ವಿಶ್ವಕಪ್ 2023: ಜಿಂಬಾಬ್ವೆಯಲ್ಲಿ ನಡೆಯುತ್ತಿರುವ ವಿಶ್ವಕಪ್ ಕ್ವಾಲಿಫೈಯರ್ ಟೂರ್ನಮೆಂಟ್‌ನಲ್ಲಿ ಸ್ಕಾಟ್ಲೆಂಡ್ ಕ್ರಿಕೆಟ್ ತಂಡವು ಪ್ರಮುಖ ಸೂಪರ್ ಸಿಕ್ಸ್ ಪಂದ್ಯದಲ್ಲಿ ಆತಿಥೇಯ ಜಿಂಬಾಬ್ವೆಯನ್ನು 31 ರನ್‌ಗಳಿಂದ ಸೋಲಿಸಿದೆ.
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸ್ಕಾಟ್ಲೆಂಡ್ 50 ಓವರ್‌ಗಳಲ್ಲಿ 8 ವಿಕೆಟ್‌ಗೆ 234 ರನ್ ಗಳಿಸಿತು. ಉತ್ತರವಾಗಿ ಜಿಂಬಾಬ್ವೆ 41.1 ಓವರ್‌ಗಳಲ್ಲಿ 203 ರನ್‌ಗಳಿಗೆ ಆಲೌಟ್ ಆಯಿತು. ಇದಕ್ಕೂ ಮುನ್ನ ಸ್ಕಾಟ್ಲೆಂಡ್ ವೆಸ್ಟ್ ಇಂಡೀಸ್ ತಂಡವನ್ನು ಸೋಲಿಸಿ 2023ರ ವಿಶ್ವಕಪ್‌ನಿಂದ ಹೊರದಬ್ಬಿತ್ತು.ಈಗ ಸತತ ಎರಡನೇ ದೊಡ್ಡ ತಂಡವನ್ನು ಸೋಲಿಸುವ ಮೂಲಕ, ಈ ಅಚ್ಚರಿಗೊಳಿಸುವ ಪ್ರದರ್ಶನ ನೀಡಿತು.
ಜಿಂಬಾಬ್ವೆ ಬೃಹತ್ ತಂಡವಲ್ಲದಿದ್ದರೂ,ಈ ಆಫ್ರಿಕನ್ ತಂಡವು ತವರಿನಲ್ಲಿ ಉತ್ತಮ ಫಾರ್ಮ್‌ನಲ್ಲಿ ಆಡುವ ಅವಕಾಶವನ್ನು ಹೊಂದಿತ್ತು. ಜಿಂಬಾಬ್ವೆ ಲೀಗ್ ಹಂತದಲ್ಲಿ ತನ್ನ ಎಲ್ಲಾ ಪಂದ್ಯಗಳನ್ನು ಗೆದ್ದಿದೆ ಆದರೆ ಅವರು ಸೂಪರ್ ಸಿಕ್ಸ್‌ನಲ್ಲಿ ನಿರೀಕ್ಷೆಗೆ ತಕ್ಕಂತೆ ಆಡಲಿಲ್ಲ.ಜಿಂಬಾಬ್ವೆ ಸೂಪರ್ ಸಿಕ್ಸ್‌ನ ಮೊದಲ ಪಂದ್ಯದಲ್ಲಿ ಓಮನ್ ವಿರುದ್ಧ ಹೇಗಾದರೂ ಜಯ ಸಾಧಿಸಿತು, ಆದರೆ ನಂತರ ಶ್ರೀಲಂಕಾ ಮತ್ತು ಈಗ ಸ್ಕಾಟ್ಲೆಂಡ್ ವಿರುದ್ಧ ಸೋತಿದೆ. 2023 ರ ವಿಶ್ವಕಪ್‌ಗೆ ಪ್ರವೇಶ ಪಡೆಯುವ ಕನಸು ಕಾಣುತ್ತಿರುವ ಜಿಂಬಾಬ್ವೆಗೆ ಸ್ಕಾಟ್ಲೆಂಡ್ ಈಗ ನಿಜವಾದ ಬೆದರಿಕೆಯಾಗಿ ಹೊರಹೊಮ್ಮುತ್ತಿದೆ.
