ಬಾಲ್ಯದಿಂದಲೇ ಕ್ರೀಡಾ ಕ್ಷೇತ್ರದಲ್ಲಿ ಉತ್ತುಂಗ ಸಾಧನೆಯ ಉತ್ಕಟ ಬಯಕೆಯ ನಡುವೆ ತಾನೆದುರಿಸಿದ ಅಗತ್ಯ ಪೂರೈಕೆಗಳ ಕೊರತೆ,ಅಡೆ ತಡೆಗಳನ್ನು ಮೀರಿ ಕ್ರೀಡಾ ಜೀವನದಲ್ಲಿ ಉನ್ನತ ಸಾಧನೆಗೈದು, ಜೀವನದುದ್ದಕ್ಕೂ ಕ್ರೀಡಾ ಸ್ಪೂರ್ತಿ ಮೆರೆದು,ಮುಂದಿನ ಯುವ ಪೀಳಿಗೆ ಅಡೆತಡೆಗಳಿಲ್ಲದೆ ಕ್ರೀಡಾಲೋಕದಲ್ಲಿ ನಕ್ಷತ್ರಗಳಂತೆ ಮಿನುಗಬೇಕೆಂಬ ಉದ್ದೇಶದಿಂದ ಮಂಗಳೂರಿನ ಹಳೆಯಂಗಡಿಯಲ್ಲಿ ಕಟ್ಟಿದ ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್”ನ ಸಾಧನೆ, ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ,ಪ್ರತಿಷ್ಟಿತ ಬಂಟರತ್ನ ಪ್ರಶಸ್ತಿ ಸಹಿತ ಅರ್ಧ ಸಹಸ್ರಕ್ಕೂ ಮೀರಿದ ಸನ್ಮಾನಗಳಿಂದ ಪುರಸ್ಕೃತರಾದ ಸಂಸ್ಥಾಪಕಾಧ್ಯಕ್ಷ ಗೌತಮ್ ಶೆಟ್ಟಿಯವರಿಗೆ ಇದೀಗ MPMLA s ನ್ಯೂಸ್ 11ನೇ ಸೌಹಾರ್ದ ಸಂಗಮ ಕೊಡಮಾಡುವ “ಸಮಾಜರತ್ನ” ಪ್ರಶಸ್ತಿ ಒಲಿದಿದೆ.
ಜನವರಿ 7 ರ ಸಂಜೆ ಮಂಗಳೂರಿನ ಪುರಭವನದಲ್ಲಿ ನಡೆದ MPMLA’s ನ್ಯೂಸ್ 11 ರ ಸೌಹಾರ್ದ ಸಂಗಮದ ವರ್ಣರಂಜಿತ ಸಮಾರಂಭದಲ್ಲಿ, “ಸಮಾಜರತ್ನ” ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಸಂದರ್ಭ ಉಳ್ಳಾಲ ಜುಮ್ಮಾ ಮಸೀದಿ ಮತ್ತು ಸೈಯ್ಯದ್ ಮದನಿ ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್,ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಇತರ ಗಣ್ಯರು ಉಪಸ್ಥಿತರಿದ್ದರು.
