“Don’t celebrate until u win” ಇಂಗ್ಲೀಷ್ ನ ಈ ಮಾತು ಎಷ್ಟರ ಮಟ್ಟಿಗೆ ಸತ್ಯ ಎನ್ನುವುದನ್ನು,ಕ್ರಿಕೆಟ್ ಜಗತ್ತು ಹಿಂದೆಂದೂ ಕಾಣದ ರೋಚಕ ಪಂದ್ಯವೊಂದು ಸಮರ್ಥಿಸಿ ತೋರಿಸಿತ್ತು. ಹೌದು ಆತ್ಮೀಯ ಕ್ರಿಕೆಟ್ ಪ್ರೇಮಿಗಳೇ,ಕ್ರಿಕೆಟ್ ಕೇವಲ ಮೂರ್ಖರ ಆಟವಷ್ಟೇ ಎಂದು ತಿಳಿದವರು ಸ್ವಯಂ ಮೂರ್ಖರು ಎನ್ನೋ ವಾದ ನನ್ನದು. ಶಿಸ್ತು, ಸಂಯಮ, ಸಂಯೋಜನೆ, ಹೋರಾಟ, ಸೋಲು ಗೆಲುವಿನ ಸಮಭಾವದ ಸ್ವೀಕೃತಿ ಕ್ರಿಕೆಟ್ ನಿಂದ ನಾವು ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಮಹತ್ತರ ಅಂಶಗಳು.
2013 ರ ಮಾರ್ಚ್ ನ ಸಮಯ.ಮಹಾಶಿವರಾತ್ರಿಯಂದು ಬಿ.ಜೆ.ಪಿ ಯುವಮೋರ್ಚಾ ವತಿಯಿಂದ ಯಲಹಂಕ ಉಪನಗರದ ಹೊಯ್ಸಳ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ 2 ಲಕ್ಷ ಮೊತ್ತದ ಅದ್ಧೂರಿ Y.P.L(ಯಲಹಂಕ ಪ್ರಿಮಿಯರ್ ಲೀಗ್)ಐತಿಹಾಸಿಕ ಟೂರ್ನಿಯು,ರಾಜ್ಯ ಟೆನ್ನಿಸ್ ವಲಯವನ್ನು ನಿಬ್ಬೆರಗಾಗಿಸಿತ್ತು ಫೈನಲ್ ಪಂದ್ಯಾಟ.
ಉಡುಪಿ,ದ.ಕ ಜಿಲ್ಲೆ ಸಹಿತ ರಾಜ್ಯದ ವಿವಿಧೆಡೆಯಿಂದ ಬಲಿಷ್ಟ ತಂಡಗಳು ಬಾಗವಹಿಸಿದ್ದ ಈ ಟೂರ್ನಿಯಲ್ಲಿ ಅಂತಿಮವಾಗಿ ಬೆಂಗಳೂರಿನ ಯುವಕರ ಪಡೆ “ಎಸ್ ಝಡ್.ಸಿ.ಸಿ” ತಂಡ, ಟೆನ್ನಿಸ್ ಕ್ರಿಕೆಟ್ ನ (ಹಿರಿಯಣ್ಣ),ಸರಿ ಸುಮಾರು 5 ದಶಕಕ್ಕೂ ಮಿಗಿಲಾದ ಸುವರ್ಣ ಇತಿಹಾಸ ಬರೆದ “ಜೈ ಕರ್ನಾಟಕ ಬೆಂಗಳೂರು” ತಂಡವನ್ನು ಎದುರಿಸಲು ಸಜ್ಜಾಗಿದ್ದವು. ಜೈ ಕರ್ನಾಟಕ ಈ ಪಂದ್ಯಾಟದಲ್ಲಿ ನಿವೃತ್ತಿಯ ಹೊಸ್ತಿಲಲ್ಲಿದ್ದ ದಂತಕಥೆಗಳಾದ(ಸಾಂಬಾಜಿ,ಮನೋಹರ್,ಭಗವಾನ್,ನಾಗೇಶ್ ಸಿಂಗ್,ಮಹೇಶ್ (ಮ್ಯಾಕ್))ಹಿರಿಯ ಆಟಗಾರರನ್ನೇ ಕಣಕ್ಕಿಳಿಸಿತ್ತು.ಈ ಪಂದ್ಯಾಟದಲ್ಲಿ ಅದ್ಭುತ ಸವ್ಯಸಾಚಿ ಆಟಗಾರರಾದ ಜಾನ್,ಪ್ರದೀಪ್ ಗೌಡ ಹಾಗೂ ಕೀಪರ್ ಆಗಿ “ಕ್ರಿಕ್ ಸೇ ಗಿರೀಶ್ ರಾವ್,ಸಚಿನ್ ಮಹಾದೇವ್ ಯುವ ಆಟಗಾರರಾಗಿ ಪ್ರತಿನಿಧಿಸಿದ್ದರು.
