Categories
ಭರವಸೆಯ ಬೆಳಕು

ಕುಂದಾಪುರ-ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿಯವರಿಗೆ ಹುಟ್ಟೂರ ಸನ್ಮಾನ

2021-22 ರ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿಯವರಿಗೆ ವಕ್ವಾಡಿಯ ಸಮಸ್ತ ನಾಗರಿಕರು ಒಟ್ಟಾಗಿ ಸೇರಿ ಸಂಭ್ರಮಿಸುವ ನಿಟ್ಟಿನಲ್ಲಿ ಫೆಬ್ರವರಿ 27 ರವಿವಾರದಂದು ವಕ್ವಾಡಿಯಲ್ಲಿ ಹುಟ್ಟೂರ ಸನ್ಮಾನ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.
*ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿಯವರ ಸಾಧನೆ-ಸಾಮಾಜಿಕ ಸೇವೆಯ ಕಿರು ಪರಿಚಯ*
ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ ಅವರು ಫಾರ್ಚುನ್ ಗ್ರೂಪ್ ಆಫ್ ಹೋಟೆಲ್ಸ್ ಚೇರ್ಮನ್ ಆಗಿದ್ದಾರೆ. ಕಾವಡಿ ಮೇಲ್ಮನೆ ನಾರಾಯಣ ಶೆಟ್ಟಿ ಮತ್ತು ವಕ್ವಾಡಿ ಸಾರ್ಕಲ್ಲು ಮನೆ ಸರೋಜಿನಿ ಶೆಡ್ತಿಯವರ ಪುತ್ರನಾಗಿ
1967 ಜುಲೈ 6 ರಂದು ಜನಿಸಿದ ಇವರು, ಸರ್ಕಾರಿ ಜೂನಿಯರ್ ಕಾಲೇಜು ಕೋಟೇಶ್ವರ ಮತ್ತು ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಶಿಕ್ಷಣ ಪಡೆದು ತರುವಾಯ ಬದುಕು ಕಟ್ಟಿಕೊಳ್ಳುವ ಸಲುವಾಗಿ ದುಬೈಗೆ ತೆರಳಿದವರು. ಅಲ್ಲಿ ಹೋಟೆಲ್ ವೃತ್ತಿಯ ಬಗ್ಗೆ ಆಸಕ್ತಿ ಹೊಂದಿ ತನ್ನದೇ ಆದ ಸಂಸ್ಥೆ ಸ್ಥಾಪಿಸಿದರು. ಪ್ರವೀಣ್ ಕುಮಾರ್ ಶೆಟ್ಟಿಯವರು ಯುಎಇ ಎನ್.ಆರ್.ಐ ಫೋರಂನ ಸ್ಥಾಪಕ ಅಧ್ಯಕ್ಷರಾಗಿದ್ದಾರೆ.
ಫಾರ್ಚುನ್ ಗ್ರೂಪ್ ಆಫ್ ಹೋಟೆಲ್ಸ್ ಮೂಲಕ ದುಬೈನಲ್ಲಿ ಆರು, ಭಾರತದಲ್ಲಿ 2, ಜಾರ್ಜಿಯಾದಲ್ಲಿ ಒಂದು ಹೋಟೆಲನ್ನು ಮುನ್ನಡೆಸುತ್ತಿದ್ದಾರೆ.
ವಿದೇಶಗಳಲ್ಲಿ ಓರ್ವ ಕನ್ನಡಿಗನಾಗಿ ಅಪರೂಪದ ಸಾಧನೆ ತೋರಿದ್ದಾರೆ. ಎರಡು ಸಾವಿರಕ್ಕೂ ಅಧಿಕ ಜನರಿಗೆ ಉದ್ಯೋಗ ನೀಡಿದ್ದು, ಈ ಪೈಕಿ ಶೇಕಡ 60ಕ್ಕೂ ಅಧಿಕ ಮಂದಿ ಕನ್ನಡಿಗರು ಕೆಲಸ ಪಡೆದಿದ್ದಾರೆ ಅನ್ನುವುದು ಹೆಮ್ಮೆಯ ವಿಚಾರ.ತನ್ನ ಕಾರ್ಯಕ್ಷಮತೆಯಿಂದ ಫಾರ್ಚುನ್ ಗ್ರೂಪ್ ನ ಅಧ್ಯಕ್ಷರಾಗಿ 2001 ಕಾರ್ಯನಿರ್ವಹಿಸುತ್ತಿದ್ದಾರೆ.ಈ ಮೂಲಕ ಹಲವಾರು ಸಾಮಾಜಿಕ ಕಳಕಳಿಯ ಕಾರ್ಯಗಳಲ್ಲೂ ತೊಡಗಿಸಿಕೊಂಡಿದ್ದಾರೆ. ಇನ್ನು ಕೋವಿಡ್ ವೇಳೆ ಚಾರ್ಟರ್ಡ್ ವಿಮಾನ ವ್ಯವಸ್ಥೆ ಮೂಲಕ ಕನ್ನಡಿಗರನ್ನು ತಾಯ್ನಾಡಿಗೆ ಕಳಿಸುವ ಮೂಲಕ ಸುದ್ದಿಯಾಗಿದ್ದರು. ಈ ಬಾರಿ ಕೊರೋನಾ ಸಂದರ್ಭ ತನ್ನ ಹುಟ್ಟೂರಾದ ವಕ್ವಾಡಿ ಭಾಗದ ನೂರಾರು ಮನೆಗೆ ಆಹಾರ ಸಾಮಾಗ್ರಿ ಕಿಟ್ ನೀಡಿದ್ದರು.
ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿಯವರು ತನ್ನ ಹುಟ್ಟೂರಿಗೆ ನೀಡಿದ ಕೊಡುಗೆ ಅಪಾರವಾದುದು. ಮುಖ್ಯವಾಗಿ ಉಲ್ಲೇಖಿಸುವುದಾದರೆ ವಕ್ವಾಡಿಯ ಗ್ರಾಮದೇವತೆ ಮಹಾಲಿಂಗೇಶ್ವರ ದೇವಸ್ಥಾನ ಇವರ ನೇತೃತ್ವದಲ್ಲಿ ಸುಮಾರು ಒಂದು ಕೋಟಿ ವೆಚ್ಚದಲ್ಲಿ 2012ರಲ್ಲಿ ಜೀರ್ಣೋದ್ದಾರಗೊಂಡಿತ್ತು. ವೈಯಕ್ತಿಕವಾಗಿ ಅವರು 25 ಲಕ್ಷ ರೂ ದೇಣಿಗೆ ನೀಡಿದ್ದರು. ವಕ್ವಾಡಿಯ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಹೊಸ ಕಟ್ಟಡಕ್ಕಾಗಿ ರೂ.5 ಲಕ್ಷ ನೀಡಿದ್ದಾರೆ. ವಕ್ವಾಡಿಯಲ್ಲಿ ಬಸ್ ನಿಲ್ದಾಣ, ಅಂಚೆ ಕಛೇರಿಗೆ ಹೊಸ ಕಟ್ಟಡ ನಿರ್ಮಿಸಿಕೊಟ್ಟಿದ್ದಾರೆ. ಪ್ರೌಢಶಾಲೆ, ಪ್ರಾಥಮಿಕ ಶಾಲೆಗಳೆರಡಕ್ಕೂ ಅಗತ್ಯ ಮೂಲಭೂತ ಸೌಕರ್ಯಗಳಿಗಾಗಿ ದೇಣಿಗೆ ನೀಡಿದ್ದಾರೆ. ವಕ್ವಾಡಿ ಪ್ರಾಥಮಿಕ ಶಾಲೆಗೆ ಉಚಿತ ವಾಹನದ ವ್ಯವಸ್ಥೆ ಅಲ್ಲದೇ ವಕ್ವಾಡಿಯ ಯಾವುದೇ ವ್ಯಕ್ತಿ ಕಷ್ಟ ಎಂದಾಗ ಉದಾರವಾಗಿ ಆರ್ಥಿಕ ನೆರವು ನೀಡಿ ಮಾನವೀಯತೆ ಮೆರೆದಿದ್ದಾರೆ. ತನ್ನ ಉದ್ಯಮ ಕ್ಷೇತ್ರದ ಮೂಲಕವೂ ಹಲವಾರು ಮಂದಿ ಸ್ಥಳೀಯರಿಗೆ ಉದ್ಯೋಗಾವಕಾಶಗಳನ್ನು ನೀಡಿದ್ದಾರೆ.
