ಕ್ರೀಡೆ ಹಾಗೂ ಸಮಾಜಸೇವೆಯಲ್ಲಿ ನಿರಂತರವಾಗಿ ತಮ್ಮನ್ನು ತೊಡಗಿಸಿಕೊಂಡ ಶರತ್ ಶೆಟ್ಟಿ ಪಡುಬಿದ್ರಿ ಇದೀಗ ಜೇಸಿಐ ಪಡುಬಿದ್ರಿ ಇದರ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಪಡುಬಿದ್ರಿಯ ಶ್ರೀ ವಿಠಲ್ ಶೆಟ್ಟಿ ಹಾಗೂ ಶ್ರೀಮತಿ ಶಾರದಾ.ವಿ.ಶೆಟ್ಟಿ ಇವರ ಸುಪುತ್ರರಾಗಿ ಜನಿಸಿದ ಶರತ್ ಶೆಟ್ಟಿ ಶರತ್ ಶೆಟ್ಟಿ ಯವರ ಕ್ರಿಕೆಟ್ ಜೀವನ ಶುರುವಾಗಿದ್ದೇ ಕುಂದಾಪುರದಿಂದ. ಪ್ರೌಢಶಾಲಾ ವ್ಯಾಸಂಗವನ್ನು
ತೆಕ್ಕಟ್ಟೆಯಲ್ಲಿ ನಡೆಸುವ ಸಂದರ್ಭದಲ್ಲಿ ಮೊತ್ತ ಮೊದಲ ಬಾರಿಗೆ ಹಿರಿಯರಾದ ” ನಾಗೇಶ್”ರವರ “ಶ್ರೀಲತಾ ಕುಂದಾಪುರ” ತಂಡದಲ್ಲಿ ಆರಂಭಿಕ ದಾಂಡಿಗನಾಗಿ ಕ್ರಿಕೆಟ್ ಜೀವನ ಪ್ರಾರಂಭಿಸಿದ ಇವರು ಮುಂದೆ
ಪಡುಬಿದ್ರಿಯ “ಫಾರುಕ್” ರವರು ಕಟ್ಟಿದ ತಂಡ
“ಪಡುಬಿದ್ರಿ ಫ್ರೆಂಡ್ಸ್” ನ್ನು ಮುನ್ನಡೆಸುವ ಅವಕಾಶ ಸಿಕ್ಕಾಗ ಸಹ ಆಟಗಾರರಾದ ಸುಭಾಶ್ ಕಾಮತ್ ಜೊತೆಗೂಡಿ ಅದ್ಭುತ ಸಂಯೋಜಿತ ತಂಡವನ್ನು ಕಟ್ಟುತ್ತಾರೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡ,M.P.L ಸರಣಿ ಶ್ರೇಷ್ಠ,ಟೆನ್ನಿಸ್ ಬಾಲ್ ನ ಸಭ್ಯ ಆಟಗಾರ ನಿತಿನ್ ಮೂಲ್ಕಿ,ಮ್ಯಾಜಿಕಲ್ ಆಲ್ ರೌಂಡರ್ ವಿನ್ಸೆಂಟ್, ಕ್ಲಾಸಿಕ್ ಬ್ಯಾಟ್ಸ್ ಮನ್ ರೂಪೇಶ್ ಶೆಟ್ಟಿ, ಹಿರಿಯ ಆಟಗಾರರಾದ ದಿ|ವೆಂಕಟೇಶ್,ಕಣ್ಣನ್ ನಾಯರ್,ಪ್ರಸಾದ್ ಪಡುಬಿದ್ರಿ ಹೀಗೆ ಹತ್ತು ಹಲವಾರು ಸವ್ಯಸಾಚಿ ಆಟಗಾರರನ್ನು ಟೆನ್ನಿಸ್ ಬಾಲ್ ಗೆ ಪರಿಚಯಿಸಿದ ಕೀರ್ತಿ ಕಳೆದ 2 ದಶಕಗಳಿಂದ ಮುನ್ನಡೆಸಿಕೊಂಡು ಬರುತ್ತಿರುವ ಆದರ್ಶ ಕಪ್ತಾನ ಶರತ್ ಶೆಟ್ಟಿ ಯವರಿಗೆ ಸಲ್ಲುತ್ತದೆ.
