ಮಂಗಳೂರು:ಉತ್ತಮ ಕಲಿಕೆಗೆ ವಿದ್ಯಾರ್ಥಿಗಳು ಆರೋಗ್ಯವಂತರಾಗಿರಬೇಕು. ವಿದ್ಯಾರ್ಥಿಗಳು ಓದಿಗಷ್ಟೇ ಸೀಮಿತವಾದರೆ ಮಾನಸಿಕ ಒತ್ತಡ ಹೆಚ್ಚುತ್ತದೆ. ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಾಗ ಒತ್ತಡ ನಿವಾರಣೆಯಾಗಿ ಸ್ಪರ್ಧಾ ಮನೋಭಾವ ಮೂಡುತ್ತದೆ. ಆದ್ದರಿಂದ ವಿದ್ಯಾರ್ಥಿಗಳಲ್ಲಿ ಕ್ರೀಡಾಸಕ್ತಿ ಬೆಳೆಯಬೇಕು ಎಂದು ದೈಜಿವರ್ಲ್ಡ್ ಮೀಡಿಯಾದ ವ್ಯವಸ್ಥಾಪಕ ನಿರ್ದೇಶಕರಾಗಿರುವ ವಾಲ್ಟರ್ ನಂದಳಿಕೆ ಅಭಿಪ್ರಾಯಪಟ್ಟರು.
ಮಣೇಲ್ ಶ್ರೀನಿವಾಸ್ ನಾಯಕ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಬೊಂದೇಲ್ ನಲ್ಲಿ ಆಯೋಜಿಸಿದ್ದ ಅಂತರ್ ಕಾಲೇಜು ಪದವಿ ಮಟ್ಟದ ಪುರುಷರ ಮತ್ತು ಮಹಿಳೆಯರ ಕಬಡ್ಡಿ ಪಂದ್ಯಾವಳಿಯ ಸಮಾರೋಪ ಸಮಾರಂಭ ಹಾಗೂ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಗೌರವ ಅತಿಥಿಗಳಾಗಿ ಸಿಟಾಡೆಲ್ ಡೆವಲಪರ್ಸ್ ಮಂಗಳೂರಿನ ಪಾಲುದಾರರಾಗಿರುವ ರಾಮ್ ಕುಮಾರ್ ಬೇಕಲ್ ಮಾತನಾಡಿ “ಸೋಲು ಗೆಲುವಿನ ನಿರ್ಣಾಯಕರಾಗದೆ ಪ್ರತಿ ಸ್ಪರ್ಧೆ ಕಲಿಸುವ ಪಾಠವನ್ನು ಜೀವನಕ್ಕೆ ಅನ್ವಯಿಸುವಲ್ಲಿ ಯಶಸ್ವಿಯಾಗೋಣ. ರಾಜ್ಯ, ರಾಷ್ಟ್ರಮಟ್ಟದಲ್ಲಿ ಮಿಂಚುವಂತಹ ಪ್ರತಿಭೆಗಳು ನಮ್ಮ ಜಿಲ್ಲೆಯಿಂದ ಹೊರಹೊಮ್ಮಲಿ “ಎಂದು ಶುಭ ಹಾರೈಸಿದರು.
ವೇದಿಕೆಯಲ್ಲಿ ವುಮೆನ್ಸ್ ನ್ಯಾಷನಲ್ ಎಜುಕೇಶನ್ ಸೊಸೈಟಿಯ ಅಧ್ಯಕ್ಷರಾಗಿರುವ ಅಣ್ಣಪ್ಪ ನಾಯಕ್, ಮಣೇಲ್ ಶ್ರೀನಿವಾಸ್ ನಾಯಕ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ನ ಸಂಚಾಲಕರಾಗಿರುವ ಜೀವನ್ ದಾಸ್ ನಾರಾಯಣ್, ವಿದ್ಯಾ ಸಂಸ್ಥೆಯ ಆಡಳಿತ ನಿರ್ದೇಶಕರಾಗಿರುವ ಡಾ. ಮೋಲಿ.ಎಸ್ ಚೌಧರಿ, ಉಪನ್ಯಾಸಕ ಸಂಯೋಜಕರಾಗಿರುವ ಡಾ. ಶರಣ್ ಕುಮಾರ್ ಶೆಟ್ಟಿ ಹಾಗೂ ಸುರೇಶ್ ಶೆಣೈ ಉಪಸ್ಥಿತರಿದ್ದರು.
ಡಾ.ಶರಣ್ ಕುಮಾರ್ ಶೆಟ್ಟಿ ಸ್ವಾಗತಿಸಿ ಸುರೇಶ್ ಶೆಣೈ ವಂದಿಸಿದರು.ಕಾಲೇಜಿನ ಸಹಾಯಕ ಪ್ರಾಧ್ಯಾಪಕಿಯಾಗಿರುವ ಶ್ರೀಮತಿ ನಂದಿತಾ ಸುನಿಲ್ ಕಾರ್ಯಕ್ರಮ ನಿರೂಪಿಸಿದರು.