*ಪತ್ರಿಕಾಗೋಷ್ಠಿಯಲ್ಲಿ ಪ್ರಕಟವಾದ ಕಾರ್ಯಕ್ರಮದ ವಿವರ*
ಇತ್ತೀಚೆಗಷ್ಟೇ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಹುಟ್ಟೂರ ಸನ್ಮಾನ‌ ಸಮಿತಿಯ ಅಧ್ಯಕ್ಷರಾದ ಬಿ.ಅಪ್ಪಣ್ಣ ಹೆಗ್ಡೆ,ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿಯವರಿಗೆ ಅವರ ಹುಟ್ಟೂರಾದ ವಕ್ವಾಡಿಯ ಸಮಸ್ತ ನಾಗರಿಕರು ಒಟ್ಟಾಗಿ ಹುಟ್ಟೂರ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ ಹುಟ್ಟೂರ ಸನ್ಮಾನ ಸಮಿತಿ ಕಾರ್ಯದರ್ಶಿ ವೇಣುಗೋಪಾಲ ಹೆಗ್ಡೆ ಮಾತನಾಡಿ, ಆ ದಿನ ಬೆಳಿಗ್ಗೆ 9 ಗಂಟೆಯಿಂದ ಉಡುಪಿ ಪ್ರಸಾದ್ ನೇತ್ರಾಲಯದ ತಜ್ಞ ವೈದ್ಯರಿಂದ ಉಚಿತ ಕಣ್ಣಿನ ತಪಾಸಣಾ ಶಿಬಿರ ನಡೆಯಲಿದೆ. ಅಗತ್ಯವುಳ್ಳವರಿಗೆ ಉಚಿತ ಕನ್ನಡಕ, ಶಸ್ತ್ರಚಿಕಿತ್ಸೆ ಅಗತ್ಯವುಳ್ಳವರಿಗೆ ಉಚಿತ ಶಸ್ತ್ರಚಿಕಿತ್ಸೆ ನಡೆಸಲಾಗುವುದು. ಅದೇ ಸಂದರ್ಭದಲ್ಲಿ ಕುಂದಾಪುರ ರೂರಲ್ ಆಯುರ್ವೇದಿಕ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ತಜ್ಞ ವೈದ್ಯರಿಂದ ಆರೋಗ್ಯ ತಪಾಸಣಾ ಶಿಬಿರ ನಡೆಯಲಿದೆ. ಅಪರಾಹ್ನ 2 ಗಂಟೆಗೆ ಆಹ್ವಾನಿತ ಪ್ರಥಮ ದರ್ಜೆ ಕಾಲೇಜುಗಳ ವಿದ್ಯಾರ್ಥಿ ವಿದ್ಯಾರ್ಥಿನಿಯರಿಂದ ಸಾಂಸ್ಕøತಿಕ ಸ್ಪರ್ಧೆ ನಡೆಯಲಿದೆ. ವಿಜೇತ ತಂಡಕ್ಕೆ ಫಲಕ, ನಗದು ಬಹುಮಾನ ನೀಡಲಾಗುವುದು ಎಂದರು.
ನಂತರ 7 ವಿಶ್ವದಾಖಲೆಗಳ ಸರದಾರಿಣಿ ಯೋಗರತ್ನ ತನುಶ್ರೀ ಪಿತ್ರೋಡಿ ಇವರಿಂದ ಯೋಗ ನೃತ್ಯ ಕಾರ್ಯಕ್ರಮ ನಡೆಯಲಿದೆ.
ಸಂಜೆ 5 ಗಂಟೆಗೆ ಅಭಿನಂದನಾ ಸಮಾರಂಭ ನಡೆಯಲಿದ್ದು, ಶ್ರೀ ಸುಬ್ರಹ್ಮಣ್ಯ ಮಠಾಧೀಶರಾದ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರು ಆಶೀರ್ವಚನ ನೀಡಲಿದ್ದಾರೆ. ಕಾರ್ಯಕ್ರಮದಲ್ಲಿ ಧಾರ್ಮಿಕ, ರಾಜಕೀಯ, ಗಣ್ಯರು, ಚಲನಚಿತ್ರ ನಟರು ಭಾಗವಹಿಸಲಿದ್ದಾರೆ. ರಾತ್ರಿ 8.30ಕ್ಕೆ ಆಳ್ವಾಸ್ ಪ್ರತಿಷ್ಠಾನ ಮೂಡಬಿದ್ರೆ ಇಲ್ಲಿನ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ವೈಭವ ನಡೆಯಲಿದೆ. ರಾತ್ರಿ 8 ಗಂಟೆಯಿಂದ ಸಾಮೂಹಿಕ ಭೋಜನ ವ್ಯವಸ್ಥೆಯನ್ನೂ ಮಾಡಲಾಗಿದೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಉದ್ಯಮಿ ಪ್ರವೀಣ್ ಕುಮಾರ್ ಶೆಟ್ಟಿ ವಕ್ವಾಡಿ, ಡಾ.ಸುಧಾಕರ ನಂಬಿಯಾರ್, ಬಾಲಕೃಷ್ಣ ಶೆಟ್ಟಿ, ದಿನಕರ ಶೆಟ್ಟಿ ಉಪಸ್ಥಿತರಿದ್ದರು. ಸತೀಶ್ ಪೂಜಾರಿ ವಕ್ವಾಡಿ ವಂದಿಸಿದರು.
Categories
ಭರವಸೆಯ ಬೆಳಕು

ಕೋಲಾರ ಶ್ರೀನಿವಾಸಪುರದ ಸಮಾಜಸೇವಕಿ ಡಾ.ಗಾಯತ್ರಿ ಮುತ್ತಪ್ಪ ಇವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ

ಎಸ್.ಎನ್‌.ಎಸ್ ಕಲಾ ಸಂಗಮ ಬೆಂಗಳೂರು ಇವರು ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಸದಾಶಿವನಗರದ ವೀರಶೈವ ಲಿಂಗಾಯತ್ ಸಭಾಭವನದಲಿ ಆಯೋಜಿಸಿದ ರಾಜ್ಯ ಮಟ್ಟದ ಕಲಾಸಂಗಮ‌ ಕಾರ್ಯಕ್ರಮದಲ್ಲಿ
ಕೋಲಾರದ ಸಮಾಜಸೇವಕಿ ಡಾ.ಗಾಯತ್ರಿ ಮುತ್ತಪ್ಪ ಇವರ ಸಮಾಜಸೇವೆಯನ್ನು ಗುರುತಿಸಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದರು.
ಕೋಲಾರದ ಗಣಿನಾಡಿನ ಶ್ರೀನಿವಾಸಪುರ ತಾಲ್ಲೂಕಿನ ಮಣಿಗಾನಹಳ್ಳಿಯಲ್ಲಿ ಹುಟ್ಟಿದ ಗಾಯತ್ರಿ ಮುತ್ತಪ್ಪ ಇವರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಶ್ರೀನಿವಾಸಪುರದಲ್ಲಿ ಪೂರೈಸಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಬೆಳಗಾಂ ಇಲ್ಲಿ ಇಂಜಿನಿಯರಿಂಗ್ ಪೂರೈಸಿ, 2011 ರಲ್ಲಿ ಕಾರ್ಯನಿರ್ವಾಹಕ ಹುದ್ದೆಯಲ್ಲಿ ತೊಡಗಿಸಿಕೊಂಡ ಇವರು 2016 ರಲ್ಲಿ ತನ್ನದೇ ನಾಯಕತ್ವದಲ್ಲಿ “ಸ್ಟಾರ್ ವರ್ಟೆಕ್ಸ್” ಅನ್ನುವ ಸ್ವಂತ ಸಂಸ್ಥೆಯನ್ನು ಹುಟ್ಟು ಹಾಕಿ ಅದರಲ್ಲಿ ತನ್ನನ್ನು ತಾನು ತೊಡಗಿಸಿಕೊಂಡರು.