ಈ ಪಂದ್ಯದಲ್ಲಿ ಜಿಂಬಾಬ್ವೆ ಗೆದ್ದಿದ್ದರೆ ಸೂಪರ್ ಸಿಕ್ಸ್ ಅಂಕಪಟ್ಟಿಯಲ್ಲಿ 8 ಅಂಕ ಪಡೆದು ಅರ್ಹತೆ ಪಡೆಯುತ್ತಿತ್ತು. ಆದರೆ ಇದೀಗ ಸ್ಕಾಟ್ಲೆಂಡ್ ಕೂಡ ಸೂಪರ್ ಸಿಕ್ಸ್ ನಲ್ಲಿ 6 ಅಂಕ ಹೊಂದಿದ್ದು, ಆತಿಥೇಯರಿಗೆ ಸರಿಸಮನಾಗಿ ಬಂದಿದೆ. ಪ್ರಸ್ತುತ ವೆಸ್ಟ್ ಇಂಡೀಸ್ ಮತ್ತು ಓಮನ್ ವಿಶ್ವಕಪ್ ರೇಸ್‌ನಿಂದ ಹೊರಗುಳಿದಿವೆ.
ಈ ಮೂಲಕ ವಿಶ್ವಕಪ್‌ಗೆ ಅರ್ಹತೆ ಪಡೆಯುವ ತಂಡದ ರೇಸ್ ಕುತೂಹಲ ಮೂಡಿಸಿದೆ. ಶ್ರೀಲಂಕಾ ತಂಡ ಈಗಾಗಲೇ ಅರ್ಹತೆ ಪಡೆದಿದೆ. ಜಿಂಬಾಬ್ವೆ ತಂಡ 5 ಪಂದ್ಯಗಳಲ್ಲಿ 6 ಅಂಕಗಳನ್ನು ಹೊಂದಿದ್ದರೆ, ಸ್ಕಾಟ್ಲೆಂಡ್ 4 ಪಂದ್ಯಗಳಲ್ಲಿ 6 ಅಂಕಗಳನ್ನು ಹೊಂದಿದೆ. ಉತ್ತಮ ರನ್ ರೇಟ್ ಹೊಂದಿರುವ ಯುರೋಪಿಯನ್ ತಂಡ ಜಿಂಬಾಬ್ವೆಯನ್ನು ಎರಡನೇ ಸ್ಥಾನದಿಂದ ಕೆಳಗಿಳಿಸಿದೆ.
ಈಗ ಸ್ಕಾಟಿಷ್ ತಂಡ ನೆದರ್ಲೆಂಡ್ಸ್ ವಿರುದ್ಧದ ಮುಂದಿನ ಪಂದ್ಯದಲ್ಲಿ ಗೆದ್ದರೆ ಅವರು ವಿಶ್ವಕಪ್ 2023 ತಲುಪುತ್ತಾರೆ. ಸೋತರೂ ಅವರ ರನ್ ರೇಟ್ ಜಿಂಬಾಬ್ವೆ ಮತ್ತು ನೆದರ್ಲೆಂಡ್ಸ್‌ಗಿಂತ ಉತ್ತಮವಾಗಿದೆ. ಒಟ್ಟಾರೆಯಾಗಿ, ಸ್ಕಾಟ್ಲೆಂಡ್ ಈಗ ವಿಶ್ವಕಪ್ 2023 ರ ಹೊಸ ರೇಸ್‌ನಲ್ಲಿ ಹೊಸ ತಂಡವಾಗಿ ಎಂಟ್ರಿ ಪಡೆಯಲಿದೆ.