ಸಮಾಜರತ್ನ ಗೌತಮ್ ಶೆಟ್ಟಿಯವರ ಜೊತೆ ಸಂಸದ ನಳಿನ್ ಕುಮಾರ್ ಕಟೀಲ್ ಅವರಿಗೆ ವರ್ಷದ ವ್ಯಕ್ತಿ,ಸುಧೀರ್ ಶೆಟ್ಟಿ ಕಣ್ಣೂರು ಉತ್ತಮ ಜನಪ್ರತಿನಿಧಿ ಪ್ರಶಸ್ತಿ, ಡಾ. ಗೋಪಾಲಕೃಷ್ಣ ಆಚಾರ್ಯ ಸಮಾಜರತ್ನ, ಡಾ.ಡಿ.ಶಿವಾನಂದ ಪೈ, ಸದಾನಂದ ಪೂಜಾರಿ ಯವರಿಗೆ ಉತ್ತಮ ವೈದ್ಯ,ಪಿ.ಜಯರಾಮ್ ರೈ ಉತ್ತಮ ವಕೀಲ, ಜಗನ್ನಾಥ್ ಶೆಟ್ಟಿ ಬಾಳ ಅವರಿಗೆ ಮೀಡಿಯಾ ಅವಾರ್ಡ್ ಸಹಿತ 45 ವಿವಿಧ ಕ್ಷೇತ್ರಗಳ ಸಾಧಕರನ್ನು ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಗೌತಮ್ ಶೆಟ್ಟಿಯವರ ಬಾಲ್ಯ : ಕುಂದಾಪುರ ದಿ|ಸುಧಾಕರ್ ಶೆಟ್ಟಿ ಹಾಗೂ ದಿ|ಕುಸುಮಾ ಶೆಟ್ಟಿ ದಂಪತಿಯ ಪುತ್ರರಾಗಿ ಜನಿಸಿದ ಗೌತಮ್ ಶೆಟ್ಟಿಯವರುಬಾಲ್ಯದಿಂದಲೇ ಕ್ರೀಡೆಯಲ್ಲಿ ಬಹಳಷ್ಟು ಆಸಕ್ತಿ ಹೊಂದಿದ್ದರು. ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಸಂದರ್ಭದಲ್ಲಿ ಕ್ರಿಕೆಟ್, ಬ್ಯಾಡ್ಮಿಂಟನ್, ಟೇಬಲ್ ಟೆನ್ನಿಸ್, ಬಾಲ್ ಬ್ಯಾಡ್ಮಿಂಟನ್ ,ವಾಲಿಬಾಲ್,ಕಬಡ್ಡಿ,ಲಾನ್ ಟೆನ್ನಿಸ್ ಮುಂತಾದ ಕ್ರೀಡೆಗಳಲ್ಲಿ ತೊಡಗಿಸಿಕೊಂಡು ಬಹಳಷ್ಟು ಪ್ರಶಸ್ತಿಗಳನ್ನು ಜಯಿಸಿದ್ದರು.
ಕುಂದಾಪುರದ ಟೊರ್ಪೆಡೋಸ್ ಕ್ರಿಕೆಟ್ ಕ್ಲಬ್ ಪ್ರೇರಣೆ : 80 ರ ದಶಕದಲ್ಲಿ ಹಿರಿಯರಾದ ನಿತ್ಯಾನಂದ ಮುನ್ನಾ ನೇತೃತ್ವದಲ್ಲಿ ಸ್ಥಾಪನೆಯಾದ” ಟೊರ್ಪೆಡೋಸ್ ಕ್ರಿಕೆಟ್ ಕ್ಲಬ್”ನಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದರು.ತಾವು ಭಾಗವಹಿಸಿದ ಪ್ರಥಮ ಪಂದ್ಯಾಕೂಟದಲ್ಲೇ ಪ್ರಶಸ್ತಿ ಬಾಚಿದ ಟೊರ್ಪೆಡೋಸ್ ಸಂಸ್ಥೆ ಹಿರಿಯ ಕ್ರಿಕೆಟಿಗರ ನೇತ್ರತ್ವದಲ್ಲಿ ರಾಜ್ಯದ ಶ್ರೇಷ್ಠ ತಂಡವಾಗಿ ರಾಜ್ಯಾದ್ಯಂತ ಗುರುತಿಸಿಕೊಂಡಿತ್ತು.ಹಿರಿಯರು ತೆರೆಮರೆಗೆ ಸರಿದಂತೆ ತಂಡವನ್ನು ಮುನ್ನಡೆಸುವ ನಾಯಕನ ಜವಾಬ್ದಾರಿ ಗೌತಮ್ ಶೆಟ್ಟಿಯವರ ಪಾಲಿಗೆ ಬಂದಂದಿನಿಂದ ಹಿಂತಿರುಗಿ ನೋಡಿಯೇ ಇಲ್ಲ.ನಾಯಕನಾಗಿ ಜವಾಬ್ದಾರಿಯುತ ಆಟವಾಡಿ, ಕರ್ನಾಟಕ ರಾಜ್ಯದ ಗಮನ ಸೆಳೆದು 100 ಕ್ಕೂ ಮಿಕ್ಕಿ ರಾಜ್ಯ, ರಾಷ್ಟ್ರಮಟ್ಟದ ಪ್ರಶಸ್ತಿಗಳನ್ನು ಜಯಿಸಿ ತನ್ನ ತಂಡವನ್ನು ರಾಜ್ಯದ ಅಗ್ರಗಣ್ಯ ಸಾಲಿಗೆ ಕೊಂಡೊಯ್ದಿದ್ದರು.90 ರ ದಶಕದಲ್ಲಿ ಹೆಚ್ಚಾಗಿ ನಡೆಯುತ್ತಿದ್ದ ಡಬಲ್ ವಿಕೆಟ್ ಪಂದ್ಯಾಟದಲ್ಲೂ ಟೆನ್ನಿಸ್ ಬಾಲ್ ನ ತೆಂಡುಲ್ಕರ್ ಹರಿಪ್ರಸನ್ನ(ಪುಟ್ಟ)ಜೊತೆಯಾಗಿ ಭಾಗವಹಿಸಿದ ಎಲ್ಲಾ ಟೂರ್ನಿಗಳಲ್ಲೂ ಪ್ರಶಸ್ತಿ ಜಯಿಸಿ,ಶ್ರೇಷ್ಠ ಆರಂಭಿಕ ಜೋಡಿ ಗೌರವಕ್ಕೂ ಪಾತ್ರರಾಗಿದ್ದರು.
