14 C
London
Monday, September 9, 2024
Homeಯಶೋಗಾಥೆಎರಡೂ ಕೈಗಳು ಇಲ್ಲದ ಶೀತಲ್ ದೇವಿ ವಿಶ್ವವನ್ನು ಗೆದ್ದ ಕಥೆ.

ಎರಡೂ ಕೈಗಳು ಇಲ್ಲದ ಶೀತಲ್ ದೇವಿ ವಿಶ್ವವನ್ನು ಗೆದ್ದ ಕಥೆ.

Date:

Related stories

spot_imgspot_imgspot_imgspot_img
spot_imgspot_img
spot_imgspot_img
spot_imgspot_img
spot_imgspot_imgspot_img
spot_imgspot_img
ಕಾಲುಗಳಿಂದ ಬಿಲ್ಲು ಹಿಡಿದು ಬಾಣ ಬಿಡುವ ಆಕೆ ಈಗ ಭಾರತದ ಕಣ್ಮಣಿ.
ಈ ವಾರ ನಡೆದ ಏಷಿಯನ್ ಪಾರಾ ಕೂಟದಲ್ಲಿ ಆಕೆ ಗೆದ್ದದ್ದು ಎರಡು ಚಿನ್ನ ಮತ್ತು ಒಂದು ಬೆಳ್ಳಿಯ ಪದಕ!
———————————————
ಆಕೆಗೆ ಹುಟ್ಟುವಾಗ ವಿಚಿತ್ರವಾದ ಕಾಯಿಲೆ ‘ ಫೋಕೊ ಮೆಲಿಯಾ’  ಅಮರಿತ್ತು. ದೇಹದ ಪ್ರಮುಖ ಅಂಗಗಳು ಬೆಳೆಯದೆ ಹೋಗುವ ವಿಚಿತ್ರ ಕಾಯಿಲೆ ಅದು. ಅದರ ಪರಿಣಾಮವಾಗಿ ಆಕೆಯ ಎರಡು ತೋಳುಗಳು ಬೆಳೆಯಲೇ ಇಲ್ಲ. ಕೈಗಳಿಂದ ಮಾಡಬೇಕಾದ ಕೆಲಸಗಳನ್ನು ಕಾಲುಗಳಿಂದ ಮಾಡಬೇಕಾದ ಅನಿವಾರ್ಯತೆ ಆಕೆಗೆ. ಅದಕ್ಕಿಂತ ಹೆಚ್ಚಾಗಿ ಸಣ್ಣ ಸಣ್ಣ ಕೆಲಸಗಳಿಗೆ ಬೇರೆಯವರನ್ನು ಅವಲಂಬಿಸಬೇಕಾದ ದೈನೇಸಿ ಬದುಕು. ಅಂತಹ ಹುಡುಗಿ ಇಂದು ಪಾರಾ ಏಷಿಯನ್  ಗೇಮ್ಸ್  ಎಂಬ ದೊಡ್ಡ ಕ್ರೀಡಾ ವೇದಿಕೆಯಲ್ಲಿ  ಬಿಲ್ಗಾರಿಕೆಯಲ್ಲಿ ಎರಡು ಚಿನ್ನ ಮತ್ತು ಒಂದು ಬೆಳ್ಳಿ ಪಡೆದು ವಿಶ್ವದ ಗಮನ ಸೆಳೆದಿದ್ದಾರೆ.
ಆಕೆ ಶೀತಲ್ ದೇವಿ. ವಯಸ್ಸು ಇನ್ನೂ 16! 
—————————————-