ಕ್ರೀಡೆ ಹಾಗೂ ಸಮಾಜ ಸೇವೆಯಲ್ಲಿ
 ನಿರಂತರವಾಗಿ ತನ್ನನ್ನು ತಾನು ತೊಡಗಿಸಿಕೊಂಡ ಇವರು ಕೊರೋನದ ಸಂಕಷ್ಟದ ನಡುವೆಯೂ ಮನೆ ಮನೆಗೆ ತೆರಳಿ ದಿನ ನಿತ್ಯದ ರೇಷನ್ ಸಾಮಗ್ರಿಗಳನ್ನು ನೀಡಿ ಮಾನವೀಯತೆ ಮೆರೆದಿದ್ದಾರೆ.2019 ರಲ್ಲಿ ಬಾದಾಮಿಯ ನೆರಪೀಡಿತ ಪ್ರದೇಶಕ್ಕೆ ತೆರಳಿ ಸಂತ್ರಸ್ತರಿಗೆ ಸಹಾಯಹಸ್ತ ನೀಡಿರುತ್ತಾರೆ.
ಇತ್ತೀಚೆಗೆ ಟಿ. ವಿ. 9 ರಲ್ಲಿ ಪ್ರಸಾರವಾದ ನೆಲಮಂಗಲದ ಗೌರಮ್ಮ ಎನ್ನುವ ಮಹಿಳೆಯ ಸಂಕಷ್ಟಕ್ಕೆ ಮರುಗಿ 3 ತಿಂಗಳ ರೇಷನ್ ಸಾಮಗ್ರಿಗಳನ್ನು ನೀಡಿದ್ದು ಅಲ್ಲದೆ ಅನೇಕ ನೊಂದ ಬಡವರಿಗೆ ಸಹಾಯ ನೀಡುತ್ತಿರುವ ಇವರು ಪ್ರಚಾರ ಬಯಸದೆ ತೆರೆಮರೆಯಲ್ಲಿಯೇ ಕೆಲಸವನ್ನು ಪ್ರೀತಿಯಿಂದ ನಡೆಸಿಕೊಂಡು ಬರುತ್ತಿದ್ದಾರೆ.
ಸರಕಾರಿ ಶಾಲೆಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಬೇಕಾಗುವ ಪುಸ್ತಕ ಮತ್ತು ಕ್ರೀಡಾ ಪರಿಕರಗಳನ್ನು ನೀಡಿ ಸಹಕರಿಸಿದ್ದಾರೆ. ಇವೆಲ್ಲದರ ಜೊತೆಗೆ ನೊಂದ ಅನೇಕರಿಗೆ ತನ್ನ ಸಂಸ್ಥೆಯಲ್ಲಿ ಕೆಲಸ ನೀಡುವ ಮೂಲಕ ಅವರ ಭವಿಷ್ಯಕ್ಕೆ ಸಹಕಾರಿಯಾಗಿದ್ದಾರೆ.
ಇತ್ತೀಚೆಗೆ ಇವರ ಸಮಾಜಮುಖಿ ಕೆಲಸ ಮತ್ತು ತೊಡಗುವಿಕೆಯನ್ನು ಗಮನಿಸಿ “UNIVERSAL DEVELOPMENT COUNCIL ” ಇವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.
Categories
ಭರವಸೆಯ ಬೆಳಕು

ಉಡುಪಿ-ಸಮಾಜ ಸೇವೆಯೊಂದಿಗೆ ಮಾನವೀಯತೆಯನ್ನು ಬೆಳಗಿಸಿದ ನಾಗಾರ್ಜುನ.ಡಿ.ಪೂಜಾರಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ

ಕೊರೋನಾ ಸಂದರ್ಭದಲ್ಲಿ 400 ಕ್ಕೂ ಹೆಚ್ಚಿನ ಕೊರೋನಾ ಸೋಂಕಿತ  ಶವಗಳ ಸಂಸ್ಕಾರಕಾರ್ಯವನ್ನು ವಿಧಿ ವಿಧಾನ ಪ್ರಕಾರ ನಡೆಸಿದ ಉಡುಪಿಯ ಕ್ರೀಡಾಪಟು ನಾಗಾರ್ಜುನ.ಡಿ.ಪೂಜಾರಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಶ್ರೀ.ದಿನೇಶ್ ಪೂಜಾರಿ ಮತ್ತು ಶ್ರೀಮತಿ‌ ಜಯಾ.ಡಿ.ಪೂಜಾರಿಯವರ ಪುತ್ರನಾದ ನಾಗಾರ್ಜುನ್
ಉಡುಪಿ ನಗರಸಭೆಯಲ್ಲಿ ಐದೂವರೆ ವರ್ಷಗಳಿಂದ ಸ್ಯಾನಿಟರಿ ಸೂಪರ್ವೈಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.ಜಗತ್ತಿನ ಜನ ಜೀವನವನ್ನೆಲ್ಲಾ ತಲ್ಲಣಗೊಳಿಸಿದ ಕೊರೋನಾ ವೈರಸ್ ಸೋಂಕಿಗೆ ಉಡುಪಿಯಲ್ಲಿ ಬಲಿಯಾದ ಸುಮಾರು 400 ಕ್ಕೂ ಹೆಚ್ಚಿನ ಜನರ ಶವಸಂಸ್ಕಾರವನ್ನು ವಿಧಿ ವಿಧಾನ ಪ್ರಕಾರ ನಡೆಸಿ,ಆ ಕುಟುಂಬದವರಿಗೆ ಚಿತಾಭಸ್ಮವನ್ನು ಒಪ್ಪಿಸುವ ತನಕ ಅಸಾಧಾರಣ
ಕಾರ್ಯವೆಸಗಿದ್ದಾರೆ.”ಕಾಯಕವೇ ಕೈಲಾಸ”ಎಂಬ ನುಡಿಯನ್ನು ಧ್ಯೇಯವಾಗಿರಿಸಿಕೊಂಡು ಸಮಾಜಸೇವೆಯಿಂದ ಜೀವನಸಾರ್ಥಕ್ಯವನ್ನು ಹೊಂದಿದ ನಾಗಾರ್ಜುನ ಕ್ರೀಡಾಲೋಕದಲ್ಲಿಯೂ ಅತ್ಯುತ್ತಮ ಆಟಗಾರನಾಗಿ ಗುರುಶ್ರೀ ಗುಂಡಿಬೈಲು,ವಿಷ್ಣುಮೂರ್ತಿ ದೊಡ್ಡಣ್ಣಗುಡ್ಡೆ,ಸ್ಯಾಟರ್ಡೇ ಪ್ಯಾಂಥರ್ಸ್ ಇಂದ್ರಾಳಿ,ಲೋಕಲ್ ಬಾಯ್ಸ್ ಉಡುಪಿ,ಎ.ಕೆ.ಸ್ಪೋರ್ಟ್ಸ್ ಉಡುಪಿ,ಬಿ.ಬಿ.ಸಿ ಅಗ್ರಹಾರ,ಸೈಮಂಡ್ಸ್ ಕಡಿಯಾಳಿ,ರಿಯಲ್ ಫೈಟರ್ಸ್ ಮೊದಲಾದ ತಂಡಗಳ ಪರವಾಗಿ ಆಡಿ ಬಹಳಷ್ಟು ಪಂದ್ಯಗಳನ್ನು ಗೆಲ್ಲಿಸಿ ಕೊಟ್ಟ ಕೀರ್ತಿಗೆ ಭಾಜನರಾಗಿದ್ದಾರೆ. ಸುಮಾರು 350 ಕ್ಕೂ ಅಧಿಕ ಪಂದ್ಯಶ್ರೇಷ್ಟ,170 ಹೆಚ್ಚಿನ ಉತ್ತಮ‌ ದಾಂಡಿಗ ಮತ್ತು ಉತ್ತಮ ಬೌಲರ್ ಹಾಗೂ 45 ಸರಣಿ ಶ್ರೇಷ್ಠ ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡಿದ್ದಾರೆ.