ಮೊದಲ ಬಾರಿಗೆ ಉಜಿರೆಯಲ್ಲಿ ರಾಜ್ಯಮಟ್ಟದ ಪಂದ್ಯಾಟದಲ್ಲಿ ಜಯಿಸಿದ ಪಡುಬಿದ್ರಿ ತಂಡ ಮುಂದೆ ಗೆಲುವಿನ ನಾಗಾಲೋಟಗೈದಿತು.1999 ರಲ್ಲಿ 14 ಜಿಲ್ಲಾ,ರಾಜ್ಯ ಮಟ್ಟದ ಪ್ರಶಸ್ತಿಗಳನ್ನು, ಶರತ್ ಶೆಟ್ಟಿ ಯವರ ನಾಯಕತ್ವದಲ್ಲಿ ಒಂದೇ ವರ್ಷದಲ್ಲಿ 8 ಟೂರ್ನಿಗಳಲ್ಲಿ ಭಾಗವಹಿಸಿ ,7 ಬಾರಿ ಚಾಂಪಿಯನ್ ತಂಡವಾಗಿಯೂ,
1 ಬಾರಿ ರನ್ನರ್ಸ್ ಆಗಿ ಮೂಡಿ ಬಂದಿದ್ದು ಉತ್ಕೃಷ್ಟ ನಾಯಕತ್ವಕ್ಕೆ ಸಾಕ್ಷಿ.ಮೊದ ಮೊದಲಿಗೆ ಬ್ಯಾಟಿಂಗಲ್ಲಿ ಮಿಂಚುತ್ತಿದ್ದ ಇವರು 90 ರ ದಶಕದಲ್ಲಿ ನೇಜಾರಿನಲ್ಲಿ ಎ.ಕೆ.ಸ್ಪೋರ್ಟ್ಸ್ ತಂಡದ ವಿರುದ್ಧದ ಸೆಮಿಫೈನಲ್ ನಲ್ಲಿ
ಕೊನೆಯ ಎಸೆತ ದಲ್ಲಿ 6 ರನ್ ಗಳ ಅವಶ್ಯಕತೆ ಬಿದ್ದಾಗ
ಸಿಕ್ಸರ್ ಸಿಡಿಸಿ ಗೆಲ್ಲಿಸಿದ 2 ಉದಾಹರಣೆಗಳಿವೆ.
ಮೈದಾನದ ಮಿಡ್ ವಿಕೆಟ್,ಕವರ್ಸ್ ನ ಚುರುಕಿನ ಅದ್ಭುತ ಫೀಲ್ಡರ್,ಯುವ ಕ್ರಿಕೆಟಿಗರಿಗಾಗಿ ತನ್ನ ಬ್ಯಾಟಿಂಗ್ ಸರದಿ ಬದಲಾಯಿಸಿಕೊಂಡು, ಯುವ ಆಟಗಾರರು ದೂರ ದೂರಿಗೆ ವೃತ್ತಿ ನಿಮಿತ್ತ ತೆರಳಲು ಬಂದಾಗ ತಂಡದ ವ್ಯಾಮೋಹವನ್ನು ಬದಿಗಿಟ್ಟು ಆಟಗಾರರ ಭವಿಷ್ಯ ರೂಪಿಸಿದ ನಿಸ್ವಾರ್ಥ ನಾಯಕ.
ಪಡುಬಿದ್ರಿ ತಂಡ ಜಯಿಸಿದ ನಗದನ್ನು ಅನೇಕ ಬಾರಿ ಮಾರಕ ಕಾಯಿಲೆಯಿಂದ ಬಳಲುವ ಕ್ಯಾನ್ಸರ್ ರೋಗಿಗಳಿಗೆ,ಬಡ ವಿದ್ಯಾರ್ಥಿಗಳಿಗೆ,ನಿರ್ವಸಿತರ ವಸತಿ ನಿರ್ಮಾಣಕ್ಕಾಗಿ ಅರ್ಥಪೂರ್ಣವಾಗಿ ಬಳಸಿ ಕೊಂಡಿರುತ್ತಾರೆ.
ಪಲಿಮಾರಿನ ಪೌಲಿನ್ ಡಿಸೋಜಾ ಲೆಬನಾನ್ ನಲ್ಲಿ ಸಂಕಷ್ಟಕ್ಕೆ ಸಿಲುಕಿ 18 ವರ್ಷಗಳ ಕಾಲ ಕುಟುಂಬದಿಂದ ಸಂಪರ್ಕ ಕಳೆದುಕೊಂಡ ಸಂದರ್ಭ
ಶರತ್ ಶೆಟ್ಟಿ ಇವರು ಬಳಕೆದಾರರ ಚಳುವಳಿಯ ನಾಯಕ ರವೀಂದ್ರನಾಥ್ ಶ್ಯಾನುಭೋಗ್ ಇವರನ್ನು ಸಂಪರ್ಕಿಸಿ ಸಂಕಷ್ಟದಿಂದ ಪಾರು ಮಾಡುವಲ್ಲಿ ಶ್ರಮಿಸಿರುತ್ತಾರೆ.