ಈ ಪಾರಾ ಆರ್ಚರ್ ತನ್ನ ಒಂದು ಕಾಲಿಂದ ಬಿಲ್ಲು ಹಿಡಿದು ಇನ್ನೊಂದು ಕಾಲಿನ ಬೆರಳುಗಳ ನಡುವೆ ಬಾಣವನ್ನು ಫಿಕ್ಸ್ ಮಾಡಿ ಗುರಿಯೆಡೆಗೆ ದೃಷ್ಟಿ ನೆಟ್ಟು ಬಾಣ ಬಿಟ್ಟರು ಎಂದರೆ ಅದು ನೇರವಾಗಿ ಗುರಿ ಮುಟ್ಟುವುದನ್ನು ನೋಡುವುದೇ ಚೆಂದ. ಪಾರಾ ಕ್ರೀಡೆಗಳು ಇರುವುದೇ ಇಂತಹ ಸಾಧಕರನ್ನು ಗುರುತಿಸಲು. ಆದರೆ ಕ್ರಿಕೆಟ್ ವೈಭವದಲ್ಲಿ ಮುಳುಗಿರುವ ಮಾಧ್ಯಮದ ಮಂದಿಗೆ ಇವೆಲ್ಲವೂ ಟಿ ಆರ್ ಪಿ ಸರಕಾಗಿಲ್ಲ ಅನ್ನೋದು ನನಗೆ ಬೇಜಾರಿನ ಸಂಗತಿ.
ಯಾರೀ ಶೀತಲ್ ದೇವಿ? 
———————————-
ಆಕೆ ಜಮ್ಮು ಕಾಶ್ಮೀರದ ಕ್ರಿಸ್ತ್ವಾರ್ ಎಂಬ ಪ್ರದೇಶದಿಂದ ಬಂದವರು. ಆಕೆಯ ತಂದೆ ಒಬ್ಬ ಸಣ್ಣ ಕೃಷಿಕ. ತಾಯಿ ಮೇಕೆಗಳನ್ನು ಸಾಕುವವರು. ಮನೆಯಲ್ಲಿ ತೀವ್ರವಾದ ಬಡತನ ಕಾಲು ಮುರಿದುಕೊಂಡು ಬಿದ್ದಿತ್ತು. ತನ್ನ ವಿಕಲತೆಯ ಕಾರಣಕ್ಕೆ ಆಕೆ ಕುಸಿದುಹೋದಾಗ ಅಪ್ಪ ಮತ್ತು ಅಮ್ಮ ಆಕೆಯ ನೆರವಿಗೆ ಬರುತ್ತಿದ್ದರು. ಆಕೆಗೆ ಶಿವಾನಿ ಎಂಬ ತಂಗಿ ಇದ್ದು ಆಕೆಯ ಬೆಸ್ಟ್ ಫ್ರೆಂಡ್ ಆಗಿದ್ದಾಳೆ. ಮನೆಯ ಸಮಸ್ಯೆಗಳ ನಡುವೆ ಕೂಡ ಆಕೆ ಹತ್ತನೇ ತರಗತಿಯವರೆಗೆ ಓದುತ್ತಾರೆ. ಆಗ ಬೆಂಗಳೂರಿನ ಪ್ರೀತಿ ರೈ ಅವರು ಸ್ಥಾಪನೆ ಮಾಡಿದ BEING YOU ಎಂಬ NGO ಆಕೆಯ ನೆರವಿಗೆ ನಿಲ್ಲುತ್ತದೆ. ಆಕೆಗೆ ಬೇಕಾದ ತರಬೇತಿಗಳು ಮತ್ತು ಸಪೋರ್ಟ್ ಆ NGO ಮೂಲಕ ದೊರೆಯುತ್ತದೆ. ಆಕೆಯ ಸಂಕಲ್ಪ ಶಕ್ತಿ ಮತ್ತು ಇಚ್ಛಾ ಶಕ್ತಿಗಳು ತುಂಬಾ ಎತ್ತರದಲ್ಲಿ ಇದ್ದವು ಎನ್ನುತ್ತಾರೆ ಆಕೆಯನ್ನು ಭೇಟಿ ಮಾಡಿದವರು.