ಸಮಯ ಕಳೆದಂತೆ ಹಿರಿಯ ಕ್ರಿಕೆಟಿಗರು ನೇಪಥ್ಯಕ್ಕೆ ಸರಿದು,ತಂಡದ ಆಟಗಾರರು ಉದ್ಯೋಗ ನಿಮಿತ್ತ ದೂರದೂರಿಗೆ ತೆರಳಬೇಕಾದ ಸಂದರ್ಭದಲ್ಲಿ ಟೊರ್ಪೆಡೋಸ್ ಸಂಸ್ಥೆಯ ಚಟುವಟಿಕೆಗಳನ್ನು ಮೊಟಕುಗೊಳಿಸದೆ,ಏಕಾಂಗಿಯಾಗಿ ವಿಸ್ತರಿಸುವ ಪಣ ತೊಟ್ಟು 2015 ರಲ್ಲಿ ಮಂಗಳೂರಿನ ಹಳೆಯಂಗಡಿಯ ಲೈಟ್ ಹೌಸ್ ಬಳಿ ಸುಸಜ್ಜಿತ “ಟೊರ್ಪೆಡೋಸ್ ಇಂಡೋರ್ ಸ್ಪೋರ್ಟ್ಸ್ ಕ್ಲಬ್ ಸ್ಥಾಪಿಸಿದರು.
ಟೊರ್ಪೆಡೋಸ್ ಕ್ಲಬ್ ಹಾಗೂ ಸಾಧನೆ : ವುಡನ್ ಫ್ಲೋರ್ ಬ್ಯಾಡ್ಮಿಂಟನ್ ಕೋರ್ಟ್ ಗಳು,10 ಟೇಬಲ್ ಟೆನ್ನಿಸ್ ಟೇಬಲ್ ಗಳು,ಕ್ರಿಕೆಟ್ ನೆಟ್ ಪಿಚ್,ಹೊನಲು ಬೆಳಕಿನ ವ್ಯವಸ್ಥೆಯನ್ನು ಕಲ್ಪಿಸಿ ನುರಿತ ತರಬೇತುದಾರರಿಂದ ತರಬೇತಿ ಕೊಡಿಸಿ, ಖುದ್ದು ಗೌತಮ್ ಶೆಟ್ಟಿಯವರು 26 ವರ್ಷದ ಕ್ರೀಡಾ ಬದುಕಿನಲ್ಲಿ 1,000 ಕ್ಕೂ ಅಧಿಕ ಕ್ರೀಡಾಪಟುಗಳಿಗೆ ತರಬೇತಿಯನ್ನು ನೀಡಿದ್ದ ಹೊಸ ಪ್ರತಿಭೆಗಳನ್ನು ಬೆಳಕಿಗೆ ತಂದು ಬೆಳೆಸಿದ್ದಾರೆ.