ಪುರುಷರ ವಿಭಾಗದಲ್ಲಿ ಪ್ರೇರಣಾ ಕಾಲೇಜು ಮಂಗಳೂರು ತಮ್ಮ ಅಪ್ರತಿಮ ಕ್ರೀಡಾ ಪ್ರದರ್ಶನದಿಂದ ಪ್ರಥಮ ಸ್ಥಾನಿಯಾಗಿ ಹೊರಹೊಮ್ಮಿದರು. ದ್ವಿತೀಯ ಸ್ಥಾನವನ್ನು ಸಂತ ಫಿಲೋಮಿನಾ ಕಾಲೇಜು ಪುತ್ತೂರು ಪಡೆದುಕೊಂಡರು. ತೃತೀಯ ಸ್ಥಾನಕ್ಕೆ ಗೋಕರ್ಣನಾಥೇಶ್ವರ ಕಾಲೇಜು ಮಂಗಳೂರು ಭಾಜನರಾದರೆ, ಚತುರ್ಥ ಸ್ಥಾನವನ್ನು ನೆಹರು ಮೆಮೋರಿಯಲ್ ಕಾಲೇಜು ಸುಳ್ಯ ಪಡೆದುಕೊಂಡಿತು. ಅತ್ಯುತ್ತಮ ದಾಳಿಗಾರನಾಗಿ ಪ್ರೇರಣಾ ಕಾಲೇಜು ಮಂಗಳೂರಿನ ಜಾರ್ಜ್ ಹಾಗೂ ಉತ್ತಮ ಹಿಡಿತಗಾರನಾಗಿ ಪ್ರೇರಣಾ ಕಾಲೇಜಿನ ಸುಪ್ರೀತ್ ಗಿಟ್ಟಿಸಿಕೊಂಡರೆ ಸವ್ಯಸಾಚಿ ಆಟಗಾರನಾಗಿ ಸಂತ ಫಿಲೋಮಿನಾ ಕಾಲೇಜಿನ ಮೊಹಮ್ಮದ್ ನಾಜೀರ್ ಕ್ರೀಡಾಭಿಮಾನಿಗಳ ಮನ ಗೆದ್ದರು.
ಮಹಿಳೆಯರ ವಿಭಾಗದಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಅಜ್ಜರಕಾಡು ತಮ್ಮ ಮಿಂಚಿನಂತಹ ಕ್ರೀಡಾ ಪ್ರದರ್ಶನದಿಂದ ಪ್ರಥಮ ಸ್ಥಾನಿಯಾಗಿ ಹೊರಹೊಮ್ಮಿದರು.ದ್ವಿತೀಯ ಸ್ಥಾನವನ್ನು ಡಾ.ಪಿ.ದಯಾನಂದ ಪೈ-ಪಿ.ಸತೀಶ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜು ಮಂಗಳೂರು ಪಡೆದುಕೊಂಡಿತು.ತೃತೀಯ ಸ್ಥಾನಕ್ಕೆ ಕೆನರಾ ಇಂಜಿನಿಯರಿಂಗ್ ಕಾಲೇಜು ಬೆಂಜನಪದವು ಭಾಜನರಾದರೆ,ಸಂತ ಅಲೋಶಿಯಸ್ ಕಾಲೇಜು ಮಂಗಳೂರು ಚತುರ್ಥ ಸ್ಥಾನವನ್ನು ಪಡೆದುಕೊಂಡಿತು.
ಅತ್ಯುತ್ತಮ ದಾಳಿಗಾರ್ತಿಯಾಗಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಅಜ್ಜರಕಾಡಿನ ರಕ್ಷಾ .ಎಸ್ , ಅತ್ಯುತ್ತಮ ಹಿಡಿತಗಾರ್ತಿಯಾಗಿ ಡಾ.ಪಿ.ದಯಾನಂದ ಪೈ-ಪಿ.ಸತೀಶ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜು ಮಂಗಳೂರಿನ ಅರ್ಪಿತಾ ಹಾಗೂ ಸವ್ಯಸಾಚಿ ಆಟಗಾರ್ತಿಯಾಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅಜ್ಜರಕಾಡಿನ ರುತು ಸುಧಾಕರ ಹೆಗ್ಡೆ ತಮ್ಮ ವಿಭಿನ್ನ ಆಟದ ಪ್ರದರ್ಶನದಿಂದ ಕ್ರೀಡಾಭಿಮಾನಿಗಳ ಮನ ಗೆದ್ದರು.