ಉಡುಪಿ ಜಿ.ಶಂಕರ್ ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯರಿಗೆ ಉಚಿತವಾಗಿಯೇ ಕೋಚಿಂಗ್ ನೀಡುತ್ತಿದ್ದಾರೆ.ಇವರ ಸಮಾಜಸೇವೆಯನ್ನು ಮನಗಂಡ ಅನೇಕ‌ ಸಂಘಸಂಸ್ಥೆಗಳು ಗುರುತಿಸಿ ಗೌರವಿಸಿದೆ.
Categories
ಅಥ್ಲೆಟಿಕ್ಸ್

ತನುಶ್ರೀ ಪಿತ್ರೋಡಿ-ವಿಶ್ವದಾಖಲೆಯ ಸರದಾರಿಣಿಯ ಸಾಧನೆಯ ಸರಪಣಿಯಲ್ಲಿ ಮಿನುಗುತಿದೆ ರಾಜ್ಯೋತ್ಸವ ಪ್ರಶಸ್ತಿಯ ಗರಿ

ತುಂಬು ಸಾಂಸ್ಕೃತಿಕ ಕಲಾ ತವರೆಂಬ ಹಿರಿಮೆಯಲ್ಲಿ ಕಂಗೊಳಿಸುವ ಕರಾವಳಿಯು ತನ್ನೊಡಲಿನಲ್ಲಿ  ಅಗಾಧವಾದ ವಿಶೇಷ ಪ್ರತಿಭೆಗಳ ಅನರ್ಘ್ಯ ರತ್ನಗಳನ್ನೇ ಬಚ್ಚಿಟ್ಟುಕೊಂಡಿದೆ. ಇಂತಹ ಅಪರೂಪದ ಮಣಿಮಾಲೆಗಳಲ್ಲಿ ತನುಶ್ರೀ ಪಿತ್ರೋಡಿ ಎಂಬ ಕಿರಿಯ ವಯಸ್ಸಿನ ಹಿರಿಮೆಯ ಸಾಧಕಿ ತನ್ನಲ್ಲಿನ ವಿಶೇಷ ಹೊಳಪಿನಿಂದ ಜಗವನ್ನೇ ತನ್ನತ್ತ ಸೆಳೆಯುತ್ತಿದ್ದಾಳೆ.
ಉಡುಪಿ ಜಿಲ್ಲೆಯ ಉದ್ಯಾವರ ಬಳಿಯ ಪಿತ್ರೋಡಿಯ ಉದಯ್ ಕುಮಾರ್ ಹಾಗೂ ಸಂಧ್ಯಾ ದಂಪತಿಯ ಪುತ್ರಿಯಾಗಿ 2009 ರಲ್ಲಿ ಜನಿಸಿದ  ತನುಶ್ರೀ  ಇಂದು ವಿಶ್ವಮಟ್ಟದ ದಾಖಲೆಗಳ ಸರದಾರಿಣಿ. ಹೆಚ್ಚಿನ ಮಕ್ಕಳು ನಡೆಯಲು ಹಾಗೂ ಮಾತನಾಡಲು ಕಲಿಯುವಂತಹ ಮೂರುವರೆ ವರ್ಷದ ವಯಸ್ಸಿನಲ್ಲಿ ತನುಶ್ರೀಯು ನೃತ್ಯ ಮಾಡುವಷ್ಟರ ಮಟ್ಟಿಗೆ ಚುರುಕಾಗಿದ್ದಳು. ಇವಳಿಗೆ  ನೃತ್ಯದಲ್ಲಿದ್ದ ಬಹಳಷ್ಟು ಆಸಕ್ತಿ ಹಾಗೂ ಪ್ರತಿಭೆಯನ್ನು ಗಮನಿಸಿದ್ದ ಹೆತ್ತವರು ಉಡುಪಿಯ ನೃತ್ಯ  ಶಾಲೆಗೆ ಸೇರಿಸಿ  ಅಗತ್ಯವಾದ ಮಾರ್ಗದರ್ಶನವನ್ನು ಕೊಡಿಸಿದರು. ತನಗೆ ಸಿಕ್ಕ ತರಬೇತಿಯಿಂದಲೇ ತನುಶ್ರೀ ಭರತನಾಟ್ಯ, ಯಕ್ಷಗಾನ, ಹಿಪ್-ಹಾಪ್, ಅರೆ ಶಾಸ್ತ್ರೀಯ ನೃತ್ಯದಲ್ಲಿ ಬಹಳಷ್ಟು ಪರಿಣಿತಿಯನ್ನು ಪಡೆದವಳು ತನ್ನಲ್ಲಿದ್ದ ಸುಂದರ ಪ್ರತಿಭೆಯನ್ನು ಹಲವು ವೇದಿಕೆಗಳಲ್ಲಿ ಅನಾವರಣಗೊಳಿಸಿದಳು. ತನ್ನ ಚಿಕ್ಕ ವಯಸ್ಸಿನಲ್ಲೇ  ಮುನ್ನೂರಕ್ಕೂ ಅಧಿಕ ವೇದಿಕೆಗಳು ಅವಳಲ್ಲಿನ ಪ್ರತಿಭೆಗೆ ಸಾಕ್ಷಿಯಾದವು.
ನೃತ್ಯದಲ್ಲಿ ವಿಶೇಷ ತರಬೇತಿ ಹಾಗೂ ಪರಿಣಿತಿ ಪಡೆದಿದ್ದ ತನುಶ್ರೀಯು ಯೋಗದಲ್ಲಿ ವಿಶ್ವವಿಖ್ಯಾತ ಸಾಧನೆಯ ಮೈಲಿಗಲ್ಲು ಸ್ಥಾಪಿಸಲು ಕಾರಣವಾದ ಸನ್ನಿವೇಶವೇ ಬಲು ಸೋಜಿಗ. ಚಿಕ್ಕಂದಿನಿಂದಲೇ ಯಾವುದೇ ತರಗತಿಗಳಿಗೆ ಹೋಗದೇ ಆನ್ ಲೈನ್ ವಿಡಿಯೋಗಳ ಮೂಲಕ ಯೋಗದ ಹವ್ಯಾಸವನ್ನು ರೂಢಿಸಿಕೊಂಡಿದ್ದ ತನುಶ್ರೀ ಒಂದು ದಿನ ಖುಷಿ ಎಂಬ ಮೈಸೂರಿನ ಬಾಲಕಿ ನೀರಾಲಂಬ ಪೂರ್ಣ ಚಕ್ರಾಸನ ಎಂಬ ಆಸನವನ್ನು ಒಂದು ನಿಮಿಷಕ್ಕೆ 15 ಬಾರಿ ಮಾಡಿ ದಾಖಲೆ ಬರೆದ ವೀಡಿಯೋವನ್ನು ನೋಡಿ ಆ ಕ್ಷಣಕ್ಕೆ ತಾನು ನಿಮಿಷಕ್ಕೆ ಅದೇ ಆಸನವನ್ನು 9 ಬಾರಿ ಮಾಡಿದಾಗ ಪ್ರತ್ಯಕ್ಷದರ್ಶಿಯಾದ  ತಂದೆ ಉದಯಕುಮಾರ್ ಅವರಿಗೆ ತನ್ನ ಮಗಳ ದೇಹಶಕ್ತಿಯ ಕುರಿತು ಕುತೂಹಲವೇ ಹೆಚ್ಚಾಗಿ ಖುಷಿಯ ದಾಖಲೆಯನ್ನು ಮುರಿಯುವೆಯಾ ಎಂಬ ಆ ಕ್ಷಣದ ಸಂತಸಕ್ಕೆ ಹೊರಬಂದ ಮಾತು ಮುಂದೆ ತನುಶ್ರೀಯ ಸಾಧನೆಯ ಹಾದಿಗೆ ಮುನ್ನುಡಿಯನ್ನು ಬರೆದುಬಿಟ್ಟಿತು.
