ಬೆಂಗಳೂರಿನ ಜೆ.ಪಿ ಪಾರ್ಕ್ ಹಾಗೂ ರೈಲ್ವೇಸ್ ಅಂಗಣದಲ್ಲಿ ನಡೆದ Y.P.L ಪಂದ್ಯಾವಳಿಯ 40 ರ ವಯೋಮಿತಿ “ಲೆಜೆಂಡ್ಸ್ ಕಪ್” ನ್ನು ಸೆಂಥಿಲ್ ಅಶ್ವತ್ಥ್ ಕುಮಾರ್ ಸಾರಥ್ಯದ ಜೈ ಕರ್ನಾಟಕ ಬೆಂಗಳೂರಿನ ಸೀನಿಯರ್ಸ್ ತಂಡ ಗೆದ್ದುಕೊಂಡಿದೆ.
12 ಹಿರಿಯ ತಂಡಗಳು ಭಾಗವಹಿಸಿದ್ದ ಈ ಟೂರ್ನಿಯ ಲೀಗ್ ಹಂತದ ಹೋರಾಟದ ಬಳಿಕ ನಡೆದ 2 ಸೆಮಿಫೈನಲ್ಸ್ ಪ್ರೇಕ್ಷಕರನ್ನು ರೋಮಾಂಚನದ ತುತ್ತತುದಿಗೆ ಕೊಂಡೊಯ್ದಿತ್ತು.
ಪ್ರಥಮ ಸೆಮಿಫೈನಲ್ ನಲ್ಲಿ ಫ್ರೆಂಡ್ಸ್ ಬೆಂಗಳೂರು ಹಿರಿಯರ ತಂಡ ನೀಡಿದ್ದ ಬೃಹತ್ ಮೊತ್ತವನ್ನು ಸಾಯಿ ಸವ್ಯಸಾಚಿ ತಂಡದ ಮೌನ್ಸಿ ಕೊನೆಯ ಎರಡು ಎಸೆತದಲ್ಲಿ ಬಾರಿಸಿದ ಅಬ್ಬರದ ಸಿಕ್ಸರ್ ಗಳು ಸವ್ಯಸಾಚಿ ತಂಡವನ್ನು ಫೈನಲ್ ಗೆ ಕೊಂಡೊಯ್ದರೆ,
ದ್ವಿತೀಯ ಸೆಮಿಫೈನಲ್ ನಲ್ಲಿ ಆನಂದ್ ಇಲೆವೆನ್ ವಿರುದ್ಧ ಜೈ ಕರ್ನಾಟಕದ ಎಸೆತಗಾರ ಶಂಕರ್ ಕೊನೆಯ ಓವರ್ ನ ಸ್ಪಿನ್ ಕರಾಮತ್ತಿಗೆ ಜೈ ಕರ್ನಾಟಕ ಫೈನಲ್ ಗೆ ತೇರ್ಗಡೆಗೊಂಡಿತ್ತು.
ಫೈನಲ್ ನಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಜೈ ಕರ್ನಾಟಕ ಆರಂಭಿಕ ತಬ್ರೇಜ್(ಟಬ್ಬು) ಬಿರುಸಿನ ಸಿಕ್ಸರ್ ಬೌಂಡರಿಗಳ ಮೂಲಕ 22 ಎಸೆತಗಳಲ್ಲಿ 44 ರನ್ ಗಳಿಸಿ ಎದುರಾಳಿ ತಂಡಕ್ಕೆ 63 ರನ್ ಗಳ ಕಠಿಣ ಗುರಿಯನ್ನು ನೀಡಿತ್ತು.
ಆದರೆ ಸವ್ಯಸಾಚಿಯ ಪರವಾಗಿ ಆರಂಭಿಕ ಆಟಗಾರರಾಗಿ ಕ್ರೀಸಿಗಿಳಿದ ಶೇಖರ್ ಹಾಗೂ ಮೌನ್ಸಿ ಕ್ರೀಸಿಗೆ ತಳವೂರಿ ನಿಂತು 4 ಓವರ್ ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 40 ರನ್ ಗಳಿಸಿದ್ದರು.
ಸವ್ಯಸಾಚಿಯ ಅನಾಯಾಸ ಗೆಲುವಿನ ನಾಗಾಲೋಟಕ್ಕೆ ಜೈ ಕರ್ನಾಟಕದ ವೇಗಿ ಶೇಕ್ ಲೀ ಬ್ರೇಕ್ ಹಾಕಿದ್ದರು. 2 ಓವರ್ ಗಳಲ್ಲಿ ಕೇವಲ 6 ರನ್ ನೀಡಿ ಅಮೂಲ್ಯ 3 ವಿಕೆಟ್ ಉರುಳಿಸಿ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದರು.
ಜೈ ಕರ್ನಾಟಕದ ಪರವಾಗಿ ವೀಲ್ &ಎಕ್ಸೆಲ್ ಹಾಗೂ ಜಸ್ಟ್ ಕ್ರಿಕೆಟ್ ಅಕಾಡೆಮಿಯ ಬ್ಯಾಟಿಂಗ್ ಕೋಚ್ ಮುಕೇಶ್ ಹಾಗೂ ಇಂಡೋರ್ ಮಾಸ್ಟರ್ಸ್ ವರ್ಲ್ಡ್ ಕಪ್ ಭಾರತ ತಂಡವನ್ನು ಪ್ರತಿನಿಧಿಸಿದ್ದ ನಾಗೇಶ್ ಸಿಂಗ್,ತಂಡವನ್ನು ಹಲವು ವರ್ಷಗಳ ಕಾಲ ಮುನ್ನಡೆಸಿದ್ದ ನಾಯಕ ಆರ್.ಮನೋಹರನ್, ನಾಗೇಂದ್ರ ಚಂದ್ರಶೇಖರ್,ಬಾಬು,ಸಾಂಬಾಜಿ ಯಂತಹ ಹಿರಿಯ ಆಟಗಾರರು ಕಣಕ್ಕಿಳಿದಿದ್ದರು.
ಜೈ ಕರ್ನಾಟಕ ಹಿರಿಯರ ತಂಡ ಈ ಪಂದ್ಯಾವಳಿಯನ್ನು ಕೈಗೆ ಕಪ್ಪು ಪಟ್ಟಿ ಧರಿಸಿ ಆಡಿದ್ದು,ಲೆಜೆಂಡ್ಸ್ ಕಪ್ ನ ರೋಚಕ ಗೆಲುವನ್ನು ಇತ್ತೀಚೆಗಷ್ಟೇ ಅಗಲಿದ ಟೆನ್ನಿಸ್ ಕ್ರಿಕೆಟ್ ನ ದಂತಕಥೆ, ಹಿರಿಯ ಆಟಗಾರ ಮೆರ್ವಿನ್ ಹಾಗೂ ನರಹರಿ (ಕುಮ್ಮಿ) ಯವರಿಗೆ ಸಮರ್ಪಿಸಿದರು.
ಆರ್.ಕೆ.ಆಚಾರ್ಯ ಕೋಟ