Categories
Action Replay ಕ್ರಿಕೆಟ್

ಮರೆಯಾದ ದೈತ್ಯ ಮಾಲ್ಕಮ್ ಮಾರ್ಷಲ್ ಮರೆಯಲಾದೀತೆ?

ಮರೆಯಲಾದೀತೆ? 1982ರಲ್ಲಿ ಭಾರತಿ ಪ್ರುಡೆನ್ಷಿಯಲ್ ಕಪ್ ನ್ನು ಅಚ್ಚರಿಯಾಗುವಂತೆ ಗೆದ್ದಿದ್ದು ಸಾಧನೆಯೇ ಅಲ್ಲ..ಅದೊಂದು ಆಕಸ್ಮಿಕ ಎಂದು ಕಪ್ ಗೆದ್ದ ಕೆಲವೇ ತಿಂಗಳುಗಳ ಅಂತರದಲ್ಲಿ ತಲೆಗೆ ಹೊಡೆದು ಹೇಳಿದ ವಿಂಡೀಸ್ ತಂಡದ ಪರಾಕ್ರಮಿಗಳಲ್ಲಿ ಅಗ್ರಗಣ್ಯ. 1999 ರ ನವೆಂಬರ್ 4ರಂದು ತನ್ನ ಇಹಲೋಕದ ಯಾತ್ರೆ ಮುಗಿಸಿದಾಗ, ಇನ್ನೂ ಕೇವಲ 41 ವಯಸ್ಸು. ಹ್ಯಾಂಪ್ ಶೈರ್ ಮತ್ತು ವಿಂಡೀಸ್ ತಂಡಗಳೆರಡಕ್ಕೂ ಕೋಚ್ ಆಗಿ ಕೆಲಸ ಮಾಡುತ್ತಿದ್ದ ಮಾರ್ಷಲ್ ಕೆಲ ದಿನಗಳ ಹಿಂದಷ್ಟೇ ತಮ್ಮ ದಶಕಗಳ ’ಸಂಗಾತಿ’ ಕೋನಿ ರಾಬರ್ಟಾಳನ್ನು ಮದುವೆಯಾಗಿದ್ದರು. ಒಬ್ಬ ಮಗನೂ ಇದ್ದ. ಆದರೆ ಕ್ಯಾನ್ಸರ್ ಎಂಬ ಮಹಾಮಾರಿ ಯಾವುದನ್ನೂ ಲೆಕ್ಕಿಸಲಿಲ್ಲ. 1999ರ ವಿಶ್ವಕಪ್ ಸಂದರ್ಭದಲ್ಲಿಯೇ ಅವರಿಗೆ ಕರುಳಿನ ಕ್ಯಾನ್ಸರ್ ಇರುವುದು ದೃಢಪಟ್ಟಿತ್ತು.

ವಿಶ್ವಕಪ್ ಗೆಲ್ಲಲಾರದೇ ಹತಾಶರಾಗಿ ಲಾಯ್ಡ್ ತಾವು ಇನ್ನುಮುಂದೆ ನಾಯಕನ ಕೆಲಸ ಮಾಡಲು ಲಬ್ಧರಿಲ್ಲವೆಂದು ’ಶಸ್ತ್ರ’ತ್ಯಾಗ ಮಾಡಿದ್ದರೂ, ಅವರ ನಾಯಕತ್ವದ ಬಗ್ಗೆ ಅಪರಿಮಿತ ವಿಶ್ವಾಸವಿದ್ದ ವಿಂಡೀಸ್ ಆಯ್ಕೆ ಸಮಿತಿ ಹಠಹಿಡಿದು ಮತ್ತೆ ಅವರಿಗೇ ನಾಯಕತ್ವದ ಪಟ್ಟ ಕಟ್ಟಿತು. ಭಾರತದ ಗೆಲುವು ಆಕಸ್ಮಿಕವೆಂದು ನಿರೂಪಿಸಲು ಇದೊಂದು ಸುವರ್ಣಾವಕಾಶವೆಂದು ಹುರುಪು ತುಂಬಿತು. ವಿಂಡೀಸ್ ಆಟಗಾರರೆಲ್ಲರ ಪ್ರೀತಿ-ಪಾತ್ರರಾಗಿದ್ದ ಲಾಯ್ಡ್ ಪಟ್ಟು ಸಡಲಿಸಿ ತಮ್ಮ ದೈತ್ಯಸೇನೆಯೊಂದಿಗೆ ಭಾರತದ ಮೇಲೆ ದಂಡೆತ್ತಿ ಬಂದರು.