ಈ ಸಂಸ್ಥೆಯ ಹೆಮ್ಮೆಯ ವಿದ್ಯಾರ್ಥಿಗಳಾದ ಇಶಾನಿ ಹರೀಶ್,ಆರ್ನಾ ಸದೋತ್ರಾ,ಪ್ರಶಸ್ತಿ ಶೆಟ್ಟಿ ಇತ್ತೀಚೆಗಷ್ಟೇ ಮೈಸೂರಿನಲ್ಲಿ ನಡೆದ ದಸರಾ ಕ್ರೀಡಾ ಕೂಟದಲ್ಲಿ ದಾಖಲೆಯ ಜಯಗಳಿಸಿ ಸಂಸ್ಥೆಗೆ ಕೀರ್ತಿಯನ್ನು ತಂದಿದ್ದಾರೆ. ಸಾತ್ವಿಕಾ, ಪ್ರಶಸ್ತಿ.ಜಿ.ಶೆಟ್ಟಿ, ಚಿರಂತನ್, ನಹಾಲಾ, ಆಯುಷ್ ಆರ್.ಶೆಟ್ಟಿ, ಪ್ರೀತೇಶ್ ಸಾಲ್ಯಾನ್, ಟ್ರಿವಿಯ ವೇಗಸ್ ಮತ್ತು ಮಾಹಿಷ್ಮತಿ ರಾಜ್ಯ ಮಟ್ಟದ ಟೂರ್ನಿಗಳಲ್ಲಿ ಭಾಗವಹಿಸಿ ಪ್ರಶಸ್ತಿ ಜಯಿಸಿರುತ್ತಾರೆ. ಇವರಿಂದ ತರಬೇತಿ ಪಡೆದ ವಿದ್ಯಾರ್ಥಿಗಳು ರಾಜ್ಯ,ರಾಷ್ಟ್ರ ಮಟ್ಟದ ಪ್ರಶಸ್ತಿಗಳನ್ನು ಗೆದ್ದು, ಮುಂದೆ ವಿದ್ಯಾರ್ಥಿಗಳು ಕ್ರೀಡಾ ಕೋಟಾದಡಿಯಲ್ಲಿ ಇಂಜಿನಿಯರಿಂಗ್ ಹಾಗೂ ಮೆಡಿಕಲ್ ಸೀಟ್ ಪಡೆದು ಭವಿಷ್ಯವನ್ನು ರೂಪಿಸಿಕೊಂಡಿದ್ದಾರೆ.
ಅಲ್ಲದೇ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿ ಕ್ರೀಡಾಪಟುಗಳಿಗೆ ಉಚಿತವಾಗಿ ಟಿ- ಶರ್ಟ್,ಶೂ,ರ‌್ಯಾಕೆಟ್ ಅಲ್ಲದೇ ಟೇಬಲ್ ಟೆನ್ನಿಸ್,ಬ್ಯಾಡ್ಮಿಂಟನ್ ಹಾಗೂ ಕ್ರಿಕೆಟ್ ತರಬೇತಿಯನ್ನು ನೀಡಿ ಪ್ರೋತ್ಸಾಹಿಸುತ್ತಿದೆ. ಸ್ಥಾಪನೆಯಾದ ಕೇವಲ 2 ವರ್ಷಗಳಲ್ಲಿ ಸಂಸ್ಥೆಯ ನಿರಂತರ ಕ್ರೀಡಾ ಸೇವೆಯನ್ನು ಗುರುತಿಸಿ 2017 ರ ಸಾಲಿನ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಗೌತಮ್ ಶೆಟ್ಟಿಯವರು ಪಾತ್ರರಾಗಿದ್ದರು. ಅಲ್ಲದೇ ಪ್ರತಿಷ್ಟಿತ ಬಂಟರ ವಾಹಿನಿ ಪತ್ರಿಕೆಯಲ್ಲಿ ನೂರಾರು ಸಾಧಕರ ನಡುವೆ ಓದುಗರ ಆಯ್ಕೆಗೆ ಪಾತ್ರರಾಗಿ 2019 ರ ಸಾಲಿನ ಬಂಟರತ್ನ ಪ್ರಶಸ್ತಿಗೆ ಭಾಜನರಾಗಿದ್ದರು.
