದ ಆರಂಭ ಹಾಗೂ ನೇರಪ್ರಸಾರ:* ಆಸ್ಟ್ರೇಲಿಯಾ ಹಾಗೂ ಭಾರತ ಕಿರಿಯರ ತಂಡಗಳ ನಡುವಿನ ಸೆಮಿಫೈನಲ್ ಪಂದ್ಯ ಭಾರತೀಯ ಕಾಲಮಾನ – ಆರಂಭವಾಗಲಿದೆ. ಈ ಪಂದ್ಯದ ನೇರಪ್ರಸಾರ ಸ್ಟಾರ್‌ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಲಭ್ಯವಿರಲಿದೆ. ಇನ್ನೂ ಡಿಸ್ನಿ+ಹಾಟ್‌ಸ್ಟಾರ್‌ನಲ್ಲಿಯೂ ಈ ಪಂದ್ಯದ ನೇರಪ್ರಸಾರವಿರಲಿದೆ.
*ಭಾರತ ಅಂಡರ್ 19 ಸ್ಕ್ವಾಡ್:* ಯಶ್ ಧುಲ್ (ನಾಯಕ), ದಿನೇಶ್ ಬಾನಾ (ವಿಕೆಟ್ ಕೀಪರ್), ಆಂಗ್ಕ್ರಿಶ್ ರಘುವಂಶಿ, ಹರ್ನೂರ್ ಸಿಂಗ್, ಶೇಕ್ ರಶೀದ್, ಸಿದ್ದಾರ್ಥ್ ಯಾದವ್, ರಾಜ್ ಬಾವಾ, ಕೌಶಲ್ ತಾಂಬೆ, ರಾಜವರ್ಧನ್ ಹಂಗರ್ಗೇಕರ್, ವಿಕ್ಕಿ ಓಸ್ತ್ವಾಲ್, ರವಿಕುಮಾರ್, ಮಾನವ್ ಪರಾಖ್, ನಿಶಾಂತ್ ಸಿಂಧು, ಅನೀಶ್ವರ್ ಗೌತಮ್, ಆರಾಧ್ಯ ಯಾದವ್, ಗರ್ವ್ ಸಾಂಗ್ವಾನ್
*ಆಸ್ಟ್ರೇಲಿಯಾ ಅಂಡರ್ 19 ಸ್ಕ್ವಾಡ್:* ಕೂಪರ್ ಕೊನೊಲಿ (ನಾಯಕ), ಟೋಬಿಯಾಸ್ ಸ್ನೆಲ್ (ವಿಕೆಟ್ ಕೀಪರ್), ಕ್ಯಾಂಪ್‌ಬೆಲ್ ಕೆಲ್ಲವೇ, ಟೀಗ್ ವೈಲ್ಲಿ, ಕೋರೆ ಮಿಲ್ಲರ್, ಲಾಚ್ಲಾನ್ ಶಾ, ಏಡನ್ ಕಾಹಿಲ್, ವಿಲಿಯಂ ಸಾಲ್ಜ್‌ಮನ್, ಟಾಮ್ ವಿಟ್ನಿ, ಜ್ಯಾಕ್ ಸಿನ್‌ಫೀಲ್ಡ್, ಜ್ಯಾಕ್ ನಿಸ್ಬೆಟ್, ಹರ್ಕಿರತ್ ಬಾಜ್ವಾ, ಜೋಶ್ವಾಕ್ ಗಾರ್ವಾ ಹಿಗ್ಗಿನ್ಸ್, ನಿವೇತನ್ ರಾಧಾಕೃಷ್ಣನ್