ಅಲ್ಲಿಯವರೆಗೂ ಮಾರ್ಷಲ್ ಅಂದರೆ ಧೂಳೆಬ್ಬಿಸುವ ಸಾಮಾನ್ಯ ಗಾಳಿಯೆಂದು ತಿಳಿದಿದ್ದ ಕಪಿಲ್ ರ ’ಹುಡುಗರಿ’ಗೆ, ಅದೊಂದು ’ಕತ್ರೀನಾ’ ಎಂದು ತಿಳಿಯಲಾರಂಭಿಸಿದ್ದೇ ಕಾನ್ಪುರದಲ್ಲಿ. ಇಡೀ ಸರಣಿಯಲ್ಲಿ ಮಾರ್ಷಲ್ NIGHTMARE ಪದದ ಅರ್ಥ ಸವಿವರವಾಗಿ ತಿಳಿಸಿಕೊಟ್ಟರು. ’ಲಿಟಲ್ ಮಾಸ್ಟರ್’, ’ಜಿಮ್ಮಿ’, ’ಮಾಸ್ಟರ್ ಬ್ಯಾಟ್ಸ್ ಮನ್’ ಎಂಬ ಬಿರುದಾಂಕಿತರಿಗೆಲ್ಲಾ ಅವರ ಇತಿ-ಮಿತಿಗಳನ್ನು ಅರ್ಥ ಮಾಡಿಸಿದರು, ಹೋಲ್ಡಿಂಗ್, ಡೇನಿಯಲ್ ತರಹದ ಸಹದೈತ್ಯರೊಡಗೂಡಿ ಭಾರತದ ಇನ್ನಿಂಗ್ಸ್ ಗಳನ್ನು ’ಇವರು ವಿಶ್ವ ಚಾಂಪಿಯನ್ ಗಳಾಗಿದ್ದು ನಿಜವೇ??’ ಎಂಬ ಸಂದೇಹದೊಂದಿಗೆ ಪರ್ಯವಸಾನಗೊಳಿಸಿದರು.

