ಕಳೆದ 20 ವರ್ಷಗಳಿಂದ ಶ್ರೀ ಪ್ರಕಾಶ್ ಟಿ.ಸಿ ತುಮಕೂರು ನೇತೃತ್ವದಲ್ಲಿ ಟೆನ್ನಿಸ್ ಕ್ರಿಕೆಟ್ ನಲ್ಲಿ ಪಾದರಸದಂತಹ ಚಟುವಟಿಕೆಗಳನ್ನು ನಡೆಸಿಕೊಂಡು ಬಂದಿರುವ ಸಂಸ್ಥೆ “ಚಕ್ರವರ್ತಿ ಗೆಳೆಯರ ಬಳಗ” ತುಮಕೂರು. ಹಲವಾರುಪಂದ್ಯಾಕೂಟಗಳನ್ನು ಜಯಿಸಿ, ರಾಜ್ಯ, ರಾಷ್ಟ್ರೀಯ ಮಟ್ಟದ ವಿವಿಧ ಕ್ರೀಡಾಕೂಟಗಳು, ರಕ್ತದಾನ ಶಿಬಿರ ಹೀಗೆ ಸಾಮಾಜಿಕ ಕಾರ್ಯಕ್ರಮಗಳನ್ನು ಸಂಘಟಿಸಿ ರಾಜ್ಯಾದ್ಯಂತ ತನ್ನ ಛಾಪನ್ನು ಮೂಡಿಸಿದೆ.
20 ನೇ ವಾರ್ಷಿಕೋತ್ಸವದ ಸವಿನೆನಪಿಗಾಗಿ ಕರ್ನಾಟಕ ರಾಜ್ಯ ಟೆನ್ನಿಸ್ ಕ್ರಿಕೆಟ್ ಇತಿಹಾಸದಲ್ಲಿಯೇ ಪ್ರಪ್ರಥಮ ಬಾರಿಗೆ ಸಮಾಜದ ಎಲ್ಲಾ ಸರಕಾರಿ ನೌಕರರು ಹಾಗೂ ಸೇವಾರಂಗದವರನ್ನು ಒಗ್ಗೂಡಿಸಿ ಜಿಲ್ಲಾ ಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಕೂಟ ವನ್ನು ದಿನಾಂಕ 29ರಂದು ತುಮಕೂರಿನ ಸರಕಾರಿ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ಸಂಘಟಿಸಲಿದೆ.
ಗಡಿನಾಡ(ಪಾವಗಡ)ಶಿಕ್ಷಕರ ತಂಡ, ಜಿಲಾಧಿಕಾರಿಗಳ ತಂಡ, ಪತ್ರಕರ್ತರ ತಂಡ, ಬೆಸ್ಕಾಂ(ಕೆ.ಇ.ಬಿ)ತಂಡ, ವೈದ್ಯರ ತಂಡ,ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳ ತಂಡ,ತುಮಕೂರು ಹಾಲು ಒಕ್ಕೂಟ ತಂಡ,ಶಿಕ್ಷಣ ಇಲಾಖೆ ತಂಡ,ವಕೀಲರ ತಂಡ,ತುಮಕೂರು ಮಹಾನಗರ ಪಾಲಿಕೆ ತಂಡ ಹೀಗೆ 10 ಸಂಸ್ಥೆಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದು ಪ್ರತಿಷ್ಟಿತ ಪ್ರಶಸ್ತಿಗಾಗಿ ಸೆಣಸಾಡಲಿದೆ.
ಸಮಾರೋಪ ಸಮಾರಂಭದಲ್ಲಿ ತುಮಕೂರಿನ M.L.A ಜ್ಯೋತಿ ಗಣೇಶ್,ಕೆ.ಪಿ.ಸಿ.ಸಿ ಸದಸ್ಯರಾದ ಕೃಷ್ಣಮೂರ್ತಿ ಪಿ.ಎನ್,ತುಮಕೂರಿನ ಜಿಲ್ಲಾಧಿಕಾರಿ,ಹಿರಿಯ ಪೋಲಿಸ್ ವರಿಷ್ಠರು ಭಾಗವಹಿಸಲಿದ್ದಾರೆ. ಹಾಗೂ ಹಲವು ವರ್ಷಗಳಿಂದ ತಂಡದಲ್ಲಿ ಸೇವೆ ಸಲ್ಲಿಸಿದ ಹಿರಿಯ ಆಟಗಾರರ ಸನ್ಮಾನ ಕಾರ್ಯಕ್ರಮ ನಡೆಯಲಿದೆ.
ಈ ಪಂದ್ಯಾಕೂಟದ ನೇರ ಪ್ರಸಾರವನ್ನು ಗಿರೀಶ್ ರಾವ್ ನೇತೃತ್ವದಲ್ಲಿ ಕ್ರಿಕ್ ಸೇ ಯೂ ಟ್ಯೂಬ್ ಚಾನೆಲ್ ನಲ್ಲಿ ಪ್ರಸಾರವಾಗಲಿದೆಯೆಂದು ನಿನ್ನೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಂಸ್ಥಾಪಕಾಧ್ಯಕ್ಷ ಪ್ರಕಾಶ್ ಟಿ.ಸಿ. ತಿಳಿಸಿದರು.
ಈ ಸಂದರ್ಭ ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ನರಸಿಂಹರಾಜು, ಕೆ.ಶ್ರೀಧರ್, ಧನಿಯ ಕುಮಾರ್,ಚೇತನ್,ಮಂಜು ಹಾಗೂ ಭಾಗವಹಿಸುವ 10 ತಂಡಗಳ ಕಪ್ತಾನರು ಹಾಗೂ ಚಕ್ರವರ್ತಿ ಗೆಳೆಯರ ಬಳಗದ ಸದಸ್ಯರು ಉಪಸ್ಥಿತರಿದ್ದರು.
-ಆರ್.ಕೆ.ಆಚಾರ್ಯ ಕೋಟ