ನಿರಂತರ ಅಭ್ಯಾಸ, ಕಠಿಣ ಪರಿಶ್ರಮ, ಯೋಗ್ಯ ಮಾರ್ಗದರ್ಶನದ ಫಲವಾಗಿ ಒಂದು ನಿಮಿಷದಲ್ಲಿ ನಿರಾಲಂಬ ಚಕ್ರಾಸನವನ್ನು  19 ಬಾರಿ ಮಾಡಿದ ನೂತನ ದಾಖಲೆಯ ಮೂಲಕ 2017ರಲ್ಲಿ Golden book of world record  ಗೆ ತನ್ನ ಹೆಸರನ್ನು ನೊಂದಾಯಿಸಿಕೊಂಡು ಬಯಕೆಯ ಸಿರಿಯಲ್ಲಿ ಚಿಗುರೊಡೆದ ಕನಸೊಂದು ಹೆಮ್ಮರವಾಗಿ ಬೆಳೆದು ಮೊದಲ ಮೈಲಿಗಲ್ಲು ಸ್ಥಾಪನೆಯಾಯಿತು.
  2018 ರಲ್ಲಿ ವೆಂಕಟರಮಣ ಸ್ಪೋರ್ಟ್ಸ್ & ಕಲ್ಚರಲ್ ಕ್ಲಬ್ ರಿ. ಪಿತ್ರೋಡಿ ಇವರ ನೇತೃತ್ವದಲ್ಲಿ most full body revolution maintaining a chest stand posture ಯೋಗಾಸನದ ಭಂಗಿಯನ್ನು ಒಂದು ನಿಮಿಷದಲ್ಲಿ 42 ಬಾರಿ ಮಾಡುವ ಮುಖೇನ ದ್ವಿತೀಯ ವಿಶ್ವದಾಖಲೆಯನ್ನು ಮಾಡುತ್ತಾಳೆ.
2019 ರಲ್ಲಿ ಧನುರಾಸನದ ಭಂಗಿಯನ್ನು 1 ನಿಮಿಷದಲ್ಲಿ 62 ಬಾರಿ  ಸುರುಳಿಯನ್ನು ಮಾಡಿ ಹಾಗೂ ಕೇವಲ 1.40 ನಿಮಿಷದಲ್ಲಿ 100 ಬಾರಿ ಸುರುಳಿಗಳನ್ನು ಮಾಡಿ ಏಕಕಾಲದಲ್ಲಿ ಎರಡು ವಿಶ್ವದಾಖಲೆಯನ್ನು ಮಾಡುತ್ತಾಳೆ.
2020 ರಲ್ಲಿ ಉದ್ಯಾವರ ಗ್ರಾಮ ಪಂಚಾಯತ್ ಮೈದಾನದಲ್ಲಿ ಚಕ್ರಾಸನ ರೇಸ್ ನಲ್ಲಿ 100 ಮೀಟರ್ ನ್ನು ಕೇವಲ 1 ನಿಮಿಷ  14 ಸೆಕೆಂಡ್ ಗಳಲ್ಲಿ ಕ್ರಮಿಸಿ ನೂತನ ವಿಶ್ವದಾಖಲೆಯನ್ನು ತನ್ನದಾಗಿಸಿಕೊಂಡಿದ್ದಾಳೆ.
ಯೋಗಾಸನದ ಸಾಧನೆಯ ಮೂಲಕ ವಿಶ್ವಮಟ್ಟದಲ್ಲಿ ಯಶಸ್ಸು ಸಾಧಿಸಿದ ಇವಳಲ್ಲಿ ಅಡಕವಾಗಿರುವ ಪ್ರತಿಭೆಯನ್ನು ಕಂಡು ಮೆಚ್ಚಿದ  ಧರ್ಮಸ್ಥಳ ಧರ್ಮಾಧಿಕಾರಿಗಳಾದ ಪರಮಪೂಜ್ಯ ಶ್ರೀ ವೀರೇಂದ್ರ ಹೆಗ್ಗಡೆಯವರು ಯೋಗರತ್ನ ಎಂಬ ಬಿರುದನ್ನು ನೀಡಿ ಆಕೆಯನ್ನು ಹರಸಿ ಹಾರೈಸಿ ಆಕೆಯ ಸಾಧನೆಯ ಪಯಣಕ್ಕೆ ಶುಭಹಾರೈಸಿದ ಸವಿಗಳಿಗೆಯಂತೂ ಹೃದಯಕ್ಕೆ ಆಪ್ತವೆನಿಸುತ್ತದೆ.
ಪ್ರಸ್ತುತ ಈ ಬಾರಿಯ ಉಡುಪಿ ಜಿಲ್ಲೆಯ ರಾಜ್ಯೋತ್ಸವ ಪ್ರಶಸ್ತಿಯ ಗರಿಯೊಂದು ಇವಳ ಪ್ರಶಸ್ತಿಯ ಭತ್ತಳಿಕೆಯನ್ನು ಸೇರಿಕೊಂಡ ಗಳಿಗೆ ಉಡುಪಿ ಜಿಲ್ಲೆಯ ಪಾಲಿಗೆ ಬಲು ಹೆಮ್ಮೆಯ ಸಂಗತಿ.
 ನೂರಾರು ಸಂಘ ಸಂಸ್ಥೆಗಳು ಪ್ರೀತಿ ತುಂಬಿದ ಹೃದಯದಿಂದ  ಇವಳ ಸಾಧನೆಯನ್ನು ಗುರುತಿಸಿ ಗೌರವಿಸಿ ನೀಡಿದ ಪ್ರಶಸ್ತಿಯ  ಪಾರಿತೋಷಕಗಳು ಹಲವು ಮನಗಳ ಸಾಧನೀಯ ಪಯಣಕೆ ಸ್ಪೂರ್ತಿ ತುಂಬುತ್ತವೆ.
ತನುಶ್ರೀ ಎನ್ನುವ ಪಿತ್ರೋಡಿಯ ಬಾಲಕಿ ತನ್ನ 10 ನೇ ವಯಸ್ಸಿನಲ್ಲಿ  ಯೋಗಾಸನದಲ್ಲಿ ತನ್ನದೇ ಆದ ವೈಶಿಷ್ಟ್ಯತೆಯ ಸಾಧನೆಯ ಮೂಲಕ ಮತ್ತೆ 5 ಬಾರಿ ವಿಶ್ವ ದಾಖಲೆಯ ನಿರ್ಮಿಸಿ golden book of world record ನ ದಾಖಲೆಯ ಪುಟದಲ್ಲಿ ತನ್ನ ಹೆಸರನ್ನು ನೊಂದಾಯಿಸಿಕೊಳ್ಳುತ್ತಾಳೆ ಎಂದರೇ ಇದು ಅಸಾಮಾನ್ಯ ಸಾಧನೆ. ವಿಶ್ವದ ಅಪರೂಪದ ಸಾಧಕರ ಸಾಲಿನಲ್ಲಿ ತನ್ನ ಹೆಸರನ್ನು ಸೇರಿಸಿಕೊಂಡು ನಮ್ಮ ದೇಶದ ಕೀರ್ತಿ ಪತಾಕೆಯನ್ನು ಜಗದೆತ್ತರದಲ್ಲಿ ಹಾರಿಸಿದ ಹೆಮ್ಮೆಯ ಕುವರಿಯನ್ನು ಅದೆಷ್ಟೇ ಅಭಿನಂದನೀಯ ಪದಗಳಲ್ಲಿ ಬಣ್ಣಿಸಿದರೂ ಅವಳ ಸಾಧನೆಗೆ ಸರಿಸಾಟಿಯಾಗಿ ನಿಲ್ಲದು ಎಂದರೆ ಅತಿಶಯೋಕ್ತಿಯಲ್ಲ. ಸಾಧನೆಯ ಪಯಣದಲ್ಲಿ ಮತ್ತಷ್ಟು ಕನಸುಗಳು ಇವಳ ಮನದಲ್ಲಿ ಚಿಗುರೊಡೆಯಲಿ, ಚಿಗುರಿದ ಕನಸುಗಳು ಯಶಸ್ಸಿನ ಗುರಿಯನ್ನು ತಲುಪಿ ಮತ್ತಷ್ಟು ಸಾಧನೆಯ ಹೊನ್ನ ಗರಿಗಳು ಇವಳ ಭತ್ತಳಿಕೆಯನ್ನು ಸೇರಲಿ ಎಂಬ ಶುಭ ಹಾರೈಕೆ ನಮ್ಮದು…
Categories
ಇತರೆ

ಶಿಸ್ತುಬದ್ಧ ಸಂಸ್ಥೆ “ವೆಂಕಟರಮಣ ಸ್ಪೋರ್ಟ್ಸ್&ಕಲ್ಚರಲ್ ಕ್ಲಬ್(ರಿ)ಗೆ ರಾಜ್ಯೋತ್ಸವ ಪ್ರಶಸ್ತಿಯ ಗರಿ

ಕ್ರೀಡೆಯ ಜೊತೆ ಸಾಮಾಜಿಕ,ಧಾರ್ಮಿಕ ಹಾಗೂ ಶೈಕ್ಷಣಿಕ ಸೇವೆಗಳಲ್ಲಿ ಸತತವಾಗಿ ತೊಡಗಿಸಿಕೊಂಡ ಉದ್ಯಾವರ ಪಿತ್ರೋಡಿಯ ” ವೆಂಕಟರಮಣ ಸ್ಪೋರ್ಟ್ಸ್ &ಕಲ್ಚರಲ್ ಕ್ಲಬ್” ತಂಡಕ್ಕೆ ಅರ್ಹವಾಗಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ‌.ಇದೇ ಸಂದರ್ಭ ಸಂಸ್ಥೆಯ ಸಕ್ರಿಯ ಸದಸ್ಯರಾದ ಉದಯ್ ಕುಮಾರ್ ಸಂಧ್ಯಾ ದಂಪತಿಗಳ ಪುತ್ರಿ,5 ವಿಶ್ವದಾಖಲೆಗಳ‌ ಸರದಾರಿಣಿ,ಯೋಗರತ್ನ ಕುಮಾರಿ ತನುಶ್ರೀ ಪಿತ್ರೋಡಿ ಕೂಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾಗಿದ್ದು ಸಂಸ್ಥೆಯ ಕೀರ್ತಿಯನ್ನು ಇನ್ನಷ್ಟು ಹೆಚ್ಚಿಸಿದೆ‌.
