Categories
ಚಿರಸ್ಮರಣೆ ಸಂತಾಪ

ಸಾಮಾಜಿಕ ಕಾರ್ಯಕರ್ತ,ಮಾಜಿ ಕ್ರಿಕೆಟ್ ಪಟು ಸಾಯಿದತ್ತ ಭಟ್ ಬೈಂದೂರು ನಿಧನ

ಬೈಂದೂರು-ವಿಕ್ರಮ್ ಸ್ಪೋರ್ಟ್ಸ್ ಕ್ಲಬ್ ಬೈಂದೂರು ತಂಡದ ಪರವಾಗಿ 80 ರ ದಶಕದಲ್ಲಿ ಮಿಂಚಿದ್ದ ಆಲ್ ರೌಂಡರ್, ಉದ್ಯಾನ ನಗರಿ ಬೆಂಗಳೂರನ್ನು ಫ್ಲೆಕ್ಸ್ ಮುಕ್ತ ನಗರಿಯನ್ನಾಗಿಸುವಲ್ಲಿ ಹಾಗೂ ಕಾನೂನಾತ್ಮಕ ಹೋರಾಟದ ಮೂಲಕ ಬಿ‌.ಡಿ.ಎ ಗೆ ಕೋಟ್ಯಾಂತರ ಮೌಲ್ಯದ ಭೂಮಿಯನ್ನು ಉಳಿಸಿಕೊಟ್ಟ ಸಾಮಾಜಿಕ ಕಾರ್ಯಕರ್ತ ಸಾಯಿದತ್ತ ಭಟ್ ಬೈಂದೂರು ಇಂದು ಹೃದಯಾಘಾತದಿಂದ ನಿಧನರಾದರು.
80 ರ ದಶಕದಲ್ಲಿ ಆಲ್ ರೌಂಡರ್ ಆಟಗಾರರ ರೂಪದಲ್ಲಿ ವಿಕ್ರಮ್ ತಂಡದಲ್ಲಿ ಕ್ರಿಕೆಟ್ ಜೀವನ ಪ್ರಾರಂಭಿಸಿದ್ದ ಸಾಯಿದತ್ತ ಭಟ್ ಗಂಗೊಳ್ಳಿಯಲ್ಲಿ ನಡೆದ ಜಿಲ್ಲಾಮಟ್ಟದ ಪಂದ್ಯವೊಂದರಲ್ಲಿ ರಾಯಲ್ ಗಂಗೊಳ್ಳಿ ತಂಡದೆದುರು ಹ್ಯಾಟ್ರಿಕ್ ವಿಕೆಟ್ ಗಳಿಸಿ ಮಿಂಚಿದ್ದರು.ಹಲವಾರು ಪಂದ್ಯಗಳಲ್ಲಿ ವಿಕ್ರಮ್ ಪರ ಗೆಲುವಿನ ರೂವಾರಿಯಾಗಿ ಮೂಡಿಬಂದಿದ್ದರು‌.ಇದಲ್ಲದೇ ಕರಾವಳಿ ಕುಂದಾಪುರ ಹಾಗೂ ಶ್ರೀಲತಾ ಕುಂದಾಪುರ ತಂಡದ ಪರವಾಗಿ ನೇತಾಜಿ ಪರ್ಕಳ ಪಂದ್ಯದಲ್ಲಿ ಹಾಗೂ ಪಯೋನೀರ್ ಬೀಡಿನಗುಡ್ಡೆ ಪಂದ್ಯಾವಳಿಯಲ್ಲಿ ಶ್ರೇಷ್ಠ ನಿರ್ವಹಣೆ ನೀಡಿದ್ದರು‌.
ಕುಂದಾಪುರದ ಮೈಲಾರೇಶ್ವರ ಯುವಕ ಸಂಘ ತಂಡವನ್ನು ಪ್ರತಿನಿಧಿಸಿ ಕೋಣಿಯಲ್ಲಿ ನಡೆದ ಜಿಲ್ಲಾಮಟ್ಟದ ಪಂದ್ಯದಲ್ಲಿ ಸರಣಿಶ್ರೇಷ್ಟ ಪ್ರಶಸ್ತಿಯೂ ತನ್ನದಾಗಿಸಿಕೊಂಡಿದ್ದರು.
ಹಲವಾರು ಪಂದ್ಯಾಕೂಟಗಳಲ್ಲಿ ವೀಕ್ಷಕ ವಿವರಣೆಕಾರರಾಗಿ ಹಾಗೂ ನಿರ್ಣಾಯಕರಾಗಿ ಕಾರ್ಯ ನಿರ್ವಹಿಸಿದ್ದರು.ವಿಕ್ರಮ್ ಬೈಂದೂರು ತಂಡದ ಜನರಲ್ ಸೆಕ್ರೆಟರಿಯಾಗಿ,ಪ್ರಸಿದ್ಧ “ಲಾವಣ್ಯ ಕಲಾವೃಂದದ ಪೋಷಕರಾಗಿ ಹಾಗೂ ಬೈಂದೂರು ಜೇಸಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ‌.ಕಾಲೇಜು ವ್ಯಾಸಂಗದ ವೇಳೆ ಹಲವಾರು ಡಿಬೇಟ್ ಕಾರ್ಯಕ್ರಮಗಳಲ್ಲೂ ಪಾಲ್ಗೊಂಡಿದ್ದರು.