ವಿಂಡೀಸ್ ವಿರುದ್ಧವೇ ಎರಡೂ ಇನ್ನಿಂಗ್ಸ್ ಗಳಲ್ಲಿ ಶತಕ ಬಾರಿಸಿದ ಹೆಗ್ಗಳಿಕೆ ’ಸನ್ನಿ’ ಗಾವಸ್ಕರ್ ಅವರಿಗಿತ್ತು, (1971ರಲ್ಲಿ-ಪೋರ್ಟ್ ಅಫ಼್ ಸ್ಪೈನ್ ನಲ್ಲಿ 124 ಮತ್ತು 220, ಅಲ್ಲದೇ 1978ರಲ್ಲಿ ಕಲ್ಕತ್ತದಲ್ಲಿ 107-182). ಆದರೆ 82ರ ಆ ಸರಣಿಯಲ್ಲಿ ರನ್ ಗಳು ಅವರಿಗೆ ಸುಲಭವಾಗಿ ದಕ್ಕಲಿಲ್ಲ. ಆ ಸರಣಿಯಲ್ಲಿ 10 ಬಾರಿ ಔಟ್ ಆದ ಗವಾಸ್ಕರ್, 5 ಬಾರಿ ಮಾರ್ಷಲ್ ಗೆ ಇನ್ನು 4 ಬಾರಿ ಹೋಲ್ಡಿಂಗ್ ಗೆ ವಿಕೆಟ್ ಒಪ್ಪಿಸಿದ್ದರು. ಕಾನ್ಪುರದ, ಇನ್ನಿಲ್ಲದಂತೆ ಸೋತ ಆ ಮೊದಲ ಟೆಸ್ಟ್ ಮತ್ತು ಡ್ರಾ ಆದ ಮುಂಬೈ ಟೆಸ್ಟ್ ನ ಎರಡೂ ಇನ್ನಿಂಗ್ಸ್ ಗಳಲ್ಲಿ ಮಾರ್ಷಲ್ ಅವರಿಗೇ ಗವಾಸ್ಕರ್ ವಿಕೆಟ್ ಒಪ್ಪಿಸಿದ್ದರು. (ಅಹಮದಾಬಾದ್ ಟೆಸ್ಟ್ ನಲ್ಲಿ ಹೋಲ್ಡಿಂಗ್, ಗವಾಸ್ಕರ್ ಅವರನ್ನು ಎರಡೂ ಇನ್ನಿಂಗ್ಸ್ ಗಳಲ್ಲಿ ಹೊರನಡೆಸಿದರು). ರಾಬರ್ಟ್ಸ್, ಬಾಬ್ ವಿಲ್ಲೀಸ್, ಇಮ್ರಾನ್ ತರದವರನ್ನು ಎದುರಿಸಿದ್ದ ಗವಾಸ್ಕರ್, ಆ ಸರಣಿಯಲ್ಲಿ ಅಪ್ರತಿಭರಾಗಿ ನಿಂತದ್ದು ಇಂದಿಗೂ ಅಚ್ಚರಿಯಾಗುತ್ತದೆ. ಮಾರ್ಷಲ್ ಬೌನ್ಸರ್ ಗೆ ಗವಾಸ್ಕರ್ ರ ವಿಕೆಟ್ ತರಗೆಲೆಯಂತೆ ಹಾರಿ ಬಿದ್ದಿತು…-0 ಮತ್ತು 7 -ಕಾನ್ಪುರ ದಲ್ಲಿ, 12 ಮತ್ತು 3 – ಮುಂಬೈನಲ್ಲಿ, ೦ ಕಲ್ಕತ್ತ ದಲ್ಲಿ.

ನಂತರವೂ ಇಂತಹ ಹಲವು ವೈಫಲ್ಯಗಳನ್ನು ಢಾಳಾಗಿ ಪ್ರದರ್ಶಿಸಿದರೂ, ಗವಾಸ್ಕರ್ ಮಾತ್ರ ತಂಡದಲ್ಲಿ ನಿಂತೇ ಇದ್ದರು. ನಿರುಮ್ಮಳ ಠೇಂಕಾರವನ್ನೇ ಮೈಗೂಡಿಸಿಕೊಂಡಿದ್ದ ಗವಾಸ್ಕರ್, ಕೊನೆಯವರೆಗೂ ತಂಡದಲ್ಲಿ ಉಳಿದೇ ತೀರಿದರು. ಮಾರ್ಷಲ್ ಬೌನ್ಸರ್ ಕೂಡಾ ಅವರನ್ನು ಮೈದಾನದಿಂದ ’ಔಟ್’ ಮಾಡಿತೇ ವಿನಹ, ತಂಡದಿಂದ ಅಲ್ಲ… ಬಹುಶಃ ಇದು ಮಾರ್ಷಲ್ ಬೌನ್ಸರ್ ನ ಮಿತಿಯೂ ಇರಬಹುದು. ಗವಾಸ್ಕರ್ ಆ ಸರಣಿಯಲ್ಲಿ ಶತಕ ಬಾರಿಸಿದರು. ಆದರೆ ಭಾರತವನ್ನು ಗೆಲ್ಲಿಸಲ್ಲಿಕ್ಕಾಗಲಿಲ್ಲ. ತಮಗೆ ಮಾರ್ಷಲ್ ಭಯವಿಲ್ಲ ಎಂದು ಒತ್ತಿಹೇಳುವ ಇಚ್ಛೆಯಿತ್ತೇ ಹೊರತು ತಂಡ ಗೆಲ್ಲಿಸುವ ಹುರುಪಿರಲಿಲ್ಲ.