ರಾಜ್ಯ ಟೆನಿಸ್ ಬಾಲ್ ಕ್ರಿಕೆಟ್ ಇತಿಹಾಸದಲ್ಲಿ ಸರ್ವ ಶ್ರೇಷ್ಠ ತಂಡಗಳ ಸಾಲಿನಲ್ಲಿ ಗುರುತಿಸಿಕೊಂಡ ಉಡುಪಿ ಜಿಲ್ಲೆ ಉದ್ಯಾವರದ ತಂಡ ವೆಂಕಟರಮಣ ಸ್ಪೋರ್ಟ್ಸ್‌ & ಕಲ್ಚರಲ್ ಕ್ಲಬ್ ಪಿತ್ರೋಡಿ. ಸರಿಸುಮಾರು ಮೂರೂವರೆ ದಶಕಗಳ ಹಿಂದೆ ಪಿತ್ರೋಡಿ ಪರಿಸರದ ಶಾಲಾ ಮೈದಾನದಲ್ಲಿ ಸಂಜೆಯ ಸಮಯದಲ್ಲಿ ಕ್ರಿಕೆಟ್ ಎಂಬ ಅಚ್ಚುಮೆಚ್ಚಿನ ಆಟವನ್ನು ಬಹಳಷ್ಟು ಪ್ರೀತಿಯಿಂದ ಆಡುತ್ತಿದ್ದ ಹುಡುಗರ ತಂಡವೊಂದು ಕ್ರಿಕೆಟ್
ಎಂಬ ಸಂಭಾವಿತ ಆಟದ ಬಹುಮುಖ್ಯವಾದ ಕಲೆಯನ್ನು ಕರಗತ ಮಾಡಿಕೊಂಡ ಹುಡುಗರು ಒಂದು ಸದೃಡ ತಂಡವಾಗಿ ರೂಪುಗೊಂಡು  ಮುಂದೆ ಸ್ಥಳಿಯವಾಗಿ, ಜಿಲ್ಲೆ, ರಾಜ್ಯ ಮಟ್ಟದ ಪಂದ್ಯಾಟದ ಪ್ರಶಸ್ತಿಗೆ ಮುತ್ತಿಕ್ಕುವವರೆಗೆ ಬೆಳೆದು ನಿಂತ ತಂಡದ   ಪರಿಶ್ರಮದ ಹಾದಿಯನ್ನು ಬಹುಮುಖ್ಯವಾಗಿ ಮೆಚ್ಚಲೇಬೇಕು.
ಪಿತ್ರೋಡಿಯ ಶ್ರೀ ವೆಂಕಟರಮಣ ಭಜನಾ ಮಂದಿರದ ಪ್ರೇರಣೆಯ ಯಾದಿಯಲ್ಲಿ ವೆಂಕಟರಮಣ ಕ್ರಿಕೆಟರ್ಸ್ ಆಗಿ ನಾಮಾಂಕಿತಗೊಂಡ ತಂಡ ಕೇವಲ ತಮ್ಮ ಆಟವನ್ನು ಗೆಲುವಿಗಾಗಿ ಮೀಸಲಿಡದೇ ಆಟದಲ್ಲಿ ಬಹುಮುಖ್ಯವಾದ ಶಿಸ್ತನ್ನು ಅಳವಡಿಸಿಕೊಂಡು ಅದರ ಮೂಲಕವೇ ರಾಜ್ಯಾದ್ಯಂತ ಹೆಸರನ್ನು ಗಳಿಸಿದ್ದಲ್ಲದೇ ಗೆಲುವಿನ ನಗೆಯನ್ನು ಬಿರಿದ್ದಕ್ಕೆ ಹಲವು ಚಿನ್ನದ ಬಣ್ಣದ ಪಾರಿತೋಷಕಗಳು ಸಾಕ್ಷಿಯಾಗಿವೆ.
ಕೇವಲ ಕ್ರಿಕೆಟ್ ಎನ್ನುವ ಆಟಕ್ಕೆ ಸೀಮಿತ ಗೊಳಿಸದೇ ತಮ್ಮ ಕ್ರಿಕೆಟ್ ಆಟದ ಮೂಲಕ, ತಮ್ಮ ತಂಡದ ಮೂಲಕ ತನ್ನೂರ ಅಭಿವೃದ್ದಿಯ ಕನಸನ್ನು ನನಸಾಗಿಸಿದ ಹೆಮ್ಮೆ ಈ ತಂಡಕ್ಕೆ ಸಲ್ಲಲೇಬೇಕು. ತಮ್ಮೂರಿನ
ಪ್ರತಿಭಾನ್ವಿತರಿಗೆ ಪ್ರೋತ್ಸಾಹಿಸಿ , ಜನಪರವಾದ ಕಾಳಜಿಯಲ್ಲಿ ಅನವರತವಾಗಿ ಶ್ರಮಿಸಿ, ಅನಾರೋಗ್ಯದ ಸಮಸ್ಯೆಗಳಿಗೆ ಬೆಂಗಾವಲಾಗಿ ನಿಂತು ತನ್ನೂರಿನ ಅಭಿವೃದ್ದಿಯ ಕುರಿತಾಗಿ ಬೆಳಕು ಚೆಲ್ಲುವಲ್ಲಿ ಯಶಸ್ವಿ ಸಂಘಟನಾ ಶಕ್ತಿಯಾಗಿ ರೂಪುಗೊಂಡ ಬಗೆ ಹಲವು ಸಂಘ ಸಂಸ್ಥೆಗಳಿಗೆ ಮಾದರಿ ಎನಿಸಿಕೊಂಡಿವೆ.