1993 ರ ಬಳಿಕ ಹೊಟ್ಟೆಪಾಡಿಗಾಗಿ ಬೆಂಗಳೂರು ಪ್ರವೇಶಿಸಿದ ಇವರು ಸಾಮಾಜಿಕ ಕಾರ್ಯಕರ್ತರಾಗಿ ಹೈಕೋರ್ಟ್ ನಲ್ಲಿ 16 ಸಾರ್ವಜನಿಕ ದಾವೆಗಳಿಗಾಗಿ ಹೋರಾಟ, 25 ಕ್ಕೂ ಹೆಚ್ಚಿನ ಲೋಕಾಯುಕ್ತ ಸಂಬಂಧಿಸಿದಂತೆ ದೂರುಗಳನ್ನು ಪರಿಶೀಲಿಸಿ ಸೂಕ್ತ ಕ್ರಮ ಅಲ್ಲದೆ ACB ದೂರುಗಳ ಬಗ್ಗೆ ತನಿಖೆ ಮಾಡಿದವರು. ಬೆಂಗಳೂರು ನಗರವನ್ನು ಫ್ಲೆಕ್ಸ್ ಮುಕ್ತ ಮಾಡುವಲ್ಲಿ ಯಶಸ್ವಿಯಾದರು.ಜಾಗಕ್ಕೆ ಸಂಬಂಧಿಸಿದಂತೆ ಇರುವ ದೂರುಗಳ ವಿಚಾರಣೆ ಅಲ್ಲದೆ ಬಿಡಿಎ ಲ್ಯಾಂಡ್ ಗಳ ಬಗ್ಗೆ ತನಿಖೆ ನಡೆಸಲು ಯಶಸ್ವಿ ಹೋರಾಟ ನಡೆಸಿದ ಕಾರ್ಯಕರ್ತ ಎಂದು ಹೆಸರು ಮಾಡಿರುವ ಇವರು ವಿವಾದಿತ ಸ್ವಯಂ ಘೋಷಿತ ದೇವಮಾನವ ಅಸೋರಾಂ ಬಾಪೂ ಆಶ್ರಮದ ವಿರುದ್ಧ ಕಾನೂನಾತ್ಮಕ ಹೋರಾಟ ನಡೆಸಿ ಗೆದ್ದು ಕೋಟ್ಯಾಂತರ ರೂಪಾಯಿ ಮೌಲ್ಯದ ಭೂಮಿಯನ್ನು ಬಿ.ಡಿ.ಎ ಗೆ ಉಳಿಸಿಕೊಟ್ಟ ಆಪತ್ಬಾಂಧವ. ಅನೇಕ ಬಾರಿ ಟಿವಿ ವಾಹಿನಿಯಲ್ಲಿ ಪ್ರಸಾರವಾಗುವ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ್ದಾರೆ.ಇವರ ಸಾಮಾಜಿಕ ಸೇವೆಗೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಒಲಿದು ಬಂದಿದ್ದು ಇವುಗಳಲ್ಲಿ ಬಿ.ಬಿ.ಎಮ್.ಪಿ ಕೊಡಮಾಡಿದ ನಾಡಪ್ರಭು ಕೆಂಪೇಗೌಡ ಪ್ರಶಸ್ತಿ,ಕನ್ನಡ ಸಾಹಿತ್ಯ ಪರಿಷತ್ ಪ್ರಶಸ್ತಿ ಹಾಗೂ ಶಿರ್ಕೆ ಗ್ರೂಪ್ ಪ್ರಶಸ್ತಿಗಳು ಪ್ರಮುಖವಾದುದು…
ಅಗಲಿದ ಸಾಮಾಜಿಕ ಕಾರ್ಯಕರ್ತ ಹಾಗೂ ಮಾಜಿ ಕ್ರಿಕೆಟಿಗರಾದ ಸಾಯಿದತ್ತ ಭಟ್ ಬೈಂದೂರು ಇವರ ದಿವ್ಯಾತ್ಮಕ್ಕೆ ಭಗವಂತ ಚಿರಶಾಂತಿ ಕರುಣಿಸಲಿ ಹಾಗೂ ಕುಟುಂಬ ವರ್ಗಕ್ಕೆ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ರಾಜ್ಯ ಟೆನಿಸ್ ಕ್ರಿಕೆಟ್ ಮತ್ತು ಸ್ಪೋರ್ಟ್ಸ್ ಕನ್ನಡ ವೆಬ್ಸೈಟ್ ವತಿಯಿಂದ ಪ್ರಾರ್ಥಿಸುತ್ತೇವೆ.

By ಕೋಟ ರಾಮಕೃಷ್ಣ ಆಚಾರ್ಯ

ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ
ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Leave a Reply

Your email address will not be published.

four + 7 =