“Revenge Series” ಎಂದೇ ಕುಚೋದ್ಯದಿಂದ ಕರೆಯಲ್ಪಡುವ ಈ ಸರಣಿಯಲ್ಲಿ, ಕಪಿಲ್ ಪಡೆಯ ನಿರಾಶಾದಾಯಕ ಪ್ರದರ್ಶನ, ವಿಶ್ವಕಪ್ ನಲ್ಲಿನ ಗೆಲುವನ್ನು ಅಣಕಿಸಿತು.1982ರ ಜೂನ್ ನಲ್ಲಿ ಚಾಂಪಿಯನ್ ಗಳೆಂದು ಬೀಗುತ್ತಿದ್ದವರು, ನಾಲ್ಕೇ ತಿಂಗಳ (ಸರಣಿ ಆರಂಭವಾಗಿದ್ದು ಅಕ್ಟೋಬರ್ 4) ಅವಧಿಯಲ್ಲಿ ಆ ಪರಿ ಸೊರಗಿದ್ದನ್ನು ಕಂಡಾಗ, ಈ ರೀತಿಯ ಗ್ರಹಿಕೆ ಸ್ವಾಭಾವಿಕ. ಪ್ರಥಮ ಟೆಸ್ಟ್ ನ ಸೋಲು ಹಾಗಿರಲಿ. ನಂತರದ ಇನ್ನೂ ಎರಡು ಟೆಸ್ಟ್ ಗಳಲ್ಲಿನ ಅನುಚಿತವಾದ ಸೋಲು, ಎಲ್ಲಾ ಒಂದು ದಿನದ ಪಂದ್ಯಗಳಲ್ಲೂ ಹೀನಾಯ ಸೋಲು, ಎಲ್ಲಾ ಪಂದ್ಯಗಳಲ್ಲೂ ಸ್ಕೋರ್ 50 ತಲುಪುವ ಮುಂಚೆಯೇ ಕನಿಷ್ಟ ೫ ವಿಕೆಟ್ ಗಳ ನಷ್ಟ….ಇವೆಲ್ಲಾ ವಿಶ್ವಕಪ್ ಗೆಲುವು ಆಕಸ್ಮಿಕವೆಂದು ನಿರೂಪಿಸಿ ಬಿಟ್ಟವು. 3-0 ಸರಣಿ ಸೋಲು, ತನ್ನ ನೆಲದಲ್ಲೇ ಭಾರತೀಯ ತಂಡ ಕಂಡ ಅತಿ ದೊಡ್ಡ ಸರಣಿ ಸೋಲಾಗಿತ್ತು. ಅಹಮದಾಬಾದ್ ನ ಮೂರನೆಯ ಟೆಸ್ಟ್ ನಲ್ಲಂತೂ, ನಮ್ಮವರು ೧೦೩ ರನ್ ಗಳಿಗೆ ಎರಡನೇ ಇನ್ನಿಂಗ್ಸ್ ಮುಗಿಸಿಕೊಂಡರು. ಕಲ್ಕತ್ತದ ಐದನೇ ಟೆಸ್ಟ್ ನ ಎರಡನೆಯ ಇನ್ನಿಂಗ್ಸ್ ನಲ್ಲಿ ಕೇವಲ ೯೦ ರನ್ಗಳಿಗೆ ಸರ್ವಪತನವಾದ ತಂಡ, ಪ್ರೇಕ್ಷಕರ ರೋಷಾವೇಶಕ್ಕೆ ಗುರಿಯಾಗಿತ್ತು. ಗವಾಸ್ಕರ್ ಮೇಲೆ ಕಲ್ಲೆಸೆತವಾಗಿತ್ತು.