ವೆಂಕಟರಮಣ ಸಂಸ್ಥೆ ಆಯೋಜಿಸುವ ಪ್ರತಿಯೊಂದು ಪಂದ್ಯಾವಳಿಯಲ್ಲಿ ಹೊಸತನದೊಂದಿಗೆ ಸಮಾಜಕ್ಕೊಂದು ಸಂದೇಶ ನೀಡುವ ಇವರು,ತಮ್ಮ ತಂಡದ ಸದಸ್ಯರುಗಳ ವಿಶೇಷ ಆಸಕ್ತಿಯಿಂದ ರಕ್ತದಾನ, ನೇತ್ರದಾನ,ಪರಿಸರ ಸಂರಕ್ಷಣೆ,ಮಧ್ಯಮುಕ್ತ ಸಮಾಜ,ಸಂಚಾರ ನಿಯಮ ಪಾಲನೆ,ಹೆಲ್ಮೆಟ್ ಬಳಕೆಯ ಕುರಿತು ಜನಜಾಗೃತಿ ಸಂದೇಶ,ಸಾಧಕರಿಗೆ ಸನ್ಮಾನ,ದೀಪಾವಳಿಯ ಸಂದರ್ಭ ವಿನಾಕಾರಣ ಸುಡುಮದ್ದಿಗೆ ಖರ್ಚು
ಮಾಡುವ ಬದಲು ಶ್ರೀ ಕೃಷ್ಣ ಬಾಲನಿಕೇತನದ ಮಕ್ಕಳಿಗೆ ಬಟ್ಟೆಗಳನ್ನು ನೀಡುವ ಮಾನವೀಯ ಕಾರ್ಯಗಳಲ್ಲಿ ಸದ್ದಿಲ್ಲದೇ ತೊಡಗಿಕೊಂಡು ಅದೆಷ್ಟೋ ಜೀವಗಳ ಬದುಕಿಗೆ ಭರವಸೆಯ ಆಶಾಕಿರಣವಾಗಿ ಹೊಳೆದು ಅಸಹಾಯಕರ ಬದುಕಿಗೆ ಬೆಳಕಾಗುವಂತೆ ಬೆಳೆದು ನಿಂತ ತಂಡಕ್ಕೆ ರಾಜ್ಯೋತ್ಸವ ಪ್ರಶಸ್ತಿಯ ಸಾಲಿನಲ್ಲಿ ಹೊಳೆಯುವ ಹೊನ್ನಿನ  ಗರಿಯೊಂದನ್ನು ತನ್ನದಾಗಿಸಿಕೊಂಡ ಹೆಗ್ಗಳಿಕೆಗೆ ಪಾತ್ರವಾಗಿದೆ.
ತಮ್ಮೂರಿನ ಕಾಳಜಿಯಲ್ಲಿ, ಅಭಿವೃದ್ದಿಯ ಕಾರ್ಯಗಳಲ್ಲಿ ಒಂದು ತಂಡದ ಶಿಸ್ತು ಬದ್ದತೆ ಮತ್ತಷ್ಟು ಬಲಗೊಳ್ಳುವುದರೊಂದಿಗೆ ಹಲವು ಯುವಮನಗಳಿಗೆ ಸ್ಪೂರ್ತಿಯ ಸೆಲೆಯಾಗಲಿ ಎಂಬ ದೆಸೆಯಲ್ಲಿ ಪ್ರೀತಿಪೂರ್ವಕ ಅಭಿನಂದನೆಗಳು…
Categories
ಕ್ರಿಕೆಟ್

ಕ್ರೀಡಾ ಕ್ಷೇತ್ರದ ಸಾಧನೆಗಾಗಿ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಶರತ್ ಶೆಟ್ಟಿ ಪಡುಬಿದ್ರಿ.

ಕ್ರೀಡಾ ಕ್ಷೇತ್ರದಲ್ಲಿ ಶಿಸ್ತು, ಪ್ರಾಮಾಣಿಕತೆ ಮತ್ತು ಪಾರದರ್ಶಕ ವ್ಯಕ್ತಿತ್ವದ ಉಡುಪಿ ಜಿಲ್ಲಾ ಟೆನ್ನಿಸ್ ಬಾಲ್ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷರು, ಪಡುಬಿದ್ರಿ ಫ್ರೆಂಡ್ಸ್ ತಂಡದ ಯಶಸ್ವಿ ಕಪ್ತಾನರಾದ ಶ್ರೀ ಶರತ್ ಶೆಟ್ಟಿಯವರು 2020ನೇ ಸಾಲಿನ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದರು.
ಪಡುಬಿದ್ರಿಯ ಶ್ರೀ ವಿಠಲ್ ಶೆಟ್ಟಿ ಹಾಗೂ ಶ್ರೀಮತಿ ಶಾರದಾ.ವಿ‌.ಶೆಟ್ಟಿ ಇವರ ಸುಪುತ್ರರಾಗಿ ಜನಿಸಿದ ಶರತ್ ಶೆಟ್ಟಿ ಶರತ್ ಶೆಟ್ಟಿ  ಯವರ ಕ್ರಿಕೆಟ್ ಜೀವನ ಶುರುವಾಗಿದ್ದೇ ಕುಂದಾಪುರದಿಂದ. ಪ್ರೌಢಶಾಲಾ ವ್ಯಾಸಂಗವನ್ನು ತೆಕ್ಕಟ್ಟೆಯಲ್ಲಿ ನಡೆಸುವ ಸಂದರ್ಭದಲ್ಲಿ ಮೊತ್ತ ಮೊದಲ ಬಾರಿಗೆ ಹಿರಿಯರಾದ ” ನಾಗೇಶಣ್ಣ”ರವರ “ಶ್ರೀಲತಾ ಕುಂದಾಪುರ” ತಂಡದಲ್ಲಿ ಆರಂಭಿಕ ದಾಂಡಿಗನಾಗಿ ಕ್ರಿಕೆಟ್ ಜೀವನ ಪ್ರಾರಂಭಿಸಿದ ಇವರು ಮುಂದೆ
ಪಡುಬಿದ್ರಿಯ “ಫಾರುಕ್” ರವರು ಕಟ್ಟಿದ ತಂಡ
“ಪಡುಬಿದ್ರಿ ಫ್ರೆಂಡ್ಸ್” ನ್ನು ಮುನ್ನಡೆಸುವ ಅವಕಾಶ ಸಿಕ್ಕಾಗ ಸಹ ಆಟಗಾರರಾದ ಸುಭಾಶ್ ಕಾಮತ್ ಜೊತೆಗೂಡಿ‌ ಅದ್ಭುತ ಸಂಯೋಜಿತ ತಂಡವನ್ನು ಕಟ್ಟುತ್ತಾರೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡ,M.P.L ಸರಣಿ ಶ್ರೇಷ್ಠ,ಟೆನ್ನಿಸ್ ಬಾಲ್ ನ ಸಭ್ಯ ಆಟಗಾರ ನಿತಿನ್ ಮೂಲ್ಕಿ,ಮ್ಯಾಜಿಕಲ್ ಆಲ್ ರೌಂಡರ್ ವಿನ್ಸೆಂಟ್, ಕ್ಲಾಸಿಕ್ ಬ್ಯಾಟ್ಸ್ ಮನ್ ರೂಪೇಶ್ ಶೆಟ್ಟಿ, ಹಿರಿಯ ಆಟಗಾರರಾದ ದಿ|ವೆಂಕಟೇಶ್,ಕಣ್ಣನ್ ನಾಯರ್,ಪ್ರಸಾದ್ ಪಡುಬಿದ್ರಿ ಹೀಗೆ ಹತ್ತು ಹಲವಾರು ಸವ್ಯಸಾಚಿ  ಆಟಗಾರರನ್ನು ಟೆನ್ನಿಸ್ ಬಾಲ್ ಗೆ ಪರಿಚಯಿಸಿದ ಕೀರ್ತಿ ಕಳೆದ 2 ದಶಕಗಳಿಂದ ಮುನ್ನಡೆಸಿಕೊಂಡು ಬರುತ್ತಿರುವ ಆದರ್ಶ ಕಪ್ತಾನ ಶರತ್ ಶೆಟ್ಟಿ ಯವರಿಗೆ ಸಲ್ಲುತ್ತದೆ.