ಪಡುಬಿದ್ರಿ ಫ್ರೆಂಡ್ಸ್ ನ ಸವ್ಯಸಾಚಿ ನಿತಿನ್ ಮೂಲ್ಕಿಯಂತ ಆಟಗಾರರನ್ನು ಕರ್ನಾಟಕ ರಣಜಿ,ಕೆ.ಪಿ.ಎಲ್,ಎಮ್.ಪಿ.ಎಲ್ ಹಾಗೂ ಯು.ಎ.ಇ ಅಂತರಾಷ್ಟ್ರೀಯ ತಂಡದಲ್ಲಿ ಗುರುತಿಸಿಕೊಳ್ಳಲು ನಾಯಕ ಶರತ್ ಶೆಟ್ಟಿಯವರ ಪಾತ್ರ ಅಪಾರ.
ಮುಂಬಯಿ ತಂಡವನ್ನು ಪ್ರತಿನಿಧಿಸುವ ಉಡುಪಿ ಮೂಲದ ಸಂದೀಪ್ ಭಂಡಾರಿಯವರ ಪ್ರತಿಭೆಯನ್ನು ಬೆಳಕಿಗೆ ತಂದ ಶರತ್ ಶೆಟ್ಟಿಯವರು ಪಡುಬಿದ್ರಿ ಫ್ರೆಂಡ್ಸ್ ನ ಮುದರಂಗಡಿಯ ನಿಹಾಲ್ ಡಿಸೋಜಾ ಇವರನ್ನು ಕರ್ನಾಟಕ ಪ್ರೀಮಿಯರ್ ಲೀಗ್ ಬಳ್ಳಾರಿ ಟಸ್ಕರ್ಸ್ ತಂಡದಲ್ಲಿ ತಂಡದಲ್ಲಿ ಭಾಗವಹಿಸುವಂತೆ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ಕ್ರಿಕೆಟ್ ತಂಡದ ಕಪ್ತಾನನಾಗಿ ರೂಪಿಸುವಲ್ಲಿ ಶ್ರಮ ವಹಿಸಿರುತ್ತಾರೆ.
ಕ್ರೀಡಾ ಕ್ಷೇತ್ರದಲ್ಲಿ ಶಿಸ್ತು, ಪ್ರಾಮಾಣಿಕತೆ ಮತ್ತು ಪಾರದರ್ಶಕ ವ್ಯಕ್ತಿತ್ವದ ಉಡುಪಿ ಜಿಲ್ಲಾ ಟೆನ್ನಿಸ್ ಬಾಲ್ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷರು, ಪಡುಬಿದ್ರಿ ಫ್ರೆಂಡ್ಸ್ ತಂಡದ ಯಶಸ್ವಿ ಕಪ್ತಾನರಾದ ಶ್ರೀ ಶರತ್ ಶೆಟ್ಟಿಯವರು 2020ನೇ ಸಾಲಿನ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾಗಿದ್ದರು.
ಟೆನಿಸ್ಬಾಲ್ ಕ್ರಿಕೆಟ್ ಶ್ರೇಯೋಭಿವೃದ್ಧಿಗಾಗಿ ನಿರಂತರ ಶ್ರಮಿಸುತ್ತಿರುವ ಶರತ್ ಶೆಟ್ಟಿ ಪಡುಬಿದ್ರಿ
ಪ್ರಸ್ತುತ ಉಡುಪಿ ಜಿಲ್ಲಾ ಟೆನಿಸ್ಬಾಲ್ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕರಾಗಿ ತಮ್ಮ ಅಮೂಲ್ಯವಾದ ಸಲಹೆ,ಸಹಕಾರಗಳನ್ನು ನೀಡುತ್ತಿದ್ದಾರೆ.ವಿವಿಧ ಸಂಘಟನೆಗಳಲ್ಲಿ ಸೇವೆ ಸಲ್ಲಿಸಿ ಇದೀಗ ಜೇಸಿಐ ಪಡುಬಿದ್ರಿ ಸಂಸ್ಥೆಯ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಶರತ್ ಶೆಟ್ಟಿ ಪಡುಬಿದ್ರಿ ಇವರಿಗೆ ಸ್ಪೋರ್ಟ್ಸ್ ಕನ್ನಡ ವೆಬ್ಸೈಟ್ ವತಿಯಿಂದ ಹಾರ್ದಿಕ ಶುಭಾಶಯಗಳು.