ವೃತ್ತಿ ಬದುಕಿನ ಸಾಧನೆ : ಕುಂದಾಪುರದ ಭಂಡಾರ್ಕಾಸ್ ಕಾಲೇಜಿನಲ್ಲಿ ಬಿ.ಎ ಪದವಿ ಹಾಗೂ ಮೈಸೂರು ಯೂನಿವರ್ಸಿಟಿಯಿಂದ ದೈಹಿಕ ಶಿಕ್ಷಣ ಪದವಿ ಮತ್ತು ರಾಜಸ್ಥಾನದ ಯೂನಿವರ್ಸಿಟಿಯಿಂದ ಮಾಸ್ಟರ್ ಆಫ್ ಫಿಕ್ಸೇಶನ್ ನಲ್ಲಿ ಮಾಸ್ಟರ್ ಆಫ್ ಫಿಸಿಕಲ್ ಎಜ್ಯುಕೇಶನ್ ಸ್ನಾತಕೋತ್ತರ ಪದವಿ ಪಡೆದು, 1997 ರಲ್ಲಿ ಉಡುಪಿಯ ಸೈಂಟ್ ಮೇರೀಸ್ ಇಂಗ್ಲೀಷ್ ಮೀಡಿಯಂ ಸ್ಕೂಲ್ ನಲ್ಲಿ ಫಿಸಿಕಲ್ ಡೈರೆಕ್ಟರ್ ಆಗಿ ಕಾರ್ಯ ನಿರ್ವಹಿಸಿ,1998 ರಿಂದ ಮಂಗಳೂರಿನ M.R.P.L ಡೆಲ್ಲಿ ಪಬ್ಲಿಕ್ ಸ್ಕೂಲ್ ನಲ್ಲಿ ದೈಹಿಕ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಗೌತಮ್ ಶೆಟ್ಟಿಯವರು,ಕ್ರೀಡಾ ಪಟುಗಳನ್ನು ಗುರುತಿಸಿ,ಪ್ರೋತ್ಸಾಹಿಸಿ ವಿದ್ಯಾಸಂಸ್ಥೆ ಸರ್ವತೋಮುಖ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ.
ಟೊರ್ಪೆಡೋಸ್ ಕ್ಲಬ್ ಆಯೋಜಿಸಿದ ಪ್ರಮುಖ ಕ್ರೀಡಾ ಸ್ಪರ್ಧೆಗಳು ನುರಿತ ಕ್ರೀಡಾ ತರಬೇತುದಾರ ಹಾಗೂ ಸಂಘಟಕರಾಗಿ ಏರ್ಪಡಿಸಿದ್ದ ಕ್ರೀಡಾ ಸ್ಪರ್ಧೆಗಳು. ಜಿಲ್ಲಾ,ರಾಜ್ಯ, ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಸುಮಾರು 100 ಕ್ಕೂ ಮಿಕ್ಕಿ ವಿ.ವಿ ಕ್ರೀಡಾ ಪಂದ್ಯಗಳು,
ಅಂತಾರಾಷ್ಟ್ರೀಯ ಮಟ್ಟದ ಟಿ.ಪಿ.ಎಲ್-2017, 2006,2010 ರಲ್ಲಿ ರಾಷ್ಟ್ರ ಮಟ್ಟದ ಹೊನಲು ಬೆಳಕಿನ ಪಂದ್ಯಾಕೂಟ, 2018 ರಲ್ಲಿ ಪುರುಷರ ರಾಷ್ಟ್ರ ಮಟ್ಟದ ಬ್ಯಾಡ್ಮಿಂಟನ್ ಟೂರ್ನಮೆಂಟ್, 2015-16 ರಲ್ಲಿ ರಾಜ್ಯ ಮಟ್ಟದ ಟೇಬಲ್ ಟೆನ್ನಿಸ್ ಪಂದ್ಯಾಟ,