ಜಮ್ ಷೆಡ್ ಪುರದ ಒಂದು ದಿನದ ಪಂದ್ಯದಲ್ಲಿ ಗ್ರೀನಿಡ್ಜ್-ರಿಚರ್ಡ್ಸ್ ಭಾರತೀಯ ಬೌಲರ್ ಗಳನ್ನು ಹೀನಾಯವಾಗಿ ಶಿಕ್ಷಿಸಿದರು. ಎರಡನೆಯ ವಿಕೆಟ್ ಗೆ 221 ರನ್ ಪೇರಿಸಿದ್ದು, ಭಾರತೀಯ ನೆಲದಲ್ಲಿ ವಿಂಡೀಸರ ಒಂದು ದಾಖಲೆ. ಅಲ್ಲದೇ ಅತಿಥಿ ತಂಡವೊಂದು ಒಂದುದಿನದ ಪಂದ್ಯದಲ್ಲಿ ಪ್ರಥಮ ಬಾರಿಗೆ ಭಾರತದಲ್ಲಿ 300 ಕ್ಕೂ ಹೆಚ್ಚು ರನ್ ಗಳಿಸಿದ ಹೆಗ್ಗಳಿಕೆ ಕೂಡಾ ವಿಂಡೀಸ್ ದಾಯಿತು. ನಮ್ಮ ತಂಡವನ್ನು ಅಪಮಾನಿಸುವ ಉದ್ದೇಶ್ಯವಿಲ್ಲ. ಆದರೆ ಸೋತ ಸೋಲು ಕೂಡಾ ವೀರೋಚಿತವಾಗಿರಲಿಲ್ಲ. ಹೋರಾಟದ ಕೆಚ್ಚು ಉಡುಗಿದ್ದಂತೂ ನಿಜ. ವಿಂಡೀಸ್ ತಂಡ ಗ್ರಹಿಸಿದ್ದು ವಾಸ್ತವದಲ್ಲಿ ಮೂಡಿಬಂದಿದ್ದು ಖೇದಕರ.

ವಿಸ್ಡೆನ್ ನಿಂದ ’ವಿಶ್ವದ ಶೇಷ್ಟ ವೇಗಿಗಳಲ್ಲಿ ಒಬ್ಬರು’ ಎಂಬ ಮುಕ್ತ ಕಂಠದ ಪ್ರಶಂಸೆಗೆ ಪಾತ್ರರಾದ ಮಾರ್ಷಲ್ 1978ರಲ್ಲಿ ಬೆಂಗಳೂರಿನಲ್ಲೇ ಟೆಸ್ಟ್ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ್ದರು.ಇನ್ನಿಂಗ್ಸ್ ಒಂದರಲ್ಲಿ 5ಕ್ಕೂ ಹೆಚ್ಚು ವಿಕೆಟ್ ಗಳನ್ನು 22 ಬಾರಿ ಗಳಿಸಿದ್ದರು. ಮಾರ್ಷಲ್ ರ ಬೌಲಿಂಗ್ ಸರಾಸರಿ 20.94. ಅಂದರೆ ಪ್ರತಿ ಸರಿಸುಮಾರು 20 ರನ್ ಗಳಿಗೆ ಒಂದು ವಿಕೆಟ್. ವೇಗದ ಬೌಲರ್ ಗಳಲ್ಲಿ ಬಹಳ ಅಪರೂಪದ, ಅಚ್ಚರಿಯ ಸಾಧನೆ. 1979-9೦ ರ ಎರಡು ವರ್ಷಗಳೂ ಐಸಿಸಿ ಶ್ರೇಯಾಂಕದಲ್ಲಿ ಮಾರ್ಷಲ್ ಮೊದಲಿಗರಾಗಿದ್ದರು. ಮಾರ್ಷಲ್ ಗಳಿಸಿದ್ದು 376 ವಿಕೆಟ್ ಗಳು. ಇಂಗ್ಲೆಂಡ್ ವಿರುದ್ಧ 22ಕ್ಕೆ 7 ವಿಕೆಟ್ ಪಡೆದ್ದದ್ದು (1988 ರಲ್ಲಿ) ಅವರ ಶ್ರೇಷ್ಟ ಸಾಧನೆಗಳಲ್ಲೊಂದು. ಒಲ್ಡ್ ಟ್ರಾಫರ್ಡ್ ನ ಸ್ಪಿನ್ನರ್ ಗಳಿಗೆಂದೇ ತಯಾರುಮಾಡಿದ್ದ ಪಿಚ್ ನಲ್ಲಿ ತನ್ನ ಕರಾರುವಾಕ್ಕಾದ ಸ್ವಿಂಗ್ ಗಳಿಂದ ಗಳಿಸಿದ ಆ 7 ವಿಕೆಟ್ ಗಳ ಅವರ ಸಾಧನೆ ಸ್ಮರಣೀಯ.

