ಶಿವಮೊಗ್ಗದ ದುರ್ಗಿಗುಡಿ ಕ್ರಿಕೆಟ್ ಸಂಸ್ಥೆಯ ಅಮೃತ ಮಹೋತ್ಸವ ಸಂಭ್ರಮದ ಸಲುವಾಗಿ “DCA PLATINUM JUBILEE T-20 ಕ್ರಿಕೆಟ್ ಟೂರ್ನಮೆಂಟ್’’ ಜನವರಿ 2023ರ ದಿನಾಂಕ 13, 14,15ರಂದು ಶಿವಮೊಗ್ಗದ ಮೂರು ಕ್ರೀಡಾಂಗಣಗಳಲ್ಲಿ ಸತತ ಮೂರು ದಿನಗಳ ಕಾಲ ನಡೆಯಲಿದೆ.
ದುರ್ಗಿ ಗುಡಿ ಕ್ರಿಕೆಟ್ ಅಸೋಸಿಯೇಷನ್ 1945ರಲ್ಲಿ ಸ್ಥಾಪಿತವಾಗಿದ್ದು, ಕ್ರಿಕೆಟ್‌ನ ಅವಧಿಯನ್ನು ನೋಡಿದರೆ, DCA ಶಿವಮೊಗ್ಗ ಉತ್ತಮ ಮೈಲಿಗಲ್ಲುಗಳನ್ನು ಸಾಧಿಸಿದೆ, ಇದು ನಿಜವಾಗಿಯೂ ಅದ್ಭುತ ಮತ್ತು ಶ್ಲಾಘನೀಯ, ಸಂಸ್ಥೆಯು ಸ್ಥಾಪನೆಯದಾಗಿನಿಂದ ಬೇಸಿಗೆ ಕ್ರಿಕೆಟ್ ತರಬೇತಿ ಶಿಬಿರವನ್ನು ನಿರಂತರ ನಡೆಸುತ್ತ ಬಂದಿದೆ. ಇದೀಗ 75 ವರ್ಷ ಪೂರೈಸಿದ ಶಿವಮೊಗ್ಗದ ಈ ಹಿರಿಯ ಸಂಸ್ಥೆ ಲೆದರ್ ಬಾಲ್ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಲು ಸಜ್ಜಾಗಿದೆ.
ಶಿವಮೊಗ್ಗ, ಹಾಸನ ಮತ್ತು ಚಿಕ್ಕಮಗಳೂರಿನ 12 ಕ್ಲಬ್ ತಂಡಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿದ್ದು,
ಈ ಲೀಗ್ ಕಮ್ ನಾಕೌಟ್ T20 ಪಂದ್ಯಾವಳಿಯನ್ನು ಗೆಲ್ಲುವ ತಂಡ ಆಕರ್ಷಕ ಟ್ರೋಫಿಯೊಂದಿಗೆ 50,000 ರೂಪಾಯಿಗಳ ನಗದು ಬಹುಮಾನವನ್ನು ಗೆಲ್ಲಲಿದ್ಧಾರೆ. ದ್ವಿತೀಯ ಸ್ಥಾನದ ತಂಡವು ರನ್ನರ್ ಅಪ್ ಟ್ರೋಫಿಯೊಂದಿಗೆ 25,000 ರೂಪಾಯಿಗಳನ್ನು ಪಡೆಯಲಿದೆ. ಇವು ಮಾತ್ರವಲ್ಲದೆ ಮೂರನೆಯ ಮತ್ತು ನಾಲ್ಕನೆಯ ಸ್ಥಾನಕ್ಕೆ ಟ್ರೋಫಿಗಳು ಇರುತ್ತವೆ. ಅದೇ ರೀತಿ ಅತ್ಯುತ್ತಮ ಬ್ಯಾಟ್ಸ್‌ಮನ್, ಅತ್ಯುತ್ತಮ ಬೌಲರ್, ಅತ್ಯುತ್ತಮ ಆಲ್ ರೌಂಡರ್, ಸರಣಿಯ ಪುರುಷ ಮತ್ತು ಪಂದ್ಯಶ್ರೇಷ್ಠ ಮುಂತಾದ ವೈಯಕ್ತಿಕ ಬಹುಮಾನಗಳನ್ನು ನೀಡಲಾಗುತ್ತದೆ.
ಎಲ್ಲಾ ತಂಡದ ಆಟಗಾರರಿಗೆ ಜೆರ್ಸಿಯನ್ನು ನೀಡಲಾಗುವುದು. KSCA ಮ್ಯಾಚ್ ಆಫೀಶಿಯಲ್ಸ್ ಪಂದ್ಯಾವಳಿಯ ತೀರ್ಪುಗಾರರಾಗಿ ಹಾಗೂ ಸ್ಕೋರರ್ ಗಳಾಗಿ ಕಾರ್ಯನಿರ್ವಹಿಸಲಿದ್ದಾರೆ. ಸುರೇಶ ಭಟ್ ಮುಲ್ಕಿ, ರಾಘವೇಂದ್ರ ಸಾಗರ್ ಹಾಗೂ ಇನ್ನಿತರರು ಕಾಮೆಂಟ್ರಿಯಲ್ಲಿ ಭಾಗವಹಿಸಲಿದ್ದು ಪಂದ್ಯಗಳ ನೇರ ಪ್ರಸಾರವು ಯೂ ಟ್ಯೂಬ್‌ನಲ್ಲಿ ನೀಡುವ ಯೋಜನೆಗಳು ಕೂಡ ಇವೆ ಎಂದು ಸಂಘಟಕರ ಪರವಾಗಿ ದುರ್ಗಿಗುಡಿ ಕ್ರಿಕೆಟ್ ಸಂಸ್ಥೆಯ ಐಡಿಯಲ್ ಗೋಪಿ ಇವರು ಸ್ಪೋರ್ಟ್ಸ್ ಕನ್ನಡಕ್ಕೆ ತಿಳಿಸಿದ್ಧಾರೆ.
ಅಮೃತ ಮಹೋತ್ಸವ ಆಚರಿಸುವ ದುರ್ಗಿಗುಡಿ ಕ್ರಿಕೆಟ್ ಸಂಸ್ಥೆಗೆ ಸ್ಪೋರ್ಟ್ಸ್ ಕನ್ನಡ ವತಿಯಿಂದ ಹೃತ್ಪೂರ್ವಕ ಅಭಿನಂದನೆಗಳು ಹಾಗೂ ಈ ಪಂದ್ಯಾವಳಿಯು ಬಹಳಷ್ಟು ಯಶಸ್ವಿಯಾಗಿ, ಅದ್ದೂರಿಯಾಗಿ ಜರುಗಲಿಯೆಂದು ಶುಭಾಶಯಗಳನ್ನು ನೀಡುತ್ತಿದೆ