2016 ರಿಂದ ಸಂಸ್ಥೆಯಲ್ಲಿ ಬ್ಯಾಡ್ಮಿಂಟನ್ ಹಾಗೂ ಟೆನ್ನಿಸ್ ಲೀಗ್ ಪಂದ್ಯಗಳು, 2002 ರಿಂದ ಅಂತರ್ ಜಿಲ್ಲಾ ಬ್ಯಾಡ್ಮಿಂಟನ್ ಮತ್ತು ಟೇಬಲ್ ಟೆನ್ನಿಸ್ ಟೂರ್ನಮೆಂಟ್, 2018 ರಲ್ಲಿ 2 ಟೇಬಲ್ ಟೆನ್ನಿಸ್ ಲೀಗ್ ಗಳು, 2018ರಲ್ಲಿ ಅಂತರ್ ಜಿಲ್ಲಾ ಮಟ್ಟದ ಬ್ಯಾಡ್ಮಿಂಟನ್, 2018 ರಲ್ಲಿ 2 ಟೇಬಲ್ ಟೆನ್ನಿಸ್ ಲೀಗ್, 2019 ರಲ್ಲಿ ಪೋಲಿಸರಿಗಾಗಿ ಅಂತರ್ ಜಿಲ್ಲಾ ಬ್ಯಾಡ್ಮಿಂಟನ್, 2019 ರಲ್ಲಿ ಜಿ.ಎಸ್.ಬಿ ಟೊರ್ಪೆಡೋಸ್ ಟ್ರೋಫಿ, 2019 ರಲ್ಲಿ ಟಿ.ಪಿ.ಎಲ್ ಲೆದರ್ ಬಾಲ್ ಪಂದ್ಯಾಕೂಟ, ಇತ್ತೀಚೆಗಷ್ಟೇ ಹಾಕಿ ಮಾಂತ್ರಿಕ ಧ್ಯಾನ್ ಚಂದ್ ಜನ್ಮದಿನಾಚರಣೆಯಂದು ನಡೆದ ಅಂತರಾಷ್ಟ್ರೀಯ ಕ್ವಿಜ್ ಮಾಸ್ಟರ್ ರಿಂದ ಕ್ವಿಜ್ ಕಾರ್ಯಕ್ರಮ ಹೀಗೆ ಹಲವಾರು ಕ್ರೀಡಾ ಸ್ಪರ್ಧೆಗಳು ತಿಂಗಳಿಗೊಂದರಂತೆ ನಡೆಯುತ್ತಿದೆ.
ಹಿರಿಯ ಕ್ರೀಡಾ ಪಟುಗಳ ಮೇಲೆ ಅಪಾರ ಗೌರವ ಹೊಂದಿರುವ ಗೌತಮ್ ಶೆಟ್ಟಿಯವರು ತಾವು ಅತಿಥಿಗಳಾಗಿ ಭಾಗವಹಿಸುವ ಕಾರ್ಯಕ್ರಮಗಳಲ್ಲಿ ಜೀವನದಲ್ಲಿ ಕ್ರೀಡೆಯ ಮಹತ್ವದ ಸಂದೇಶನ್ನು ನೀಡಿ,ಖುದ್ದು ಏರ್ಪಡಿಸಿ ವಿಶೇಷ ಕ್ರೀಡಾ ಕಾರ್ಯಕ್ರಮಗಳಲ್ಲಿ ಗೌರವಿಸುವ ಪರಿಪಾಠವನ್ನು ಕ್ರೀಡಾ ಜೀವನದುದ್ದಕ್ಕೂ ಅನುಸರಿಸಿಕೊಂಡು ಬಂದಿರುತ್ತಾರೆ.
ಗೌರವ-ಪುರಸ್ಕಾರಗಳು. ಗೌತಮ್ ಶೆಟ್ಟಿಯವರ ಕಠಿಣ ಪರಿಶ್ರಮ, ಶೃದ್ಧೆ , ನಿಷ್ಠೆ, ದೂರದೃಷ್ಟಿಯ ಚಿಂತನೆಯಿಂದ ಹಲವಾರು ಪ್ರಶಸ್ತಿ ಪುರಸ್ಕಾರಗಳು ಹುಡುಕಿಕೊಂಡು ಬಂದಿದೆ.