1984ರಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ನಲ್ಲಿ ತಮ್ಮ ಎಡಗೈ ಹೆಬ್ಬರಳು ಮುರಿದುಕೊಂಡಿದ್ದ ಮಾರ್ಷಲ್ ಕೈಗೆ ಪ್ಲಾಸ್ಟರ್ ಹಾಕಿಕೊಂಡು ಹನ್ನೊಂದನೆಯ ಆಟಗಾರನಾಗಿ ಬಂದದಲ್ಲದೇ ಒಂದೇ ಕೈನಲ್ಲಿ ಆಡಿ ನಾಯಕ ಗೋಮ್ಸ್ ಶತಕಗಳಿಸಲು ನೆರವಾದರು. ಆ ಸರಣಿಯಲ್ಲಿ ಇಂಗ್ಲೆಂಡ್ ತಂಡವನ್ನು ಅದರ ನೆಲದಲ್ಲೇ 5-0 ಪಂದ್ಯಗಳಿಂದ ಗುಡಿಸಿಹಾಕಿದವರಲ್ಲಿ ಮಾರ್ಷಲ್ ಮತ್ತು ಜೊಯೆಲ್ ಗಾರ್ನರ್ ಪ್ರಮುಖರು. ಆದರೆ ಆ ಸರಣಿಯದೊಂದು ದುರಂತ. ಸರಣಿಯ ಮೊದಲ ಟೆಸ್ಟ್ ನಲ್ಲಿ ಇಂಗ್ಲೇಂಡ್ ಪಡೆಯ ಆರಂಭಿಕ ಬ್ಯಾಟ್ಸ್ಮನ್ ಆಂಡಿ ಲಾಯ್ಡ್, ಮಾರ್ಷಲ್ ಎದುರು ಅಳುಕುತ್ತಲೇ ಆಟ ಆರಂಭಿಸಿದ್ದರು. 10 ರನ್ ಮಾಡಿದ್ದಾಗ ಮಾರ್ಷಲ್ ರ ಅನಾಹುತಕಾರಿ ಬೌನ್ಸರ್ ಒಂದು ಆಂಡಿ ಲಾಯ್ಡ್ ರ ತಲೆಯ ಬಲಭಾಗವನ್ನು ಜಜ್ಜಿತ್ತು. ಅದೇ ಲಾಯ್ಡ್ ರ ಮೊದಲ ಹಾಗೂ ಕೊನೆಯ ಟೆಸ್ಟ್. ಹಲವು ತಿಂಗಳು ಆಸ್ಪತ್ರೆಯಲ್ಲಿ ಕಳೆದ ಲಾಯ್ಡ್ ನಂತರ ಸ್ಥಳೀಯ ಪಂದ್ಯಗಳಲ್ಲಿ ಮಾತ್ರ ಆಡುತ್ತಿದ್ದರು. 1961-62 ರ ಭಾರತ-ವಿಂಡೀಸ್ ಪಂದ್ಯದಲ್ಲಿ, ಬಾರ್ಬಡೊಸ್ ಕ್ರೀಡಾಂಗಣದಲ್ಲಿ, ಭಾರತದ ಸ್ಫುರದ್ರೂಪಿ ಬ್ಯಾಟುಗಾರ ನಾರೀ ಕಂಟ್ರಾಕ್ಟರ್ ರ ಟೆಸ್ಟ್ ಜೀವನವೂ ಹೀಗೆಯೇ ಅಂತ್ಯಗೊಂಡಿತ್ತು. ವಿಂಡೀಸ್ ದೈತ್ಯ ಚಾರ್ಲೀ ಗ್ರೀಫಿತ್ ನ ಬೌನ್ಸರ್, ಕಂಟ್ರಾಕ್ಟರ್ ತಲೆಯ ಹಿಂಬದಿಗೆ ಬಡಿಯಿತು. ಮೈದಾನದಲ್ಲೇ ಕುಸಿದ ಕಂಟ್ರಾಕ್ಟರ್, ನಂತರ ಒಂದುವಾರ ಪ್ರಜ್ಞಾಹೀನರಾಗಿದ್ದರು. ಅವರಿಗೆ ರಕ್ತದ ತುರ್ತಿದ್ದಾಗ, ವಿಂಡೀಸ್ ಕ್ರಿಕೆಟ್ಟಿಗ ಫ಼್ರಾಂಕ್ ವೊರೆಲ್ ರಕ್ತನೀಡಿದ್ದರು.