ಮೊದಲು ಬ್ಯಾಟಿಂಗ್ ಮಾಡಿದ್ದ ಜೈ ಕರ್ನಾಟಕ 5 ಓವರ್ ನಲ್ಲಿ 18 ರನ್ ಗಳಿಸಿ 3 ವಿಕೆಟ್ ಕಳೆದುಕೊಂಡು ಶೋಚನೀಯ ಹಂತ ತಲುಪಿದಾಗ, ನಂಬುಗೆಯ ಆಲ್ ರೌಂಡರ್ ಜಾನ್ ಹಾಗೂ ಸಚಿನ್ ಮಹಾದೇವ್ ರ ಬಿರುಸಿನ ಅಜೇಯ 30 ರನ್ನಿನ ಭಾಗೇದಾರೀಕೆಯ ಆಟ
ಎದುರಾಳಿಗೆ 8 ಓವರ್ ಗೆ 49 ರನ್ ಗಳ ಸ್ಪರ್ಧಾತ್ಮಕ ಮೊತ್ತವನ್ನು ನಿಗದಿಗೊಳಿಸಿತ್ತು.
ಬೆಂಬತ್ತಿದ “ಎಸ್.ಝಡ್.ಸಿ.ಸಿ” ಆಲ್ ರೌಂಡರ್ ಫಾರ್ಮ್ ನ ಉಚ್ಛ್ರಾಯ ಹಂತದಲ್ಲಿದ್ದ ಸ್ವಸ್ತಿಕ್ ನಾಗರಾಜ್ ರವರ ಅಮೂಲ್ಯ ಆಟದ ನೆರವಿನಿಂದ ಕೊನೆಯ 2 ಓವರ್ ಗಳಲ್ಲಿ ಕೇವಲ 4 ರನ್ ಗಳಷ್ಟೇ ಗಳಿಸಬೇಕಾದ ಹಂತಕ್ಕೆ ತಲುಪಿಸಿ ಔಟಾಗಿದ್ದರು. ಬಹುತೇಕ ವಿಜಯದ ಹೊಸ್ತಿಲಲ್ಲಿದ್ದ ಎಸ್.ಝಡ್.ಸಿ.ಸಿ ಪಾಳಯದಲ್ಲಿ ಎಲ್ಲಿಲ್ಲದ ಸಂಭ್ರಮ ಮೂಡಿತ್ತು.ಮೈದಾನದ ಒಳ,ಹೊರಗೆ ಸಿಡಿಮದ್ದುಗಳ ಪ್ರದರ್ಶನ,ಬೆಂಬಲಿಗರು,ನೆರೆದಿದ್ದ ಪ್ರೇಕ್ಷಕರ ಸಂಭ್ರಮಾಚರಣೆ ಮುಗಿಲು ಮುಟ್ಟಿತ್ತು.
7 ನೇ ಓವರ್ ಅರುಣ್ ಎಸೆತಗಾರಿಕೆಯಲ್ಲಿ 3 ರನ್ ಹರಿದು ಬಂತು.ಕೊನೆಯ ಓವರ್ ನ ಜವಾಬ್ದಾರಿ ಯುವ ಸವ್ಯಸಾಚಿ “ಸಚಿನ್ ಮಹಾದೇವ್” ಹೆಗಲ ಮೇಲಾಯಿತು.ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ ಸಚಿನ್ ಮೇಡನ್ ಓವರ್ ಎಸೆದು 3 ವಿಕೆಟ್ ಉರುಳಿಸಿ,ನೆರೆದಿದ್ದ ಪ್ರೇಕ್ಷಕರನ್ನು ಮೂಕ ವಿಸ್ಮಿತರನ್ನಾಗಿಸಿದ್ದರು.”ಜೈ ಕರ್ನಾಟಕ ಬೆಂಗಳೂರು” ಟ್ರೋಫಿ ಜಯಿಸಿತ್ತು. ಫೈನಲ್ ನ ಪಂದ್ಯಶ್ರೇಷ್ಠ ಪ್ರಶಸ್ತಿ ಅರ್ಹವಾಗಿ ಸಚಿನ್ ಪಡೆದಿದ್ದರು.
ಆರ್.ಕೆ.ಆಚಾರ್ಯ ಕೋಟ