ಅವುಗಳಲ್ಲಿ ಪ್ರಮುಖವಾದುದು : ಪ್ರತಿಷ್ಟಿತ ಕನ್ನಡ ರಾಜ್ಯೋತ್ಸವ ಪ್ರಶಸ್ತಿ,ಸುರತ್ಕಲ್ ಸಾರ್ವಜನಿಕ ಅಭಿನಂದನಾ ಸಮಿತಿ ಸನ್ಮಾನ, ಗಣೇಶಪುರ ಕೇಸರಿ ಫ್ರೆಂಡ್ಸ್, ಅಂತರಾಷ್ಟ್ರೀಯ ಬಂಟರ ಪ್ರೊ ಕಬಡ್ಡಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ,ತೋಕೂರು ಸುಬ್ರಹ್ಮಣ್ಯ ಸ್ಪೋರ್ಟ್ಸ್ ಕ್ಲಬ್, ಸೀಮಾ ಸ್ಪೋರ್ಟ್ಸ್ ಕ್ಲಬ್ ಸೂರಿಂಜೆ, ಮಿತ್ರಪಟ್ನ ಯುವಕ ಮಂಡಲ,ಲಯನ್ಸ್ ಕ್ಲಬ್ ಮೂಡಬಿದ್ರೆ,ರಾಮ ಲಕ್ಷ್ಮಣ ಕಂಬಳ ಉತ್ಸವ,ಚಾಲೆಂಜ್ ಕ್ರಿಕೆಟ್ ಕ್ಲಬ್, ಜಾನ್ಸನ್ ಕ್ರಿಕೆಟರ್ಸ್, ಸ್ಪೋರ್ಟ್ಸ್ ಕನ್ನಡ ಲೋಕಾರ್ಪಣಾ ಸಮಾರಂಭ ಕೋಡ್ದಬ್ದು,ನವದುರ್ಗಾ ಫ್ರೆಂಡ್ಸ್, ನವೋದಯ ಯುವಕ ಮಂಡಲ, ಮೀರಾ ಕ್ರಿಕೆಟರ್ಸ್, ಹಸನಬ್ಬ ಪ್ರಶಸ್ತಿ, ಮೂಕಾಂಬಿಕಾ ಹೈಸ್ಕೂಲ್ ಕೊಲ್ಲೂರು, ಭಂಡಾರ್ಕರ್ಸ್ ಕಾಲೇಜು ಕುಂದಾಪುರ ಹೀಗೆ ನೂರಾರು ಸಂಸ್ಥೆಗಳು ಗೌತಮ್ ಶೆಟ್ಟಿಯವರ ಕ್ರೀಡಾ ಕ್ಷೇತ್ರದ ಶ್ರೇಷ್ಠ ಸಾಧನೆಗಳನ್ನು ಗುರುತಿಸಿ ಸನ್ಮಾನಿಸಿದೆ.
ಪರಿವಾರ ಸಮೇತ ಮಂಗಳೂರಿನಲ್ಲಿ ವಾಸವಿದ್ದು,ಪುತ್ರಿ ಪ್ರಶಸ್ತಿ ಹಾಗೂ ಪ್ರಥಮ್ ತಂದೆಯಿಂದಲೇ ಕೋಚಿಂಗ್ ಪಡೆದು ಸಂಸ್ಥೆಗೆ ಪ್ರಥಮ, ಪ್ರಶಸ್ತಿಗಳ ಗರಿ ಮೂಡಿಸಿರುತ್ತಾರೆ.
ಸಂಸ್ಥೆಯ ಉದ್ದೇಶ : ಎಲ್ಲರಿಗೂ ಉತ್ತಮ ಸಂಘಟನಾತ್ಮಕ ಕ್ರೀಡಾ ತರಬೇತಿ ನೀಡುವ ಮೂಲಕ ಆತ್ಮವಿಶ್ವಾಸ ತುಂಬಿ,ಸ್ವಂತ ಬಲದ ಮೂಲಕ ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸುವಂತೆ ಮಾಡುವುದು ಹಾಗೂ ಸೂಕ್ತ ಮಾರ್ಗದರ್ಶನದಿಂದ ಅವರನ್ನು ಅಂತರಾಷ್ಟ್ರೀಯ ಮಟ್ಟದ ಕ್ರೀಡಾಳಾಗಿ ಮಾರ್ಪಡಿಸಲು ಶಕ್ತಿಮೀರಿ ಪ್ರಯತ್ನಿಸುವುದೇ ಟೊರ್ಪೆಡೋಸ್ ಸಂಸ್ಥೆಯ ಪ್ರಮುಖ ಉದ್ದೇಶವಾಗಿದೆಯೆಂದು ಗೌತಮ್ ಶೆಟ್ಟಿಯವರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
ಆರ್.ಕೆ.ಆಚಾರ್ಯ ಕೋಟ