ದಕ್ಷಿಣ ಆಫ್ರಿಕಾ ವರ್ಣಭೇದ ನೀತಿ ಅನುಸರಿಸುತ್ತಿದ್ದ ಕಾಲದಲ್ಲಿ, ಮಾರ್ಷಲ್ ಗೆ ಆ ದೇಶದ ಪರ ಆಡಲು ಒಂದು ಮಿಲಿಯನ್ ಡಾಲರ್ ಹಣದ ಆಮಿಶ ಒಡ್ಡಲಾಗಿತ್ತು. ಮಾರ್ಷಲ್ ನಯವಾಗಿ ತಿರಸ್ಕರಿಸಿ ಮತ್ತಷ್ಟು ದೊಡ್ಡವರಾದರು. ಕ್ರಿಕೆಟ್-ಜಾಹೀರಾತುಗಳೆರಡರಲ್ಲೂ ಕೊಪ್ಪರಿಗೆಯಷ್ಟು ಹಣ ಮಾಡುವ ಇಂದಿನ ಕಲಿಗಳು ಮಾರ್ಷಲ್ ರಿಂದ ಕಲಿಯಬೇಕಿದೆ.

99 ರ ಅಕ್ಟೋಬರ್ ವೇಳೆಗೆ ಕ್ಯಾನ್ಸರ್ ದಾಳಿಗೆ ಮಾರ್ಷಲ್ ತತ್ತರಿಸಿಹೋಗಿದ್ದರು. ಕರುಳು ಬಹುತೇಕ ಬೆಂದಿತ್ತು. ಮೈ ತೂಕ ಆತಂಕಕರವಾಗಿ ಇಳಿದಿತ್ತು. ನವೆಂಬರ್ ನಾಲ್ಕರಂದು ಮಾಲ್ಕಮ್ ಮಾರ್ಷಲ್ ಇಹಲೋಕದ ಯಾತ್ರೆ ಮುಗಿಸಿದರು. ವಿಶ್ವದಾದ್ಯಂತ ಶ್ರದ್ಧಾಂಜಲಿಯ ಮಹಾಪೂರವೇ ಹರಿದುಬಂತು. ಮಾರ್ಷಲ್ ರ ಕಾಫಿನ್ (ಶವಪೆಟ್ಟಿಗೆ) ಅನ್ನು ವೆಸ್ ಹಾಲ್, ಕ್ಲೈವ್ ಲಾಯ್ಡ್ ಆದಿಯಾಗಿ ಐವರು ವಿಂಡೀಸ್ ಕಪ್ತಾನರು ಹೊತ್ತು ಬಾರ್ಬಡೊಸ್ ನ ಚರ್ಚ್ ಗೆ ಸಾಗಿಸಿದರು. ಬಾಲ್ಯದಲ್ಲಿ ಆ ಚರ್ಚ್ ನ ಆಸುಪಾಸಿನಲ್ಲಿಯೇ ಮಾರ್ಷಲ್ ಗೆ ಅವರ ತಾತನಿಂದ ಕ್ರಿಕೆಟ್ ನ ಮೊದಲಪಾಠಗಳಾಗಿದ್ದವು. ತಾನು ಹುಟ್ಟಿ ಬೆಳೆದ ಬಾರ್ಬಡೊಸ್ ನಲ್ಲಿಯೇ ಮಾರ್ಷಲ್ ಮಣ್ಣಾದರು. ತನ್ನ ಟೆಸ್ಟ್ ಜೀವನದ ಕೊನೆಯ ಪಂದ್ಯವನ್ನು ವಿಂಡೀಸ್ ವಿರುದ್ಧ ಆಡಿದ ಸಚಿನ್, ತಮ್ಮ ವಿದಾಯ ಭಾಷಣದಲ್ಲಿ ಮಾರ್ಷಲ್ ರನ್ನು ನೆನೆದು ಭಾವುಕರಾಗಿದ್ದರು.

ವೆಸ್ಲಿ ಹಾಲ್, ಸೋಬರ್ಸ್, ಗ್ರೀಫ಼ಿತ್, ಗ್ರೀನಿಡ್ಜ್, ಕಾಳಿಚರಣ್, ರಾಬರ್ಟ್ಸ್, ಮುಂತಾದ ವಿಂಡೀಸ್ ದೈತ್ಯರ ನಡುವೆಯೂ ೩೭೬ ವಿಕೆಟ್ ಪಡೆದ ಮಾರ್ಷಲ್ ಗೆ ತನ್ನದೇ ಸ್ಥಾನವಿದೆ. ಇದು ಅವರ ಸಾಧನೆ. ಮಾರ್ಷಲ್ ಕೂಡಾ ಹಲವು ವೈಪರೀತ್ಯಗಳನ್ನು ಕಂಡರು. ಎಲ್ಲಾ ಕ್ರೀಡಾಪಟುಗಳಿಗೆ ಆಗುವಂತೆ ಸದಾ ಅವರಿಗೆ ಯಶಸ್ಸು ಸಿಕ್ಕಲಿಲ್ಲ. ಆದರೂ ನಾವುಗಳೆಲ್ಲಾ ಕ್ರಿಕೆಟ್ ಹುಚ್ಚು ಆಂಟಿಸಿಕೊಳ್ಳುತ್ತಿದ್ದ-ಟೀವಿ ಎಂಬುದೇ ಅಪರೂಪವಾಗಿದ್ದ-ಪಾಕೆಟ್ ಟ್ರಾನ್ಸಿಸ್ಟರ್ ನಲ್ಲಿ ಬರುತ್ತಿದ್ದ ಕಾಮೆಂಟರಿಗಾಗಿಯೋ, ಇಲ್ಲವೇ ಮರುದಿನದ ಪ್ರಜಾವಾಣಿ/ಹೆರಾಲ್ಡ್ ಗಳಲ್ಲಿ ಪ್ರಕಟವಾಗುತ್ತಿದ್ದ ರಾಜನ್ ಬಾಲ/ದೇವನಾಥ್ ರ ವರದಿಗಳಿಗಾಗಿ ಕಾದು “ಸಾಯ”ಬೇಕಿದ್ದ ಆ ದಿನಗಳಲ್ಲಿ ಭಯಮಿಶ್ರಿತ ರೋಮಾಂಚನ ಉಂಟುಮಾಡಿದ್ದ ಮಾರ್ಷಲ್ ನಮ್ಮ ನೆನಪಿಂದ ಮರೆಯಾಗಲಾರರು. ನಮ್ ಹುಡುಗ್ರು ವಿಶ್ವ ಚಾಂಪಿಯನ್ ಗಳಾದರೆಂದು ಹೆಮ್ಮೆಯಿಂದ ಬೀಗುತ್ತಿದ್ದಾಗ ನಮಗೆಲ್ಲಾ ಭ್ರಮನಿರಸನ ಮಾಡಿಸಿದ ಅವರ ಆಟ ಮತ್ತು ಆ ಸರಣಿ ಮರೆಯುವುದುಂಟೇ?

-ಶ್ರೀ ರಾಘವನ್ ಚಕ್ರವರ್ತಿ                                                                                                                                                                              ಖ್ಯಾತ ಅಂಕಣಕಾರರು

By ಕೋಟ ರಾಮಕೃಷ್ಣ ಆಚಾರ್ಯ

ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ
ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Leave a Reply

Your email address will not be published.

twenty − 1 =