ಮೊದಲ ಬಾರಿಗೆ ಉಜಿರೆಯಲ್ಲಿ ರಾಜ್ಯಮಟ್ಟದ ಪಂದ್ಯಾಟದಲ್ಲಿ ಜಯಿಸಿದ ಪಡುಬಿದ್ರಿ ತಂಡ ಮುಂದೆ ಗೆಲುವಿನ ನಾಗಾಲೋಟಗೈದಿತು.1999 ರಲ್ಲಿ 14 ಜಿಲ್ಲಾ,ರಾಜ್ಯ ಮಟ್ಟದ ಪ್ರಶಸ್ತಿಗಳನ್ನು, ಶರತ್ ಶೆಟ್ಟಿ ಯವರ ನಾಯಕತ್ವದಲ್ಲಿ ಒಂದೇ ವರ್ಷದಲ್ಲಿ 8 ಟೂರ್ನಿಗಳಲ್ಲಿ ಭಾಗವಹಿಸಿ ,7 ಬಾರಿ ಚಾಂಪಿಯನ್ ತಂಡವಾಗಿಯೂ,
1 ಬಾರಿ ರನ್ನರ್ಸ್ ಆಗಿ ಮೂಡಿ ಬಂದಿದ್ದು ಉತ್ಕೃಷ್ಟ ನಾಯಕತ್ವಕ್ಕೆ ಸಾಕ್ಷಿ.ಮೊದ ಮೊದಲಿಗೆ ಬ್ಯಾಟಿಂಗಲ್ಲಿ ಮಿಂಚುತ್ತಿದ್ದ ಇವರು 90 ರ ದಶಕದಲ್ಲಿ ನೇಜಾರಿನಲ್ಲಿ ಎ.ಕೆ.ಸ್ಪೋರ್ಟ್ಸ್ ತಂಡದ ವಿರುದ್ಧದ ಸೆಮಿಫೈನಲ್ ನಲ್ಲಿ ಕೊನೆಯ ಎಸೆತ ದಲ್ಲಿ  6 ರನ್ ಗಳ ಅವಶ್ಯಕತೆ ಬಿದ್ದಾಗ ಸಿಕ್ಸರ್ ಸಿಡಿಸಿ ಗೆಲ್ಲಿಸಿದ 2 ಉದಾಹರಣೆಗಳಿವೆ.
ಮೈದಾನದ ಮಿಡ್ ವಿಕೆಟ್,ಕವರ್ಸ್ ನ ಚುರುಕಿನ ಅದ್ಭುತ ಫೀಲ್ಡರ್,ಯುವ ಕ್ರಿಕೆಟಿಗರಿಗಾಗಿ ತನ್ನ ಬ್ಯಾಟಿಂಗ್ ಸರದಿ ಬದಲಾಯಿಸಿಕೊಂಡು, ಯುವ ಆಟಗಾರರು ದೂರ ದೂರಿಗೆ ವೃತ್ತಿ  ನಿಮಿತ್ತ ತೆರಳಲು ಬಂದಾಗ ತಂಡದ ವ್ಯಾಮೋಹವನ್ನು ಬದಿಗಿಟ್ಟು ಆಟಗಾರರ ಭವಿಷ್ಯ ರೂಪಿಸಿದ ನಿಸ್ವಾರ್ಥ ನಾಯಕ.
ಪಡುಬಿದ್ರಿ ತಂಡ ಜಯಿಸಿದ ನಗದನ್ನು ಅನೇಕ ಬಾರಿ ಮಾರಕ ಕಾಯಿಲೆಯಿಂದ ಬಳಲುವ ಕ್ಯಾನ್ಸರ್ ರೋಗಿಗಳಿಗೆ,ಬಡ ವಿದ್ಯಾರ್ಥಿಗಳಿಗೆ,ನಿರ್ವಸಿತರ ವಸತಿ ನಿರ್ಮಾಣಕ್ಕಾಗಿ ಅರ್ಥಪೂರ್ಣವಾಗಿ ಬಳಸಿ ಕೊಂಡಿರುತ್ತಾರೆ.
ಪಲಿಮಾರಿನ ಪೌಲಿನ್ ಡಿಸೋಜಾ ಲೆಬನಾನ್ ನಲ್ಲಿ ಸಂಕಷ್ಟಕ್ಕೆ ಸಿಲುಕಿ 18 ವರ್ಷಗಳ ಕಾಲ ಕುಟುಂಬದಿಂದ ಸಂಪರ್ಕ ಕಳೆದುಕೊಂಡ ಸಂದರ್ಭ
ಶರತ್ ಶೆಟ್ಟಿ ಇವರು ಬಳಕೆದಾರರ ಚಳುವಳಿಯ ನಾಯಕ ರವೀಂದ್ರನಾಥ್ ಶ್ಯಾನುಭೋಗ್ ಇವರನ್ನು ಸಂಪರ್ಕಿಸಿ ಸಂಕಷ್ಟದಿಂದ ಪಾರು ಮಾಡುವಲ್ಲಿ ಶ್ರಮಿಸಿರುತ್ತಾರೆ.
ಪಡುಬಿದ್ರಿ ಫ್ರೆಂಡ್ಸ್ ನ ಸವ್ಯಸಾಚಿ ನಿತಿನ್ ಮೂಲ್ಕಿಯಂತ ಆಟಗಾರರನ್ನು ಕರ್ನಾಟಕ ರಣಜಿ,ಕೆ‌.ಪಿ.ಎಲ್,ಎಮ್.ಪಿ.ಎಲ್ ಹಾಗೂ ಯು.ಎ.ಇ ಅಂತರಾಷ್ಟ್ರೀಯ ತಂಡದಲ್ಲಿ ಗುರುತಿಸಿಕೊಳ್ಳಲು ನಾಯಕ ಶರತ್ ಶೆಟ್ಟಿಯವರ ಪಾತ್ರ ಅಪಾರ.
ಮುಂಬಯಿ ತಂಡವನ್ನು ಪ್ರತಿನಿಧಿಸುವ ಉಡುಪಿ ಮೂಲದ ಸಂದೀಪ್ ಭಂಡಾರಿಯವರ ಪ್ರತಿಭೆಯನ್ನು ಬೆಳಕಿಗೆ ತಂದ ಶರತ್ ಶೆಟ್ಟಿಯವರು ಪಡುಬಿದ್ರಿ ಫ್ರೆಂಡ್ಸ್ ನ ಮುದರಂಗಡಿಯ ನಿಹಾಲ್ ಡಿಸೋಜಾ ಇವರನ್ನು ಕರ್ನಾಟಕ ಪ್ರೀಮಿಯರ್ ಲೀಗ್ ಬಳ್ಳಾರಿ ಟಸ್ಕರ್ಸ್ ತಂಡದಲ್ಲಿ ತಂಡದಲ್ಲಿ ಭಾಗವಹಿಸುವಂತೆ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ಕ್ರಿಕೆಟ್ ತಂಡದ ಕಪ್ತಾನನಾಗಿ ರೂಪಿಸುವಲ್ಲಿ ಶ್ರಮ ವಹಿಸಿರುತ್ತಾರೆ.
ಪ್ರಸ್ತುತ ಉಡುಪಿ ವಲಯದ
“ಕರ್ನಾಟಕ ರಾಜ್ಯ ಟೆನ್ನಿಸ್ ಕ್ರಿಕೆಟ್ ಅಸೋಸಿಯೇಷನ್” ನ ಅಧ್ಯಕ್ಷ ರಾಗಿ ಸೇವೆ ಸಲ್ಲಿಸುತ್ತಿದ್ದು ನೇರ ನುಡಿಗಳ ಮೂಲಕ ಯುವ ಕ್ರಿಕೆಟಿಗರಿಗೆ ಶಿಸ್ತಿನ ನೇರ ಸಂದೇಶವನ್ನು ತಲುಪಿಸುತ್ತಿದ್ದು,ಲಯನ್ಸ್ ಹಾಗೂ ಜೇಸಿ ಕ್ಲಬ್ ಗಳ ಮೂಲಕ ಸಮಾಜಸೇವೆಯಲ್ಲೂ ತಮ್ಮನ್ನು ತೊಡಗಿಸಿಕೊಂಡಿರುವರು.ಶಟಲ್ ಬ್ಯಾಡ್ಮಿಂಟನ್ ನಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ.