Categories
ಕ್ರಿಕೆಟ್

ಭಾರತ ವಿಶ್ವ ವಿಜೇತರಾಗಲು ಕೇವಲ ಒಂದು ಹೆಜ್ಜೆ ದೂರ

2023ರ ವಿಶ್ವಕಪ್‌ನಲ್ಲಿ ಭಾರತದ ಯೋಧರ ಅಜೇಯ ರಥ ಮುಂದುವರಿದಿದೆ. ನ್ಯೂಜಿಲೆಂಡ್ ವಿರುದ್ಧ ಗೆಲುವು ಅನುಭವಿಸಿದ  ಟೀಂ ಇಂಡಿಯಾ ಹೆಮ್ಮೆಯಿಂದ ಟೂರ್ನಿಯ ಫೈನಲ್ ತಲುಪಿದೆ.
ಭಾರತ ತಂಡ ನಾಲ್ಕನೇ ಬಾರಿ ಫೈನಲ್‌ಗೆ ಲಗ್ಗೆ ಇಟ್ಟಿದೆ. ಟೀಂ ಇಂಡಿಯಾದ ಗೆಲುವಿನ ದೊಡ್ಡ ವಿಷಯವೆಂದರೆ ಇಲ್ಲಿಯವರೆಗೆ ಆಡಿದ 10 ಪಂದ್ಯಗಳಲ್ಲಿ ಟೀಂ ಇಂಡಿಯಾ ಅಮೋಘ ಆಟವಾಡಿ ಗೆದ್ದಿದೆ. ಇಂತಹ ಪರಿಸ್ಥಿತಿಯಲ್ಲಿ ತಂಡದ ಆಟಗಾರರು ಹಾಗೂ ಅಭಿಮಾನಿಗಳ ಉತ್ಸಾಹ ಉತ್ತುಂಗದಲ್ಲಿದೆ.
ಬಹುನಿರೀಕ್ಷಿತ ಭಾರತ ಹಾಗೂ ಆಸ್ಟ್ರೇಲಿಯಾ  ವಿಶ್ವ ಕಪ್ ಮೆಗಾ ಫೈನಲ್ ಗೆ ದಿನಗಣನೆ ಶುರುವಾಗಿದೆ. ವಿಶ್ವದ ಎರಡು ಬಲಿಷ್ಠ ತಂಡಗಳ ಕಾದಾಟದ ವೀಕ್ಷಣೆಗೆ ಅಭಿಮಾನಿಗಳು ಕಾದುಕುಳಿತಿದ್ದಾರೆ.ವಿಶ್ವಕಪ್ 2023 ರ ಫೈನಲ್ ಪಂದ್ಯವು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ. ನವೆಂಬರ್ 19 ರಂದು ಮಧ್ಯಾಹ್ನ 2 ಗಂಟೆಗೆ ನಡೆಯಲಿರುವ ಪಂದ್ಯದಲ್ಲಿ ಟೀಂ ಇಂಡಿಯಾ ಚಾಂಪಿಯನ್ ಆಗಲು ಮೈದಾನಕ್ಕಿಳಿಯಲಿದೆ. ಫೈನಲ್ ಪಂದ್ಯದ ಬಗ್ಗೆ ಈಗಾಗಲೇ ಅಭಿಮಾನಿಗಳಲ್ಲಿ ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ.
ಭಾರತದ ಬ್ಯಾಟಿಂಗ್ ಮತ್ತು ಬೌಲಿಂಗ್ ಬಗ್ಗೆ ಆತಂಕಪಡಬೇಕಾದ ಅಗತ್ಯವಿಲ್ಲ, ಅಗ್ರ ಕ್ರಮಾಂಕದ  ಬ್ಯಾಟರ್ ಗಳು ಈಗಾಗಲೇ ಟೂರ್ನಿಯುದ್ದಕ್ಕೂ ತಮ್ಮ ಸಾಹಸ ಪ್ರದರ್ಶಿಸಿದ್ದಾರೆ. ವೇಗಿಗಳು ತಂಡದ ಪ್ರಮುಖ ಅಸ್ತ್ರ ವಾಗಿದ್ದಾರೆ ಅಲ್ಲದೆ ತಮ್ಮ ನಿಯಮಿತ ಬೌಲಿಂಗ್ ಮೂಲಕ ವಿಶ್ವದ ಕ್ರಿಕೆಟ್ ದಿಗ್ಗಜರ ಗಮನ ಸೆಳೆದಿದ್ದಾರೆ.  ಬೌಲರ್ ಗಳು  ಭಯವಿಲ್ಲದೆ ಬೌಲಿಂಗ್ ಮಾಡಿ ಎದುರಾಳಿಯ ಮೈಚಳಿ ಬಿಡಿಸಿದ್ದಾರೆ.  ಭಾರತದ ವೇಗದ ಬೌಲರ್ ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ, ರವೀಂದ್ರ ಜಡೇಜಾ,ಕುಲದೀಪ್ ಯಾದವ್ ತೀಕ್ಷ್ಣ ಬೌಲಿಂಗ್ ಪ್ರದರ್ಶಿಸಿ ಬಿರುಗಾಳಿ ಎಬ್ಬಿಸಿ ಬ್ಯಾಟ್ಸ್ ಮನ್ ಗಳಿಗೆ ಸಾಕಷ್ಟು ತೊಂದರೆ ನೀಡಿದ್ದಾರೆ.
 *ಇತಿಹಾಸ ಸೃಷ್ಟಿಸಲಿರುವ ರೋಹಿತ್:* 12 ವರ್ಷಗಳ ಬಳಿಕ ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತಕ್ಕೆ ಮತ್ತೊಮ್ಮೆ ವಿಶ್ವಕಪ್ ಟ್ರೋಫಿ ವಶಪಡಿಸಿಕೊಳ್ಳುವ ಅವಕಾಶ ಸಿಕ್ಕಿದೆ. ಸದ್ಯ ಭಾರತ ತಂಡ ಅದ್ಭುತ ಫಾರ್ಮ್‌ನಲ್ಲಿದೆ. ಭಾರತದ ಆಟಗಾರರು ಚೆಂಡು ಮತ್ತು ಬ್ಯಾಟಿಂಗ್ ಎರಡರಲ್ಲೂ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಭಾರತ ತಂಡ ವಿಶ್ವಕಪ್ ಗೆಲ್ಲುವ ಪ್ರಬಲ ಪೈಪೋಟಿ ತೋರುತ್ತಿದೆ. ಸೆಮಿಫೈನಲ್‌ನಲ್ಲಿ ಭಾರತ 70 ರನ್‌ಗಳಿಂದ ಗೆಲ್ಲುವ ಮೂಲಕ ತನ್ನ ಉದ್ದೇಶವನ್ನು ಸ್ಪಷ್ಟಪಡಿಸಿದೆ.
ಇನ್ನು ಮೈದಾನ ಮತ್ತು ಪಿಚ್ ಬಗ್ಗೆ ಹೇಳುವುದಾದರೆ ಬಹುತೇಕ ಪಂದ್ಯಗಳಲ್ಲಿ ಸ್ಪಿನ್ನರ್‌ಗಳೇ ಮೇಲುಗೈ ಸಾಧಿಸಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಭಾರತದ ಸ್ಪಿನ್ ಬೌಲರ್ ಗಳಾದ ಕುಲದೀಪ್ ಮತ್ತು ಜಡೇಜಾ ಈಗಾಗಲೇ ಅದ್ಭುತವಾಗಿ ಬೌಲಿಂಗ್ ಮಾಡುತ್ತಿದ್ದಾರೆ. ಅವರನ್ನು ಎದುರಿಸುವುದು ಎದುರಾಳಿ ತಂಡಕ್ಕೆ ಸುಲಭವಲ್ಲ.ಇದರ ಹೊರತಾಗಿ ಮೈದಾನದಲ್ಲಿರುವ ಪ್ರೇಕ್ಷಕರ ಬಗ್ಗೆ ಹೇಳುವುದಾದರೆ 1 ಲಕ್ಷಕ್ಕೂ ಹೆಚ್ಚು ಭಾರತೀಯ ಪ್ರೇಕ್ಷಕರ ಮುಂದೆ ಯಾವುದೇ ತಂಡಕ್ಕೆ ಅದು ಸುಲಭವಲ್ಲ. ಟೀಂ ಇಂಡಿಯಾ ಹಾದಿಯನ್ನು ಸುಲಭಗೊಳಿಸುವಲ್ಲಿ ಭಾರತೀಯ ಆಟಗಾರರ ಹೊರತಾಗಿ ಮೈದಾನದಲ್ಲಿರುವ ಪ್ರೇಕ್ಷಕರು ಕೂಡ ದೊಡ್ಡ ಪಾತ್ರವನ್ನು ವಹಿಸುತ್ತಾರೆ ಎಂದು ಅಭಿಮಾನಿಗಳು ಮತ್ತು ತಜ್ಞರು ನಂಬಿದ್ದಾರೆ.
ಹಾಗಾದರೆ ಫೈನಲ್ ನಲ್ಲಿ ಟೀಂ ಇಂಡಿಯಾ ಗೆಲುವು ಖಚಿತವೇ?
✍️ ಸುರೇಶ್ ಭಟ್, ಮೂಲ್ಕಿ
ಕ್ರೀಡಾ ಅಂಕಣಕಾರ
ಸ್ಪೋರ್ಟ್ಸ್ ಕನ್ನಡ. ಕಾಮ್