ಆ ಹಂತದಲ್ಲಿ ಆಕೆಯ ಬದುಕಿನಲ್ಲಿ ಪರಿಣಾಮಕಾರಿ ತಿರುವು ತಂದವರು ಕುಲದೇವ್ ವೆದ್ವಾನ್ ಎಂಬ ಕೋಚ್. ಅವರು ಆಕೆಯನ್ನು ಕರೆದುಕೊಂಡು ಬಂದು ವೈಷ್ಣೋದೇವಿ ದೇವಳದ ಆಡಳಿತಕ್ಕೆ ಒಳಪಟ್ಟ ಬಿಲ್ಗಾರಿಕಾ ಆಕಾಡೆಮಿಗೆ ತಂದು ಸೇರಿಸುತ್ತಾರೆ.
ಖೇಲೋ ಇಂಡಿಯಾ ಫಲಾನುಭವಿ ಆಕೆ.
———————————————
ವೈಷ್ಣೋದೇವಿ ಅಕಾಡೆಮಿಯಲ್ಲಿ ಆಕೆಗೆ ತನ್ನ ನ್ಯೂನತೆಯು ಮರೆತೇ ಹೋಯಿತು. ಆಕೆ ಯಾವುದೇ ನ್ಯೂನತೆ ಇಲ್ಲದ ಬಲಿಷ್ಠ ಬಿಲ್ಗಾರರ ಜೊತೆಗೆ ಸ್ಪರ್ಧೆಯನ್ನು ಮಾಡಬೇಕಾಯಿತು. ಅಲ್ಲಿ ಮ್ಯಾಟ್ ಸ್ಟುಟ್ಸಮನ್ ಎಂಬ ಆರ್ಚರಿ ಲೆಜೆಂಡ್ ಆಕೆಯ ಸೂಕ್ಷ್ಮ  ತಪ್ಪುಗಳನ್ನು ತಿದ್ದಿ ಆಕೆಯನ್ನು ಪುಟವಿಟ್ಟ ಚಿನ್ನವಾಗಿ ರೂಪಿಸಿದರು. ಆಕೆಯ ಉತ್ಸಾಹವನ್ನು ಗಮನಿಸಿದ ಭಾರತೀಯ ಸೇನೆ ಆಕೆಯ ಶಿಕ್ಷಣದ ಮತ್ತು ತರಬೇತಿಯ ಖರ್ಚನ್ನು ಸ್ಪಾನ್ಸರ್ ಮಾಡಿತು. ಎಲ್ಲರ ಬೆಂಬಲ ಪಡೆದ ಶೀತಲ್ ದೇವಿ ಕಳೆದ ವರ್ಷ ಖೇಲೋ ಇಂಡಿಯಾ ಕೂಟದಲ್ಲಿ ಭಾಗವಹಿಸಿ ಬೆಳ್ಳಿಯ ಪದಕವನ್ನು ಗೆದ್ದರು.
ಇದೇ ವರ್ಷ ಝೆಕ್ ಗಣರಾಜ್ಯದಲ್ಲಿ ನಡೆದ ಅಂತಾರಾಷ್ಟ್ರೀಯ ಪಾರಾ ಕೂಟದಲ್ಲಿ ಭಾಗವಹಿಸಿ ಎರಡು ಬೆಳ್ಳಿ ಮತ್ತು ಒಂದು ಕಂಚಿನ ಪದಕ ಗೆದ್ದುಕೊಂಡರು. ಆ ಮೂಲಕ ಪಾರಾ ಕೂಟದಲ್ಲಿ ಪದಕವನ್ನು ಗೆದ್ದ ಮೊದಲ ತೋಳಿಲ್ಲದ ಬಿಲ್ಗಾತಿ ಆಗಿ ಆಕೆ ವಿಶ್ವದಾಖಲೆಯನ್ನೇ ಮಾಡಿದ್ದರು. ಪ್ರಪಂಚದಲ್ಲಿ ತೋಳು ಇಲ್ಲದ ಒಟ್ಟು ಆರು ಜನ ಬಿಲ್ಗಾರರು ಇದ್ದಾರೆ ಮತ್ತು ಆ ಪಟ್ಟಿಯಲ್ಲಿ ಶೀತಲ್ ದೇವಿ ಒಬ್ಬರೇ ಮಹಿಳೆ ಎನ್ನುವಾಗ ರೋಮಾಂಚನ ಆಗುತ್ತದೆ.
ಕೇವಲ ಎರಡು ವರ್ಷಗಳ ತರಬೇತಿಯಿಂದ ಚಿನ್ನದ ಫಸಲು.
——————————————–
ಆಕೆ ಬಿಲ್ಗಾರಿಕೆ ತರಬೇತು ಪಡೆಯಲು ಆರಂಭ ಮಾಡಿ ಕೇವಲ ಎರಡು ವರ್ಷ ಆಗಿದೆ. ತರಬೇತು ಇದ್ದಾಗ ಮಾತ್ರ ಇಡೀ ದಿನ ಮೈದಾನದಲ್ಲಿ ಕಳೆಯುತ್ತಾರೆ. ಆಕೆಯ ಆತ್ಮವಿಶ್ವಾಸ, ಛಲ ಮತ್ತು ಗೆಲ್ಲುವ ಹಂಬಲ ನಿಜವಾಗಿಯೂ ಅದ್ಭುತವಾಗಿ ಇವೆ. ಆಕೆಗಾಗಿ ರೂಪಿಸಲಾದ ವಿಶೇಷವಾದ ಬಿಲ್ಲು ಹಿಡಿದು ಆಕೆ ಗೆಲುವಿನತ್ತ ಗುರಿ ಇಡುವಾಗ ನೀವು ಆಕೆಯನ್ನು ಪ್ರೀತಿ ಮಾಡದೆ ಇರಲು ಸಾಧ್ಯವೇ ಇಲ್ಲ.
” ನನಗೆ ಆರಂಭದಲ್ಲಿ ಬಿಲ್ಲು ಎತ್ತುವ ಶಕ್ತಿ ಕೂಡ ಇರಲಿಲ್ಲ. ಆದರೆ ನನ್ನ ಹೆತ್ತವರು ತಮ್ಮ ಬಡತನದ ನಡುವೆ ಕೂಡ ನನ್ನನ್ನು ಪ್ರೋತ್ಸಾಹಿಸಿ ಈ ಹಂತದವರೆಗೆ ತಂದು ನಿಲ್ಲಿಸಿದ್ದಾರೆ. ನನ್ನನ್ನು ಸ್ಪಾನ್ಸರ್ ಮಾಡಿ ಪ್ರೋತ್ಸಾಹ ನೀಡಿದ ಭಾರತೀಯ ಸೇನೆಗೆ ಮತ್ತು ನನ್ನಂತಹ ಕ್ರೀಡಾಪಟುಗಳ ಆಶಾಕಿರಣ ಆಗಿರುವ ‘ಖೇಲೋ ಇಂಡಿಯಾ ‘ ಯೋಜನೆಗೆ ನಾನು ಚಿರಋಣಿ ” ಎಂದು ಆಕೆ ಹೇಳುವಾಗ ಆಕೆಯ ಕಣ್ಣುಗಳಲ್ಲಿ ಅಮೇಜಾನ್ ನದಿಯ ಪ್ರವಾಹ ಕಂಡು ಬರುತ್ತದೆ.
ಅಂದ ಹಾಗೆ ಈ ಬಾರಿಯ ಏಷಿಯನ್ ಪಾರಾ ಕೂಟದಲ್ಲಿ ಭಾರತದ ಹತ್ತಾರು ವಿಶೇಷ ಚೇತನ ಪ್ರತಿಭೆಗಳು 90+ ಪದಕಗಳನ್ನು ಭಾರತಕ್ಕೆ ತಂದುಕೊಟ್ಟಿದ್ದಾರೆ. ಒಬ್ಬೊಬ್ಬರದ್ದು ಒಂದೊಂದು ನೋವಿನ ಕಥೆ ಇದೆ. ವಿಶ್ವಕಪ್ ಕ್ರಿಕೆಟ್ ಜ್ವರದಲ್ಲಿ ಮಲಗಿರುವ ನಾವು ಒಮ್ಮೆ ಮೈ ಕೊಡಹಿ ಎದ್ದು ಅವರಿಗೆ ಒಂದು ಶುಭಾಶಯ ಹೇಳೋಣವೇ?

Latest stories

LEAVE A REPLY

Please enter your comment!
Please enter your name here

sixteen + 17 =